ADVERTISEMENT

ವಿನ್ಯಾಸದ ಭಿತ್ತಿ ಸಲ್ಲದು ಭೀತಿ..

ರೋಹಿಣಿ ಮುಂಡಾಜೆ
Published 1 ಜುಲೈ 2014, 19:30 IST
Last Updated 1 ಜುಲೈ 2014, 19:30 IST

ಒಂದೇ ಬದುಕು, ಒಂದೇ ಮನೆ ಎಂಬ ಸಿದ್ಧಾಂತವನ್ನು ನಂಬಿದವರು ತಮ್ಮ ವಾಸಕ್ಕೆಂದು ಕಟ್ಟುವ ಮನೆ ಮಹತ್ವಾಕಾಂಕ್ಷೆಯ ಪ್ರತಿರೂಪ. ಮನೆಯ ಪ್ರತಿ ಇಂಚಿನ ವಿನ್ಯಾಸ, ಗಾತ್ರ, ಬಣ್ಣದ ಸ್ಪಷ್ಟ ರೂಪರೇಷೆ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಇಟ್ಟಿಗೆ ಕಟ್ಟುವಾಗ  ಕಿಂಚಿತ್ತು ಸೊಟ್ಟಗಾದರೂ ಮೇಸ್ತ್ರಿ ಗಮನಿಸಲಿಲ್ಲ ಎಂದು ಮನಸ್ಸು ಚಡಪಡಿಸುತ್ತದೆ.

ಇಂತಹುದೊಂದು ಕನಸಿನ ಮನೆಯ ನೆಲ ಹೇಗಿರಬೇಕು, ಗೋಡೆಗೆ ಯಾವ ಬಣ್ಣವಿರಬೇಕು ಎಂಬುದು ಮಾತ್ರ ಹಲವು ಸುತ್ತಿನ ಸಮಾಲೋಚನೆಯ ನಂತರವೂ ನಿರ್ಧಾರವಾಗಿರುವುದಿಲ್ಲ. ಬಣ್ಣಗಳ ಆಯ್ಕೆಯ ಹಿಂದೆ ಇತ್ತೀಚೆಗೆ ವಾಸ್ತು ಪ್ರಜ್ಞೆ, ಸಂಖ್ಯಾಶಾಸ್ತ್ರದ ನೆರಳೂ ಬೀಳುತ್ತಿರುವ ಕಾರಣ ಯಾವ ಕೊಠಡಿಗೆ ಯಾವ ಬಣ್ಣ ಎಂಬ ಗೊಂದಲ ಬಗೆಹರಿಯುವುದೇ ಇಲ್ಲ.

ಗೋಡೆಗೆ ಬಣ್ಣ ಬಳಿಯುವ ಕಷ್ಟ ಈಗ ಇಲ್ಲ. ಏಕೆಂದರೆ ಈಗ ಕಲಾತ್ಮಕ ಗೋಡೆಗಳು (ವಾಲ್‌ ಆರ್ಟ್) ಮಾರುಕಟ್ಟೆಯಲ್ಲಿ ಲಭ್ಯ. ಇಲ್ಲವೇ ನೋಡುಗರನ್ನು ಬೆರಗಾಗಿಸುವಂತಹ ವಿನ್ಯಾಸದ ಟೈಲ್ಸ್‌ ಕೂಡ ಬಂದಿವೆ.

ಋತುವಿಗೆ ಅನುಗುಣವಾಗಿಯೋ  ಒಲವಿನ ಬಣ್ಣಕ್ಕಾಗಿಯೋ ಅಥವಾ ಇಷ್ಟವಾದ ಕಲಾಕೃತಿಗಳಾಗಿಯೋ ‘ವಾಲ್‌ ಆರ್ಟ್‌’ ಬದಲಾಯಿಸುವುದು ಇತ್ತೀಚಿನ ಟ್ರೆಂಡ್. ಆದರೆ ಇದು ಎಲ್ಲರಿಗೂ ಕೈಗೆಟಕುವ ಬಾಬತ್ತಲ್ಲ.

ಗೋಡೆಗೆ ಬೇಕಾದಾಗ ಬೇಕಾದ ಬಣ್ಣ ಬಳಿಯುವುದೇ ದುಬಾರಿ ಅಲ್ಲದ ಸುಲಭ ಮಾರ್ಗ. ಹಾಗೆ ಬಣ್ಣ ಬದಲಾಯಿಸುವಾಗ ನಾಲ್ಕೂ ಅಥವಾ ಮೂರೂ ಗೋಡೆಗಳ ಬಣ್ಣ ಬದಲಾಯಿಸುವ ಅಗತ್ಯವಿಲ್ಲ. ಎದುರು ಬದುರು ಇರುವ ಗೋಡೆಗಳಿಗೆ ಎರಡು ವಿಭಿನ್ನ ಬಣ್ಣಗಳನ್ನು ಕೊಡುವುದು ಈಗಿನ ಸ್ಟೈಲ್‌. ಹೀಗಾಗಿ

ಯಾವುದಾದರೊಂದು ಗೋಡೆಯ ಬಣ್ಣವನ್ನಷ್ಟೇ ಬದಲಾಯಿಸಿದರೂ ಸಾಕಾಗುತ್ತದೆ.

ಟೈಲ್ಸ್‌ ವಿಚಾರಕ್ಕೆ ಬಂದರೆ ಮಾರುಕಟ್ಟೆಗೆ ವೈವಿಧ್ಯಮಯ ವಿನ್ಯಾಸ ಮತ್ತು ಗುಣಮಟ್ಟದ ಟೈಲ್ಸ್‌ ಲಗ್ಗೆಯಿಟ್ಟಿವೆ. ವರ್ಷಗಟ್ಟಲೆ ಬಣ್ಣ ಮಾಸದ, ದೂಳು, ನೀರು, ಕೊಳೆಯಿಂದ ಮುಕ್ತವಾಗಿ ಲಕಲಕಿಸುವ ಟೈಲ್ಸ್‌ ಈಗ ಲಭ್ಯ. ಡಿಜಿಟಲ್‌ ವಿನ್ಯಾಸ ಮತ್ತು ಬಣ್ಣದ ಸಂಯೋಜನೆಗಳಿಂದಾಗಿ ಹೊಸದೊಂದು ಲೋಕವನ್ನೇ ಮನೆಯೊಳಗೆ ಸೃಷ್ಟಿಸಬಹುದು. ಢಾಳಾದ ಬಣ್ಣ ಹಾಗೂ ಉತ್ತಮ ಗುಣಮಟ್ಟದ ಚಿತ್ರಗಳು ಥ್ರಿ ಡಿ ನೋಟವನ್ನು ನೀಡುತ್ತವೆ. ಹೀಗಾಗಿ ಮುಖ್ಯವಾದ ಕೊಠಡಿಗಳಿಗೆ, ಪ್ರವೇಶಾಂಗಣದ ಗೋಡೆಯನ್ನು ಹೀಗೆ ವಿಶಿಷ್ಟವಾಗಿಸಿದಲ್ಲಿ    ಎಲ್ಲರೂ ಭೇಷ್‌ ಅನ್ನುವುದು ನಿಸ್ಸಂಶಯ.

ಟೈಲ್ಸ್‌ ಆಯ್ಕೆ ಅವಕಾಶ
ಗೋಡೆ ಅಥವಾ ನೆಲಕ್ಕೆ ಟ್ರೆಂಡಿ ಸ್ಪರ್ಶ ಕೊಡಲು ಬಯಸುವವರಿಗೆ ದಂಡಿ ದಂಡಿ ಆಯ್ಕೆಗಳಿವೆ. ಫಳಫಳ ಹೊಳೆಯುವ ಗ್ಲೇಜ್ಡ್‌ ಸೆರಾಮಿಕ್‌ ಟೈಲ್ಸ್‌, ಮೊಸಾಯಿಕ್‌ ಟೈಲ್ಸ್‌, ಮಾರ್ಬಲ್‌ ವಾಲ್‌ ಟೈಲ್ಸ್‌, ಗ್ಲಾಸ್‌ ವಾಲ್‌ ಟೈಲ್ಸ್‌ ಹಾಗೂ ವಿನೈಲ್‌ ವಾಲ್‌ ಟೈಲ್ಸ್‌ ಈಗ ಹೆಚ್ಚು ಬೇಡಿಕೆಯಲ್ಲಿವೆ.

ಸಂಪೂರ್ಣ ಜಲನಿರೋಧಕವಾಗಿರುವ ಗ್ಲೇಜಡ್‌ ಸೆರಾಮಿಕ್ ಟೈಲ್ಸ್‌ ಎರಡು ತಿಂಗಳಿಗೊಂದೆರಡು ಬಾರಿ ತೊಳೆದು ಸ್ವಚ್ಛಗೊಳಿಸಲು ಸೂಕ್ತ.
ಅಡುಗೆ ಮನೆ, ಬಚ್ಚಲು, ಶೌಚಾಲಯಗಳಿಗೂ ಇವುಗಳನ್ನು ಆರಿಸಿಕೊಳ್ಳಬಹುದು. ಮನೆಯಲ್ಲಿ ಈಜು ಕೊಳವಿದ್ದರೂ ಈ ಟೈಲ್ಸ್‌ ಉತ್ತಮ ಆಯ್ಕೆಯಾದೀತು. ಇಲ್ಲವೇ ಹೆಚ್ಚು ನೀರು ಬೀಳುತ್ತಿರುವ ಹೊರಭಾಗದ ಗೋಡೆಗಳಿಗೂ ಇವುಗಳನ್ನು ಅಳವಡಿಸಬಹುದು.

ಇದರಲ್ಲೂ ಕನ್ನಡಿಯಂತೆ ಮಿಂಚುವ ಹೈಗ್ಲಾಸ್‌ ಗ್ಲೇಸ್ಡ್ ಮತ್ತು ಮ್ಯಾಟ್‌ ಗ್ಲೇಜ್ಡ್ ಟೈಲ್ಸ್‌ ಸಿಗುತ್ತವೆ. ಈ ಎರಡೂ ಬಗೆಯವು ಸುರಕ್ಷಿತ. ಹೆಜ್ಜೆಗಳು ಜಾರುವುದಿಲ್ಲ ಎಂಬುದು ಗಮನಾರ್ಹ. ಏಕೆಂದರೆ ಇವುಗಳನ್ನು ಜಾರುನಿರೋಧಕ ಕೋಟಿಂಗ್‌ನೊಂದಿಗೆ ತಯಾರಿಸಲಾಗಿರುತ್ತದೆ!

ಮೊಸಾಯಿಕ್‌ ಟೈಲ್ಸ್
ವಿವಿಧ ಬಗೆಯ ಆವೆಮಣ್ಣಿನಿಂದ ತಯಾರಿಸಿದ ಟೈಲ್ಸ್‌ ಇವು. ಮುಖ್ಯವಾಗಿ ಬಗೆ ಬಗೆಯ ಬಣ್ಣದ ಸಂಯೋಜನೆಯೊಂದಿಗೆ ತಯಾರಾಗಿರುವ ಕಾರಣ ಚಿತ್ತಾಕರ್ಷಕವಾಗಿರುತ್ತವೆ. ಗುಣಮಟ್ಟದಲ್ಲಿಯೂ ಮೇಲುಗೈ. ಟೈಲ್ಸ್‌ನ ಮೇಲ್ಭಾಗಕ್ಕೆ ಮಾತ್ರ ಗ್ಲೇಸ್ಡ್ ಕೋಟ್‌ ಹಾಕಲಾಗಿರುವ ಕಾರಣ ಹೊಳಪಿನಿಂದಲೂ ಗಮನ ಸೆಳೆಯುತ್ತವೆ.

ಮಾರ್ಬಲ್‌ ಟೈಲ್ಸ್‌
‘ಗೋಡೆಗೆ ಅಚ್ಚುಕಟ್ಟಿನ ನೋಟ ನೀಡಬೇಕು’ ಎನ್ನುವವರು ಮಾರ್ಬಲ್‌ನಿಂದ ತಯಾರಿಸಿದ ಮಾರ್ಬಲ್‌ ವಾಲ್‌ ಟೈಲ್ಸ್‌ ಆಯ್ದುಕೊಳ್ಳಬಹುದು. ಸೀಮಿತ ಜಾಗದಲ್ಲೇ ಅಪರೂಪದ ಹಾಗೂ ವಿಶಿಷ್ಟವಾದ ಸ್ಪರ್ಶ ಕೊಡಲು ಇದು ಉತ್ತಮ ಆಯ್ಕೆ.

ಗುಣಮಟ್ಟದಲ್ಲಿ ಮಾರ್ಬಲ್‌ ಟೈಲ್ಸ್‌ ಒಂದು ಕೈ ಮೇಲು. ಸೆರಾಮಿಕ್‌ ಟೈಲ್ಸ್‌ ಕೆಲವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ತಂದೊಡುತ್ತವೆ ಎಂಬ ದೂರು ಇದೆ.  ಮುಖ್ಯವಾಗಿ ಅಲರ್ಜಿಗೆ ಕಾರಣವಾಗುವ ಅಂಶಗಳು ಮಾರ್ಬಲ್‌ ಟೈಲ್ಸ್‌ನಲ್ಲಿ ಇಲ್ಲದಿರುವುದು ಗಮನಾರ್ಹ.

ಗ್ಲಾಸ್‌ ಟೈಲ್ಸ್
ಯಾವುದೇ ಆಕಾರದಲ್ಲಿಯೂ ಲಭ್ಯವಾಗುವ ಗ್ಲಾಸ್‌ ಟೈಲ್ಸ್‌ನಲ್ಲಿಯೂ ವೈವಿಧ್ಯಮಯ ವಿನ್ಯಾಸಗಳು ಸಿಗುತ್ತವೆ. ಪಕ್ಆ ಗಾಜಿನಂತಹುದೇ ನೋಟದವೂ ಇದ್ದು ನಿಮ್ಮ ಮನೆ ಇತರರ ಮನೆಗಿಂತ ವಿಶಿಷ್ಟವಾಗಿರಬೇಕು ಎಂದು ನೀವು ಬಯಸುವುದಾದರೆ ಈ ಟೈಲ್ಸ್‌ ನಿಮಗೆ ಇಷ್ಟವಾಗದೆ ಇರದು. ಫ್ರಾಸ್ಟೆಡ್‌ ಮತ್ತು ಬಬಲ್‌ ಎಂಬ ಎರಡು ಬಗೆಯವು ಹೆಚ್ಚಿನ ಬೇಡಿಕೆ ಪಡೆಯುತ್ತಿವೆ.

ವಿನೈಲ್‌ ಟೈಲ್ಸ್
ಸಿಂಥೆಟಿಕ್‌ ಸಾಮಗ್ರಿಗಳಿಂಗ ತಯಾರಾಗುವ ವಿನೈಲ್‌ ಟೈಲ್ಸ್‌ ಸಹ ಬೇಕಾದ ಆಕಾರ ಮತ್ತು ಬಣ್ಣಗಳಲ್ಲಿ ಲಭ್ಯ. ಮೇಲ್ನೋಟಕ್ಕೆ ಸಾಂಪ್ರದಾಯಿಕ ಟೈಲ್ಸ್‌ನಂತೆಯೇ ಕಾಣುತ್ತವೆ. ಇತರ ದುಬಾರಿ ಟೈಲ್ಸ್‌ ಮಧ್ಯೆ ಇವು ಕೈಗೆಟಕುವ ದರದಲ್ಲಿ ಸಿಗುವುದು ಇವುಗಳ ಹೆಗ್ಗಳಿಕೆ. ಹೀಗಾಗಿ ಎಲ್ಲಾ ವರ್ಗದ ಗ್ರಾಹಕರಿಗೂ ಅಚ್ಚುಮೆಚ್ಚು ಆಗಿವೆ. ಆದರೆ ಇವುಗಳನ್ನು ಸಮರ್ಪಕವಾಗಿ ಅಳವಡಿಸದಿದ್ದರೆ ಗುಳ್ಳೆಗಳು ಕಂಡುಬರುವುದಲ್ಲದೆ ಪದರ ಪದರಾಗಿ ಕಳಚಿಕೊಳ್ಳುತ್ತವೆ. ಹೀಗಾಗಿ ಪಳಗಿದ ಕೈಗಳೇ ಇವುಗಳನ್ನು ಅಳವಡಿಸುವಂತೆ ಎಚ್ಚರ ವಹಿಸಬೇಕು.

ಮನೆ ಕಟ್ಟಿ ನೋಡು ಎಂಬ ಮಾತು ಸುಮ್ಮನೆ ಹುಟ್ಟಿಕೊಂಡಿಲ್ಲ. ಹೆಜ್ಜೆ ಹೆಜ್ಜೆಗೂ ಎದುರಾಗುವ ಸವಾಲನ್ನು ಸಮರ್ಥವಾಗಿ ಎದುರಿಸದಿದ್ದರೆ ಕಟ್ಟಿದ ಮನೆಯಲ್ಲಿ ವಾಸ ಆರಂಭವಾಗುತ್ತಿರುವಂತೆ ಹೆಜ್ಹೆ ಹೆಜ್ಜೆಗೂ ಸಂಕಷ್ಟಗಳು ಎದುರಾದಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT