ADVERTISEMENT

ವಾಸ್ತು–ಗಿಡಗಳ ಸಂಬಂಧ

​ಪ್ರಜಾವಾಣಿ ವಾರ್ತೆ
Published 26 ಜನವರಿ 2017, 19:30 IST
Last Updated 26 ಜನವರಿ 2017, 19:30 IST
ವಾಸ್ತು–ಗಿಡಗಳ ಸಂಬಂಧ
ವಾಸ್ತು–ಗಿಡಗಳ ಸಂಬಂಧ   

ಗಿಡಗಳಿಗೂ ವಾಸ್ತುಶಾಸ್ತ್ರಕ್ಕೂ ಸಂಬಂಧವಿದೆ. ಯಾವ ಗಿಡಗಳನ್ನು ಮನೆಯಲ್ಲಿ ಬೆಳೆಯಬೇಕು, ಬೆಳೆದರೆ ಯಾವ ಮೂಲೆಯಲ್ಲಿಡಬೇಕು ಎಂಥವನ್ನು ಬೆಳೆದರೆ ಏನು ದೋಷ ಎನ್ನುವ ಮಾಹಿತಿ ಇಲ್ಲಿದೆ.

ಭಾರತೀಯರಿಗೆ ತುಳಸಿ ಗಿಡದ ಬಗೆಗೆ ವಿಶೇಷ ಪ್ರೀತಿ ಇದೆ. ಕೆಲವರು ತುಳಸಿ ಗಿಡವನ್ನು ಮನೆಯ ಒಳಗೂ ಇಟ್ಟುಕೊಳ್ಳುತ್ತಾರೆ. ವಾಸ್ತು ಪ್ರಕಾರ ಮನೆಯ ಒಳಗಿಡುವ ಗಿಡಗಳನ್ನು ಮನೆಯ ಉತ್ತರ, ಈಶಾನ್ಯ ಇಲ್ಲವೆ ಪೂರ್ವ ದಿಕ್ಕಿನಲ್ಲಿಯೇ ಇಡಬೇಕು. ತುಳಸಿ ಗಿಡವನ್ನು ಮನೆಯ ಪ್ರವೇಶ ದ್ವಾರದ ಬಳಿಯೂ ಇಡಬಹುದು. ಆದರೆ ಯಾವ ದಿಕ್ಕಿನಲ್ಲಿ ಇಟ್ಟಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ.

ಬಗೆಬಗೆಯ ಗಿಡಗಳಿಂದ ಲಿವಿಂಗ್‌ ರೂಂ ಅನ್ನು ಅಂದಗಾಣಿಸಬಹುದು. ವಾಸ್ತು ಪ್ರಕಾರ ಇವುಗಳು ಮನೆಯೊಳಗಿನ ಅಸಮತೋಲನವನ್ನು ಕಡಿಮೆ ಮಾಡುತ್ತವೆ.

ನೋಡಲು ಚೆಂದ ಹಾಗೂ ಕಡಿಮೆ ನೀರಿನಲ್ಲಿ ಬೆಳೆಯುತ್ತದೆ ಎನ್ನುವ ಕಾರಣಕ್ಕೆ ಕೆಲವರು ಮುಳ್ಳಿನ ಗಿಡವನ್ನು ಮನೆಯ ಒಳಾಂಗಣದಲ್ಲಿಯೂ ಇಟ್ಟುಕೊಳ್ಳುತ್ತಾರೆ. ಹೀಗೆ ಮಾಡುವುದು ತಪ್ಪು ಎನ್ನುತ್ತದೆ ವಾಸ್ತು. ಇದು ಅದೃಷ್ಟ ತರುವುದಿಲ್ಲ ಎನ್ನುವ ಪರಿಕಲ್ಪನೆಯಿದೆ. ಗುಲಾಬಿ ಗಿಡವೊಂದನ್ನು ಬಿಟ್ಟು ಬೇರೆ ಯಾವುದೇ ಬಗೆಯ ಮುಳ್ಳಿನ ಗಿಡವನ್ನು ಮನೆಯಲ್ಲಿ ಬೆಳೆಯಬಾರದು.

ಆಲದ ಮರ ಹಾಗೂ ಅಶ್ವತ್ಥ ಮರವನ್ನೂ ಮನೆಯ ಒಳಗೆ ಬೆಳೆಯುವುದು ಸೂಕ್ತವಲ್ಲ. ವಾಸ್ತು ಪ್ರಕಾರ ಮನೆಯ ಈಶಾನ್ಯ ಭಾಗದಲ್ಲಿ ಯಾವುದೇ ಬಗೆಯ ಬೃಹತ್‌ ಮರಗಳನ್ನು ಬೆಳೆಸುವಂತಿಲ್ಲ.

ಮನೆಯ ನೈಋತ್ಯ ಭಾಗದಲ್ಲಿ ರಾಕ್‌ ಗಾರ್ಡನ್‌ ಅನ್ನು ಮಾಡುವುದು ಸೂಕ್ತ. ಹಣ್ಣು ಬಿಡುವ ಗಿಡಗಳನ್ನು ಪೂರ್ವ ದಿಕ್ಕಿನಲ್ಲಿ ಬೆಳೆಸಬೇಕು ಎನ್ನುತ್ತದೆ ವಾಸ್ತು. ಆದಷ್ಟೂ ಬೊನ್ಸಾಯ್‌ ಗಿಡಗಳನ್ನು ಮನೆಯೊಳಗೆ ಬೆಳೆಯುವುದನ್ನು ಕಡಿಮೆ ಮಾಡಿ. ಕೆಂಪು ಹೂ ಬೆಳೆಯುವ ಗಿಡಗಳೂ ಮನೆಯೊಳಕ್ಕೆ ನಿಷಿದ್ಧ.

ಅದರ ಬದಲು ಮನಿ ಪ್ಲಾಂಟ್‌ ಅನ್ನು ಮನೆಯೊಳಗೆ ಬೆಳೆಯಬಹುದು. ಅದು ಅದೃಷ್ಟ ತರುತ್ತದೆ ಎನ್ನುವ ನಂಬಿಕೆ ಇದೆ. ಲಿಂಬೆ, ತಾವರೆ, ಮನಿ ಪ್ಲಾಂಟ್‌, ತುಳಸಿ, ಮಲ್ಲಿಗೆ ಗಿಡಗಳನ್ನು ಮನೆಯೊಳಗೆ ಬೆಳೆದರೆ ಅದೃಷ್ಟ ತರುತ್ತವೆ ಎಂದೂ ಕೆಲವರು ಹೇಳುತ್ತಾರೆ.

ಮನೆಯ ಮುಖ್ಯದ್ವಾರದಲ್ಲಿ ದೊಡ್ಡ ಗಿಡಗಳನ್ನು ಬೆಳೆಸಬಾರದು. ಮಲಗುವ ಕೋಣೆಯಲ್ಲಿ ಗಿಡಗಳನ್ನು ಇಡಬಾರದು. ಮನಿ ಪ್ಲಾಂಟ್‌ ಅನ್ನು ಮಲಗುವ ಕೋಣೆಯಲ್ಲಿ ಇಡಬಹುದು. ಇಟ್ಟರೆ ಆಸ್ತಿ ಖರೀದಿ ಅದೃಷ್ಟವೂ ಒಲಿಯಲಿದೆಯಂತೆ.
(ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT