ADVERTISEMENT

ಹಳೆ ಕಂಬ ಹೊಸ ಬಿಂಬ

ಹರವು ಸ್ಫೂರ್ತಿ
Published 24 ನವೆಂಬರ್ 2016, 19:30 IST
Last Updated 24 ನವೆಂಬರ್ 2016, 19:30 IST
ಹಳೆ ಕಂಬ ಹೊಸ ಬಿಂಬ
ಹಳೆ ಕಂಬ ಹೊಸ ಬಿಂಬ   

ನಮ್ಮ ನಗರದಲ್ಲಿ ಚಿತ್ರಕಲೆ ಪ್ರದರ್ಶನಾಲಯ, ಪುಸ್ತಕ ಮನೆಗಳು, ಕರಕುಶಲ ಪ್ರದರ್ಶನ ಅಷ್ಟೇ ಯಾಕೆ ಡರ್ಬಿ ರೇಸ್‌ಗೂ ಒಂದು ಸ್ಥಳವಿದೆ. ಸಮಾನ ಮನಸ್ಕ ಗೆಳೆಯರು ಸೇರಿ ತಮ್ಮ ಆಸಕ್ತಿ ಹವ್ಯಾಸ ಹಂಚಿಕೊಳ್ಳಲು ಸಂಸ್ಥೆ, ಕ್ಲಬ್‌ಗಳನ್ನು ಮಾಡುತ್ತಾರೆ. ಹಾಗೇ ಪುರಾತನ ವಸ್ತು ಸಂಗ್ರಹಣೆಗಾಗಿ ‘ಸಾಂಚಿ’ ಎಂಬ ವಸ್ತು ಸಂಗ್ರಹಾಲಯವನ್ನು ಆರಂಭಿಸಿದ್ದಾರೆ ಪಾರ್ವತಿ ಮಿರ್ಲೆ.

ಪುರಾತನ ವಸ್ತುಗಳ ಸಂಗ್ರಹಗಳಲ್ಲಿ ಆಸಕ್ತಿ ಇರುವ ಮಿರ್ಲೆ ದಂಪತಿ ಕಳೆದ 25 ವರ್ಷಗಳಿಂದ ಪುರಾತನ ವಸ್ತುಗಳ ಸಂಗ್ರಹದಲ್ಲಿ ತೊಡಗಿಕೊಂಡಿದ್ದಾರೆ.   ಪ್ರವಾಸ ಸಂದರ್ಭದಲ್ಲಿ, ತಮ್ಮ ಹುಟ್ಟೂರು ಮಂಡ್ಯಕ್ಕೆ ಹೋದಾಗ ಸಿಗುತ್ತಿದ್ದ ಹಳೆಯ ಸಾಮಾನುಗಳನ್ನು ಮನೆಗೆ ತರುತ್ತಿದ್ದರು. ಸಂಗ್ರಹ ಹೆಚ್ಚಾದ ಕಾರಣ ‘ಸಾಂಚಿ’ ಆ್ಯಂಟಿಕ್ಸ್‌ ಆರಂಭಿಸಿದ್ದಾರೆ.

ಸಂಗ್ರಹಾಲಯದೊಳಗೊಂದು ಚರ್ಚೆ
‘ಸಾಂಚಿ’ ಕೇವಲ ಪುರಾತನ ವಸ್ತುಗಳ ಸಂಗ್ರಹಾಲಯವಲ್ಲ. ಇಲ್ಲಿ ಹಲವು ಚಟುವಟಿಕೆಗಳು ನಡೆಯುತ್ತಿವೆ. ಪುರಾತನ ವಸ್ತುಗಳ ಬಗ್ಗೆ ಆಸಕ್ತಿ ಇರುವ ಗೆಳೆಯರೆಲ್ಲ ವಾರಕ್ಕೊಂದು ಬಾರಿ ‘ಸಾಂಚಿ’ ಮನೆಯಲ್ಲಿ ಸೇರುತ್ತಾರೆ. ಜೊತೆಗೆ ವೈಯಕ್ತಿಕವಾಗಿ ಪುರಾತನ ವಸ್ತುಗಳನ್ನು ಸಂಗ್ರಹ ಮಾಡುತ್ತಿರುವವರು ಕೂಡ ತಮ್ಮ ಸಂಗ್ರಹದೊಳಗಿನ ವಸ್ತುಗಳನ್ನು ತಂದು ತೋರಿಸಬಹುದು ಮತ್ತು ಆ ಪುರಾತನ ವಸ್ತುಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು.

‘ನಾವು ಪ್ರತಿ ವಾರ ಚರ್ಚೆ ನಡೆಸುತ್ತೇವೆ ಇದರಿಂದ ಮಾಹಿತಿ ಹಂಚಿಕೆಯಾಗುತ್ತದೆ. ನಮಗೆ ಎಲ್ಲಾ ವಿಭಾಗದ ಸಂಗ್ರಹಗಳ ಬಗ್ಗೆ ಗೊತ್ತಿರುವುದಿಲ್ಲ. ಎಲ್ಲರೂ ಒಟ್ಟಿಗೆ ಬಂದು ಇಂತಹ ಚರ್ಚೆಯಲ್ಲಿ ಭಾಗವಹಿಸುವುದರಿಂದ  ಪುರಾತನ ವಸ್ತುಗಳ ಬಗ್ಗೆ ಮತ್ತಷ್ಟು ಕಲಿಯಲು ಸಹಾಯವಾಗುತ್ತದೆ, ಹಳೆ ಸಾಮಾನುಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಇದು ಪೂರಕ ವೇದಿಕೆಯಾಗಬೇಕು’ ಎನ್ನುವುದು ಪಾರ್ವತಿ ಮಿರ್ಲೆ ಆಶಯ. ಚರ್ಚೆಗೆ ಪೂರಕವಾಗುವಂತೆ ‘ಸಾಂಚಿ’ ಮನೆಯಲ್ಲಿ ಆಡಿಯೊ ವಿಶುವಲ್ (AV room) ಕೊಠಡಿಯೂ ಇದೆ.

ಪ್ರದರ್ಶನ ಮತ್ತು ಮಾರಾಟ
ಪ್ರದರ್ಶನ ಜೊತೆಗೆ ಮಾರಾಟವೂ ಇದೆ. ಆದರೆ ನಾವು ಹೆಚ್ಚು ಪ್ರದರ್ಶನ ಮತ್ತು ಮಾಹಿತಿ ಹಂಚಿಕೆ ಬಗ್ಗೆ ಗಮನ ಹರಿಸುತ್ತೇವೆ. ಎಲ್ಲಾ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ, ಮಾರಾಟದಿಂದ ಒಬ್ಬರ ಬಳಿಯೇ ವಸ್ತುಗಳು ಸಂಗ್ರಹವಾಗುತ್ತದೆ. ಪುರಾತನ ಮತ್ತು ಪ್ರಾಚ್ಯವಸ್ತುಗಳ ಬಗ್ಗೆ ಆಸಕ್ತಿ ಇರುವ ಎಲ್ಲರ ವೀಕ್ಷಣೆಗೆ ಈ ವಸ್ತುಗಳು ಲಭ್ಯವಿರಬೇಕು’ ಎನ್ನುತ್ತಾರೆ ಪಾರ್ವತಿ.

ಮರುಬಳಕೆಗೆ ಉತ್ತೇಜನ
‘retrive, restore, reuse’ ಎಂಬ ಗುರಿಯನ್ನು ಹೊಂದಿರುವ ಪಾರ್ವತಿ, ಬಳಸದ ಹಳೆ ಸಾಮಾನುಗಳಿಗೆ ಹೊಸ ರೂಪ ನೀಡಿ ‘ಸಾಂಚಿ’ ಮನೆ ತುಂಬ ಅಲಂಕಾರ ಮಾಡಿದ್ದಾರೆ.

ಮುತ್ತಜ್ಜಿ ಕಾಲದ ದೊಡ್ಡ ಬಳೆ ಹಂಡೆಗಳನ್ನು ಬಾಗಿಲ ಬಳಿ ದೊಡ್ಡ ಹೂಕುಂಡದ ಹಾಗೆ ಅಲಂಕರಿಸುವುದು, ಹಳೆ ಗಾಜಿನ ದೀಪಗಳನ್ನು ಊಟದ ಮೇಜಿನ ಮೇಲೆ ಅಲಂಕಾರಿಕ ವಸ್ತುವನ್ನಾಗಿಸುವುದು. ಮರದ ಬೀರು, ಕಪಾಟುಗಳನ್ನು ಬಾರ್‌ ಕೌಂಟರ್‌ ಬಳಿ ಪಾನೀಯ ಶೇಖರಿಸಲು ಬಳಸುವುದು ಹೀಗೆ ಯಾವುದನ್ನು ವ್ಯರ್ಥ ಮಾಡದೆ ಮರುಬಳಕೆ ಮಾಡಿದ್ದಾರೆ ಪಾರ್ವತಿ.

ಅಟ್ಟ, ಸ್ಟೋರ್‌ ರೂಂನಲ್ಲಿ ಬಳಸದೆ ತುಂಬಿಟ್ಟ ವಸ್ತುಗಳ ಬಿಡಿಭಾಗವನ್ನೂ ಕೂಡ ಷೋ ಪೀಸ್‌ ಹಾಗೆ ಬಳಸಬಹುದು ಎಂಬುದಕ್ಕೆ ‘ಸಾಂಚಿ’ ಉತ್ತಮ ಉದಾಹರಣೆ. ಪುರಾತನ ವಸ್ತುಗಳ ಪ್ರಾಮುಖ್ಯತೆ ಮತ್ತು ಸೌಂದರ್ಯವನ್ನು ಯುವಜನರಿಗೆ ಪರಿಚಯಿಸುವ ಆಸಕ್ತಿಯೂ ಪಾರ್ವತಿ ಅವರಿಗಿದೆ.

ಹೊಸ ಮನೆ ನಿರ್ಮಿಸುವಾಗ, ಒಳಾಂಗಣ ವಿನ್ಯಾಸಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತೇವೆ. ಅದರ ಬದಲು ಪುರಾತನ ಕಿಟಕಿ, ಬಾಗಿಲು, ಸೋಫಾ, ಅಡಿಗೆ ಮನೆ ಸಲಕರಣೆ, ಕಂಬ, ಗಾಜಿನ ಗೂಡು ದೀಪ ಲ್ಯಾಟಿನ್‌ಗಳನ್ನು ಮರು ಬಳಕೆ ಮಾಡುವುದರಿಂದ ಮನೆಯ ಅಂದ ಹೆಚ್ಚುತ್ತದೆ.

ಪುರಾತನ ವಸ್ತುಗಳನ್ನು ಹೇಗೆ ಮನೆಯಲ್ಲಿ ಜೋಡಿಸಿಕೊಳ್ಳಬಹುದು ಎಂಬುದನ್ನು ‘ಸಾಂಚಿ’ ಮನೆ ನೋಡಿ ಕಲಿಯಬಹುದು.
ಸ್ಥಳ– ‘ಸಾಂಚಿ’ ಆ್ಯಂಟಿಕ್ಸ್‌, ಸೆಟ್ಲರ್ ರಸ್ತೆ, ಲ್ಯಾನ್‌ಫೋರ್ಡ್‌ ರಸ್ತೆ, ದೂರವಾಣಿ 080 41202086. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT