ADVERTISEMENT

ವಿಷ್ಣು ಮಂಜಿನ ಗಡ್ಡೆ ಗುರಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2014, 19:30 IST
Last Updated 19 ಜುಲೈ 2014, 19:30 IST
ವಿಷ್ಣು ಮಂಜಿನ ಗಡ್ಡೆ ಗುರಿ
ವಿಷ್ಣು ಮಂಜಿನ ಗಡ್ಡೆ ಗುರಿ   

ಶಿಮ್ಲಾದಲ್ಲಿ ಹಾಡಿನ ಚಿತ್ರೀಕರಣ ಮುಗಿದ ಮೇಲೆ ವಿಷ್ಣು ಉತ್ಸಾಹ ಇನ್ನೂ ಬತ್ತಿರಲಿಲ್ಲ. ಅಲ್ಲಿ ತುಂಬಾ ಮಂಜಿನಗಡ್ಡೆ ಇತ್ತು. ನನ್ನನ್ನು, ಭಾರತಿಯವರನ್ನು ಸಂಜೆ ಬರುವಂತೆ ಮೊದಲೇ ಆಹ್ವಾನಿಸಿದ್ದ. ಎಲ್ಲಿಗೆ ಕರೆದುಕೊಂಡು ಹೋಗುತ್ತಾನೋ ಎಂಬ ಕುತೂಹಲದಿಂದ ನಾವು ಹೋದರೆ, ಅವನು ಕರೆದದ್ದು ಆಟ ಆಡಲು ಎಂದು ತಿಳಿದು ಸೋಜಿಗವಾಯಿತು. ಮಂಜಿನ ಗಡ್ಡೆಯನ್ನು ಉಂಡೆ ಮಾಡಿ ಗುರಿ ಇಟ್ಟು ನನ್ನ ಹಣೆಗೆ ಹೊಡೆಯುವುದಾಗಿ ಅವನು ಹೇಳಿದಾಗ, ಬೇಡ ಎಂದು ಹೇಳಲು ಮನಸ್ಸಾಗಲಿಲ್ಲ. ಬೇಡ ಎಂದಿದ್ದರೂ ಅವನು ಬಿಡುತ್ತಿರಲಿಲ್ಲ. ಅವನ ಮನಸ್ಸಿಗೆ ಯಾವುದಾದರೂ ಸಾಹಸ ಮಾಡಬೇಕು ಎನಿಸಿಬಿಟ್ಟರೆ ಮುಗಿಯಿತು.

ಆಟ ಶುರುವಾಯಿತು. ಒಂದಿಷ್ಟು ಗಾವುದ ಮುಂದಕ್ಕೆ ಹೋಗುವಂತೆ ನನಗೆ ಸೂಚಿಸಿದ. ನಾನು ಹೆಜ್ಜೆ ಹಾಕತೊಡಗಿದೆ. ಕೆಲವು ನಿಮಿಷಗಳ ನಂತರ ಹಿಂದೆ ತಿರುಗಿ ನೋಡಿದೆ. ಏನೂ ಕಾಣಲಿಲ್ಲ. ವಿಷ್ಣು ಎಲ್ಲಿದ್ದಾನೆ ಎಂದು ನನ್ನ ಕಣ್ಣು ಹುಡುಕುವಷ್ಟರಲ್ಲಿ ದೊಡ್ಡ ಬಿಳಿ ಚೆಂಡೊಂದು ಬಂದು ಹಣೆಯ ಮಧ್ಯಭಾಗಕ್ಕೆ ಅಪ್ಪಳಿಸಿತು. ಜೋರು ಪೆಟ್ಟು ಬಿದ್ದಂತಾಗಿ ಕತ್ತಲು ಕವಿಯಿತು. ತಕ್ಷಣಕ್ಕೆ ಏನೂ ಕಾಣಲಿಲ್ಲ. ಮೈಯೆಲ್ಲಾ ಜುಂ ಎಂದಿತು. ಅಲ್ಲೇ ಕುಸಿದು ಕೂತೆ. ಭಾರತಿ, ವಿಷ್ಣು ಇಬ್ಬರೂ ನನ್ನ ಹತ್ತಿರ ಬಂದದ್ದು ಅವರ ಮಾತಿನಿಂದಷ್ಟೇ ಗೊತ್ತಾದದ್ದು. ‘ನಿಮ್ಮದೆಲ್ಲಾ ಬರೀ ಇಂಥ ಹುಡುಗಾಟವೇ ಆಯಿತು. ಪಾಪ, ಬಾಬು ಹಣೆಗೆ ಹೇಗೆ ಪೆಟ್ಟು ಬಿದ್ದಿದೆ ನೋಡಿ’ ಎಂದು ಭಾರತಿ ವಿಷ್ಣುವನ್ನು ತರಾಟೆಗೆ ತೆಗೆದುಕೊಂಡರು. ಹಣೆಗೆ ಪೆಟ್ಟು ಬಿದ್ದ ಜಾಗದಲ್ಲಿ ನೀಲಿಗಟ್ಟಿದ್ದನ್ನು ನೋಡಿ ವಿಷ್ಣು ಕೂಡ ನೊಂದುಕೊಂಡ. ತಕ್ಷಣ ಭಾರತಿ ತಮ್ಮ ಕರ್ಚೀಫಿಗೆ ಏನನ್ನೋ ಹಾಕಿಕೊಂಡು ಹಣೆ ಮೇಲಿಟ್ಟರು. ತಣ್ಣಗೆ ಆಗಿ, ಹಿತವೆನಿಸಿತು.

ಕಣ್ಣು ಬಿಟ್ಟ ಮೇಲೆ ವಿಷ್ಣು ನಡೆದ ಘಟನೆಯನ್ನು ಬಣ್ಣಿಸಿದ. ನಾನು ಅಲ್ಲಿಗೆ ಹೋಗುವ ಹದಿನೈದು ನಿಮಿಷ ಮುಂಚೆಯೇ ವಿಷ್ಣು ಮಂಜಿನಗಡ್ಡೆಯನ್ನು ಚೆಂಡಿನಂತೆ ಉಂಡೆ ಮಾಡಿ ಇಟ್ಟಿದ್ದ. ಅದು ವಿಪರೀತ ಗಟ್ಟಿಯಾಗಿದ್ದರಿಂದ ನನ್ನ ಹಣೆಗೆ ತಗುಲಿದಾಗ ಅಷ್ಟು ಜೋರು ಪೆಟ್ಟು ಬಿತ್ತು. ಆ ದಿನ ರಾತ್ರಿ ಅವನು ಪದೇಪದೇ ‘ಸಾರಿ ಕಣೋ, ನಮ್ಮಿಬ್ಬರ ಮಧ್ಯೆ ದ್ವೇಷವೇನೂ ಇಲ್ಲ. ತಪ್ಪು ತಿಳಿಯಬೇಡ’ಎಂದು ಅಲವತ್ತುಕೊಂಡ. ಏನೂ ಆಗಿಲ್ಲ, ಯೋಚಿಸಬೇಡ ಎಂದು ನಾನು ಸಮಾಧಾನ ಮಾಡಿದೆ. ನನಗೆ ಪೆಟ್ಟಾದದ್ದೇನೋ ನಿಜ. ಆದರೆ ಆ ಆಟದಲ್ಲೂ ವಿಷ್ಣು ಗುರಿ ತಪ್ಪಿರಲಿಲ್ಲ. ವಿಷ್ಣು ಮಾಡಿದ ಇಂಥ ಅನೇಕ ಚೇಷ್ಟೆಗಳನ್ನು ನಾನು ಅನುಭವಿಸಿದ್ದೇನೆ, ಕೆಲವು ಚೇಷ್ಟೆಗಳಲ್ಲಿ ಪಾಲುದಾರನೂ ಆಗಿದ್ದೇನೆ!
* * *

ಸ್ನೇಹದ ವಿಷಯದಲ್ಲಿ ವಿಷ್ಣು ಚೂಸಿ. ವ್ಯವಹಾರಸ್ಥರನ್ನು ಎಲ್ಲಿಡಬೇಕೋ ಅಲ್ಲಿ ಇಡುತ್ತಿದ್ದ. ಅನುಕೂಲಸಿಂಧುಗಳಿಂದ ಎಷ್ಟು ಅಂತರ ಕಾಪಾಡಿಕೊಳ್ಳಬೇಕು ಎನ್ನುವುದೂ ಅವನಿಗೆ ಗೊತ್ತಿತ್ತು. ಎಷ್ಟೋ ಜನರಿಗೆ ನನ್ನ ಹಾಗೂ ಅವನ ನಡುವೆ ಇದ್ದ ಸ್ನೇಹ ಅಚ್ಚರಿಯ ಸಂಗತಿಯಾಗಿತ್ತು. ‘ಅದು ಹೇಗೆ ಅವರು ನಿಮಗೆ ಅಷ್ಟು ಕ್ಲೋಸ್ ಆದರು?’ ಎಂದು ಅನೇಕರು ಕೇಳುತ್ತಿದ್ದರು. ಅವನ ಚೇಷ್ಟೆ ಬೆರೆತ ಸ್ನೇಹವನ್ನು ಸಹಿಸಿಕೊಂಡ ಅದೃಷ್ಟ ನನ್ನದಾಗಿತ್ತು.

ಒಮ್ಮೆ ಹೋಟೆಲ್‌ ಒಂದರಲ್ಲಿ ಟೀ ಕುಡಿಯುತ್ತಾ ಇದ್ದೆವು. ಅಷ್ಟು ಹೊತ್ತಿಗೆ ಅಲ್ಲಿಗೆ ಎಳನೀರು ಬಂತು. ನನಗೆ ಎಳನೀರು ಕುಡಿಯಬೇಕು ಎನ್ನಿಸಿ, ತೆಗೆದುಕೊಂಡೆ. ನಾನು ಟೀ ಕುಡಿದು ಮುಗಿಸಿ ಸ್ವಲ್ಪ ಸಮಯವಷ್ಟೇ ಆಗಿತ್ತು. ವಿಷ್ಣು ಕೈಯಲ್ಲಿ ಮಾತ್ರ ಟೀ ಲೋಟ ಹಾಗೆಯೇ ಇತ್ತು. ಅವನು ಇನ್ನೂ ಅದನ್ನು ಕುಡಿಯುತ್ತಿದ್ದ. ನಾನು ಎಳನೀರು ಕುಡಿಯಲು ಮುಂದಾದೆ. ಸ್ವಲ್ಪವಷ್ಟೇ ಕುಡಿದಿರಬೇಕು, ವಿಷ್ಣು ತಡೆದು ಆ ಎಳನೀರಿನ ಬುರುಡೆಯನ್ನು ಇಸಿದುಕೊಂಡ. ಲೋಟದಲ್ಲಿದ್ದ ಟೀಯನ್ನು ಅದರೊಳಗೆ ಬಗ್ಗಿಸಿದ. ‘ತಗೋ ಕುಡಿ’ ಅಂತ ನನಗೆ ಕೊಟ್ಟ. ದೂರದಿಂದಲೇ ಅದರ ವಾಸನೆ ವಿಚಿತ್ರವಾಗಿತ್ತು. ಅದನ್ನು ಕುಡಿಯುವುದಾದರೂ ಹೇಗೆ? ಬಡಪೆಟ್ಟಿಗೆ ಬಿಡುವವನು ಅವನಾಗಿರಲಿಲ್ಲ. ‘ಸ್ವೇರ್ ಆನ್ ಮಿ’ ಎಂದು ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿದ. ದೇವರ ಮೇಲೆ ಭಾರ ಹಾಕಿ ಹೇಗೋ ಎಳನೀರು ಬುರುಡೆಯನ್ನು ಎತ್ತಿದೆ. ಒಂದೆರಡು ಗುಟುಕನ್ನು ಕಷ್ಟಪಟ್ಟು ಕುಡಿದ ಮೇಲೆ ನನ್ನನ್ನು ಮತ್ತೆ ತಡೆದು ನಿಲ್ಲಿಸಿದ. ಬುರುಡೆಯಲ್ಲಿ ಇದ್ದ ಮಿಕ್ಕ ಎಳನೀರು ಮಿಶ್ರಿತ ಟೀಯನ್ನು ಅವನು ಒಂದೇ ಗುಟುಕಿಗೆ ಕುಡಿದ! ನಾನು ಶಿವ ಶಿವಾ ಎನ್ನುತ್ತಾ ಕಷ್ಟಪಟ್ಟು ಕುಡಿಯುತ್ತಿದ್ದ ಆ ವಿಚಿತ್ರ ಮಿಶ್ರಣವನ್ನು ಅವನು ಹಾಗೆ ಕುಡಿದದ್ದನ್ನು ನೋಡಿ ಆಶ್ಚರ್ಯವಾಯಿತು. ಸ್ವಲ್ಪ ಹೊತ್ತಿನಲ್ಲೇ ಅಲ್ಲಿಗೆ ಇನ್ನೆರಡು ಎಳನೀರು ಬಂದವು. ಎಲ್ಲಿ ಅವು ವಿಷ್ಣು ಕಣ್ಣಿಗೆ ಬೀಳುತ್ತವೆಯೋ ಎಂದು ಹೆದರಿ, ಅವನ್ನು ಎತ್ತಿಕೊಂಡು ಅಲ್ಲಿಂದ ಹೋಗಿಬಿಟ್ಟೆ. ಅವನು ಕುಳಿತಲ್ಲಿಯೇ ನಗುತ್ತಾ ಇದ್ದ.
* * *

ಬೆಂಗಳೂರಿನಲ್ಲಿ ಆಗಾಗ ರಾತ್ರಿ ಊಟಕ್ಕೆ ಹೊರಗೆ ಹೋಗುವುದು ನಮ್ಮ ಅಭ್ಯಾಸವಾಗಿತ್ತು. ವಿಷ್ಣು, ಭಾರತಿ, ಅಂಬಿ, ನಾನು ರುಚಿಕಟ್ಟಾದ ಹೋಟೆಲ್‌ಗಳಿಗೆ ಹೋಗುವುದರಲ್ಲಿ ನಿಸ್ಸೀಮರಾಗಿದ್ದೆವು. ಒಮ್ಮೆ ಎಂ.ಜಿ. ರಸ್ತೆಯ ಪಂಚತಾರಾ ಹೋಟೆಲ್‌ನಲ್ಲಿ ವಿಷ್ಣು ಇಷ್ಟದ ಚೀನೀ ಊಟ ಮುಗಿಸಿಕೊಂಡು ಹೊರಗೆ ಬಂದೆವು. ಅದಕ್ಕೂ ಮೊದಲು ಒಂದು ಸಮಾರಂಭಕ್ಕೆ ಹೋಗಿ ಅಲ್ಲಿಯೂ ಊಟದ ಶಾಸ್ತ್ರ ಮಾಡಿ ಬಂದಿದ್ದೆವು. ರಾತ್ರಿ ಸುಮಾರು ಹತ್ತು ಗಂಟೆಯ ಸಮಯ. ವಿಷ್ಣುವಿಗೆ ಬೀಡ ತಿನ್ನುವ ಆಸೆಯಾಯಿತು. ಆಗ ಜರದಾ ಬೀಡ ಬಹಳ ಫೇಮಸ್. ನಾನು ಸ್ವೀಟ್ ಬನಾರಸಿ ಪಾನ್ ಹೇಳಿದೆ. ವಿಷ್ಣು, ಭಾರತಿ ಕೂಡ ಬೀಡ ಹಾಕಿಕೊಂಡರು. ಬೀಡ ತಿಂದ ಮೇಲೆ ನನಗೆ ಅದು ಏನೋ ಒಂದು ತರಹ ಬೇರೆ ರುಚಿ ಇದೆ ಅನ್ನಿಸಿತು. ಸ್ವಲ್ಪ ಹೊತ್ತಿನಲ್ಲೇ ನಿಲ್ಲಲು ಆಗಲಿಲ್ಲ. ಹತ್ತಿರದಲ್ಲೇ ಇದ್ದ ಹೋಟೆಲ್ನ ಬಾತ್‌ರೂಮ್‌ಗೆ ಹೋದೆ. ತಡೆಯಲಾಗದೆ ವಾಂತಿ ಮಾಡಿಬಿಟ್ಟೆ. ತಲೆ ಗಿರ್ರೆಂದು ತಿರುಗುತ್ತಿರುವಂತೆ ಭಾಸವಾಯಿತು. ವಿಷ್ಣು ಹತ್ತಿರ ಬಂದು, ‘ಏನಾಯಿತು?’ ಎಂದು ಕ್ಷೇಮ ವಿಚಾರಿಸಿದ.

ತಲೆ ಗಿರ್ರೆನ್ನುತ್ತಿರುವ ವಿಷಯ ತಿಳಿಸಿದಾಗ, ಸ್ವೀಟ್ ಬನಾರಸಿ ಬದಲು ೫೦೦ ಜರದಾ ಹಾಕಿಸಿದ್ದಾಗಿ ಹೇಳಿದ. ಆಮೇಲೆ ಐದಾರು ಸಲ ವಾಂತಿಯಾಯಿತು. ವಿಷ್ಣು ಕಾರಿನಲ್ಲಿ ತೊಡೆಯ ಮೇಲೆ ಮಲಗಿಸಿಕೊಂಡು ಜಯನಗರದ ತನ್ನ ಮನೆಗೆ ಕರೆದುಕೊಂಡು ಹೋದ. ಅವನೇ ಹಾಸಿಗೆ ಹಾಸಿ, ಮಲಗಿಸಿದ. ಅವನ ತಾಯಿ, ‘ಏನಾಯಿತೋ ಕುಮಾರ, ಬಾಬುವಿಗೆ; ಅಷ್ಟು ಸಂಕಟ ಪಡುತ್ತಿದ್ದಾನೆ?’ ಎಂದು ವಿಚಾರಿಸಿಕೊಂಡರು. ನನ್ನ ಕೈಕಾಲು ತಣ್ಣಗೆ ಆಗಿಬಿಟ್ಟಿತ್ತು. ತಮಾಷೆ ಮಾಡಲು ಹೋಗಿ ಹೀಗಾಯಿತಲ್ಲಾ ಎಂದು ವಿಷ್ಣುವಿಗೆ ಚಡಪಡಿಕೆ ಶುರುವಾಗಿತ್ತು. ಅವತ್ತಿನಿಂದ ಎರಡು ದಿನ ನನಗೆ ಬೆಡ್‌ರೆಸ್ಟ್. ಅವನೂ ನನ್ನನ್ನು ಬಿಟ್ಟು ಎಲ್ಲಿಯೂ ಹೋಗಲಿಲ್ಲ.
ಅಲ್ಲಿಂದಾಚೆಗೆ ಯಾವಾಗ ವಿಷ್ಣು ಬೀಡ ಕೊಡಿಸಿದರೂ, ಅದನ್ನು ಬಿಚ್ಚಿ ಒಳಗೆ ಏನಿದೆ ಎಂದು ನೋಡಿಕೊಂಡು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡೆ.
* * *

ವಿಷ್ಣುವಿಗೆ ಯಾರೂ ದಾನಶೂರ ಕರ್ಣ ಎಂದು ಬಿರುದು ಕೊಟ್ಟಿಲ್ಲ. ಅದನ್ನು ವಿಷ್ಣು ಎಂದೂ ಬಯಸಿರಲಿಲ್ಲ. ‘ಈ ಕೈಲಿ ಕೊಟ್ಟದ್ದು ಆ ಕೈಗೆ ಗೊತ್ತಾಗಬಾರದು’ ಎನ್ನುವ ನಾಣ್ಣುಡಿಯೊಂದು ನಮ್ಮಲ್ಲಿ ಇದೆ. ವಿಷ್ಣು ಅದನ್ನು ಪಾಲಿಸುವಂತೆಯೇ ಬದುಕಿದ್ದು. ನಲವತ್ತು ವರ್ಷಗಳ ನಮ್ಮ ಸ್ನೇಹದಲ್ಲಿ ಸಹಾಯ ಮಾಡುವ ಅವನ ಗುಣವನ್ನು ನಾನು ಚೆನ್ನಾಗಿಯೇ ಬಲ್ಲೆ. ಆದರೆ ಎಂದೂ ಅವನು ಅದನ್ನು ಬೇರೆಯವರಲ್ಲಿ ಹೇಳಿಕೊಳ್ಳಲು ಇಷ್ಟಪಡುತ್ತಿರಲಿಲ್ಲ.

ಒಮ್ಮೆ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಬಡ ಕುಟುಂಬವೊಂದು ಬಂದು ವಿಷ್ಣುವಿನಲ್ಲಿ ಸಹಾಯ ಕೇಳಿತು. ಸುಮ್ಮನೆ ಜೇಬಿನಿಂದ ನೂರು ರೂಪಾಯಿ ತೆಗೆದು ಕೊಡುವುದು ವಿಷ್ಣುವಿಗೆ ಕಷ್ಟವೇನೂ ಆಗಿರಲಿಲ್ಲ. ಅವನು ಹಾಗೆ ಮಾಡದೆ, ಆ ಕುಟುಂಬದ ಎಲ್ಲರ ಕಷ್ಟಗಳನ್ನೂ ಕೇಳಿಸಿಕೊಂಡ. ಅವರು ಹೇಳಿದ್ದನ್ನು ಸುಮ್ಮನೆ ನಂಬದೆ ಒಂದಿಷ್ಟು ಪ್ರಶ್ನೆಗಳನ್ನು ಹಾಕಿದ. ಒಂದಾದ ಮೇಲೆ ಒಂದು ಪ್ರಶ್ನೆಯಂತೆ ಕೇಳುತ್ತಲೇ ಇದ್ದ.

ಒಂದು ಹಂತದಲ್ಲಿ ಆ ಕುಟುಂಬ ಹಾಗೂ ವಿಷ್ಣು ನಡುವೆ ಸಂವಾದವೇ ನಡೆಯಲಾರಂಭಿಸಿತು. ಅಲ್ಲಿದ್ದ ಕೆಲವರಿಗೆ ವಿಷ್ಣು ಜಿಗುಟು ಮನುಷ್ಯ ಎನಿಸಿತು. ‘ನೂರು ರೂಪಾಯಿ ಕೊಟ್ಟು ಸಾಗಹಾಕಲು ಇಷ್ಟು ಮಾತನಾಡಬೇಕೆ?’ ಎಂದೆಲ್ಲಾ ಗೊಣಗಿಕೊಂಡರು. ಅವರ ಗೊಣಗಾಟ ಕಿವಿಗೆ ಬಿದ್ದಮೇಲೆ ನನಗೆ ಸುಮ್ಮನಿರಲು ಆಗಲಿಲ್ಲ. ನೂರು ರೂಪಾಯಿ ಕೊಡಲು ಇಷ್ಟೆಲ್ಲಾ ಯಾಕೆ ಕ್ರಾಸ್‌ ಕ್ವೆಶ್ಚನ್‌ ಎಂದು ಕೇಳಿಯೇಬಿಟ್ಟೆ.
‘ನೀನು ಸುಮ್ಮನೆ ಇರು. ಸತ್ಯ ಏನು ಎಂದು ಗೊತ್ತಾಗದೆ ಸುಮ್ಮನೆ ಹಣ ಕೊಡಬಾರದು. ಈಗ ನಾನು ಹಣ ಕೊಟ್ಟರೆ ಅದನ್ನು ಯಾವುದೋ ಚಟ ತೀರಿಸಿಕೊಳ್ಳಲು ಬಳಸಿಕೊಂಡರೆ ಅವರ ಕಷ್ಟ ಬಗೆಹರಿಯುವುದಿಲ್ಲ. ಅವರಿಗೆ ನಿಜಕ್ಕೂ ಏನು ಅಗತ್ಯವಿದೆಯೋ ಅದನ್ನೇ ನಾವು ಕೊಡಬೇಕು. ಹಣ ಕೊಟ್ಟರೆ ಅದನ್ನು ಕುಡಿತಕ್ಕೋ ಮತ್ಯಾವುದಕ್ಕೋ ಖರ್ಚು ಮಾಡಿದರೆ ಆ ಕುಟುಂಬದವರ ಹೊಟ್ಟೆ ತುಂಬಲು ಹೇಗೆ ಸಾಧ್ಯ’ ಎಂದು ಮರುಪ್ರಶ್ನೆ ಹಾಕಿದ. ಆ ಕುಟುಂಬದವರಿಗೆ ಎರಡು ತಿಂಗಳಿಗೆ ಆಗುವಷ್ಟು ದಿನಸಿ ಸಾಮಾನು ಖರೀದಿಸಿ ಕೊಡುವುದಾಗಿ ತಿಳಿಸಿದ. ಅವರು ಒಪ್ಪದೆ ವಿಧಿಯೇ ಇರಲಿಲ್ಲ. ಆಟೊವೊಂದಕ್ಕೆ ದಿನಸಿ ಸಾಮಾನುಗಳನ್ನು ಹಾಕಿಸಿ, ಅವರ ಮನೆ ತಲುಪಿಸಲು ಎಷ್ಟು ಬೇಕೋ ಅಷ್ಟು ಹಣ ಕೊಟ್ಟು ಕಳುಹಿಸಿದ. ಹಾಗೆ ಮಾಡುವುದರಿಂದ ಎರಡು ತಿಂಗಳ ನಂತರ ಅವರ ಪರಿಸ್ಥಿತಿ ಸುಧಾರಿಸಬಹುದು ಎಂದು ವಿಷ್ಣು ನಂಬಿದ್ದ. ಅವನಿಂದ ಸಹಾಯ ಪಡೆದ ಎಷ್ಟೋ ಜನರ ಬದುಕು ಆಮೇಲೆ ಸುಧಾರಿಸಿದ್ದೂ ಹೌದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.