ADVERTISEMENT

ರಿಯಾಲ್ಟಿ ಲೋಕದಲ್ಲಿ ಸಂಚಲನ ಮೂಡಿಸಿದ ‘ಅಗ್ಗದ ಮನೆ’ ಘೋಷಣೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2017, 19:30 IST
Last Updated 9 ಫೆಬ್ರುವರಿ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಡವರ ಸ್ವಂತ ಮನೆ ಹೊಂದುವ ಕನಸು ನನಸಾಗಿಸಲು ಕೇಂದ್ರ ಸರ್ಕಾರ ‘ಅಗ್ಗದ ಮನೆ ನಿರ್ಮಾಣ’ ಪ್ರೋತ್ಸಾಹಿಸುತ್ತಿದೆ. ಬಜೆಟ್‌ನಲ್ಲಿ ಘೋಷಿಸಿದ ಈ ಯೋಜನೆ ರಿಯಲ್ ಎಸ್ಟೇಟ್ ವಲಯದಲ್ಲಿ ಸಂಚಲನ ಉಂಟು ಮಾಡಿದೆ. 2022ರ ಒಳಗೆ 2 ಕೋಟಿ ಮನೆ ನಿರ್ಮಿಸುವ ಉದ್ದೇಶ ಹೊಂದಿರುವ ಮಹತ್ವಾಕಾಂಕ್ಷಿ ಯೋಜನೆ ಇದು.

ಸರ್ಕಾರವು ಕೈಗೆಟುಕುವ ಬೆಲೆಯಲ್ಲಿ ಮನೆ ನಿರ್ಮಾಣದ ಯೋಜನೆ ಘೋಷಿಸುತ್ತಿದ್ದಂತೆ ಅನೇಕ ಖಾಸಗಿ ಕಂಪೆನಿಗಳೂ ಇಂಥ ಮನೆಗಳ ನಿರ್ಮಾಣಕ್ಕೆ ಮುಂದಾಗುವ ಆಸಕ್ತಿ ಪ್ರಕಟಿಸಿದವು.

ಟಾಟಾ ಹೌಸಿಂಗ್‌, ಅಸೆಟ್ಸ್‌ ಪ್ರಾಪರ್ಟಿ ಗ್ರೂಪ್‌, ವಿಬಿಎಚ್‌ಸಿ ವ್ಯಾಲ್ಯೂ ಹೋಮ್ಸ್‌ ಪ್ರೈ.ಲಿ ಮುಂತಾದ ಕಂಪೆನಿಗಳೂ ಈ ಪಟ್ಟಿಯಲ್ಲಿ ಸೇರಿಕೊಂಡಿವೆ.
ಕ್ರೆಡಾಯ್‌ ಕೂಡ ಆನೇಕಲ್‌, ಹೊಸಕೋಟೆ, ಬುಧಿಗೆರೆ ಕ್ರಾಸ್‌, ದೊಡ್ಡಬಳ್ಳಾಪುರ ರಸ್ತೆ, ಹೊಸಪಾಳ್ಯ, ಹೊಂಗಸಂದ್ರ, ಕಂಬಿಪುರ, ಅಮೃತಹಳ್ಳಿ, ಬೊಮ್ಮನಹಳ್ಳಿ, ಹೆಣ್ಣೂರು ಮುಂತಾದ ಪ್ರದೇಶಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಮನೆ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಿದೆ.

ಕಡಿಮೆ ಬೆಲೆಯ ಮನೆಗಳ ಗುಣಮಟ್ಟದ ಬಗ್ಗೆ ಅನೇಕರು ಸಂಶಯ ವ್ಯಕ್ತಪಡಿಸುತ್ತಾರೆ. ಈ ಕುರಿತು ಪ್ರತಿಕ್ರಿಯಿಸಿದ ಕ್ರೆಡಾಯ್‌ ಸಂಸ್ಥೆಯ ಬೆಂಗಳೂರು ವಿಭಾಗದ ನಿರ್ದೇಶಕ ಸುರೇಶ್‌ ಹರಿ, ‘ಅಗ್ಗದ ಮನೆಗಳಿಗೆ ಬಳಕೆಯಾಗುವ ಗೃಹ ನಿರ್ಮಾಣ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ಅನುಮಾನ ಬೇಡ. ಬ್ಯಾಂಕ್‌ಗಳು ಉದ್ಯಮಗಳಿಗೆ ನೀಡುವಂತೆಯೇ  ರಿಯಲ್‌ ಎಸ್ಟೇಟ್‌ ಕಂಪೆನಿಗಳಿಗೆ ಕಡಿಮೆ ಬಡ್ಡಿದರಕ್ಕೆ ಸಾಲ ನೀಡುವುದರಿಂದ ಅಗ್ಗದ ಬೆಲೆಯಲ್ಲಿ ಮನೆ ಕಟ್ಟಿಕೊಡಲು ಸಾಧ್ಯವಾಗಲಿದೆ’ ಎನ್ನುತ್ತಾರೆ.

