ADVERTISEMENT

ಫ್ಲ್ಯಾಟ್ ಖರೀದಿಯ ಜಾಣ ನಡೆ

ವಿಶ್ವನಾಥ ಎಸ್.
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST
ಫ್ಲ್ಯಾಟ್ ಖರೀದಿಯ ಜಾಣ ನಡೆ
ಫ್ಲ್ಯಾಟ್ ಖರೀದಿಯ ಜಾಣ ನಡೆ   

ಶಿಕ್ಷಣ, ಉದ್ಯೋಗಾವಕಾಶ ಹೆಚ್ಚುತ್ತಾ ಹೋದಂತೆ ನಗರ ಪ್ರದೇಶದಲ್ಲಿ ವಸತಿ ಬೇಡಿಕೆಯು ಹೆಚ್ಚಾಗುತ್ತದೆ. ಇದರಿಂದಾಗಿ ರಿಯಲ್ ಎಸ್ಟೇಟ್ ಉದ್ಯಮ ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಹೊಸ ಸಂಸ್ಥೆಗಳು, ಆಕರ್ಷಕ ಕೊಡುಗೆಗಳು, ರಿಯಾಯ್ತಿ ಯೋಜನೆಗಳು ಮನೆ, ಫ್ಲ್ಯಾಟ್ ಖರೀದಿಸುವ ಕನಸು ಕಾಣುವವರನ್ನು ಸೆಳೆದುಬಿಡುತ್ತವೆ. ಬಹಳ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಂಡರೆ ಮುಂದೆ ಪಶ್ಚಾತ್ತಾಪ ಪಡುವುದು ತಪ್ಪುತ್ತದೆ.

ಹೌದು, ಎಷ್ಟಾದರೂ ಕಷ್ಟಪಟ್ಟು ದುಡಿದು, ಹೊಟ್ಟೆ ಬಟ್ಟೆ ಕಟ್ಟಿ ಉಳಿತಾಯ ಮಾಡಿದ ಹಣ. ಪಕ್ಕದ ಮನೆಯವರು ಹೇಳಿದರು, ದೂರದ ಸಂಬಂಧಿಕರ ಪರಿಚಯ ಎಂದೆಲ್ಲಾ ನಂಬಿಕೊಂಡು ಫ್ಲ್ಯಾಟ್ ಖರೀದಿಸಿ ಕೈಸುಟ್ಟುಕೊಳ್ಳುವಂತಾಗಬಾರದು. ಬಹುತೇಕರು ಮನೆ, ಫ್ಲ್ಯಾಟ್ ಖರೀದಿಸುವ ಹಂತದಲ್ಲಿ ಆತುರದ ನಿರ್ಧಾರ ಮಾಡಿಬಿಡುತ್ತಾರೆ. ಬಾಡಿಗೆ ಮನೆಯ ರಗಳೆಗಳಿಂದ ಮುಕ್ತರಾಗಿ ನೆಮ್ಮದಿಯಾಗಿರಲಿ ಎಂದು ಖರೀದಿಸಿ ಮನೆ, ಫ್ಲ್ಯಾಟ್ ನಿಂದಲೇ ಸಮಸ್ಯೆ ಎದುರಿಸುವಂತಾಗಬಾರದು.

ಎಲ್ಲರ ಸಲಹೆ, ಅಭಿಪ್ರಾಯ ಪಡೆದು ಸಮಾಧಾನವಾಗಿ ಯೋಚಿಸಿ ನಿರ್ಧಾರಕ್ಕೆ ಬರುವುದು ಒಳಿತು. ಇದಕ್ಕೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಒಳಿತು. ನಗರದಲ್ಲಿ ಜಾಗ ಕೊಂಡು ಮನೆ ಕಟ್ಟಿಸುವವರಿಗಿಂತಲೂ ಫ್ಲ್ಯಾಟ್ ನಲ್ಲಿ ಇರಲು ಇಷ್ಟು ಪಡುವವರು
ಬಹಳ ಮಂದಿ ಇದ್ದಾರೆ. ಇದಕ್ಕೆ ಕಾರಣ ಹಲವು. ಜಾಗ ದುಬಾರಿ, ಜಾಗ ಕೊಂಡು ಮನೆ ಕಟ್ಟಿಸಲು ಸಮಯ ಇಲ್ಲದಿರುವುದು, ಮರಳಿನ ಸಮಸ್ಯೆ…. ಹೀಗೆ ಇನ್ನೂ ಹಲವು. ಹಾಗಾದರೆ ಫ್ಲ್ಯಾಟ್ ಖರೀದಿಸುವಾಗ ಯಾವೆಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎನ್ನುವುದನ್ನು ಗಮನಿಸೋಣ.

ADVERTISEMENT

ಮಾರಾಟದ ಹಕ್ಕು ಫ್ಲ್ಯಾಟ್ ಖರೀದಿಸುವ ಮುನ್ನ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಲು ಮತ್ತು ಮಾರಾಟ ಮಾಡಲು ಬಿಲ್ಡರ್ ಅನುಮತಿ ಹೊಂದಿದ್ದಾರೆಯೇ ಎನ್ನುವುದನ್ನು ಖಾತರಿಪಡಿಸಿಕೊಳ್ಳುವುದು ಅಗತ್ಯ. ಭೂ ಮಾಲಿಕ ತನ್ನ ಭೂಮಿಯನ್ನು ಬಿಲ್ಡರ್ ಗೆ ಮಾರಾಟ ಮಾಡಿರುವುದಕ್ಕೆ ಲಿಖಿತ
ರೂಪದ ಒಪ್ಪಂದ ಇರಬೇಕು. ಗ್ರಾಹಕರು ಫ್ಲ್ಯಾಟ್ ಖರೀದಿಸುವ ಮುನ್ನ ಅದನ್ನು ಪರಿಶೀಲಿಸಬೇಕು.

ಏಕೆಂದರೆ ಲಿಖಿತ ರೂಪದಲ್ಲಿ ಒಪ್ಪಂದ ಇರದೇ ಇದ್ದರೆ ಬಿಲ್ಡರ್‌ಗೆ ಆ ಭೂಮಿಯಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಿ, ಮಾರಾಟ ಮಾಡುವ ಯಾವುದೇ ಹಕ್ಕು ಇರುವುದಿಲ್ಲ. ಆದಾಗೂ ನಿರ್ಮಾಣ ಮಾಡಿದ್ದರೆ ಮುಂದೆ ಭೂ ಮಾಲಿಕ ಆ ಜಾಗದ ಬಗ್ಗೆ ದಾವೆ ಹೂಡಬಹುದು. ಭೂ ಮಾಲಿಕನ ಕುಟುಂಬಕ್ಕೆ ಸಂಬಂಧಿಸಿದ ಅಂದರೆ ಕಾನೂನು ರೀತಿ ಅದರ ಹಕ್ಕು ಪಡೆಯುವ ಸಾಧ್ಯತೆ ಇರುವ ಎಲ್ಲರೂ ಆ ಭೂಮಿ ಮಾರಾಟಕ್ಕೆ ಒಪ್ಪಿಗೆ ನೀಡಿ ಸಹಿ ಹಾಕಿರಬೇಕು. ಆಗ ಮಾತ್ರವೇ ಮುಂದೆ ಯಾವುದೇ ಸಮಸ್ಯೆ ಬರುವುದಿಲ್ಲ. ನಿರ್ಮಾಣ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಮಾತ್ರವೆ ಪರಿಗಣಿಸದೆ, ಕಾನೂನು ಸಲಹೆಯನ್ನೂ ಪಡೆದು ದಾಖಲೆಗಳನ್ನು ಪರಿಶೀಲಿಸುವುದು ಹೆಚ್ಚು ಸೂಕ್ತ.

ಬಿಲ್ಡರ್-ಗ್ರಾಹಕರ ಮಧ್ಯೆ ಒಪ್ಪಂದ ರೆಡಿ ಟು ಮೂವ್ (ಪ್ರವೇಶಕ್ಕೆ ಸಿದ್ಧವಿರುವ ) ಫ್ಲ್ಯಾಟ್ ಗಳಿಗೆ ಇಂದು ಹೆಚ್ಚು ಬೇಡಿಕೆ ಇದೆ. ಹೀಗಿದ್ದರೂ ತಮಗೆ ಬೇಕಿರುವ ಸೌಲಭ್ಯಗಳನ್ನು ಹೊಂದುವ ಉದ್ದೇಶದಿಂದ ಕೆಲವರು ನಿರ್ಮಾಣ ಹಂತದಲ್ಲಿ ಇರುವ ಅಥವಾ ಹೊಸ ಯೋಜನೆಗಳನ್ನು ಆಯ್ಕೆ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಫ್ಲ್ಯಾಟ್ ಬುಕ್ ಮಾಡಲು ಮುಂಗಡವಾಗಿ ಹಣ ಪಾವತಿಸಬೇಕು. ಆಗ ಗ್ರಾಹಕರಿಗೆ ಅಲಾಟ್ಮೆಂಟ್ ಲೆಟರ್ ಸಿಗುತ್ತದೆ. ಬಹುತೇಕರು ಸಾಲ ಮಾಡಿ ಫ್ಲ್ಯಾಟ್ ಖರೀದಿಸುವುದರಿಂದ ಸಾಲದ ಮೊತ್ತಕ್ಕೆ ಬ್ಯಾಂಕ್ –ಬಿಲ್ಡರ್-ಗ್ರಾಹಕರ ನಡುವೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ.

ಈ ಹಂತದಲ್ಲಿ ಬಿಲ್ಡರ್-ಬೈಯರ್ ಅಗ್ರಿಮೆಂಟ್‌ಗೆ ಸಹಿ ಮಾಡಬೇಕು. ಈ ಒಪ್ಪಂದವನ್ನು ಸರಿಯಾಗಿ ಪರಿಶೀಲಿಸಬೇಕು. ಏಕೆಂದರೆ ಅದು ಬಿಲ್ಡರ್ ಪರವಾಗಿ ಇರುವ ಸಾಧ್ಯತೆಯೇ ಹೆಚ್ಚಿರುತ್ತದೆ. ಮಾರುಕಟ್ಟೆಯಲ್ಲಿ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ಆಗಿದೆ ಎನ್ನುವ ಕಾರಣ ನೀಡಿ ಫ್ಲ್ಯಾಟ್ ಅನ್ನು ಗ್ರಾಹಕರಿಗೆ ಹಸ್ತಾಂತರಿಸುವಾಗ ಅದರ ಬೆಲೆ ಏರಿಕೆ ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಹೀಗಾಗದಂತೆ ತಡೆಯಲು ದಾಖಲೆ ಪತ್ರವನ್ನು ಸರಿಯಾಗಿ ಓದಿ ಅದರಲ್ಲಿ ಇರುವ ನಿಯಮಗಳನ್ನು ಅರ್ಥ ಮಾಡಿಕೊಳ್ಳಬೇಕು.

ವಕೀಲರ ಸಲಹೆ ಪಡೆದು ಸಹಿ ಮಾಡಿವುದು ಜಾಣತನದ ನಿರ್ಧಾರ. ಒಪ್ಪಂದಲ್ಲಿ ಎಷ್ಟು ಅವಧಿಯೊಳಗೆ ಯೋಜನೆ ಪೂರ್ಣವಾಗಲಿದೆ ಎನ್ನುವುದನ್ನೂ ನಮೂದಿಸಿರಬೇಕು. ಬರುವ ಸಂಬಳದಲ್ಲಿ ಮನೆ ಬಾಡಿಗೆ ಕೊಡುವುದಲ್ಲದೆ, ಸಾಲದ ಕಂತೂ ಕಟ್ಟುತ್ತಿರುತ್ತೀರಿ. ಯೋಜನೆ ವಿಳಂಬವಾದರೆ ಹೊರೆಯಾಗುತ್ತದೆ.

ರೆಡಿ ಟು ಮೂವ್ ನಲ್ಲಿ ನಿರ್ಮಾಣಕ್ಕೆ ಬಳಸಿರುವ ವಸ್ತುಗಳ ಪರಿಶೀಲನೆ ಸಾಧ್ಯವಿಲ್ಲ. ಅದೇ ಹೊಸದಾಗಿ ನಿರ್ಮಾಣ ಮಾಡುತ್ತಿದ್ದರೆ, ಆಗ ಬ್ರೋಷರ್ ನಲ್ಲಿ ತಿಳಿಸಿರುವಂತೆಯೇ ನಿರ್ಮಾಣಕ್ಕೆ ಕಚ್ಚಾ ಸಾಮಗ್ರಿಗಳನ್ನು ಬಳಸುತ್ತಿದ್ದಾರೆಯೇ ಎಂದು ಖುದ್ದು ಪರಿಶೀಲನೆ ಸಾಧ್ಯ.

ಬೆಲೆ ಪರಿಶೀಲನೆ ಫ್ಲ್ಯಾಟ್ ಖರಿದಿಸುವಾಗ ಹಣಕಾಸಿನ ಮೂಲ ಬಹಳ ಮುಖ್ಯ. ಸಾಲ ಮಾಡದೇ ಎಷ್ಟು ಹಣಹೊಂದಿಸಬಹುದು, ನನ್ನ ವೇತನಕ್ಕೆ ಬ್ಯಾಂಕಿನಿಂದ ಎಷ್ಟು ಸಾಲ ಸಿಗಲಿದೆ? ಬಹುತೇಕ ಯೋಜನೆಗಳಿಗೆ ಆರಂಭದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕಿನಲ್ಲಿ ಸಾಲ ಸಿಗುವುದಿಲ್ಲ. ಖಾಸಗಿ
ಬ್ಯಾಂಕಿನಲ್ಲಿ ಬಡ್ಡಿದರ ಹೆಚ್ಚಿರುತ್ತದೆ. ಈ ಎಲ್ಲಾ ಕಾರಣಗಳಿಂದ ಇಷ್ಟವಾಯಿತು ಎಂದ ಮಾತ್ರಕ್ಕೆ ಖರೀದಿಸಲು ಹೋಗದಿರಿ. ಆ ಪ್ರದೇಶದಲ್ಲಿ ಎಷ್ಟು ಬೆಲೆ ಇದೆ ಎನ್ನುವ ಮಾಹಿತಿ ಕಲೆಹಾಕಿ.

ಮೂರ್ನಾಲ್ಕು ಬಿಲ್ಡರ್ ಬಳಿ ವಿಚಾರಿಸಿದರೆ ಅಂದಾಜು ಮಾಡಬಹುದು. ರಿಯಲ್ ಎಸ್ಟೇಟ್ ಮಾಹಿತಿ ನೀಡುವ ಇರುವ ಪತ್ರಿಕೆಗಳಿಂದಲೂ ಆಯಾ ಸ್ಥಳದ ಬೆಲೆ ಸಿಗುತ್ತದೆ. ಅದಕ್ಕೂ ಹೊರತಾಗಿ, ಜಾಲತಾಣಗಳಲ್ಲಿ ಮತ್ತು ದಲ್ಲಾಳಿಗಳಿಂದಲೂ ಮಾಹಿತಿ ಪಡೆಯಬಹುದು.

ಪ್ರಮುಖ ಅಂಶಗಳು
ಮಾರಾಟಗಾರನ ವೈಯಕ್ತಿಕ ಮಾಹಿತಿ: ಖರೀದಿ ಒಪ್ಪಂದಲ್ಲಿ ಮಾರಾಟಗಾರನ ಸಂಪೂರ್ಣವಾದ ವೈಯಕ್ತಿಕ ಮಾಹಿತಿ ಇರಬೇಕು. ಅಂದರೆ, ತಂದೆಯ ಹೆಸರು, ವಿಳಾಸ ಪ್ಯಾನ್ ಸಂಖ್ಯೆ ಮತ್ತು ಬ್ಯಾಂಕ್ ವಿವರ. ನಿವೇಶನದ ನಿಖರವಾದ ಜಾಗ ಮತ್ತು ಅದು ಯಾವ ಆಡಳಿತಕ್ಕೆ (ಮಹಾನಗರ ಪಾಲಿಕೆ, ಗ್ರಾಮ ಪಂಚಾಯ್ತಿ ) ಒಳಪಟ್ಟಿದೆ ಎನ್ನುವ ಮಾಹಿತಿ ಇರಬೇಕು.

ದಾಖಲೆಪತ್ರ: ದಾಖಲೆಪತ್ರಗಳು ಅಧಿಕೃತವಾಗಿದೆಯೇ ಎನ್ನುವುದನ್ನು ಪರಿಶೀಲಿಸಬೇಕು. ಫ್ಲ್ಯಾಟ್ ಮಾಲಿಕತ್ವ ಹಸ್ತಾಂತರವನ್ನು ಖಾತರಿಪಡಿಸಿಕೊಳ್ಳಿ. ಫ್ಲ್ಯಾಟ್ ಯಾವಾಗ ಗ್ರಾಹಕರಗೆ ಲಭ್ಯವಾಗಲಿದೆ ಎನ್ನುವ ಅವಧಿಯನ್ನು ಖಾತರಿಪಡಿಸಿಕೊಳ್ಳಬೇಕು. ಅದನ್ನು ಖರೀದಿ ಒಪ್ಪಂದದಲ್ಲಿ ನಮೂದಿಸಿರಬೇಕು. ಹಾಗೊಂದು ವೇಳೆ ಗ್ರಾಹಕನಿಗೆ ಫ್ಲ್ಯಾಟ್ ವರ್ಗಾಯಿಸುವ ಅವಧಿಯನ್ನು ಒಪ್ಪಂದಲ್ಲಿ ನಮೂದಿಸದೇ ಇದ್ದರೆ ಮಾರಾಟಗಾರನ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ.

ಕಂತಿನ ರೂಪದಲ್ಲಿ ಹಣ ಪಾವತಿಸುವುದಾದರೆ ಅದರ ಬಗ್ಗೆ ವಿವರವನ್ನು ಒಪ್ಪಂದದಲ್ಲಿ ಹೇಳಿರಬೇಕು. ಅಪಾರ್ಟ್ ಮೆಂಟ್ ನಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ವಿವರ ಇರಬೇಕು. ಹಾಗೆಯೇ ಅದಕ್ಕೆ ಹೆಚ್ಚುವರಿ ಶುಲ್ಕ ವಿಧಿಸುವುದಾದರೆ ಅದನ್ನೂ ತಿಳಿಸಿರಬೇಕು.

ರೇರಾ ವ್ಯಾಪ್ತಿ: ಅಪಾರ್ಟ್‌ಮೆಂಟ್‌ ಕೊಳ್ಳುವಾಗ ಆ ಯೋಜನೆ ರೇರಾ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಪರಿಶೀಲಿಸಿ. ಇದರಿಂದ ಹಣ ಕಟ್ಟಿಸಿಕೊಂಡ ಬಳಿಕ ನಿವೇಶನ, ಅಪಾರ್ಟ್‌ಮೆಂಟ್‌, ಮನೆಗಳನ್ನು ಹಂಚಿಕೆ ಮತ್ತು ನೋಂದಾಯಿಸಿಕೊಡಲು ವಿಳಂಬ ಮಾಡುವ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ವಿರುದ್ಧವೂ ದೂರು ನೀಡಿ ಪರಿಹಾರ ಪಡೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.