ADVERTISEMENT

ಚುರುಮುರಿ: ಚುನಾವಣಾ ಗೇಮ್

ಚುರುಮುರಿ

ಸುಮಂಗಲಾ
Published 14 ಏಪ್ರಿಲ್ 2024, 19:12 IST
Last Updated 14 ಏಪ್ರಿಲ್ 2024, 19:12 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

‘ನೋಡಿಲ್ಲಿ… ನಮ್‌ ಹೇಮಕ್ಕ ರೈತಾಪಿ ಹೆಣ್‌ಮಕ್ಕಳ ಜತಿಗೆ ಸೇರಿ ಬೆಳೆ ಕಟಾವು ಮಾಡಾಕೆ ಹತ್ಯಾಳೆ…’ ರೇಷ್ಮೆ ಸೀರೆಯುಟ್ಟು ಮಿರಮಿರನೆ ಮಿಂಚುತ್ತ ಹೊಲದೊಳಗೆ ಗೋಧಿಯ ಫಸಲು ಹಿಡಿದು ನಿಂತಿದ್ದ ಹೇಮಾಮಾಲಿನಿಯ ಫೋಟೊ ತೋರಿಸಿ, ಬೆಕ್ಕಣ್ಣ ಖುಷಿಯಿಂದ ಬಡಬಡಿಸಿತು.

‘ಆಕಿ ಕುಡಗೋಲು ಹಿಡಕೊಂಡು, ಎರಡೂ ಕೈಯಲ್ಲಿ ಗೋಧಿ ಬೆಳೆ ಹಿಡಿದು ಪೋಸ್ ಕೊಟ್ಟಿದ್ದು ನೋಡಿದರೆ ಗೊತ್ತಾಗತೈತಿ ಆಕಿ ಕೊಯ್ದಿಲ್ಲ, ಹೆಣ್‌ಮಕ್ಕಳು ಕೊಯ್ದಿಟ್ಟಿದ್ದನ್ನು ಈಕಿ ಕೈಯಾಗೆ ಹಿಡಿದು ನಿಂತಾಳೆ ಅಂತ. ಐದು ವರ್ಷದ ಹಿಂದೆನೂ ಚುನಾವಣೆ ಪ್ರಚಾರದ ಟೈಮಿನಾಗೆ ಹಿಂಗೇ ಪೋಸ್ ಕೊಟ್ಟಿದ್ದಳು’ ಎಂದು ಹಿಂದಿನ ಫೋಟೊ ತೋರಿಸಿದೆ.

ADVERTISEMENT

ಮೂತಿ ಉಬ್ಬಿಸಿ, ಮೊಬೈಲಿನಲ್ಲಿ ಮುಖ ಹುದುಗಿಸಿದ ಬೆಕ್ಕಣ್ಣ ಐದೇ ನಿಮಿಷದಲ್ಲಿ ‘ಗೆದ್ದೆ… ಗೆದ್ದೆ’ ಎಂದು ಹರ್ಷೋದ್ಗಾರ ಮಾಡಿತು.

‘ಕೆಲಸ ಮಾಡೂದು ಬಿಟ್ಟು ವಿಡಿಯೊ ಗೇಮ್‌ ಆಡತೀಯೇನು’ ಎಂದು ನಾನು ಬೈಯ್ದಿದ್ದು ಬೆಕ್ಕಣ್ಣನ ಬಾಲಕ್ಕೂ ಮುಟ್ಟಲಿಲ್ಲ!

‘ಸುಮ್‌ ಸುಮ್ನೆ ನನಗ ಬೈಯಬ್ಯಾಡ. ನಮ್‌ ಮೋದಿಮಾಮನೇ ವಿಡಿಯೊ ಗೇಮ್‌ ಆಡೂದು ಕಲ್ತಾನೆ. ನೋಡಿಲ್ಲಿ… ನಮ್‌ ದೇಶದ ಟಾಪ್‌ ಗೇಮರ್‌ ಹುಡುಗ್ರ ಜೊತಿಗಿ ಕುಂತು ಎಷ್ಟ್‌ ಚಂದ ಮಾತುಕತೆ, ಆಟ ಎಲ್ಲ ನಡಸ್ಯಾನೆ! ಮೋದಿಮಾಮ ಆಡೂದು ನೋಡಿದ್ರ ಅಂವಾ ನೂಬ್ ಅಲ್ಲ, ಭಯಂಕರ ಎಕ್ಸ್‌ಪರ್ಟ್ ಅನ್ನಿಸತೈತಿ’ ಎಂದು ಗೇಮರ್‌ಗಳ ಜೊತೆಗೆ ಮೋದಿಮಾಮ ಕುಂತು ಮಾತನಾಡಿ, ಗೇಮ್‌ ಆಡಿದ ವಿಡಿಯೊ ತೋರಿಸಿತು.

‘ಮಣಿಪುರದವ್ರ ಜೊತೆಗಾಗಲೀ ಪ್ರತಿಭಟನೆ ನಡೆಸ್ತಿದ್ದ ರೈತರ ಜೊತೆಗಾಗಲೀ ಲಡಾಕ್‌ ಉಳಿಸಾಕೆ ಹೋರಾಟ ಮಾಡ್ತಿರೋ ಸೋನಂ ವಾಂಗ್ಚುಕ್‌ ಜೊತೆಗಾಗಲೀ ಇಷ್ಟ್‌ ಸಾವಧಾನದಿಂದ ಮಾತುಕತೆ ನಡೆಸಿದ್ದರೆ ಎಷ್ಟ್‌ ಸಮಸ್ಯೆ ಬಗೆಹರಿತಿದ್ವಲ್ಲ’ ಎಂದೆ.

‘ಇದೆಲ್ಲ ಆಂದೋಲನವಾದಿಗಳ ಸಮಸ್ಯೆ ಅಷ್ಟೆ. ಚುನಾವಣೆ ಒಳಗೆ ಇನ್ನಾ ಎಷ್ಟ್‌ ಥರದ ಜನರ ಗುಂಪಿನ ಜೊತಿಗಿ ಫೋಟೊ ಶೂಟ್‌ ಮಾಡಬಕು. ಮೋದಿಮಾಮಂಗೆ ಟೈಮೇ ಸಾಲವಲ್ದು, ಪಾಪ’ ಎಂದು ಬೆಕ್ಕಣ್ಣ ಲೊಚಗುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.