ಕಡಿಮೆ ಬೆಲೆಯ ಮನೆ ನಿರ್ಮಾಣದ ಕಾಮಗಾರಿ ದೊಡ್ಡ ಮಟ್ಟದಲ್ಲಿ ನಡೆಯುವುದರಿಂದ ಅಗತ್ಯ ಸಾಮಗ್ರಿಗಳನ್ನೂ ದೊಡ್ಡ ಪ್ರಮಾಣದಲ್ಲಿ ಖರೀದಿಸಬೇಕಾಗುತ್ತದೆ. ಹೀಗಾಗಿ ಅವುಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. 

‘ರೇರಾ’ ಕಾಯ್ದೆಯ ಪ್ರಕಾರ ಮನೆಯನ್ನು ಮಾಲೀಕರಿಗೆ ಹಸ್ತಾಂತರಿಸುವ ಮೊದಲೇ ಗುಣಮಟ್ಟದ ಬಗೆಗೆ ಮಾಹಿತಿ ನೀಡಬೇಕಾಗುತ್ತದೆ. ಜೊತೆಗೆ ಅನೇಕರು ಅಗತ್ಯ ವಸ್ತುಗಳನ್ನು ಖರೀದಿಸುವ ಬದಲು ಸ್ವತಃ ತಾವೇ ತಯಾರಿಸಿಕೊಳ್ಳುವ ವ್ಯವಸ್ಥೆ ರೂಪಿಸಿಕೊಳ್ಳುತ್ತಾರೆ. ಮನೆಯ ಬೆಲೆ ಕಡಿಮೆಯಾಗಲು ಇದು ಸಹಕಾರಿ’ ಎಂಬುದು ಅವರ ವಾದ.

ಆದರೆ ವಿ2 ಹೋಲ್ಡಿಂಗ್ಸ್‌ನ ಪಿ.ಎಲ್‌.ವಿ.ರೆಡ್ಡಿ ಅವರ ವಾದವೇ ಬೇರೆ. ‘ಕೈಗೆಟುಕುವ ಬೆಲೆಯಲ್ಲಿ ಮನೆ ನಿರ್ಮಾಣ ಯೋಜನೆಯಲ್ಲಿ ಕನಿಷ್ಠ 1000 ಮನೆಯನ್ನು ಒಟ್ಟಿಗೆ ನಿರ್ಮಿಸಬೇಕು. ಒಂದು ಮನೆಯಲ್ಲಿ ನಾಲ್ಕು ಜನ ಎಂದರೂ ನಾಲ್ಕು ಸಾವಿರ ಜನ ಆ ಪ್ರದೇಶಗಳಲ್ಲಿ ವಾಸಿಸಬೇಕಾಗುತ್ತದೆ. ಎಷ್ಟು ಜನ ಇಂಥ ವಾತಾವರಣದಲ್ಲಿ ಬದುಕು ಇಚ್ಛಿಸುತ್ತಾರೆ. ಗುಣಮಟ್ಟದ ವಿಷಯದಲ್ಲಿ ಯಾವುದೇ ಗ್ಯಾರೆಂಟಿ ನೀಡಲು ಸಾಧ್ಯವಿಲ್ಲ’ ಎನ್ನುತ್ತಾರೆ ಅವರು.

ಪ್ರಧಾನ ಮಂತ್ರಿ ಆವಾಸ್‌ ಯೋಜನೆ
ಹೊಸ ವರ್ಷದ (2017) ಕೊಡುಗೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆವಾಸ್‌ ಯೋಜನೆಯನ್ನು (ಪಿಎಂಎವೈ) ಜನಸ್ನೇಹಿಯಾಗಿ ಮಾರ್ಪಡಿಸಿದರು.

ಹೊಸ ಮನೆ ನಿರ್ಮಾಣವಷ್ಟೇ ಅಲ್ಲದೆ, ಕಟ್ಟಿರುವ ಮನೆ ಅಥವಾ ಮನೆ ದುರಸ್ತಿಗೂ ಸಹ ಈ ಯೋಜನೆಯಡಿ ತೆರಿಗೆ ವಿನಾಯ್ತಿ ಸಿಗಲಿದೆ.

ನಗರ ಪ್ರದೇಶಗಳ ಬಡವರಿಗೆ ₹9 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿಗೆ ಶೇ 4 ರಷ್ಟು, ₹12 ಲಕ್ಷದವರೆಗಿನ ಸಾಲಕ್ಕೆ ಶೇ 3 ರಷ್ಟು ಬಡ್ಡಿದರ ವಿನಾಯ್ತಿ ಸಿಗಲಿದೆ.

ಗ್ರಾಮೀಣ ಪ್ರದೇಶದಲ್ಲಿ ₹2 ಲಕ್ಷದವರೆಗಿನ ಸಾಲಕ್ಕೆ ಶೇ 3 ರಷ್ಟು ಬಡ್ಡಿ ವಿನಾಯ್ತಿ ನೀಡಲಾಗಿದೆ.

ಶೇ 33ಕ್ಕೂ ಹೆಚ್ಚಿನ ಮನೆಗಳು ಗ್ರಾಮೀಣ ಭಾಗದಲ್ಲಿಯೇ ನಿರ್ಮಾಣಗೊಳ್ಳಲಿವೆ.

