ADVERTISEMENT

ಸಾಲಕ್ಕೂ, ಗೃಹ ನಿರ್ಮಾಣಕ್ಕೂ ಸಕಾಲ

ಗೃಹ ಸಾಲ

ಅಮೃತ ಕಿರಣ ಬಿ.ಎಂ.
Published 15 ಡಿಸೆಂಬರ್ 2016, 19:30 IST
Last Updated 15 ಡಿಸೆಂಬರ್ 2016, 19:30 IST
ಸಾಲಕ್ಕೂ, ಗೃಹ ನಿರ್ಮಾಣಕ್ಕೂ ಸಕಾಲ
ಸಾಲಕ್ಕೂ, ಗೃಹ ನಿರ್ಮಾಣಕ್ಕೂ ಸಕಾಲ   

ಮುಂದಿನ ದಿನಗಳಲ್ಲಿ ಗೃಹಸಾಲ ಪಡೆಯುವ ಯೋಜನೆ ಹಾಕಿಕೊಂಡಿರುವವರಿಗೆ ಒಂದೊಳ್ಳೆ ಸುದ್ದಿ ಇದೆ. ಗೃಹಸಾಲದ ಮೇಲಿನ ಬಡ್ಡಿದರಗಳು ಕಡಿಮೆಯಾಗುವ ಪ್ರಕ್ರಿಯೆ ಆರಂಭವಾಗಿದ್ದು, ಕೆಲ ತಿಂಗಳುಗಳಲ್ಲಿ ಬಡ್ಡಿದರ ಇನ್ನಷ್ಟು ಕಡಿತಗೊಳ್ಳುವ ಸಾಧ್ಯತೆಯಿದೆ. 

ದರ ನಿಗದಿಗೆ ಹೊಸ ವಿಧಾನ: ನೀವು ಗೃಹಸಾಲ ಪಡೆಯುವ ಯೋಜನೆ ಹಾಕಿಕೊಂಡಿದ್ದಲ್ಲಿ ಬಡ್ಡಿದರ ಲೆಕ್ಕಾಚಾರ ಹಾಕುವ ವಿಧಾನವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು. 

ಎಂಸಿಎಲ್‌ಆರ್ (ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್) ಎಂಬ ಹೊಸ ವಿಧಾನವನ್ನು ಈ ಏಪ್ರಿಲ್‌ನಿಂದಲೇ ಜಾರಿಗೊಳಿಸಿರುವುದು ಗಮನದಲ್ಲಿರಲಿ. ಗೃಹಸಾಲ ನೀಡಲು ಈ ಮೊದಲು ಅನುಸರಿಸುತ್ತಿದ್ದ ಮೂಲ ದರ ಪದ್ಧತಿಗೆ  (ಬೇಸ್‌ ರೇಟ್ ಮೆಥಡ್) ಬ್ಯಾಂಕ್‌ಗಳು ವಿದಾಯ ಹೇಳಿದ್ದು, ಇದಕ್ಕೆ ಪರ್ಯಾಯವಾಗಿ ಎಂಸಿಎಲ್‌ಆರ್ ವಿಧಾನದ ಮೂಲಕ ಬಡ್ಡಿದರ ನಿಗದಿ ಮಾಡಲಾಗುತ್ತಿವೆ. ಏನಿದು ಎಂಸಿಎಲ್‌ಆರ್: ಹೊಸ ಸಾಲಗಳ ಮೇಲಿನ ಬಡ್ಡಿ ದರ ಎಂಬುದು ಇರರ ಅರ್ಥ.

ಈ ಮೊದಲು ಠೇವಣಿಗಳ ಬಡ್ಡಿ ದರಗಳ ಸರಾಸರಿ ವೆಚ್ಚ ಆಧರಿಸಿ ಬ್ಯಾಂಕ್‌ಗಳು ಮೂಲ ದರ ನಿಗದಿಪಡಿಸುತ್ತಿದ್ದವು. ಈಗ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿ (ಎಂಸಿಎಲ್‌ಆರ್‌) ಸಾಲದ ಬಡ್ಡಿ ದರ ನಿಗದಿ ಮಾಡಲಾಗುತ್ತಿದೆ.

ಅಂದರೆ, ಬ್ಯಾಂಕ್‌ಗಳು ಠೇವಣಿ ಮತ್ತು ಆರ್‌ಬಿಐನಿಂದ ಪಡೆಯುವ ಸಾಲಕ್ಕೆ ನೀಡುವ ಬಡ್ಡಿ ದರ ಆಧರಿಸಿ ತಮ್ಮ ಸಾಲಗಳ ಮೇಲಿನ ಬಡ್ಡಿ ದರ ನಿಗದಿ ಮಾಡುತ್ತವೆ. ಎಂಸಿಎಲ್‌ಆರ್‌– ಎನ್ನುವುದು ಬ್ಯಾಂಕ್‌ಗಳ ಕನಿಷ್ಠ ಬಡ್ಡಿ ದರವಾಗಿದೆ. ಇದಕ್ಕಿಂತ ಕಡಿಮೆ ಮೊತ್ತಕ್ಕೆ ಬಡ್ಡಿ ದರ ನಿಗದಿ ಮಾಡುವುದಿಲ್ಲ.

ಬಡ್ಡಿದರ ನಿಗದಿ: ಬ್ಯಾಂಕ್‌ಗಳ ಕನಿಷ್ಠ ವೆಚ್ಚ ಪ್ರಮಾಣದ (ಮಾರ್ಜಿನಲ್ ಕಾಸ್ಟ್) ಆಧಾರದಲ್ಲಿ ಸಾಲದ ದರ ನಿಗದಿಯಾಗುತ್ತದೆ.  ಎಂಸಿಎಲ್‌ಆರ್ ವಿಧಾನವನ್ನು ಬ್ಯಾಂಕ್‌ಗಳು ಈಗಾಗಲೇ ಅಳವಡಿಸಿಕೊಂಡಿದ್ದು, ಕಡಿಮೆ ಮಾರ್ಜಿನ್‌ನಲ್ಲಿಯೇ (ಅಲ್ಪ ಲಾಭಕ್ಕೆ) ಸಾಲ ನೀಡುತ್ತವೆ. ಈ ವಿಧಾನ ಗ್ರಾಹಕ ಪರ ಎನ್ನುವ ಮಾತಿದೆ.

ಪ್ರಸ್ತುತ ಗ್ರಾಹಕರೊಬ್ಬರು ಗೃಹಸಾಲ ಪಡೆಯಲು ಮುಂದಾದರೆ, ಬಡ್ಡಿದರಗಳು ಸ್ವಯಂಚಾಲಿತವಾಗಿ ಮರು ಹೊಂದಾಣಿಕೆಯಾಗುತ್ತವೆ (ರೀಸೆಟ್).  ಅಂದರೆ ಬ್ಯಾಂಕ್‌ಗಳ ಠೇವಣಿ ಸಂಗ್ರಹ ಆಧರಿಸಿ ಬಡ್ಡಿದರಗಳು ನಿಗದಿಯಾಗುತ್ತವೆ. ಪರಿಣಾಮಕಾರಿ ದರ ಕಡಿತ ಪ್ರಕ್ರಿಯೆಯನ್ನು ಎಂಸಿಎಲ್‌ಆರ್‌ ವಿಧಾನವು ಖಚಿತಪಡಿಸುತ್ತದೆ.

ಠೇವಣಿ ದರ ಕಡಿತ: ಗರಿಷ್ಠ ಮುಖಬೆಲೆಯ ನೋಟು ರದ್ದತಿಯಿಂದ ಬ್ಯಾಂಕ್‌ಗಳಿಗೆ ಅಪಾರ ಪ್ರಮಾಣದ ನಗದು ಠೇವಣಿ ರೂಪದಲ್ಲಿ ಹರಿದು ಬರುತ್ತಿದೆ. ಹೀಗಾಗಿ ಠೇವಣಿ ಮೇಲಿನ ಬಡ್ಡಿದರವು ಈಗಾಗಲೇ ಕಡಿತಗೊಳ್ಳಲು ಆರಂಭಿಸಿದೆ. ಹಲವು ಬ್ಯಾಂಕ್‌ಗಳು ಠೇವಣಿ ಮೇಲಿನ ಬಡ್ಡಿದರ ಕಡಿತ ಮಾಡಿವೆ. ಹೀಗಾಗಿ ಬ್ಯಾಂಕ್‌ಗಳ ಠೇವಣಿ ಮೇಲಿನ ಕನಿಷ್ಠ ವೆಚ್ಚ ಪ್ರಮಾಣ (ಮಾರ್ಜಿನಲ್ ಕಾಸ್ಟ್)  ಇಳಿದಿದ್ದು, ಇದು ಗೃಹಸಾಲದ ಬಡ್ಡಿದರ ಕಡಿಮೆಯಾಗಲು ನೇರವಾಗಿ ಕಾರಣವಾಗುತ್ತದೆ.

ಗೃಹಸಾಲ ಪಡೆಯಲು ಹೋಗುವ ಗ್ರಾಹಕರಿಗೆ ಅವರು ಸಾಲ ಪಡೆಯುವ ದಿನದಂದು ಚಾಲ್ತಿಯಲ್ಲಿರುವ ಬಡ್ಡಿದರ ಅನ್ವಯವಾಗುತ್ತದೆ. ಬ್ಯಾಂಕ್‌ನ ನಿಯಮಗಳ ಪ್ರಕಾರ ಒಂದಷ್ಟು ಕಾಲ ಈ ದರವು ಬದಲಾವಣೆಯಾಗುವುದಿಲ್ಲ. ಇದನ್ನೇ ರೀಸೆಟ್‌ ಡೇಟ್ ಎನ್ನುತ್ತಾರೆ. ಮುಂದಿನ ರೀಸೆಟ್‌ ಡೇಟ್‌ವರೆಗೆ ಯಾವುದೇ ರೀತಿಯಲ್ಲೂ ಬಡ್ಡಿದರ ಬದಲಾಗುವುದಿಲ್ಲ. ರೀಸೆಟ್ ದಿನಾಂಕದಂದು ಚಾಲ್ತಿಯಲ್ಲಿರುವ ಬಡ್ಡಿದರವು ಮುಂದಿನ ಅವಧಿಗೆ ಅನ್ವಯವಾಗುತ್ತದೆ. ಈ ರೀಸೆಟ್ ದಿನಾಂಕದ ಗರಿಷ್ಠ ಅವಧಿ ಒಂದು ವರ್ಷ.

ಎಂಸಿಎಲ್‌ಆರ್‌ ವಿಧಾನ ಮೀರಿ ಕೆಲ ಗ್ರಾಹಕರಿಗೆ ಬ್ಯಾಂಕ್‌ಗಳು  ಬಡ್ಡಿದರ ಹೆಚ್ಚಿಸಲು  ಅವಕಾಶವಿದೆ. ಗ್ರಾಹಕರ ಈ ಹಿಂದಿನ ಕ್ರೆಡಿಟ್ ಸ್ಕೋರ್ ಕಳೆಪೆಯಾಗಿದ್ದಲ್ಲಿ, ಬ್ಯಾಂಕ್‌ಗಳು ಹೆಚ್ಚಿನ ಬಡ್ಡಿದರದಲ್ಲಿ  ಸಾಲ ನೀಡುತ್ತವೆ.

ಒಂದು ವೇಳೆ ನಿರ್ದಿಷ್ಟವಲ್ಲದ ಬಡ್ಡಿದರದಡಿ (ಫ್ಲೋಟಿಂಗ್ ರೇಟ್) ಗೃಹಸಾಲ ಪಡೆಯಬೇಕಿದ್ದರೂ, ಅದು ಎಂಸಿಎಲ್‌ಆರ್‌ ವಿಧಾನದಡಿ ಬರುತ್ತದೆ. ಬ್ಯಾಂಕ್‌ಗಳು ಮಾನದಂಡ ದರವಾಗಿ ಆರು ತಿಂಗಳ ಅಥವಾ ಒಂದು ವರ್ಷ ಎಂಸಿಎಲ್‌ಆರ್ ಬಳಸಬಹುದು. ಇಲ್ಲಿಯೂ ರೀಸೆಟ್ ಅವಕಾಶ ಇರುತ್ತದೆ. ಗೃಹಸಾಲದಂತಹ ದೀರ್ಘಾವಧಿಯ ಸಾಲದ ಮರುಪಾವತಿ ಅವಧಿಯನ್ನು ಬ್ಯಾಂಕ್‌ಗಳು ಇದೇ ಆಧಾರದಲ್ಲಿ ನಿರ್ಧರಿಸಬಹುದು.

ಎಂಸಿಎಲ್‌ಆರ್‌ ಪ್ರತಿ ತಿಂಗಳು ಪರಿಶೀಲನೆಗೊಳಪಟ್ಟರೂ, ಬ್ಯಾಂಕ್‌ಗಳ ಜತೆಗಿನ ಒಪ್ಪಂದದ ಪ್ರಕಾರ, ಆರು ತಿಂಗಳು ಅಥವಾ ಒಂದು ವರ್ಷಕ್ಕೊಮ್ಮೆ ಗೃಹಸಾಲ ರೀಸೆಟ್ ಆಗುತ್ತದೆ.

ಒಂದು ವೇಳೆ ನೀವು ಜನವರಿ 1, 2017ರಂದು ₹50 ಲಕ್ಷ ಗೃಹಸಾಲದ ಬಡ್ಡಿದರ ಶೇ 9.30 ನಿಗದಿಯಾಗಿದೆ ಎಂದಿಟ್ಟುಕೊಳ್ಳಿ. ಒಂದು ವೇಳೆ ಜುಲೈ 1, 2017ರಂದು ಬಡ್ಡಿದರ ಪರಿಷ್ಕರಣೆ ಆದಲ್ಲಿ, ನಿಮ್ಮ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಜನವರಿ 1, 2018ರಂದೇ ಅದು ರೀಸೆಟ್ ಆಗಲಿದೆ. ಬಡ್ಡಿದರಗಳು ದಿಢೀರ್ ಎಂದು ನಿಮ್ಮನ್ನು ಬಾಧಿಸುವುದಿಲ್ಲ. ಎಂಸಿಎಲ್‌ಆರ್‌ ಪದ್ಧತಿಯು ಗ್ರಾಹಕರಿಗೆ ವರವಾಗಿಯೇ ಪರಿಣಮಿಸಲಿದೆ.

ಭರವಸೆಯ ಸುಳಿವು: ಗೃಹಸಾಲ ಪಡೆಯುವ ಉದ್ದೇಶವಿದ್ದರೆ ಈ ಎಲ್ಲ ಅಂಶಗಳನ್ನು ಗಮನದಲ್ಲಿಡುವುದು ಒಳಿತು. ಸದ್ಯದ ಬೆಳವಣಿಗೆಗಳ ಪ್ರಕಾರ, ಕಡಿಮೆ ಬಡ್ಡಿದರ  ದಲ್ಲಿ ಗೃಹಸಾಲ ಸೌಲಭ್ಯ ಸಿಗುವ ಸೂಚನೆ ಇದೆ. ಬ್ಯಾಂಕ್‌ಗಳಿಗೆ ಯಥೇಚ್ಛವಾಗಿ ಹರಿದುಬರುತ್ತಿರುವ ಠೇವಣಿ, ಹಾಗೂ ಹಣದುಬ್ಬರ ಇಳಿಕೆಯಿಂದಾಗಿ ಈ ಬೆಳವಣಿಗೆ ಮುಂದಿನ ದಿನಗಳಲ್ಲಿಯೂ ಮುಂದುವರಿಯುವ ಸಾಧ್ಯತೆ ಇದೆ. 

ಏನು ಕಾರಣ
ನೋಟು ರದ್ದತಿಯಿಂದ ಬ್ಯಾಂಕ್‌ಗಳಿಗೆ ಭಾರಿ ಪ್ರಮಾಣದ ಠೇವಣಿ ಹರಿದು ಬರುತ್ತಿದೆ. ತನಗೆ ಹರಿದು ಬಂದ ಠೇವಣಿಯನ್ನು ಬ್ಯಾಂಕ್‌ಗಳು ಸುಮ್ಮನೆ ಇರಿಸಿಕೊಳ್ಳಲು ಆಗದು. ಅವು ಮತ್ತೊಂದೆಡೆ ಹೂಡಿಕೆ ಮಾಡಲೇ ಬೇಕಾಗುತ್ತದೆ. ಗ್ರಾಹಕರಿಗೆ ಕೊಡುವ ಸಾಲವೂ ಬ್ಯಾಂಕ್‌ಗಳು ಮಾಡುವ ಹೂಡಿಕೆಯೇ ಅಲ್ಲವೇ? ಸಾಲದ ಬಡ್ಡಿದರಗಳೂ ಕಡಿಮೆಯಾಗಲು ಹಣದ ಹರಿವು ಮುಖ್ಯ ಕಾರಣ.

ಇಎಂಐ ಕಡಿತ?
ನೋಟು ರದ್ದತಿ ನಿರ್ಧಾರದ ನೇರ ಪರಿಣಾಮ ಸಾಲದ ಇಎಂಐಗಳ ಮೇಲೆ ಆಗುವುದು ನಿಚ್ಚಳವಾಗಿದೆ. ಮುಂದಿನ ಕೆಲ ವಾರ/ತಿಂಗಳಲ್ಲಿ  ಇಎಂಐ ಇಳಿಕೆಯಾಗಲಿವೆ. ಹಲವು ಅಂಶಗಳೂ ಇದಕ್ಕೆ ಪರೋಕ್ಷವಾಗಿ ಕಾರಣವಾಗಲಿವೆ. ಬ್ಯಾಂಕಿಂಗ್ ವ್ಯವಸ್ಥೆಗೆ ಹಣದ ಭಾರಿ ಹರಿವಿನಿಂದಾಗಿ ಬ್ಯಾಂಕ್‌ಗಳ ವೆಚ್ಚ ಪ್ರಮಾಣ ಇಳಿದಿದೆ. ಠೇವಣಿ ಬಡ್ಡಿದರ ಕಡಿತಗೊಳಿಸಿದ್ದರ ನೇರ ಪರಿಣಾಮ ಸಾಲದ ಬಡ್ಡಿದರ ಇಳಿಕೆ ಮೇಲೆ ಆಗಲಿದೆ. ಗ್ರಾಹಕರು ತಮ್ಮ ಸಾಲದ ಇಎಂಐನಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಸಾಲದ ಕಂತುಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಸಾಲವನ್ನು ಆದಷ್ಟು ಬೇಗ ಮುಕ್ತಾಯಗೊಳಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.