ADVERTISEMENT

ವಹಿವಾಟು ಡಲ್ಲೋ ಡಲ್ಲು

ಹೂಡಿಕೆಗಿದು ಕಾಲವಲ್ಲ

ಘನಶ್ಯಾಮ ಡಿ.ಎಂ.
Published 15 ಡಿಸೆಂಬರ್ 2016, 19:30 IST
Last Updated 15 ಡಿಸೆಂಬರ್ 2016, 19:30 IST
ವಹಿವಾಟು ಡಲ್ಲೋ ಡಲ್ಲು
ವಹಿವಾಟು ಡಲ್ಲೋ ಡಲ್ಲು   

‘ಇನ್ನು ಆರು ತಿಂಗಳು ಇದೇ ಕಥೆ ನೋಡಿ. ದಿನಕ್ಕೆ ಒಂದೂ ಅಗ್ರಿಮೆಂಟ್ ಆಗ್ತಿಲ್ಲ. ಈಗಾಗ್ಲೇ ಅಗ್ರಿಮೆಂಟ್ ಮುಗಿದ ವ್ಯವಹಾರಗಳೂ ಹಂಗೇ ನಿಂತವೆ...’ ಎಂದವರು ಬೆಂಗಳೂರು ಉತ್ತರ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿ ರಿಯಲ್ ಎಸ್ಟೇಟ್ ದಲ್ಲಾಳಿಯಾಗಿ ಕೆಲಸ ಮಾಡುವ ಪತ್ರಬರಹಗಾರ ಬಾಬು.

‘ಕೇಂದ್ರ ಸರ್ಕಾರ ₹500 ಮತ್ತು ₹1000 ನೋಟ್‌ಗಳನ್ನು ನಿಷೇಧಿಸಿದ ನಂತರ ರಿಯಲ್‌ ಎಸ್ಟೇಟ್ ವಹಿವಾಟು ಹೇಗಿದೆ?’ ಎಂದು ಪ್ರಶ್ನಿಸಿದ್ದಕ್ಕೆ ಅವರ ಉತ್ತರ ಮೇಲಿನಂತೆ ಇತ್ತು.

ಕಮಿಷನ್‌ ಕಾಸು ಮೊದಲಿನಂತೆ ಕೈ ಸೇರುತ್ತಿಲ್ಲ ಎಂಬ ಬೇಸರದ ನಡುವೆಯೂ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೆಗೆದುಕೊಂಡ ನಿರ್ಧಾರವನ್ನು ‘ದಿಟ್ಟ ಮತ್ತು ಸೂಕ್ತ’ ಎಂದು ಹೊಗಳಿದರು.

‘ಬ್ಲ್ಯಾಕ್‌ಮನಿ ಇದ್ದೋರಷ್ಟೇ ಅಲ್ಲ ಸ್ವಾಮಿ, ವೈಟ್‌ಮನಿ ಇದ್ದವರ ಕಥೆಯೂ ಕಷ್ಟಕ್ಕೆ ಬಂದಿದೆ. ಜನರ ಕೈಲಿ ದುಡ್ಡು ಓಡಾಡುವಂತೆ ಆಗುವವರೆಗೆ ನಮ್ಮಂಥವರ ಕಥೆ ಕಷ್ಟ’ ಎಂಬ ವಿಷಾದವೂ ಅವರ ಮಾತಿನಲ್ಲಿಯೇ ಇಣುಕಿತ್ತು.

‘ಅದೆಲ್ಲಾ ಸರಿ ನಿಮ್ಮ ವ್ಯವಹಾರದ ಕಥೆ ಹೇಳಿ’ ಎಂದು ಕೇಳಿದ್ದಕ್ಕೆ, ‘ಇನ್ನು ಆರು ತಿಂಗಳು ಇದೇ ಕಥೆ ಅನ್ಸುತ್ತೆ’ ಎಂಬ ಮತ್ತೊಂದು ಉದ್ಗಾರ ಹೊರಬಿತ್ತು.
‘ಜನರು ದುಡ್ಡು ಹೊರಗೆ ತೆಗೆಯೋಕೆ ಹೆದರ್‍ತಾ ಇದ್ದಾರೆ. ಹಾಗಂತ ಸೈಟ್‌ಗಳ ರೇಟ್‌ ಕಡಿಮೆಯಂತೂ ಆಗ್ತಿಲ್ಲ. ಮಾರೋರು ಇದ್ದರೂ ಕೊಳ್ಳೋರೇ ಕಾಣಿಸ್ತಿಲ್ಲ’ ಎಂಬುದು ಅವರು ಕಂಡುಕೊಂಡ ವಾಸ್ತವ.

ಯಲಹಂಕ– ದೊಡ್ಡಬಳ್ಳಾಪುರ ರಸ್ತೆಯ ಬಾಶೆಟ್ಟಿಹಳ್ಳಿ ಸುತ್ತಮುತ್ತಲ ರಿಯಲ್ ಎಸ್ಟೇಟ್ ವಿದ್ಯಮಾನ ಅರಿತಿರುವ ಇಟ್ಟಿಗೆ ವ್ಯಾಪಾರಿ ಸುಂದರೇಶ್ ಅವರ ಪ್ರಕಾರ ಇದು ‘ಕಾದು ನೋಡಲು ಸೂಕ್ತವಾದ ಕಾಲ’.

‘ಬ್ಯಾಂಕ್‌ಗಳು ಈಗಾಗಲೇ ಮನೆ ಸಾಲಕ್ಕೆ ಬಡ್ಡಿ ಕಡಿಮೆ ಮಾಡಿವೆ. ಮುಂದಿನ ದಿನಗಳಲ್ಲಿ ನಿವೇಶನ ಸಾಲದ ಮೇಲಿನ ಬಡ್ಡಿಯೂ ಕಡಿಮೆಯಾಗಬಹುದು. ಸದ್ಯಕ್ಕೆ ಸ್ಥಗಿತಗೊಂಡಿರುವ ರಿಯಲ್‌ ಎಸ್ಟೇಟ್ ವಹಿವಾಟು ನಿಧಾನವಾಗಿ ಚೇತರಿಸಿಕೊಳ್ಳಬಹುದು’ ಎನ್ನುತ್ತಾರೆ ಅವರು.

‘ಯಲಹಂಕ, ರಾಜಾನುಕುಂಟೆ, ಮಾರಸಂದ್ರ, ಬಾಶೆಟ್ಟಿಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಪ್ರದೇಶದಲ್ಲಿ ರಿಯಲ್‌ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರಗಳು ಶೇ50ರಷ್ಟು ಕಡಿಮೆಯಾಗಿದೆ’ ಎಂಬ ವಿಶ್ಲೇಷಣೆಯನ್ನೂ ಅವರು ಮುಂದಿಡುತ್ತಾರೆ.

‘ರಿಯಲ್ ಎಸ್ಟೇಟ್‌ನಲ್ಲಿ ರಿಜಿಸ್ಟ್ರೇಷನ್‌ ಮೌಲ್ಯದಷ್ಟು ಮಾತ್ರ ಬ್ಯಾಂಕ್‌ ಮೂಲಕ (ವೈಟ್‌ಮನಿ), ಉಳಿದ ವ್ಯವಹಾರ ನಗದು ಮೂಲಕ (ಬ್ಲ್ಯಾಕ್‌ಮನಿ) ನಡೆಯುತ್ತಿದ್ದುದು ಎಲ್ಲರಿಗೂ ಗೊತ್ತಿರುವ ವಿದ್ಯಮಾನ. ನಗದು ಮೂಲಕವೇ ನಡೆಯುತ್ತಿದ್ದ ‘ಉಳಿದ ವ್ಯವಹಾರ’ಕ್ಕೆ ಈಗ ಸಮಸ್ಯೆಯಾಗಿದೆ’ ಎಂಬುದನ್ನು ಅವರು ಮುಕ್ತವಾಗಿ ಒಪ್ಪಿಕೊಂಡರು. ನೆಲಮಂಗಲ ತಾಲ್ಲೂಕು ಕಚೇರಿಯಲ್ಲಿ ಪತ್ರ ಬರಹಗಾರರಾಗಿರುವ ಚಂದ್ರಶೇಖರ ಅವರೂ ಇದೇ ಮಾತನ್ನು ಪುಷ್ಟೀಕರಿಸಿದರು.

‘ನೆಲಮಂಗಲ ತಾಲ್ಲೂಕಿನಲ್ಲಿ ರಿಯಲ್‌ ಎಸ್ಟೇಟ್ ವಹಿವಾಟು ಶೇ60ರಷ್ಟು ಕಡಿಮೆಯಾಗಿದೆ. ಜನರ ಹತ್ತಿರ ದುಡ್ಡು ಓಡಾಡುವಂತೆ ಆಗುವವರೆಗೆ ಈ ಪರಿಸ್ಥಿತಿ ಬದಲಾಗಲ್ಲ. ಸರ್ಕಾರ ಭೂಮಿಯ ಮೌಲ್ಯ ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ಜನರಲ್ಲಿದೆ. ಹೀಗಾಗಿ ಈಗಾಗಲೇ ಅಗ್ರಿಮೆಂಟ್ ಮಾಡಿಕೊಂಡಿದ್ದವರೂ ವ್ಯವಹಾರ ಮುಗಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎನ್ನುವುದು ಅವರು ಗಮನಿಕೆ.

‘₹20 ಲಕ್ಷಕ್ಕೆ ಒಂದು ಸೈಟ್‌ ಅಗ್ರಿಮೆಂಟ್ ಆಗಿತ್ತು. ಪಾರ್ಟಿ ಇಷ್ಟೊತ್ತಿಗೆ ಸೆಟ್ಲ್‌ಮೆಂಟ್ ಮಾಡಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕಿತ್ತು. ಈಗ ಏಕಾಏಕಿ ಹಿಂದೇಟು ಹಾಕ್ತಿದ್ದಾರೆ. ಅಡ್ವಾನ್ಸ್‌ ದುಡ್ಡು ವಾಪಸ್ ಕೊಡ್ಸಿ ಅಂತ ಗಂಟು ಬಿದ್ದಿದ್ದಾರೆ. ಸೈಟ್ ಓನರ್ ಅಡ್ವಾನ್ಸ್‌ ದುಡ್ಡು ವಾಪಸ್ ಕೊಡೋಕೆ ಒಪ್ತಾ ಇಲ್ಲ. ಸೈಟ್‌ ರೇಟ್ ಬೇಕಿದ್ರೆ ಸ್ವಲ್ಪ ಕಡಿಮೆ ಮಾಡೋಣ ಅಂತಿದ್ದಾರೆ. ಈ ವ್ಯವಹಾರ ₹18 ಲಕ್ಷಕ್ಕೆ ಸೆಟ್ಲ್‌ ಆಗೋ ಹಾಗೆ ಕಾಣ್ತಿದೆ’ ಎಂದು ಅಲ್ಲೇ ಮಾತಿಗೆ ಸಿಕ್ಕ ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡರು.

ತುಮಕೂರಿನಲ್ಲಿ ದಸ್ತಾವೇಜು ಬರಹಗಾರರಾಗಿರುವ ರಾಜೇಂದ್ರ ಅವರ ಮೂಲಕ ಬೆಂಗಳೂರು ಮೂಲದ ಅನೇಕರು ನಿವೇಶನ ಖರೀದಿಸಿದ್ದಾರೆ. ರಾಜೇಂದ್ರ ಅವರ ಪ್ರಕಾರ, ‘ನೋಟು ರದ್ದತಿಯ ನಂತರ ವ್ಯವಹಾರ ಶೇ95ರಷ್ಟು ಕಡಿಮೆಯಾಗಿದೆ. ಜನರ ಹತ್ತಿರ ಹಣ ಇಲ್ಲ. ಹಣ ಇರೋರು ಖರೀದಿ ಮಾಡೋಕೆ ಮುಂದೆ ಬರ್ತಿಲ್ಲ’.

‘ನಿವೇಶನ ಖರೀದಿಗೆ ಜನ ಏಕೆ ಮುಂದೆ ಬರ್ತಿಲ್ಲ?’ ಎಂಬ ಪ್ರಶ್ನೆಯನ್ನೂ ತಾವೇ ಕೇಳಿಕೊಳ್ಳುವ ರಾಜೇಂದ್ರ ತಮ್ಮದೇ ಆದ ವಿಶ್ಲೇಷಣೆಯನ್ನು ಮುಂದಿಡುತ್ತಾರೆ.

‘ನೋಡಿ, ದುಡ್ಡು ಹಾಕಿ ಲೇಔಟ್ ಡೆವಲಪ್ ಮಾಡಿದವರು ವ್ಯಾಪಾರ ಇಲ್ಲದಿದ್ರೆ ಹೆಚ್ಚು ದಿನ ತಡೆಯೋಕೆ ಆಗಲ್ಲ. ರೇಟ್‌ ಕಡಿಮೆ ಮಾಡಲೇ ಬೇಕಾಗುತ್ತೆ. ಹೂಡಿಕೆಯ ಮೇಲೆ ಶೇ10ರಷ್ಟು ಲಾಭ ಇರಿಸಿಕೊಂಡು ಮಾರಾಟಕ್ಕೆ ಮುಂದಾಗ್ತಾರೆ. ಈಗ ಸುಮಾರು ಶೇ30ರಿಂದ ಶೇ50ರ ಲಾಭದಲ್ಲಿ ಮಾರಾಟ ನಡೀತಿದೆ. ಮುಂದಿನ ದಿನಗಳಲ್ಲಿ ಸಹಜವಾಗಿಯೇ ನಿವೇಶನಗಳ ಬೆಲೆ ಶೇ20ರಷ್ಟು ಕಡಿಮೆಯಾಗಲಿದೆ’ ಎಂಬ ಲೆಕ್ಕಾಚಾರ ಬಿಚ್ಚಿಡುತ್ತಾರೆ.

