ADVERTISEMENT

ನ್ಯಾಯಾಂಗ ನಿಂದನೆ: ಜನರ ನಿರೀಕ್ಷೆ ಏನು?

ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ನ್ಯಾಯಾಂಗ ನಿಂದನೆ: ಜನರ ನಿರೀಕ್ಷೆ ಏನು?
ನ್ಯಾಯಾಂಗ ನಿಂದನೆ: ಜನರ ನಿರೀಕ್ಷೆ ಏನು?   
ನ್ಯಾಯಾಂಗದ ಜೊತೆ ಒಡನಾಟ ಇರುವವರು, ಅಲ್ಲಿನ ಕಲಾಪಗಳನ್ನು ವರದಿ ಮಾಡುವವರಲ್ಲಿ ಬಹುತೇಕರು ಹೆದರುವುದು ನ್ಯಾಯಾಂಗ ನಿಂದನೆ ಎಂಬ ಅಸ್ತ್ರಕ್ಕೆ. ಕೇರಳದ ಸೌಮ್ಯಾ ಎಂಬ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮಾಜಿ ಸಹೋದ್ಯೋಗಿಗಳನ್ನು ಟೀಕಿಸಿದ್ದ ಕಾರಣಕ್ಕೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅವರ ವಿರುದ್ಧ ಈಚೆಗೆ ನ್ಯಾಯಾಂಗ ನಿಂದನೆಯ ಅಸ್ತ್ರ ಝಳಪಿಸಲಾಯಿತು. ‘ಗಾಳಿಸುದ್ದಿಯ ರೂಪದಲ್ಲಿರುವ ಸಾಕ್ಷ್ಯಗಳನ್ನು ಒಪ್ಪಲಾಗದು ಎಂಬುದು ಕಾನೂನಿನ ವಿದ್ಯಾರ್ಥಿಗೂ ಗೊತ್ತಿರುವ ಪ್ರಾಥಮಿಕ ಅಂಶ’ ಎಂದು ಕಟ್ಜು ಅವರು ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದರು. ಕಟ್ಜು ಅವರು ನ್ಯಾಯಾಲಯದಲ್ಲಿ ಬೇಷರತ್ ಕ್ಷಮೆ ಯಾಚಿಸಿದ ನಂತರ, ಮೊಕದ್ದಮೆ ಕೈಬಿಡಲಾಯಿತು.
 
ಇಷ್ಟೇ ಅಲ್ಲ. ಇದೇ ಮೊದಲ ಬಾರಿಗೆ ಎಂಬಂತೆ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಅಸ್ತ್ರ ಪ್ರಯೋಗಿಸಲಾಗಿದೆ. ಕರ್ಣನ್ ಅವರು ನ್ಯಾಯದಾನಕ್ಕೆ ಸಂಬಂಧಿಸಿದ, ನ್ಯಾಯಾಂಗದ ಆಡಳಿತಕ್ಕೆ ಸಂಬಂಧಿಸಿದ ಯಾವ ಕೆಲಸವನ್ನೂ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠ ಆದೇಶಿಸಿದೆ. ಈ ಮೂಲಕ, ನ್ಯಾಯಾಂಗಕ್ಕೆ ಅವಮಾನ ಮಾಡಿದರೆ ನ್ಯಾಯಮೂರ್ತಿಗಳನ್ನೂ ಸುಮ್ಮನೆ ಬಿಡಲಾಗದು ಎಂಬ ಸಂದೇಶ ರವಾನಿಸಿದೆ.
 
ಪ್ರಧಾನಿಯವರಿಗೆ ಬಹಿರಂಗ ಪತ್ರ ಬರೆದ ನ್ಯಾಯಮೂರ್ತಿ ಕರ್ಣನ್, ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ 20 (ಹಾಲಿ ಹಾಗೂ ನಿವೃತ್ತ) ನ್ಯಾಯಮೂರ್ತಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
 
ನ್ಯಾಯಾಂಗ ನಿಂದನೆ ಕಾನೂನು, ನ್ಯಾಯಾಂಗದ ಅಧಿಕಾರಿಯೊಬ್ಬರ ವಿರುದ್ಧ ಮೊದಲ ಬಾರಿಗೆ ಬಳಕೆಯಾಗಿದ್ದು ಬಹುಶಃ ಬರದಕಾಂತ ಮಿಶ್ರಾ ಅವರ ಪ್ರಕರಣದಲ್ಲಿ. ಹೈಕೋರ್ಟ್‌ ಹಾಕಿಕೊಟ್ಟ ನಿದರ್ಶನವೊಂದನ್ನು ಅನುಸರಿಸಲು ನಿರಾಕರಿಸಿದ್ದಕ್ಕಾಗಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಿಶ್ರಾ ಅವರನ್ನು ಒರಿಸ್ಸಾ ಹೈಕೋರ್ಟ್‌ನ ಪೂರ್ಣಪೀಠ 1971ರಲ್ಲಿ ನ್ಯಾಯಾಂಗ ನಿಂದನೆ ಕಾಯ್ದೆಯ ಅಡಿ ಅಪರಾಧಿಯೆಂದು ಘೋಷಿಸಿ, ಶಿಕ್ಷೆಗೆ ಗುರಿಪಡಿಸಿತು. ಮಿಶ್ರಾ ವಿರುದ್ಧ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ಆರು ಪ್ರಕರಣಗಳು ಇದ್ದವು. ಕಾನೂನಿನ ಅಡಿ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ಮಿಶ್ರಾ ಅವರಿಗೆ ವಿಧಿಸಬೇಕು ಎಂದು ಪೀಠ ಹೇಳಿತು. ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಸಹಮತ ವ್ಯಕ್ತಪಡಿಸಿದರೂ, ಮಿಶ್ರಾ ಅವರು ಸೇವಾವಧಿಯ ಕೊನೆಯ ಹಂತದಲ್ಲಿದ್ದ ಕಾರಣ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿತು. ಅವರಿಗೆ ₹ 1,000 ದಂಡ ವಿಧಿಸಿತು.
 
ನ್ಯಾಯಾಂಗ ನಿಂದನೆ ಕಾನೂನನ್ನು ಸರಿಯಾದ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳಲಾಗಿದೆಯೇ? ಈ ಕಾನೂನು ಇಷ್ಟೊಂದು ಭಯ ಮೂಡಿಸಲು ಕಾರಣವೇನು?
 
ನ್ಯಾಯಾಲಯಗಳ ಘನತೆ ಹಾಗೂ ನ್ಯಾಯದಾನ ವ್ಯವಸ್ಥೆಯ ಮೇಲೆ ಜನ ಇಟ್ಟಿರುವ ನಂಬಿಕೆಯನ್ನು ಕಾಯ್ದುಕೊಳ್ಳುವುದು ಈ ಕಾನೂನಿನ ಮೂಲ ಆಶಯ. ನ್ಯಾಯಾಂಗಕ್ಕೆ ಅಗೌರವ ತೋರಿಸುವ, ಅವಮಾನಿಸುವ ಹಾಗೂ ನ್ಯಾಯಾಂಗದ ಸೂಚನೆಯನ್ನು ಧಿಕ್ಕರಿಸುವ ಯಾವುದೇ ಕೃತ್ಯ ನ್ಯಾಯಾಂಗ ನಿಂದನೆಗೆ ಸಮ.
 
‘ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿರುವ ನ್ಯಾಯಾಲಯದ ಆದೇಶವೊಂದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ನ್ಯಾಯಾಂಗ ನಿಂದನೆ ಅಲ್ಲ. ಆದೇಶಗಳ ಬಗ್ಗೆ ಅಭಿಪ್ರಾಯ ಹೇಳುವುದು ಪ್ರಜೆಯ ಹಕ್ಕು. ಆದರೆ ಆದೇಶದ ಹಿಂದಿನ ಉದ್ದೇಶ ಸರಿ ಇಲ್ಲ ಎಂದು ಕೀಳು ಮಟ್ಟದ ವೈಯಕ್ತಿಕ ಆರೋಪಗಳನ್ನು ಮಾಡುವಂತಿಲ್ಲ’ ಎನ್ನುತ್ತಾರೆ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ.
 
1988ರಲ್ಲಿ ಕಾನೂನು ಸಚಿವ ಪಿ.ಶಿವಶಂಕರ್ ಅವರು ತೀಕ್ಷ್ಣ ಹೇಳಿಕೆಯೊಂದನ್ನು ನೀಡಿದರು. ಸುಪ್ರೀಂ ಕೋರ್ಟ್‌ನ ಕೆಲವು ನ್ಯಾಯಮೂರ್ತಿಗಳು ಸಮಾಜ ವಿರೋಧಿ ಶಕ್ತಿಗಳ ಪರ ಇದ್ದಾರೆ ಎಂದು ಹೇಳಿದರು. ಶಿವಶಂಕರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಬ್ಯಸಾಚಿ ಮುಖರ್ಜಿ, ‘ಇದು ಯುಕ್ತ ಹೇಳಿಕೆ ವ್ಯಾಖ್ಯಾನದ ಅಡಿಯಲ್ಲೇ ಬರುತ್ತದೆ. ಹಾಗಾಗಿ ಇದು ನ್ಯಾಯಾಂಗ ನಿಂದನೆ ಅಲ್ಲ’ ಎಂದು ಆದೇಶಿಸಿದರು.
 
ಕೇರಳದ ಮುಖ್ಯಮಂತ್ರಿಯಾಗಿದ್ದ ಇ.ಎಂ.ಎಸ್. ನಂಬೂದರಿಪಾಡ್ ಅವರು 1972ರಲ್ಲಿ, ನ್ಯಾಯಾಂಗ ನಿಂದನೆ ಮೊಕದ್ದಮೆ ಎದುರಿಸಬೇಕಾಯಿತು. ನ್ಯಾಯಾಧೀಶರಲ್ಲಿ ವರ್ಗ ಪೂರ್ವಗ್ರಹಗಳು ಇವೆ ಎಂದು ಅವರು ನೀಡಿದ್ದ ಹೇಳಿಕೆ ಇದಕ್ಕೆ ಕಾರಣವಾಗಿತ್ತು. ನಂಬೂದರಿಪಾಡ್ ಅವರಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿದ ಕೇರಳ ಹೈಕೋರ್ಟ್‌, ‘ಮಾರ್ಕ್ಸ್‌ ಮತ್ತು ಏಂಗಲ್ಸ್‌ ಅವರ ನೈಜ ಸಿದ್ಧಾಂತಗಳ ಬಗ್ಗೆ ನಂಬೂದರಿಪಾಡ್ ಅವರಿಗೆ ಎಷ್ಟು ತಿಳಿವಳಿಕೆ ಇದೆ ಎಂಬುದು ಅವರ ಹೇಳಿಕೆಗಳಿಂದಲೇ ಬಹಿರಂಗವಾಗಿದೆ. ಇಷ್ಟು ಸಾಕು’ ಎಂದು ಹೇಳಿತು. ನಂಬೂದರಿಪಾಡ್ ಅವರಿಗೆ ₹ 50 ದಂಡ ವಿಧಿಸಿತು.
 
ಮೂಲಭೂತ ಹಕ್ಕಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಅಪರಾಧವಾಗಿರುವ ನ್ಯಾಯಾಂಗ ನಿಂದನೆಯ ಕೃತ್ಯದ ನಡುವೆ ಇರುವುದು ತೀರಾ ತೆಳುವಾದ ಗೆರೆ. ನ್ಯಾಯಾಧೀಶರ ಹೃದಯ ವೈಶಾಲ್ಯ ಹಾಗೂ ಪ್ರಬುದ್ಧತೆಯ ಮಟ್ಟ ಇಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವ್ಯಕ್ತಿಯೊಬ್ಬ ನ್ಯಾಯಾಧೀಶ ಅಥವಾ ನ್ಯಾಯಮೂರ್ತಿ ವಿರುದ್ಧ ವೈಯಕ್ತಿಕ ಆರೋಪಗಳನ್ನು ಹೊರಿಸಿದರೆ, ಆ ವ್ಯಕ್ತಿಯ ವಿರುದ್ಧ ಮಾನನಷ್ಟಕ್ಕೆ ಸಂಬಂಧಿಸಿದ ಕಾನೂನಿನ ಅಡಿ ಕ್ರಮ ಜರುಗಿಸಲು ಸಾಧ್ಯವಿದೆ. ಆಗ ವ್ಯಕ್ತಿ ನೀಡಿದ ಹೇಳಿಕೆ ನ್ಯಾಯಾಂಗ ನಿಂದನೆಯ ವ್ಯಾಪ್ತಿಗೆ ಬರುವುದಿಲ್ಲ.
 
ಪ್ರಬುದ್ಧ ನ್ಯಾಯಾಂಗ ಹೇಗಿರಬೇಕು ಎಂಬುದಕ್ಕೆ ಓಲ್ಡ್‌ ಫೂಲ್ಸ್‌ (OLD FOOLS) ಹಾಗೂ ಬಹಾಮಾಸ್ ಪ್ರಕರಣಗಳನ್ನು ಉದಾಹರಣೆಯಾಗಿ ನೀಡಲಾಗುತ್ತದೆ. ಬ್ರಿಟನ್ನಿನ ‘ಡೈಲಿ ಮಿರರ್’ ಪತ್ರಿಕೆ 1987ರಲ್ಲಿ ಗುಪ್ತದಳದ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿದ ಮೂವರು ನ್ಯಾಯಮೂರ್ತಿಗಳ ಭಾವಚಿತ್ರ ಪ್ರಕಟಿಸಿ, ಅದರ ಕೆಳಗೆ ‘OLD FOOLS’ (ವಯಸ್ಸಾಗಿರುವ ಮೂರ್ಖರು) ಎಂದು ಬರೆದಿತ್ತು. ಆಗ ಆ ಪತ್ರಿಕೆಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಿಲ್ಲ. ‘ವೈಯಕ್ತಿಕ ನೆಲೆಯಲ್ಲಿ ಮಾಡುವ ನಿಂದನೆಗಳನ್ನು ಇಂಗ್ಲೆಂಡಿನ ನ್ಯಾಯಮೂರ್ತಿಗಳು ಗಂಭೀರವಾಗಿ ಪರಿಗಣಿಸುವುದಿಲ್ಲ. ನನಗೆ ವಯಸ್ಸಾಗಿದೆ ಎಂಬುದನ್ನು ಒಪ್ಪುತ್ತೇನೆ. ನಾನು ಮೂರ್ಖ ಎಂಬುದು ಇನ್ನೊಬ್ಬನ ಅಭಿಪ್ರಾಯವಾಗಿದ್ದರೆ, ಅಂತಹ ಅಭಿಪ್ರಾಯ ಹೊಂದಿರುವ ಸ್ವಾತಂತ್ರ್ಯ ಆ ವ್ಯಕ್ತಿಗೆ ಇದೆ’ ಎಂದು ನ್ಯಾಯಮೂರ್ತಿ ಲಾರ್ಡ್‌ ಟೆಂಪಲ್‌ಮನ್‌ ಹೇಳಿದ್ದರು.
 
ನ್ಯಾಯಾಂಗ ತೋರಬಹುದಾದ ಅಸಾಧಾರಣ ಸಹಿಷ್ಣುತೆಗೆ ಬಹಾಮಾಸ್ ಪ್ರಕರಣ ಮತ್ತೊಂದು ಉದಾಹರಣೆ. ಇದನ್ನು ಭಾರತದ ನ್ಯಾಯಶಾಸ್ತ್ರ ಪರಿಣತರು ಮತ್ತೆ ಮತ್ತೆ ಉಲ್ಲೇಖಿಸಿದ್ದಾರೆ. ಬಹಾಮಾಸ್ ದ್ವೀಪದ ವ್ಯಕ್ತಿಯೊಬ್ಬ 1892ರಲ್ಲಿ ಪತ್ರಿಕೆಯೊಂದಕ್ಕೆ ಪತ್ರ ಬರೆದ. ಮುಖ್ಯ ನ್ಯಾಯಮೂರ್ತಿ ಅಸಮರ್ಥರು ಎಂದು ಆ ಪತ್ರದಲ್ಲಿ ತೀರಾ ಕಟುವಾಗಿ ಬರೆಯಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಸತ್ತುಹೋದರೆ ಒಳ್ಳೆಯದಿತ್ತು ಎಂಬ ಮಾತುಗಳೂ ಆ ಪತ್ರದಲ್ಲಿದ್ದವು. ಈ ಪತ್ರ ಬರೆದ ವ್ಯಕ್ತಿಯನ್ನು ಮಾನನಷ್ಟಕ್ಕೆ ಸಂಬಂಧಿಸಿದ ಕಾನೂನಿನ ಅಡಿ ವಿಚಾರಣೆಗೆ ಗುರಿಪಡಿಸಬಹುದೇ ವಿನಾ ನ್ಯಾಯಾಂಗ ನಿಂದನೆ ಕಾನೂನಿನ ಅಡಿ ಅಲ್ಲ ಎಂದು 11 ಜನರ ಸಮಿತಿ ತೀರ್ಮಾನಿಸಿತು.
 
ಯುರೋಪಿನ ಕಾನೂನು ವ್ಯವಸ್ಥೆಯನ್ನು ಆಧರಿಸಿ ಭಾರತದ ಕಾನೂನುಗಳು ವಿಕಾಸಗೊಂಡಿವೆ. ಇಡೀ ದೇಶಕ್ಕೆ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ಒಂದೇ ಕಾನೂನು ಅನ್ವಯವಾಗಬೇಕು ಎಂಬ ಉದ್ದೇಶದಿಂದ 1926ರ ನ್ಯಾಯಾಂಗ ನಿಂದನೆ ಕಾಯ್ದೆಯ ಬದಲಿಗೆ 1952ರಲ್ಲಿ ಹೊಸ ಕಾಯ್ದೆ ತರಲಾಯಿತು. ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ 1952ರ ಕಾಯ್ದೆ ಅಡ್ಡಿಯಾಗುತ್ತಿದ್ದ ಕಾರಣಕ್ಕೆ 1971ರಲ್ಲಿ ಮತ್ತಷ್ಟು ಪರಿಷ್ಕೃತಗೊಂಡ ನ್ಯಾಯಾಂಗ ನಿಂದನೆ ಕಾಯ್ದೆ ಜಾರಿಗೆ ಬಂತು. ‘ನಾನು ಹೇಳಿರುವುದು, ಬರೆದಿರುವುದು ಸತ್ಯ’ ಎಂಬ ವಾದ ಮುಂದಿಟ್ಟು ನ್ಯಾಯಾಂಗ ನಿಂದನೆ ಮೊಕದ್ದಮೆ ಎದುರಿಸಬಹುದು ಎನ್ನುವ ತಿದ್ದುಪಡಿಯನ್ನು 2006ರಲ್ಲಿ ತರಲಾಯಿತು. ಇದರ ಪ್ರಕಾರ ಸದುದ್ದೇಶದಿಂದ ಮಾಡಿದ, ಸತ್ಯವನ್ನು ಆಧರಿಸಿದ ಆರೋಪಗಳನ್ನು ನ್ಯಾಯಾಲಯ ಕೂಡ ಎತ್ತಿಹಿಡಿಯಬೇಕಾಗುತ್ತದೆ.
 
ಸಂವಿಧಾನ ಪರಿಶೀಲನೆಗಾಗಿನ ರಾಷ್ಟ್ರೀಯ ಸಮಿತಿ 2002ರಲ್ಲಿ, ‘ನ್ಯಾಯಾಲಯಗಳು ತಮ್ಮ ಲಾಂಛನದಲ್ಲಿ ಸತ್ಯಮೇವ ಜಯತೇ, ಧರ್ಮವಿದ್ದಲ್ಲಿ ಜಯವಿದೆ ಎಂಬ ಮಾತುಗಳನ್ನು ಬಳಸಿಕೊಂಡಿವೆ. ಆದರೆ ಸತ್ಯವನ್ನು ಆಧರಿಸಿದ ಆರೋಪಗಳನ್ನು ಪುರಸ್ಕರಿಸುವ ಅವಕಾಶಗಳನ್ನು ನ್ಯಾಯಾಂಗ ನಿಂದನೆ ಕಾನೂನಿನಲ್ಲಿ ಕಲ್ಪಿಸಿಲ್ಲ’ ಎಂದು ಹೇಳಿತ್ತು.
 
ನ್ಯಾಯಾಂಗ ನಿಂದನೆ ಮೊಕದ್ದಮೆ ಹಾಕಲಾಗುವುದು ಎಂಬ ಬೆದರಿಕೆಯನ್ನು ವಕೀಲರು ವಾದ–ಪ್ರತಿವಾದಗಳ ವೇಳೆ ಎದುರಿಸುತ್ತಾರೆ. ಈ ಬಗ್ಗೆ ವಕೀಲರ ಸಮೂಹದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತವೆ. ಆಶ್ಚರ್ಯದ ಸಂಗತಿಯೆಂದರೆ, ‘ಮೊಕದ್ದಮೆ ಹಾಕಿ’ ಎಂದು ಹೇಳಿದರೆ ಹಾಗೆ ಮಾಡುವ ನ್ಯಾಯಮೂರ್ತಿಗಳ ಸಂಖ್ಯೆ ಕಡಿಮೆ. 19ನೇ ಶತಮಾನದ ಆರಂಭದಲ್ಲಿ, ಖ್ಯಾತ ನ್ಯಾಯಶಾಸ್ತ್ರಜ್ಞ ಥಾಮಸ್‌ ಅರ್ಸ್ಕಿನ್ ಅವರು ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದ ನ್ಯಾಯಾಧೀಶರೊಬ್ಬರಿಗೆ, ‘ನಿಮಗೆ ಸೂಕ್ತವೆನಿಸಿದ ರೀತಿಯಲ್ಲಿ ಕ್ರಮ ಜರುಗಿಸಿ. ನಿಮ್ಮ ಕರ್ತವ್ಯಗಳ ಬಗ್ಗೆ ನಿಮಗೆ ತಿಳಿದಿರುವಂತೆ ನನಗೂ ನನ್ನ ಕರ್ತವ್ಯ ಏನು ಎಂಬುದು ಗೊತ್ತು’ ಎಂದು ಹೇಳಿದ್ದರು. ನ್ಯಾಯಾಂಗ ನಿಂದನೆಯ ಬೆದರಿಕೆಗಳು ಕೋರ್ಟ್‌ಗಳಲ್ಲಿ ಕೆಲವೊಮ್ಮೆ ಹಾಸ್ಯದ ವಸ್ತುವಾಗುವುದೂ ಇದೆ.
ನ್ಯಾಯಮೂರ್ತಿಗಳ ಮನಸ್ಸು ಟೀಕೆಗಳನ್ನು ಸ್ವೀಕರಿಸುವಷ್ಟು ವಿಶಾಲವಾಗಿರಬೇಕು ಎನ್ನುವುದು ನ್ಯಾಯಶಾಸ್ತ್ರಜ್ಞರ ಅಭಿಮತ.
 
‘ನ್ಯಾಯ ಎನ್ನುವುದು ಎಲ್ಲರಿಂದಲೂ ದೂರ ಇರುವಂಥದ್ದಲ್ಲ. ನ್ಯಾಯದ ಪರಾಮರ್ಶೆಗೆ ಅವಕಾಶ ಇರಬೇಕು. ಸಾಮಾನ್ಯ ನಾಗರಿಕರ ಮಾತುಗಳಿಗೆ ಅವಕಾಶ ಇರಬೇಕು. ಇಲ್ಲಿ ಆದ್ಯತೆ ಇರಬೇಕಿರುವುದು ನ್ಯಾಯಕ್ಕೇ ವಿನಾ ನ್ಯಾಯಾಧೀಶರಿಗೆ ಅಲ್ಲ’ ಎಂದು ಲಾರ್ಡ್ ಅಟ್ಕಿನ್ ಹೇಳಿದ್ದರು.
 
ದೇಶದ ನ್ಯಾಯಾಂಗದ ಮೇರು ವ್ಯಕ್ತಿ ನ್ಯಾಯಮೂರ್ತಿ ವಿ.ಕೃಷ್ಣ ಅಯ್ಯರ್ ಅವರು 1978ರಲ್ಲಿ ಮಳಗಾಂವಕರ್ ಪ್ರಕರಣದಲ್ಲಿ ನೀಡಿದ ತೀರ್ಪು, ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ಕಾನೂನು ಹಾಗೂ ಅದರ ವ್ಯಾಪ್ತಿ ಕುರಿತು ಆಳವಾಗಿ ವಿವರಿಸಿದೆ. ‘ನ್ಯಾಯಾಂಗವು ಟೀಕೆಗಳಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲ. ನ್ಯಾಯಾಧೀಶರಲ್ಲೂ ದೌರ್ಬಲ್ಯಗಳು ಇರುತ್ತವೆ. ಏಕೆಂದರೆ, ಅವರೂ ಮನುಷ್ಯರು. ಸ್ವತಂತ್ರ ಟೀಕೆಗಳ ಮೂಲಕ ಅವರ ದೌರ್ಬಲ್ಯಗಳನ್ನು ನಿವಾರಿಸಬೇಕು’ ಎಂದು ಅಯ್ಯರ್ ಬರೆದಿದ್ದಾರೆ.
 
1943ರಲ್ಲಿ ಲಾರ್ಡ್‌ ಅಟ್ಕಿನ್ ಅವರು ದೇವಿಪ್ರಸಾದ್ ಶರ್ಮ ಪ್ರಕರಣದಲ್ಲಿ ನೀಡಿದ ಆದೇಶ ಕೂಡ ಮಹತ್ವದ್ದು. ಯುದ್ಧಕ್ಕೆ ಹಣ ಸಂಗ್ರಹಿಸಲು ಮುಖ್ಯ ನ್ಯಾಯಮೂರ್ತಿ ಸುತ್ತೋಲೆ ಹೊರಡಿಸಿದ್ದನ್ನು ಟೀಕಿಸಿದ ‘ಹಿಂದುಸ್ತಾನ್ ಟೈಮ್ಸ್‌’ನ ಸಂಪಾದಕ ಮತ್ತು ಪ್ರಕಾಶಕರು ನ್ಯಾಯಾಂಗವನ್ನು ನಿಂದಿಸಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್‌ ಹೇಳಿತು. ಆದರೆ ಈ ಆದೇಶವನ್ನು ರದ್ದು ಮಾಡಿದ ಲಾರ್ಡ್‌ ಅಟ್ಕಿನ್, ‘ನ್ಯಾಯಮೂರ್ತಿಗಳು ಎಲ್ಲವನ್ನೂ ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳಬಾರದು’ ಎಂದು ಹೇಳಿದರು.
 
ಬ್ರಿಟನ್ನಿನ ಖ್ಯಾತ ನ್ಯಾಯಶಾಸ್ತ್ರಜ್ಞ ಲಾರ್ಡ್‌ ಡೆನ್ನಿಂಗ್ ಅವರು, ನ್ಯಾಯಾಂಗ ನಿಂದನೆ ಕಾನೂನು ಬಳಸುವ ಮುನ್ನ ಸಂಯಮ ತೋರಬೇಕು ಎಂದು ಹೇಳಿದ್ದಾರೆ. ‘ನಾವು ನಮ್ಮದೇ ಘನತೆಯನ್ನು ಎತ್ತಿಹಿಡಿಯಲು ಈ ಕಾನೂನನ್ನು ಯಾವತ್ತೂ ಬಳಸುವುದಿಲ್ಲ. ನಮ್ಮ ವಿರುದ್ಧ ಮಾತನಾಡುವವರನ್ನು ಸುಮ್ಮನಿರಿಸುವ ಉದ್ದೇಶದಿಂದಲೂ ಈ ಕಾನೂನು ಬಳಸುವುದಿಲ್ಲ. ಟೀಕೆಗಳ ಬಗ್ಗೆ ನಾವು ಹೆದರಿಕೆ ಹೊಂದಿಲ್ಲ. ಯುಕ್ತವಾದ ಟೀಕೆಗಳನ್ನು ಮಾಡುವುದು ಪ್ರತಿ ವ್ಯಕ್ತಿಯ ಹಕ್ಕು’ ಎಂದು ಅವರು ಹೇಳಿದ್ದಾರೆ.
 
ನ್ಯಾಯಾಂಗ ನಿಂದನೆ ಕಾನೂನನ್ನು ಮನಸ್ಸಿಗೆ ಬಂದಂತೆ ಬಳಸುವುದರ ವಿರುದ್ಧ 2000ನೇ ಇಸವಿಯಲ್ಲಿ ಎಚ್ಚರಿಕೆಯ ಮಾತು ಹೇಳಿರುವ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಆರ್.ಸಿ.ಲಹೋಟಿ ಮತ್ತು ಕೆ.ಟಿ.ಥಾಮಸ್ ಅವರು, ‘ನ್ಯಾಯಾಂಗ ನಿಂದನೆ ಆರೋಪದ ಅಡಿ ಶಿಕ್ಷಿಸುವುದರ ಪರಿಣಾಮಗಳು ಗಂಭೀರವಾಗಿರುತ್ತವೆ’ ಎಂದಿದ್ದಾರೆ.
 
ನ್ಯಾಯಾಂಗ ನಿಂದನೆ ಅಸ್ತ್ರ ಬಳಸುವುದು ತೀರಾ ಕಠಿಣ ಅನಿಸಬಹುದು. ಆದರೆ, ಈ ಕಾನೂನನ್ನು ಕೋರ್ಟ್‌ಗಳು ಸಂಯಮದಿಂದ, ಹೃದಯ ವೈಶಾಲ್ಯದಿಂದ ಬಳಸಿವೆ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ. ಮನಃಪೂರ್ವಕವಾಗಿ ಕ್ಷಮೆ ಯಾಚಿಸಿದಾಗ  ಕಟು ಟೀಕೆಗಳನ್ನೂ ಕೋರ್ಟ್‌ಗಳು ಮನ್ನಿಸಿವೆ. ನ್ಯಾಯಾಂಗ ನಿಂದನೆ ವಿಚಾರದಲ್ಲಿ ಇದು ಅತ್ಯಂತ ಯುಕ್ತ ಮಾರ್ಗ ಎಂಬುದು ವಿಶ್ವದೆಲ್ಲೆಡೆ ಒಪ್ಪಿತವಾಗಿದೆ.
 
ನ್ಯಾಯಮೂರ್ತಿಗಳಿಂದ ನಿರೀಕ್ಷಿಸುವುದು ಏನು ಎಂಬುದನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ಬಿ.ಗಜೇಂದ್ರಗಡ್ಕರ್ ಅವರು ಹೀಗೆ ಹೇಳಿದ್ದಾರೆ: ‘ಉತ್ತಮ ಆದೇಶಗಳನ್ನು ನೀಡುವುದು, ನಿರ್ಭೀತವಾಗಿ, ನಿಷ್ಪಕ್ಷಪಾತ ಧೋರಣೆ ಹೊಂದಿ, ವಸ್ತುನಿಷ್ಠವಾಗಿ ವರ್ತಿಸುವುದು ತಮ್ಮ ಸ್ಥಾನದ ಘನತೆಯನ್ನು ಕಾಯ್ದುಕೊಳ್ಳುವ ಅತ್ಯುತ್ತಮ ಮಾರ್ಗ ಎಂಬ ಮಾತನ್ನು ವಿವೇಕವಂತ ನ್ಯಾಯಮೂರ್ತಿಗಳು ಎಂದಿಗೂ ಮರೆಯುವುದಿಲ್ಲ. ಕರ್ತವ್ಯದ ವೇಳೆ ಸಂಯಮ, ಘನತೆ ಹಾಗೂ ಶಿಷ್ಟಾಚಾರ ಪಾಲಿಸುವುದು ಕೂಡ ಇದರಲ್ಲಿ ಸೇರುತ್ತದೆ.’
 
ನ್ಯಾಯಾಧೀಶರು ಹಾಗೂ ನ್ಯಾಯಮೂರ್ತಿಗಳಿಂದ ನಿರೀಕ್ಷಿಸುವುದು ಏನನ್ನು ಎಂಬುದನ್ನು ಈ ಮಾತುಗಳೇ ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.