ಕಳೆದ ಮೂರು ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಒಂದು ಕೋಟಿಗಳಷ್ಟು ಮನೆಗಳನ್ನು ನಿರ್ಮಿಸುವ ‘ಪ್ರಧಾನ ಮಂತ್ರಿ ಆವಾಸ್‌ ಯೋಜನೆ’ಗೆ ಕೇಂದ್ರ ಸಚಿವ ಸಂಪುಟ ₹81,975 ಕೋಟಿ ಹಣ ನಿಗದಿಪಡಿಸಿದೆ.

ಕೇವಲ ಮನೆಯಷ್ಟೇ ಅಲ್ಲ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ, ದಿನವಿಡೀ ವಿದ್ಯುತ್‌ ಪೂರೈಕೆಯ ಘೋಷಣೆಯನ್ನೂ ಈ ಯೋಜನೆ ಒಳಗೊಂಡಿದೆ.

ಆರ್ಥಿಕವಾಗಿ ದುರ್ಬಲರಾಗಿರುವ ಮತ್ತು ಕಡಿಮೆ ಆದಾಯ ಹೊಂದಿರುವ ವರ್ಗದವರಿಗೆ ಈ ಯೋಜನೆಯಡಿ 2022ರ ಒಳಗೆ ಒಟ್ಟು 2 ಕೋಟಿ ಮನೆಗಳ ನಿರ್ಮಾಣ ಮಾಡುವ ಗುರಿ ಇದೆ. ಇದಕ್ಕಾಗಿ, ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್‌ (ಎನ್‌ಎಚ್‌ಬಿ) ಅಡಿಯಲ್ಲಿ ಕಡಿಮೆ ವೆಚ್ಚದ ಮನೆ ನಿರ್ಮಾಣ ಸಂಸ್ಥೆ ಸ್ಥಾಪಿಸ­ಲಾಗಿದೆ.

ಜಾತಿ, ಧರ್ಮವನ್ನು ಪರಿಗಣಿಸದೇ, ದೇಶದ ಪ್ರತಿಯೊಬ್ಬ ಮಹಿಳೆ, ಕಡಿಮೆ ಆದಾಯ (ವಾರ್ಷಿಕ ಆದಾಯ ₹3 ಲಕ್ಷ) ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ (ವಾರ್ಷಿಕ ಆದಾಯ ₹3–6 ಲಕ್ಷ), ಪರಿಶಿಷ್ಟ ಜಾತಿ, ಪಂಗಡದವರು ಈ ಯೋಜನೆಯ ಫಲಾನುಭವಿಗಳಾಗಬಹುದು.

ಅಗ್ಗದ ಮನೆ ನಿರ್ಮಾಣದ ವಿಸ್ತೀರ್ಣ ಮಿತಿ ಗ್ರಾಮೀಣ ಭಾಗದಲ್ಲಿ 30 ಚದರ ಮೀಟರಿಗಿಂತ ಮತ್ತು ನಗರಗಳಲ್ಲಿ 60 ಚದರ ಮೀಟರಿಗಿಂತಲೂ ಹೆಚ್ಚಿದ್ದರೂ ತೆರಿಗೆ ವಿನಾಯ್ತಿ ಸಿಗಲಿದೆ.

ನಿರ್ಮಾಣ ಆರಂಭಿಸಿ ಮೂರು ವರ್ಷದ ಒಳಗೆ ಕಾಮಗಾರಿ ಪೂರ್ಣ ಗೊಳಿಸಿದರೆ ಮಾತ್ರ ತೆರಿಗೆ ವಿನಾಯಿತಿ ದೊರೆಯುತ್ತಿತ್ತು. ಈಗ ನಿರ್ಮಾಣ ಅವಧಿ ಮಿತಿಯನ್ನು ಮೂರು ವರ್ಷದಿಂದ ಐದು ವರ್ಷಕ್ಕೆ ಏರಿಸಲಾಗಿದೆ.

ಕಾಮಗಾರಿ ಪೂರ್ಣಗೊಂಡಿದ್ದರೂ, ಮಾರಾಟ ವಾಗದ ಮನೆ/ಫ್ಲ್ಯಾಟ್‌ಗಳಿಗೆ ನಿರ್ಮಾಣ ಸಂಸ್ಥೆ ಬಾಡಿಗೆ ಆದಾಯ ತೆರಿಗೆ ಪಾವತಿಸಬೇಕು. ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರ ಪಡೆದ ದಿನದಿಂದಲೇ ಈ ತೆರಿಗೆ ಅನ್ವಯವಾ ಗುತ್ತದೆ. ನಿರ್ಮಾಣ ಸಂಸ್ಥೆಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಈ ನಿಯಮ ಸಡಿಲಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಪ್ರಮಾಣ ಪತ್ರ ಪಡೆದ ಒಂದು ವರ್ಷದ ನಂತರ ನಿರ್ಮಾಣ ಸಂಸ್ಥೆ ಬಾಡಿಗೆ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT