ADVERTISEMENT

ಬಾಡಿಗೆ ತಾಯ್ತನವೂ ಎಆರ್‌ಟಿ ಮಸೂದೆಯೂ

ಸೋನಾಲಿ ಕುಸುಮ್
Published 28 ಜೂನ್ 2015, 19:30 IST
Last Updated 28 ಜೂನ್ 2015, 19:30 IST

ಭಾರತದಲ್ಲಿ 13 ವರ್ಷಗಳ ಹಿಂದೆ (2002) ಬಾಡಿಗೆ ತಾಯ್ತನಕ್ಕೆ ಅನುಮತಿ ನೀಡಲಾಯಿತು. ಪ್ರವಾಸೋದ್ಯಮ ಇಲಾಖೆ ಈ ಕ್ಷೇತ್ರದಲ್ಲಿ ಇರುವ ಭಾರಿ ವಿದೇಶಿ ವಿನಿಮಯವನ್ನು ಗಮನದಲ್ಲಿಟ್ಟುಕೊಂಡು 2002ರಲ್ಲಿ ಸಂತಾನೋತ್ಪತ್ತಿ ಪ್ರವಾಸೋದ್ಯಮ ಎಂಬ ಹೊಸ ಪರಿಕಲ್ಪನೆಯನ್ನು ಬಿತ್ತಿತು. ಆಗಿನಿಂದ ಬಂಜೆತನಕ್ಕೆ ಚಿಕಿತ್ಸೆಯಾಗಿ ದೇಶದ ಹಲವು ಖಾಸಗಿ ಕ್ಲಿನಿಕ್‌ಗಳು ಬಾಡಿಗೆ ತಾಯ್ತನ ಸೇವೆಯನ್ನು ಒದಗಿಸುತ್ತಿವೆ.

ಇಂತಹ ಬಂಜೆತನ ಚಿಕಿತ್ಸಾ ಕೇಂದ್ರಗಳು ‘ಬಾಡಿಗೆ ತಾಯ್ತನ’ದ ಸೌಲಭ್ಯ ಅಥವಾ ಸೇವೆ ಒದಗಿಸಬೇಕಾದರೆ ಅನುಸರಿಸಬೇಕಾದ ನಿಯಮಗಳು, ಅಂತಹ ಕ್ಲಿನಿಕ್‌ಗಳ ಮೇಲ್ವಿಚಾರಣೆ ಹಾಗೂ ನಿಯಂತ್ರಣಕ್ಕಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) 2005ರಲ್ಲಿ ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿತು.

2008ರಲ್ಲಿ ಸುಪ್ರೀಂಕೋರ್ಟ್ ‘ಬೇಬಿ ಮಾಂಜಿ ಯಮಡಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನದ ಕುರಿತು ಸಮಗ್ರ ಶಾಸನವೊಂದನ್ನು ರೂಪಿಸುವಂತೆ ನಿರ್ದೇಶಿಸಿತು. ಬೇಬಿ ಮಾಂಜಿ ಪ್ರಕರಣ ಭಾರತದಲ್ಲಿ ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನಕ್ಕೆ ಕಾನೂನಿನ ಮಾನ್ಯತೆ ದೊರಕಲು ಅವಕಾಶ ಮಾಡಿಕೊಟ್ಟಿತು.

ಬೇಬಿ ಮಾಂಜಿ ಭಾರತದ ಬಾಡಿಗೆ ತಾಯಿಯಲ್ಲಿ ಜನಿಸಿದ್ದ ಜಪಾನ್‌ನ ಇಕುಫುಮಿ ಹಾಗೂ ಯುಕಿ ಯಮಡಾ ದಂಪತಿ ಮಗು. ಮಗು ಹುಟ್ಟುವ ಹೊತ್ತಿಗೆ ಈ ದಂಪತಿ ವಿಚ್ಛೇದನ ಪಡೆದಿದ್ದರು. ಮಗುವಿನೊಂದಿಗೆ ತನಗೆ ಜೈವಿಕವಾದ ಸಂಬಂಧ ಇಲ್ಲದೇ ಇದ್ದುದರಿಂದ ತಾವು ಬೇರೆಯಾದಲ್ಲಿ ಮಗುವನ್ನು ನೋಡಿಕೊಳ್ಳುವುದಿಲ್ಲ ಎಂದು ಒಪ್ಪಂದಕ್ಕೆ ಸಹಿ ಹಾಕುವಾಗಲೇ ಯುಕಿ ಹೇಳಿದ್ದರು. ಜಪಾನ್ ದೇಶ ಮಗುವಿಗೆ ಜನ್ಮ ನೀಡಿದವಳನ್ನು ಮಾತ್ರ ತಾಯಿ ಎಂದು ಪರಿಗಣಿಸುತ್ತದೆ.

ಇಲ್ಲಿ ಮಗುವಿನ ತಾಯಿ ಯಾರು ಎಂಬ ಪ್ರಶ್ನೆ ಉದ್ಭವಿಸಿತು. ಬೇಬಿ ಮಾಂಜಿಗೆ ಪಾಸ್‌ಪೋರ್ಟ್ ನೀಡಲು ಜಪಾನ್ ನಿರಾಕರಿಸಿತು. ಅಂಡಾಣು ದಾನಿ ಹಾಗೂ ಬಾಡಿಗೆ ತಾಯಿ ಇಬ್ಬರೂ ಭಾರತೀಯರು. ಅಂಡಾಣು ನೀಡಿದ ತಕ್ಷಣ ಅಂಡಾಣು ದಾನಿಯ ಕೆಲಸ ಮುಗಿಯುತ್ತದೆ. ಒಪ್ಪಂದದ ಕರಾರಿನ ಪ್ರಕಾರ ಮಗು ಹೆತ್ತ ತಕ್ಷಣ ಬಾಡಿಗೆ ತಾಯಿಯ ಪಾತ್ರವೂ ಮುಗಿಯುತ್ತದೆ. ಜಪಾನ್ ಕಾನೂನಿನಲ್ಲಿ ಒಂಟಿ ತಂದೆ, ಮಗುವನ್ನು ದತ್ತು ಪಡೆಯಲು ಸಾಧ್ಯವಿಲ್ಲದ ಕಾರಣ ಇಕುಫುಮಿ ಯಮಡಾ ಮಗುವನ್ನು ದತ್ತು ತೆಗೆದುಕೊಳ್ಳುವಂತಿರಲಿಲ್ಲ.

ಆನಂತರ ಇಕುಫುಮಿಯ ತಾಯಿ ಭಾರತಕ್ಕೆ ಬಂದು ಮಾಂಜಿಯನ್ನು ದತ್ತು ತೆಗೆದುಕೊಂಡು ಜಪಾನ್‌ಗೆ ಕರೆದೊಯ್ದರು. ಈ ಪ್ರಕರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಸುಪ್ರೀಂಕೋರ್ಟ್‌ ಸೂಚನೆಯನ್ವಯ ಕೇಂದ್ರ ಸರ್ಕಾರ 2008ರಲ್ಲಿ ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ ಮಸೂದೆಯನ್ನು (ಎಆರ್‌ಟಿ) ರೂಪಿಸಿತು. 2010ರಲ್ಲಿ ಈ ಮಸೂದೆಗೆ ಮತ್ತಷ್ಟು ತಿದ್ದುಪಡಿ ತರಲಾಯಿತು. ಆದರೆ, ಈ ಮಸೂದೆ ಇನ್ನೂ ಕಾಯ್ದೆಯಾಗದೆ ನನೆಗುದಿಯಲ್ಲಿ ಇದೆ.

ಬಾಡಿಗೆ ತಾಯ್ತನ ಭಾರತದಲ್ಲಿ ಈಗ ಲಾಭದಾಯಕ ವ್ಯವಹಾರವಾಗಿದೆ. ಬಾಡಿಗೆ ತಾಯಂದಿರ ಸೇವೆ ಬಯಸಿ ಭಾರತಕ್ಕೆ ಭೇಟಿ ನೀಡುವ ವಿದೇಶಿಯರ ಸಂಖ್ಯೆ ಹೆಚ್ಚಾಗಿದೆ. ದೇಶದಲ್ಲಿ ಬಾಡಿಗೆ ತಾಯಂದಿರ ಸೇವೆ ಒದಗಿಸುವ 3000ಕ್ಕೂ ಹೆಚ್ಚು ಕ್ಲಿನಿಕ್‌ಗಳು ಇದ್ದು, ಬಂಜೆತನದ ಚಿಕಿತ್ಸೆಗಾಗಿ ಇದ್ದ ಈ ಅಪರೂಪದ ಸೌಲಭ್ಯ ಈಗ ವಾರ್ಷಿಕ   ₹ 3120 ಕೋಟಿ  ಲಾಭ ತರುವ ಉದ್ದಿಮೆಯಾಗಿ ಬದಲಾಗಿದೆ. ಇದು ಬಾಡಿಗೆ ತಾಯಂದಿರಾಗಲು ಮುಂದೆ ಬರುವ ಬಡ ಮಹಿಳೆಯರ ಶೋಷಣೆಗೂ ದಾರಿ ಮಾಡಿಕೊಟ್ಟಿದೆ.

ಎಆರ್‌ಟಿ ಮಸೂದೆಯಲ್ಲಿನ ಕೆಲ ಲೋಪದೋಷ ಹಾಗೂ ಇದರಿಂದಾಗಿ ಬಾಡಿಗೆ ತಾಯಂದಿರುವ ಅನುಭವಿಸ ಬೇಕಾಗುವ ಪರೋಕ್ಷ ಶೋಷಣೆಗೆ ಬಗ್ಗೆ ಅವಲೋಕಿಸೋಣ. 2008ರಲ್ಲಿ ಎಆರ್‌ಟಿ ಮಸೂದೆಯ ಕರಡು ಮೊದಲ ಬಾರಿ ಹೊರಬಿದ್ದಾಗಲೇ ಭಾರಿ ಟೀಕೆಗೆ ಒಳಗಾಯಿತು. ಈ ಮಸೂದೆ ಬಾಡಿಗೆ ತಾಯಂದಿರನ್ನು ಅವರ ಸೇವೆ ಬಳಸಿಕೊಳ್ಳುವ ಮಕ್ಕಳಿಲ್ಲದ ದಂಪತಿ, ಕ್ಲಿನಿಕ್‌ಗಳು ಹಾಗೂ ಹುಟ್ಟುವ ಮಗುವಿಗಿಂತ ಕೆಳಗಿನ ಸ್ಥಾನದಲ್ಲಿ ಇರಿಸಿದೆ. 

ಮಕ್ಕಳಿಗಾಗಿ ಆದೇಶ ನೀಡುವ ದಂಪತಿ ಹಾಗೂ ಮಧ್ಯವರ್ತಿಗಳಂತೆ ವರ್ತಿಸುವ ಕ್ಲಿನಿಕ್‌ಗಳು ಹೇಳಿದಂತೆ ಬಾಡಿಗೆ ತಾಯಂದಿರು ನಡೆದುಕೊಳ್ಳಬೇಕು ಎಂದು ಮಸೂದೆ ಹೇಳುತ್ತದೆ. ಬಾಡಿಗೆ ತಾಯಂದಿರನ್ನು ಇಲ್ಲಿ ಭ್ರೂಣವನ್ನು ಹೊತ್ತಿರುವ ಒಂದು ವಸ್ತುವಿನಂತೆ ಪರಿಗಣಿಸಲಾಗಿದೆ. ಬಾಡಿಗೆ ತಾಯಂದಿರಿಗೆ ಒದಗಿಸಲಾಗುವ ಕನಿಷ್ಠ ಸುರಕ್ಷತೆ ಹಾಗೂ ಅವರಿಗೆ ಎದುರಾಗಬಹುದಾದ ಗರಿಷ್ಠ ಅಪಾಯ ಮತ್ತು ಅನನುಕೂಲವನ್ನು ಪರಿಗಣಿಸಿದಾಗ ಇದು ಎಂತಹ ಶೋಷಣೆಗೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ಗಮನಿಸಬಹುದು.

ಬಾಡಿಗೆ ತಾಯಿಯ ಗರ್ಭದಲ್ಲಿ ಫಲಿತ ಜೀವಾಣುವನ್ನು (ಐವಿಎಫ್) ಇಡಬೇಕಾದರೆ ಆಕೆಯ ದೇಹವನ್ನು ಗರ್ಭಧಾರಣೆಗೆ ಸಜ್ಜುಗೊಳಿಸಲು ಹಾರ್ಮೋನ್ ಚಿಕಿತ್ಸೆ ನೀಡಲಾಗುತ್ತದೆ. ಹಾರ್ಮೋನ್ ಪ್ರಮಾಣ ಹೆಚ್ಚಿದಲ್ಲಿ ಹೊಟ್ಟೆ ತೊಳೆಸುವಿಕೆ, ಮೈಬಿಸಿಯಾಗುವುದು ಇತ್ಯಾದಿ ಅಡ್ಡ ಪರಿಣಾಮಗಳು ಕಂಡುಬರುತ್ತವೆ. ಎಆರ್‌ಟಿ ಮಸೂದೆಯಲ್ಲಿ ಬಾಡಿಗೆ ತಾಯಿಯೊಬ್ಬಳು ತನ್ನದೇ ಸ್ವಂತ ಮಕ್ಕಳೂ ಸೇರಿ ಐದು ಭಾರಿ ಗರ್ಭ ಧರಿಸಬಹುದಾಗಿದೆ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಮಕ್ಕಳಿರುವ ಮಹಿಳೆಯರನ್ನೇ ಬಾಡಿಗೆ ತಾಯಂದಿರಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದರಿಂದಾಗಿ ಒಬ್ಬ ಮಹಿಳೆ ಕನಿಷ್ಠ ನಾಲ್ಕು ಬಾರಿ ಬಾಡಿಗೆ ತಾಯಿಯಾಗಲು ಅವಕಾಶವಿದೆ. ಅಲ್ಲದೇ ಫಲಿತ ಜೀವಾಣುಗಳು ಭ್ರೂಣವಾಗಿ ರೂಪುಗೊಳ್ಳುವವರೆಗೆ ಸತತವಾಗಿ ಮೂರು ಬಾರಿ ಫಲಿತ ಜೀವಾಣುಗಳನ್ನು ಬಾಡಿಗೆ ತಾಯಿಯ ಗರ್ಭದಲ್ಲಿ ಇಡಲು ಮಸೂದೆ ಅವಕಾಶ ಕಲ್ಪಿಸಿದೆ.

ಅಲ್ಲದೇ ಚಿಕಿತ್ಸೆ ವಿಫಲವಾಗಬಾರದು ಎಂಬ ಕಾರಣಕ್ಕೆ ಮೂರು-ನಾಲ್ಕು ಫಲಿತ ಜೀವಾಣುಗಳನ್ನು ಒಮ್ಮೆಲೇ ಆಕೆಯ ಗರ್ಭದಲ್ಲಿ ಇಡಲಾಗುತ್ತದೆ. ಇದರಿಂದಾಗಿ ಒಂದಕ್ಕಿಂತ ಹೆಚ್ಚಿನ ಭ್ರೂಣಗಳು ಬೆಳೆಯುವ ಸಾಧ್ಯತೆಯಿದ್ದು, ರಕ್ತ ದೊತ್ತಡಕ್ಕೆ ಕಾರಣವಾಗುತ್ತದೆ. ಬಾಡಿಗೆ ತಾಯಂದಿರನ್ನು ನೇಮಿಸಿಕೊಂಡ ದಂಪತಿ ಅಥವಾ ವೈದ್ಯರು ಒಂದು ಭ್ರೂಣ ಆರೋಗ್ಯಕರವಾಗಿ ಬೆಳೆಯಲಿ ಎಂಬ ಕಾರಣಕ್ಕೆ ಇತರ ಭ್ರೂಣಗಳನ್ನು ವೈದ್ಯಕೀಯ ಗರ್ಭಪಾತದ ಮೂಲಕ ಹೊರ ತೆಗೆಯಲಾಗುತ್ತದೆ. ಒಂದು ಬಾರಿ ಎಷ್ಟು ಫಲಿತ ಜೀವಾಣುಗಳನ್ನು ಇಡಬಹುದು ಎಂಬುದರ ಬಗ್ಗೆ ಮಸೂದೆಯಲ್ಲಿ ಸ್ಪಷ್ಟವಾಗಿ ಹೇಳಿಲ್ಲ.

ಒಂದಕ್ಕಿಂತ ಹೆಚ್ಚು ಭ್ರೂಣಗಳು ಬೆಳೆಯುತ್ತಿರುವಾಗ ಬಾಡಿಗೆ ತಾಯಿ ‘ಎಕ್ಲಾಂಪ್ಸಿಯಾ’ದಂತಹ (ಒಮ್ಮೆಲೇ ರಕ್ತದೊತ್ತಡ ಹೆಚ್ಚುತ್ತದೆ ಮತ್ತು ಮೂತ್ರದ ಮೂಲಕ ಪ್ರೋಟಿನ್ ಹೊರಹೋಗುತ್ತದೆ, ಮೂರ್ಛೆ ರೋಗ ಬಂದಂತೆ ಕೈಕಾಲು ಅದರುತ್ತದೆ. ಈ ತೊಂದರೆ ಉಲ್ಬಣಿಸಿದಾಗ ಗರ್ಭಿಣಿ ಸ್ತ್ರೀ ಸಾಯುವ ಸಂದರ್ಭವೂ ಎದುರಾಗಬಹುದು) ತೊಂದರೆಗೆ ಒಳಗಾಗುವ ಸಾಧ್ಯತೆಯಿದೆ. ಗುಜರಾತ್‌ನಲ್ಲಿ 2012ರಲ್ಲಿ ಪ್ರಮೀಳಾ ವಘೇಲಾ ಎಂಬ ಬಾಡಿಗೆ ತಾಯಿಯೊಬ್ಬಳು ಈ ತೊಂದರೆಯಿಂದ ಹೆರಿಗೆಯಾದ ತಕ್ಷಣ ಮೃತಪಟ್ಟಿದ್ದಳು.

ಸಿ ಸೆಕ್ಷನ್ ಹೆರಿಗೆ: ಇಂತಹ ಕೃತಕ ಗರ್ಭಧಾರಣೆಯಲ್ಲಿ (ಐವಿಎಫ್) ಅವಧಿಗೆ ಮುನ್ನ ಹೆರಿಗೆಯಾಗುವುದು ಸಾಮಾನ್ಯವಾಗಿದ್ದರಿಂದ ಸಿಝೆರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗುತ್ತದೆ. ಇದರಿಂದಾಗಿ ಬಾಡಿಗೆ ತಾಯಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ. ಕೊಯಮತ್ತೂರಿನಲ್ಲಿ ಈಶ್ವರಿ ಎಂಬ ಬಾಡಿಗೆ ತಾಯಿ ಸಿಝೆರಿಯನ್ ಶಸ್ತ್ರಚಿಕಿತ್ಸೆಯಿಂದ ಅತಿಯಾದ ರಕ್ತಸ್ರಾವ ವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಗರ್ಭಪಾತದ ಹಕ್ಕಿಲ್ಲ: ಎಆರ್‌ಟಿ ಮಸೂದೆಯಲ್ಲಿರುವ ದೊಡ್ಡ ಲೋಪವೆಂದರೆ ಬಾಡಿಗೆ ತಾಯಿಗೆ ವೈದ್ಯಕೀಯ ಗರ್ಭಪಾತದ ಹಕ್ಕು ನಿರಾಕರಿಸಿರುವುದು. 1971ರ ಎಂಟಿಪಿ ಕಾಯ್ದೆ ಅಡಿ ಎಲ್ಲ ಮಹಿಳೆಯರಿಗೂ ವೈದ್ಯಕೀಯ ಕಾರಣಗಳಿಗಾಗಿ ಗರ್ಭಪಾತ ಮಾಡಿಸಿಕೊಳ್ಳುವ ಅವಕಾಶವಿದೆ. ಆದರೆ, ಬಾಡಿಗೆ ತಾಯಿ ಭ್ರೂಣಕ್ಕೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸಿದಲ್ಲಿ ಆಕೆಯ ಮೇಲೆ ಎಆರ್‌ಟಿ ಮಸೂದೆಯ 34 (23) ಸೆಕ್ಷನ್ ಅಡಿ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.

ಹೆರಿಗೆ ನಂತರ ಬಾಡಿಗೆ ತಾಯಿಯ ಯೋಗಕ್ಷೇಮ ನೋಡಿಕೊಳ್ಳುವ, ಆರೋಗ್ಯ ಸಮಸ್ಯೆ ಉಂಟಾದಲ್ಲಿ ಅದಕ್ಕೆ ಪರಿಹಾರ ಸೂಚಿಸುವ ಯಾವ ಆಯ್ಕೆಯೂ ಮಸೂದೆಯಲ್ಲಿ ಇಲ್ಲ. ಬಾಡಿಗೆ ತಾಯಿ ಮೃತಳಾದ ಸಂದರ್ಭದಲ್ಲಿ ಪರಿಹಾರ ಕ್ರಮವಾಗಿ ಆಕೆಯ ಕುಟುಂಬ ಮತ್ತು ಮಕ್ಕಳಿಗೆ ಹೆಚ್ಚಿನ ಹಣ ನೀಡುವ ಯಾವ ಅಂಶವೂ ಮಸೂದೆಯಲ್ಲಿ ಇಲ್ಲ.

ಗರ್ಭಧಾರಣೆ ಸಮಯದಲ್ಲಿ ಬಾಡಿಗೆ ತಾಯಿ ಎಲ್ಲಿ ಉಳಿಯಬೇಕು ಎಂಬುದರ ಬಗ್ಗೆಯೂ ಮಸೂದೆಯಲ್ಲಿ ಸ್ಪಷ್ಟತೆ ಇಲ್ಲ. ಆದರೆ, ಬಂಜೆತನಕ್ಕೆ ಚಿಕಿತ್ಸೆ ನೀಡುವ ಕ್ಲಿನಿಕ್‌ಗಳು ಬಾಡಿಗೆ ತಾಯಂದಿರು ಕಡ್ಡಾಯವಾಗಿ ತಾವು ವ್ಯವಸ್ಥೆ ಮಾಡಿರುವ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಬೇಕು ಎನ್ನುತ್ತಿವೆ. ಇದರಿಂದ ಬಾಡಿಗೆ ತಾಯಂದಿರು ತಮ್ಮ ಸ್ವಂತ ಮಕ್ಕಳು ಹಾಗೂ ಕುಟುಂಬದ ಇತರರಿಂದ ದೂರವಿರಬೇಕಾಗುತ್ತದೆ.

ಮಸೂದೆಯಲ್ಲಿರುವ ದೊಡ್ಡ ಲೋಪವೆಂದರೆ ಬಂಜೆ ತನದ ಚಿಕಿತ್ಸೆ ನೀಡುವ ಕ್ಲಿನಿಕ್‌ಗಳು ಹಾಗೂ ವೈದ್ಯರ ಮೇಲೆ ಯಾವುದೇ ಉತ್ತರದಾಯಿತ್ವ ಹೊರಿಸದೇ ಇರುವುದು. ಇದರಿಂದಾಗಿ ಇಂತಹ ಕ್ಲಿನಿಕ್‌ಗಳು ನೋಂದಣಿ, ಮಾನ್ಯತೆ ಯಾವುದೂ ಇಲ್ಲದೇ ಹಣ ಮಾಡುವ ಏಕೈಕ ಉದ್ದೇಶದಿಂದ ವೈದ್ಯಕೀಯ ನಿಯಮಗಳನ್ನು ಗಾಳಿಗೆ ತೂರಬಹುದು.

ಬಾಡಿಗೆ ತಾಯಂದಿರನ್ನು ವಿಮಾ ಸೌಲಭ್ಯಕ್ಕೆ ಒಳಪಡಿಸುವ ಕುರಿತು ಎಆರ್‌ಟಿ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದ್ದರೂ ಅದನ್ನು ಕಡ್ಡಾಯಗೊಳಿಸಿಲ್ಲ. ಅಲ್ಲದೇ ಅಂಡಾಣು ದಾನಿಗಳನ್ನು ವಿಮಾ ಸೌಲಭ್ಯದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಅಂಡಾಣು ದಾನಿಗಳಿಗೆ ಹಾರ್ಮೋನ್ ಚಿಕಿತ್ಸೆ ನೀಡುವುದರಿಂದ ಹಾಗೂ ಅಂಡಾಣುವನ್ನು ಹೊರತೆಗೆಯಲು ಶಸ್ತ್ರ ಬಳಸುವುದರಿಂದ ಇದು ಸಾಕಷ್ಟು ಅಪಾಯಕಾರಿಯೇ.

ಅಂಡಾಣು ದಾನಿಗಳಿಗೆ ನೀಡುವ ಅತಿಯಾದ ಹಾರ್ಮೋನ್‌ನಿಂದ ಅವರು ‘ಒವರಿಯನ್ ಹೈಪರ್ ಸ್ಟಿಮ್ಯುಲೇಷನ್ ಸಿಂಡ್ರೋಮ್’ಗೆ (ಒಎಚ್‌ಎಸ್‌ಎಸ್) ಒಳಗಾಗುವ ಸಾಧ್ಯತೆಯಿರುತ್ತದೆ. ಒಮ್ಮೊಮ್ಮೆ ಇದು ಮಾರಣಾಂತಿಕವೂ ಆಗಬಲ್ಲದು. ಕಳೆದ ವರ್ಷ ದೆಹಲಿಯಲ್ಲಿ ಯುಮಾ ಶೆರ್ಪಾ (23) ಎಂಬ ಅಂಡಾಣು ದಾನಿಯೊಬ್ಬರು ಒಎಚ್‌ಎಸ್‌ಎಸ್‌ನಿಂದ ಮೃತಪಟ್ಟಿದ್ದರು.

ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ ಬಹುತೇಕ ಬಾಡಿಗೆ ತಾಯಂದಿರು ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ತಿಂಗಳಿಗೆ ₹ 3000ದಿಂದ ₹ 5000  ಸಂಬಳಕ್ಕೆ ದುಡಿಯುತ್ತಾರೆ. ಶಾಲೆ ಬಿಟ್ಟವರು, ಅನಕ್ಷರಸ್ಥರೇ ಹೆಚ್ಚು. ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಬಾಡಿಗೆ ತಾಯಂದಿರಾಗಲು ಮುಂದಾಗುತ್ತಾರೆ. ಕನ್ನಡವೊಂದೇ ಗೊತ್ತಿರುವುದರಿಂದ ಒಪ್ಪಂದಕ್ಕೆ ಸಹಿ ಹಾಕುವಾಗ ಅಲ್ಲಿ ಹೇಳಲಾದ ನಿಯಮಗಳು ತಿಳಿದಿರುವುದಿಲ್ಲ, ಹಾರ್ಮೋನ್ ಚಿಕಿತ್ಸೆಯ ದುಷ್ಪರಿಣಾಮ, ತಮಗೆ ನ್ಯಾಯಯುತವಾಗಿ ಸಲ್ಲಬೇಕಾದ ಸೌಲಭ್ಯಗಳ ಅರಿವು ಅವರಿಗೆ ಇರುವುದಿಲ್ಲ.

ರಾಜ್ಯದಲ್ಲಿ ಬಾಡಿಗೆ ತಾಯಂದಿರ ಮೂಲಕ ಹುಟ್ಟಿರುವ ಮಕ್ಕಳ ವಿವರ, ಆ ಮಕ್ಕಳ ಲಿಂಗಾನುಪಾತ ಹಾಗೂ ಬಂಜೆತನ ಚಿಕಿತ್ಸಾ ಕೇಂದ್ರಗಳಲ್ಲಿ ಬಾಡಿಗೆ ತಾಯಂದಿ ರಾಗಲು ನೋಂದಾಯಿಸಿಕೊಳ್ಳುತ್ತಿರುವವರ ವಿವರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ಬಳಿ ಯಾವುದೇ ದಾಖಲೆ, ಅಂಕಿ- ಅಂಶಗಳು ಇಲ್ಲ. 2013ರಲ್ಲಿ ಎಆರ್‌ಟಿ ಮಸೂದೆಗೆ ಸೂಕ್ತ ತಿದ್ದುಪಡಿ ತರಲಾಗಿದೆ. ಕೇಂದ್ರ ಸಂಪುಟದ ಮುಂದೆ ಈ ಮಸೂದೆಯನ್ನು ಇಡಲಾಗಿದ್ದು, ಒಪ್ಪಿಗೆಗಾಗಿ ಕಾಯಲಾಗುತ್ತಿದೆ. ಜಗತ್ತಿನಲ್ಲಿ ತಾಯಿ ಮರಣ ಪ್ರಮಾಣ ಹೆಚ್ಚಿರುವ ದೇಶಗಳಲ್ಲಿ ಭಾರತವೂ ಒಂದು.

ಇಂತಹ ಸನ್ನಿವೇಶದಲ್ಲಿ ಬಂಜೆತನದ ಚಿಕಿತ್ಸೆ ನೀಡುವ ಕ್ಲಿನಿಕ್‌ಗಳು ವೈದ್ಯಕೀಯ ನಿಯಮಗಳನ್ನು ಉಲ್ಲಂಘಿಸುವುದು, ಬಾಡಿಗೆ ತಾಯಂದಿರನ್ನು ಹಣ ಮಾಡುವ ವಸ್ತುವಿನಂತೆ ಪರಿಗಣಿಸುವ ಪ್ರವೃತ್ತಿ ಕಳವಳಕಾರಿ. ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನದ ಹೆಸರಿನಲ್ಲಿ ಮಹಿಳೆಯರನ್ನು ಶೋಷಿಸುವ ಕ್ಲಿನಿಕ್‌ಗಳ ಮೇಲೆ ನಿಗಾ ಇಡಲು ಬಿಗಿಯಾದ ಕಾನೂನು ಮತ್ತು ನಿಯಂತ್ರಣ ಅಗತ್ಯ. ಇದಕ್ಕಾಗಿ ಸಮಗ್ರ ಎಆರ್‌ಟಿ ಮಸೂದೆಯನ್ನು ಕಾಯ್ದೆಯಾಗಿಸುವುದು ಅತ್ಯಗತ್ಯ.

ಲೇಖಕಿ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸಂಶೋಧನಾ ವಿದ್ಯಾರ್ಥಿ
editpagefeedback@prajavani.co.in

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.