‘ಈ ಸಮಸ್ಯೆ ತಾತ್ಕಾಲಿಕ, ಜನರಿಗೆ ಹೊಸ ರೀತಿಯ ವ್ಯವಹಾರ ರೂಢಿ ಆಗುವವರೆಗೆ ಮಾತ್ರ. ಇನ್ನೊಂದು ವರ್ಷಕ್ಕೆ ಎಲ್ಲವೂ ನಾರ್ಮಲ್ ಆಗುತ್ತೆ’ ಎನ್ನುವುದು ರಿಯಲ್‌ ಎಸ್ಟೇಟ್ ಏಜೆಂಟ್ ಸಿದ್ದಪ್ಪ ಅವರ ಮಾತು.

ರಿಯಲ್‌ ಲೋಕದ ತಲ್ಲಣ
*ನೆಲಮಂಗಲ, ದೊಡ್ಡಬಳ್ಳಾಪುರ, ತುಮಕೂರು, ದೇವನಹಳ್ಳಿ ಹೊರ ವಲಯದಲ್ಲಿ ಮಾರುಕಟ್ಟೆ ಬಹುತೇಕ ಸ್ಥಿರ.
*ನಗರ ಪ್ರದೇಶದಲ್ಲಿ ವಹಿವಾಟು ಕುಂಠಿತ. ನಿವೇಶನಗಳ ದರ ಕುಸಿಯುವ ನಿರೀಕ್ಷೆ.
*ಹಿಂದಿನ ಅಗ್ರಿಮೆಂಟ್‌ನಂತೆ ನಿವೇಶನ ಖರೀದಿಗೆ ಹಣ ಪಾವತಿಸಲು ಖರೀದಿದಾರರ ಹಿಂದೇಟು.
*ಚೌಕಾಶಿ ವ್ಯಾಪಾರ ಚಾಲು. ನಿವೇಶನ ಮಾರಲು ಮಾಲೀಕರ ಹಿಂಜರಿಕೆ.
*ಶೇ25ರಷ್ಟು ಬೆಲೆ ಕುಸಿಯುವ ಭೀತಿ.
*ರಾಜ್ಯ ಸರ್ಕಾರವೂ ಭೂ ಮೌಲ್ಯ ಕಡಿಮೆ ಮಾಡಬಹುದು ಎಂಬ ಗಾಳಿಸುದ್ದಿ

*
ಧೈರ್ಯವಾಗಿ ಹೂಡಿಕೆ ಮಾಡಿ
ನಿವೇಶನಗಳನ್ನು ಧೈರ್ಯವಾಗಿ ಖರೀದಿಸಿ. ನೋಟ್‌ ಬ್ಯಾನ್‌ ಗೊಂದಲ ತಾತ್ಕಾಲಿಕ. ಭೂಮಿಯ ಮೇಲೆ ಹೂಡಿಕೆ ಮಾಡಿದ ಮೊತ್ತ ದೀರ್ಘಾವಧಿಯಲ್ಲಿ ಖಂಡಿತ ಉತ್ತಮ ಲಾಭ ತಂದುಕೊಡಲಿದೆ. ಇನ್ನೊಂದು ವರ್ಷದಲ್ಲಿ ಈ ಗೊಂದಲ ಪರಿಹಾರವಾಗಲಿದೆ.
-ರಾಜೇಂದ್ರ, ಪತ್ರ ಬರಹಗಾರ, ತುಮಕೂರು

ADVERTISEMENT

ಆರು ತಿಂಗಳು ಹೂಡಿಕೆ ಮಾಡದಿರಿ
ನಿವೇಶನ, ಮನೆ ಅಥವಾ ಫ್ಲ್ಯಾಟ್ ಖರೀದಿಸಲು ಇದು ಸಕಾಲವಲ್ಲ. ಇನ್ನು ಆರು ತಿಂಗಳಲ್ಲಿ ಬೆಲೆಗಳು ಮತ್ತಷ್ಟು ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಕನಿಷ್ಠ 6 ತಿಂಗಳು ಕಾಯಿರಿ. ನಂತರವೇ ದೊಡ್ಡ ಮೊತ್ತದ ಹೂಡಿಕೆಗೆ ಮುಂದಾಗಿ.
-ಸಿದ್ದಪ್ಪ, ರಿಯಲ್‌ ಎಸ್ಟೇಟ್ ಏಜೆಂಟ್
ತುಮಕೂರು ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.