ADVERTISEMENT

ಮಾನಸಿಕ ಆರೋಗ್ಯ ಸೇವೆಗೆ ಒತ್ತಾಸೆಯಾದ ಕಾಯ್ದೆ

ಪ್ರಜಾವಾಣಿ ವಿಶೇಷ
Published 31 ಆಗಸ್ಟ್ 2014, 19:30 IST
Last Updated 31 ಆಗಸ್ಟ್ 2014, 19:30 IST

ಟೆರಿ ಹಾಲ್‌ಳ ಉದ್ವೇಗ  ಮರುಕಳಿಸಿತ್ತು. ತನ್ನ ಹಳೆಯ ಅಪಾರ್ಟ್‌ಮೆಂಟ್‌ ಕಟ್ಟಡದ ಮೆಟ್ಟಿಲ ಮೇಲೆ ಕುಳಿತು ಸಿಗರೇಟ್‌ ಹೊತ್ತಿಸಲು ಯತ್ನಿಸುವಾಗ ಆಕೆಯ ಕೈ ನಡುಗು­ತ್ತಿತ್ತು. ಆಕೆಗೆ ಹಸಿವಾಗುತ್ತಿರಲಿಲ್ಲ. ತನ್ನ ಇತ್ತೀಚಿನ ವೈಫಲ್ಯಕ್ಕೆ ಉತ್ತರ ಹುಡುಕುವಾಗ ಮನಸ್ಸು ಎತ್ತಲೋ ಧಾವಿಸುತ್ತಿತ್ತು. 

‘ಕಡಿಮೆ ವೆಚ್ಚದ ವೈದ್ಯಕೀಯ ಸೇವೆ ಕಾಯ್ದೆ’­ಯ (Affordable care act or Obama care) ಮುಖಾಂತರ ಜನವರಿಯಲ್ಲಿ ‘ಮೆಡಿ­ಕೇಡ್’ ವೈದ್ಯಕೀಯ ಸೌಲಭ್ಯದ ವ್ಯಾಪ್ತಿಗೆ ಒಳ­ಪಟ್ಟ ಕೂಡಲೇ ಆಕೆ ಸಮುದಾಯ ಮಾನಸಿಕ ಆರೋಗ್ಯ ಸಂಸ್ಥೆಗೆ ಕರೆ ಮಾಡಿದ್ದಳು. ಆಕೆಯನ್ನು ಸದಾ ಕಾಡುತ್ತಿದ್ದ ಉದ್ವೇಗ ಹಾಗೂ ಆತಂಕಕ್ಕೆ ಚಿಕಿತ್ಸೆ ಪಡೆದಿದ್ದಳು. ಇದೇ ಮೊದಲ ಬಾರಿ ಆಕೆ ಮಾನಸಿಕ ಅಸ್ವಸ್ಥತೆಗಾಗಿ ಚಿಕಿತ್ಸೆ ಪಡೆದಿದ್ದಾಳೆ. ಈ ಚಿಕಿತ್ಸೆಯಿಂದ ಆಕೆಯ ಮಾನಸಿಕ ಆರೋಗ್ಯ ಸಾಕಷ್ಟು   ಸುಧಾರಿಸಿದೆ. ಮತ್ತಷ್ಟು ಸಲ ಚಿಕಿತ್ಸಾ ಕೇಂದ್ರಕ್ಕೆ ಹೋಗಬೇಕು ಎಂದು ಆಕೆಗೆ ಅನಿಸುತ್ತಿದೆ.

ಮೆಡಿಕೇಡ್‌ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆ­ಯಾದವರಿಂದ  ‘ಸೆವೆನ್‌ ಕೌಂಟೀಸ್‌ ಸರ್ವೀ­ಸಸ್‌’­ಗೆ ದೂರವಾಣಿ ಕರೆಗಳ ಮಹಾಪೂರ ಹರಿದುಬರುತ್ತಿದೆ. ತಮಗೆ ಚಿಕಿತ್ಸೆ ನೀಡುತ್ತಿರುವ ಎರಿನ್‌ ರೆಡೆಲ್‌ ಅವರನ್ನು ಟೆರಿ ಹಾಲ್‌ ಏಳು ವಾರಗಳ ನಂತರವಷ್ಟೇ ಭೇಟಿಯಾಗಲು ಸಾಧ್ಯ. ಎರಿನ್‌ ನಿರ್ವಹಿಸುತ್ತಿರುವ ಪ್ರಕರಣಗಳ ಸಂಖ್ಯೆ ಈಗ ದುಪ್ಪಟ್ಟಾಗಿದೆ. ‘ಆಕೆ ಒಬ್ಬ ಅದ್ಭುತ ವ್ಯಕ್ತಿ. ಆದರೆ, ಸದಾ ಬ್ಯುಸಿ. ಕೈಗೆ ಸಿಕ್ಕುವುದೇ ಇಲ್ಲ’ ಎಂದು ಹಾಲ್‌ ದೂರುತ್ತಾಳೆ.

ಹೊಸ ಕಾಯ್ದೆಯಿಂದಾಗಿ ಅಮೆರಿಕದಲ್ಲಿ ಅತಿ­ಹೆಚ್ಚು ಜನರಿಗೆ ಮಾನಸಿಕ ಆರೋಗ್ಯ ಸೇವೆ ಒದ­ಗಿ­ಸಲು ಸಾಧ್ಯವಾಗಿದೆ. ಈ ಹಿಂದೆ ಆರೋಗ್ಯ ವಿಮಾ ಸೌಲಭ್ಯಕ್ಕೆ ಒಳಪಡದ ಅಥವಾ ಯಾರ ಪಾಲಿಸಿಗಳಲ್ಲಿ ಮಾನಸಿಕ ಆರೋಗ್ಯ ಸೌಲಭ್ಯ ಪಡೆಯಲು ಅವಕಾಶ ಇರಲಿಲ್ಲವೋ ಅವರೆಲ್ಲ ಈಗ  ಮನೋರೋಗಗಳಿಗೆ ಚಿಕಿತ್ಸೆ ಪಡೆಯ­ಬಹು­ದಾಗಿದೆ. ಹೊಸ ಕಾಯ್ದೆಯ ಪ್ರಕಾರ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ನೀಡುವುದು ಅಗತ್ಯ ಅಂಶ­ಗಳಲ್ಲಿ ಒಂದಾಗಿದೆ.

ಅಮೆರಿಕದ ಆರೋಗ್ಯ ಹಾಗೂ ಮಾನವಿಕ ಸೇವೆಗಳ ಇಲಾಖೆಯ ಪ್ರಕಾರ ಐದು ಜನ ಅಮೆರಿಕನ್ನರಲ್ಲಿ ಒಬ್ಬರಿಗೆ ಮಾನಸಿಕ ಕಾಯಿಲೆ ಇದೆ.  ಆದರೆ, ಬಹುತೇಕರಿಗೆ ಚಿಕಿತ್ಸೆ ದೊರಕು­ತ್ತಿರ­ಲಿಲ್ಲ. ಹೊಸ ಕಾಯ್ದೆ ಅನ್ವಯ ‘ಮೆಡಿಕೇಡ್’ ವ್ಯಾಪ್ತಿಗೆ ಒಳಪಡುವ  ರೋಗಿಗಳಿಗೆ ಖಾಸಗಿ ಮನ­ಶಾಸ್ತ್ರಜ್ಞರು ಹಾಗೂ ಸಾಮಾಜಿಕ ಕಾರ್ಯ­ಕರ್ತರ ಕೈಯಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಕೆಂಟಕಿ ರಾಜ್ಯ ತನ್ನ ಮಾನಸಿಕ ಆರೋಗ್ಯ ನೀತಿ ಹಾಗೂ ವ್ಯವಸ್ಥೆಯನ್ನು ಸಂಪೂರ್ಣ ಬದಲಿಸಲು ಯತ್ನಿಸುತ್ತಿದೆ. ಹಾಗೆ ನೋಡಿದಲ್ಲಿ ಈ ಬದಲಾವಣೆ ಮಹತ್ವದ್ದು. ಈ ರಾಜ್ಯದ ಹೊಸ ವೈದ್ಯಕೀಯ ವಿಮಾ ಪಾಲಿಸಿ ಅಡಿ ಸೌಲಭ್ಯ ಪಡೆದ 5.21 ಲಕ್ಷ ಜನರ ಪೈಕಿ  ಶೇ 85ರಷ್ಟು ಜನ ಆರ್ಥಿಕವಾಗಿ ಬಡ ವರ್ಗಕ್ಕೆ ಸೇರಿದವ­ರಾಗಿದ್ದಾರೆ.

ಆದರೆ, ಮಾನಸಿಕ ಆರೋಗ್ಯ ಸೇವೆಯಲ್ಲಿ ಈಗಲೂ ಸಾಕಷ್ಟು ನ್ಯೂನತೆ ಉಳಿದುಕೊಂಡಿದೆ. ಆರು ಲಕ್ಷ ಜನಸಂಖ್ಯೆಯ ಲೂಯಿಸ್‌ವಿಲ್ಲೆಯಲ್ಲಿ ವಯಸ್ಕರಿಗಾಗಿ  ‘ಸೆವೆನ್‌ ಕೌಂಟೀಸ್‌ ಸರ್ವೀ­ಸಸ್‌’ ನಡೆಸುತ್ತಿರುವ ನಾಲ್ಕು ಕ್ಲಿನಿಕ್‌ಗಳಿವೆ. ಇತ್ತೀಚಿನ ದಿನಗಳಲ್ಲಿ ನೆರವಿಗಾಗಿ ಯಾಚಿಸಿ ಸಂಸ್ಥೆಗೆ   ಕರೆ ಮಾಡಿದವರ ಸಂಖ್ಯೆಯಲ್ಲಿ ಶೇ 40­ರಷ್ಟು ಏರಿಕೆಯಾಗಿದೆ ಎಂದು ‘ಸೆವೆನ್‌ ಕೌಂಟೀಸ್‌ ಸರ್ವೀಸಸ್‌’ನ ಮುಖ್ಯ ಕಾರ್ಯ­ನಿರ್ವಹಣಾಧಿಕಾರಿ ಕೆಲ್ಲಿ ಗ್ಯಾನನ್‌ ಹೇಳುತ್ತಾರೆ.

ಈ ಹೊಸ ಕಾಯ್ದೆ ಜನಸಮುದಾಯದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು  ಗಮನಿಸಲು ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆ ಲೂಯಿಸ್‌ವಿಲ್ಲೆ ನಗರದಲ್ಲಿ ಆಗಾಗ ಸಮೀಕ್ಷೆ ನಡೆಸುತ್ತಲೇ ಇದೆ. ಆದರೆ, ಖಾಸಗಿ ಮನೋರೋಗ ತಜ್ಞರು ಮೆಡಿಕೇಡ್‌ ವ್ಯಾಪ್ತಿಯ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಾರೆ. ‘ಮೆಡಿಕೇರ್‌’ ಸೌಲಭ್ಯ­ದಡಿ ಪಡೆಯುತ್ತಿದ್ದ ಶುಲ್ಕದ ಶೇ 66ರಷ್ಟು ಮಾತ್ರ  ಮೆಡಿಕೇಡ್‌ನಲ್ಲಿ  ಪಡೆಯ­ಬೇಕಾ­ಗುತ್ತದೆ. 

ಈ ವಿಮಾ ವ್ಯಾಪ್ತಿಗೆ ಒಳ­ಪಡುವ ರೋಗಿಗಳ ದಾಖಲೆ ಪತ್ರ ಸಿದ್ಧಪಡಿಸಲು ಸಾಕಷ್ಟು ಸಮಯ ಹಿಡಿಯುತ್ತದೆ ಎಂದು ಅವರು ನೆಪ ಹೇಳುತ್ತಾರೆ. ಅಲ್ಲದೇ  ಸಿರಿವಂತರಿಗಿಂತ ಬಡವರೇ ಹೆಚ್ಚಿನ ಹಿಂಸಾ­ಚಾರ, ನೋವಿಗೆ ತುತ್ತಾಗುವುದರಿಂದ ಅವರಿಗೆ ಚಿಕಿತ್ಸೆ ನೀಡುವುದು ಸಹ ಸವಾಲು ಎಂದೂ ಅವರು ಹೇಳುತ್ತಾರೆ.

ಹೊಸ ಕಾಯ್ದೆಯು ಮಾನಸಿಕ ಆರೋಗ್ಯ ಸೇವೆ ಒದಗಿಸುವವರು ಎಲ್ಲ ಆದಾಯ ವರ್ಗ­ಗಳಿಗೆ ಸೇರಿದ ಜನರನ್ನು ತಲುಪಲು ಅವಕಾಶ ಒದಗಿಸುತ್ತದೆ.  ಇದರಿಂದಾಗಿ ಕೆಂಟಕಿ ಮತ್ತು ಇತರ 25 ರಾಜ್ಯಗಳಲ್ಲಿ ಈ ಹಿಂದೆ ಎಂದೂ ಮಾನ­ಸಿಕ ಆರೋಗ್ಯಕ್ಕಾಗಿ ಚಿಕಿತ್ಸೆ ಪಡೆಯದ ಬಡಜನರಿಗೆ  ಮೆಡಿಕೇಡ್‌ ಸೌಲಭ್ಯ ವಿಸ್ತರಿಸಲು ಸಾಧ್ಯವಾಗಿದೆ.

ಜೂನ್‌ ಅಂತ್ಯದಲ್ಲಿ ಟೆರಿ ಹಾಲ್‌, ಮನೋ­ವೈದ್ಯೆ ರೆಡೆಲ್‌  ಅವರನ್ನು ಭೇಟಿಯಾಗಿದ್ದಳು. ತಾನು ಮತ್ತೆ ಕಾಲೇಜಿಗೆ ಸೇರಿ ಪದವಿ ಪಡೆ­ಯುವ ಕನಸನ್ನು ಹಾಲ್‌, ರೆಡೆಲ್‌  ಜತೆ ಹಂಚಿ­ಕೊಂಡಿದ್ದಳು. ಆದರೆ, ಬಾಡಿಗೆ ಕಟ್ಟದ ಕಾರಣ ಮನೆ ತೆರವು ಮಾಡುವಂತೆ ಕೋರ್ಟ್‌­ನಿಂದ ಆದೇಶ ಬಂದಿತ್ತು.

ಚಿಕಿತ್ಸೆಯ ಸಂದರ್ಭದಲ್ಲಿ ಹೇಳಿಕೊಟ್ಟಿದ್ದ ದೀರ್ಘ ನಡಿಗೆ, ಆಳ ಹಾಗೂ ನಿಧಾನವಾಗಿ ಉಸಿರು ಬಿಡುವ ವಿಧಾನಗಳು ಹಾಲ್‌ ನೆರವಿಗೆ ಬರಲಿಲ್ಲ. ಖಿನ್ನತೆ ನಿವಾರಕ ಔಷಧಗಳು, ಮಾನ­ಸಿಕ ಸ್ಥಿತಿ ಸಮತೋಲನಕ್ಕೆ ತರುವ  ಔಷಧಗಳೂ ಹಾಲ್‌ ಮೇಲೆ ಪರಿಣಾಮ ಬೀರಲಿಲ್ಲ. ಆಕೆ  ನಾಲ್ಕು ವಾರಗಳ ನಂತರವಷ್ಟೇ ರೆಡೆಲ್‌  ಅವರನ್ನು ಭೇಟಿಯಾಗಲು ಸಾಧ್ಯವಿತ್ತು. 

ಮಾಜಿ ಪತಿ ಜತೆಗಿನ ವಿರಸ, ಮಗ ಮತ್ತು ಕುಟುಂಬದ ಇತರ ಸದಸ್ಯರ ಜತೆಗಿನ ಸಂಘರ್ಷ­ದಿಂದಾಗಿ ಈ ವರ್ಷದ ಆರಂಭದಲ್ಲಿ ಒಂಟಿತನ, ದುಗುಡ ಆಕೆಯನ್ನು ಮುಕ್ಕಿ ತಿನ್ನುತ್ತಿತ್ತು. ‘ಚಿಕಿತ್ಸೆ ಪಡೆಯದೇ ಇದ್ದಲ್ಲಿ ನಾನು, ಕುಡಿತ, ಮಾದಕ ದ್ರವ್ಯದ ವ್ಯಸನಕ್ಕೆ ಮತ್ತೆ ಬೀಳುತ್ತಿದ್ದೆ. ನನಗೆ ನಾನೇ ಸಾಕಷ್ಟು ಹಾನಿ ಮಾಡಿಕೊಂಡಿದ್ದೆ. ವರ್ಷಾಂತ್ಯದವರೆಗೆ ಬದುಕಿ ಉಳಿಯುತ್ತಿದ್ದೆ ಎಂಬ ಖಾತ್ರಿಯೂ ಇರಲಿಲ್ಲ’ ಎಂದು ಹಾಲ್‌ ಹೇಳುತ್ತಾಳೆ.

‘ಹಾಲ್‌ ಬದಲಾಗಲು ಇಚ್ಛಿಸಿದ್ದರಿಂದಲೇ ಆಕೆ­ಯ ಚಿಕಿತ್ಸೆ ಯಶಸ್ವಿಯಾಯಿತು. ಬದಲಾಗ­ಲೇ­­ಬೇಕು ಎಂದು ಆಕೆ ನಿರ್ಧರಿಸಿದ್ದಳು’ ಎಂದು ರೆಡೆಲ್‌ ಸಂದರ್ಶನದಲ್ಲಿ ಅಭಿಪ್ರಾಯ­ಪಡು­ತ್ತಾರೆ. ‘ಆಕೆ ಈಗಲೂ ಕೆಲ ಗಂಭೀರ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಆದರೆ, ಆಕೆಯ ಮನೋಭಾವ ಈಗ ಬದಲಾಗಿದೆ. ಆಕೆ ಈಗ ಸಾಕಷ್ಟು ಆಶಾ­ವಾದಿಯಾಗಿದ್ದಾಳೆ’ ಎನ್ನುತ್ತಾರೆ ರೆಡೆಲ್‌ .

ಜುಲೈ ಮಧ್ಯ ಈ ಮಾತುಕತೆ ನಡೆಸುವ ಹೊತ್ತಿಗೆ ರೆಡೆಲ್‌ ಅವರ ದಿನಚರಿ ಮುಂದಿನ ಆರು ವಾರಗಳವರೆಗೆ ಬಿಡುವೇ ಇಲ್ಲದಂತೆ ತುಂಬಿ­ಹೋಗಿತ್ತು. ಕಳೆದ ವರ್ಷ 100ರಷ್ಟಿದ್ದ ಆಕೆಯ ರೋಗಿಗಳ ಸಂಖ್ಯೆ ಈ ವರ್ಷ 263ರಷ್ಟು ಆಗಿದೆ. ಚಿಕಿತ್ಸಕರ ಕೊರತೆ ನೀಗಲೆಂದೇ ‘ಸೆವೆನ್‌ ಕೌಂಟೀಸ್‌ ಸರ್ವೀಸಸ್‌’ ಈಗ ಹೊಸ ಚಿಕಿತ್ಸಕ­ರನ್ನು ನೇಮಕ ಮಾಡಿಕೊಳ್ಳುತ್ತಿದೆ. ಪ್ರತಿ ಎರಡು ವಾರಗಳಿಗೊಮ್ಮೆಯಾದರೂ ಹಾಲ್‌ ಭೇಟಿ­ಯಾಗಲು ಸಾಧ್ಯವಾಗುತ್ತದೆ ಎಂದು ರೆಡೆಲ್‌  ಆಶಿಸುತ್ತಾರೆ.

ವೈದ್ಯರನ್ನು ಭೇಟಿಯಾಗಲು ರೋಗಿಗಳು ತಿಂಗಳುಗಟ್ಟಲೇ ಕಾಯುವುದನ್ನು ತಪ್ಪಿಸಲು ಸಮೂಹ ಚಿಕಿತ್ಸೆ ತೆಗೆದುಕೊಳ್ಳುವಂತೆ ‘ಸೆವೆನ್‌ ಕೌಂಟೀಸ್‌’ ಒತ್ತಾಯಿಸುತ್ತಿದೆ. ಅಲ್ಲಾದರೆ ಕಾಯು­ವುದು ಬೇಕಿಲ್ಲ. ರೆಡೆಲ್‌  ವಾರಕ್ಕೊಮ್ಮೆ ನಡೆಸುವ ‘ಮಹಿಳಾ ಸಬಲೀಕರಣ’ ಕಾರ್ಯಕ್ರಮದಲ್ಲಿ ಹಾಲ್‌, ಇತರ ನಾಲ್ಕು ಮಹಿಳೆಯರ ಜತೆ ಕುಳಿತು ಚರ್ಚೆ­ಯಲ್ಲಿ ಭಾಗಿಯಾಗಿದ್ದಳು. ಹಿಂಸೆಯಿಂದ ಕೂಡಿದ ಸಂಬಂಧ, ಅತಿಯಾಗಿ ತಿನ್ನುವುದು, ವಯಸ್ಸಾಗುವುದರ ಬಗ್ಗೆ ಹಳಹಳಿಕೆ ಇತ್ಯಾದಿಗಳ ಬಗ್ಗೆ ಚರ್ಚಿಸುವಾಗ ಆಕೆ ಮಾತನಾಡದೇ ಸುಮ್ಮನೇ ಕುಳಿತಿದ್ದಳು.

ಕಳೆದ ವಾರ ಕೊನೆಗೂ ಆಕೆ ರೆಡೆಲ್‌  ಕಚೇ­ರಿಗೆ ಬಂದಳು. ತನ್ನ ಕಷ್ಟ ಹೇಳಿಕೊಳ್ಳುವಾಗ ಆಕೆಯ ಕೈ ನಡುಗುತ್ತಿತ್ತು. ತನ್ನನ್ನು ಫ್ಲ್ಯಾಟ್‌­ನಿಂದ ಹೊರಹಾಕುವ ಬಗ್ಗೆ ಮನೆಯವರಿಗೆ ತಿಳಿ­ದಲ್ಲಿ ಬಾಯಿಗೆ ಬಂದಂತೆ ಬಯ್ಯುತ್ತಾರೆ ಎಂಬ ಆತಂಕ ಆಕೆಗಿತ್ತು. ರೆಡೆಲ್‌  ಸಲಹೆಯಂತೆ ಕೆಲ ದಿನಗಳ ಕಾಲ ಅವರನ್ನು ಸಂಪರ್ಕಿಸದಿರಲು ಆಕೆ ನಿರ್ಧರಿಸಿದಳು. ತನಗೆ ಹೊಸ ಮನೆ ಸಿಗಲಿಕ್ಕಿಲ್ಲ ಎಂಬ ಆತಂಕವೂ ಆಕೆಗಿತ್ತು. ಆದರೆ, ರೆಡೆಲ್‌ ಆಕೆಯ ಬಳಿ ಭರವಸೆ ಹುಟ್ಟಿಸುವಂತಹ ಮಾತನಾಡಿ­ದರು. ‘ನಿನಗೆ ಭದ್ರತೆ ಹಾಗೂ ನಿರಂತರ ಆದಾಯ ನೀಡುವಂತಹ ಕೆಲಸಕ್ಕೆ ನೀನು ಸೇರಿ­ಕೊಳ್ಳುತ್ತಿರುವೆ. ಎಂತಹದ್ದೇ ಪರಿಸ್ಥಿತಿ­ಯಲ್ಲೂ ನೀನು ಎದ್ದುಬರುವಂತಹ ವ್ಯಕ್ತಿ’ ಎಂದು ಉತ್ಸಾಹ ತುಂಬಿದರು.

45 ನಿಮಿಷ ಹೇಗೆ ಕಳೆಯಿತು ಎಂಬುದೇ ತಿಳಿ­ಯಲಿಲ್ಲ. ಎರಡು ವಾರಗಳ ನಂತರ ಮತ್ತೊಮ್ಮೆ ಭೇಟಿಯಾಗುವಂತೆ ರೆಡೆಲ್‌ ತಿಳಿಸಿದರು.  ಮೆಡಿಕೇಡ್‌, ಕೇಸ್‌ವರ್ಕರ್‌ಗೆ ಹೆಚ್ಚು ಸಂಭಾವನೆ ನೀಡಿದಲ್ಲಿ ಮನೆ ಹುಡುಕುವಂತಹ ಕೆಲಸದಲ್ಲಿ   ನೆರವಾಗಲು  ಸಾಧ್ಯವೇ ಎಂದು  ಅವನನ್ನು ವಿಚಾರಿಸುವುದಾಗಿ  ಭರವಸೆ  ನೀಡಿದರು. ಸಮಾಲೋಚನೆ  ನಡೆಸಿ ಎದ್ದಾಗ, ‘ನಿನಗೆ ಈಗ ಹೇಗೆನಿಸುತ್ತಿದೆ’ ಎಂದು ರೆಡೆಲ್‌  ಪ್ರಶ್ನಿಸಿ­ದರು. ‘ನಾನು ಹುಷಾರಾಗುತ್ತೇನೆ’ ಎಂದು ಆತ್ಮ­ವಿಶ್ವಾಸದಿಂದಲೇ ಮೇಲೆದ್ದಳು ಹಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.