ADVERTISEMENT

ಅಂತರ ಜಲ ವಿವಾದಗಳ ಇತ್ಯರ್ಥಕ್ಕೆ ಹೊಸ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2016, 19:30 IST
Last Updated 23 ಡಿಸೆಂಬರ್ 2016, 19:30 IST
ಅಂತರ ಜಲ ವಿವಾದಗಳ ಇತ್ಯರ್ಥಕ್ಕೆ ಹೊಸ ವ್ಯವಸ್ಥೆ
ಅಂತರ ಜಲ ವಿವಾದಗಳ ಇತ್ಯರ್ಥಕ್ಕೆ ಹೊಸ ವ್ಯವಸ್ಥೆ   

ರಾಜ್ಯಗಳ ನಡುವಣ ನದಿನೀರು ಹಂಚಿಕೆಯ ಜ್ವಲಂತ ವಿವಾದಗಳ ಇತ್ಯರ್ಥಕ್ಕೆ ಶಾಶ್ವತವಾಗಿ ಒಂದೇ ನ್ಯಾಯಮಂಡಳಿ ರಚನೆ  ಮತ್ತು ಮಂಡಳಿಗೆ ಹೆಚ್ಚು ಅಧಿಕಾರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು  ಆಶಾದಾಯಕ ಬೆಳವಣಿಗೆ.  ಒಕ್ಕೂಟ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ, ರಾಜ್ಯಗಳ ಮಧ್ಯೆ ‘ಜಲ ಸಮರ’ಕ್ಕೂ ಕಾರಣವಾಗಿರುವ ನೀರು ಹಂಚಿಕೆಯ ಸಿಕ್ಕುಗಳನ್ನೆಲ್ಲ ಸರ್ವರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಪರಿಣಾಮಕಾರಿಯಾಗಿ ಬಿಡಿಸುವ ಉದ್ದೇಶದ ಈ ಹೊಸ ಉಪಕ್ರಮ ಸ್ವಾಗತಾರ್ಹ. ಅಂತರರಾಜ್ಯ ನದಿ ನೀರು ವಿವಾದಗಳ ವಿಚಾರಣೆಗೆ ‘ಹಸಿರು ಪೀಠ’ದ ಮಾದರಿಯಲ್ಲಿ ಶಾಶ್ವತ ನ್ಯಾಯಮಂಡಳಿ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಈ ಹಿಂದೆ ರಾಜಕೀಯ ಪಕ್ಷಗಳು ಮುಂದಿಟ್ಟಿದ್ದನ್ನೂ ಸ್ಮರಿಸಬಹುದು.

ನದಿ ನೀರು ಹಂಚಿಕೆ ವಿವಾದಗಳಲ್ಲಿ   ಕೃಷಿ ಆರ್ಥಿಕತೆ ಮತ್ತು ಮಾನವೀಯ ಆಯಾಮಗಳೂ ಸೇರಿಕೊಳ್ಳುವುದರಿಂದ ಈ ವಿವಾದಗಳು  ಹೆಚ್ಚು ಸಂಕೀರ್ಣ. ಅನೇಕ ಸಲ ಇಂತಹ ವಿವಾದಗಳು ವಿವಿಧ ರಾಜ್ಯಗಳ ಮಧ್ಯೆ ಅಪನಂಬಿಕೆ, ಹಿಂಸಾಚಾರಕ್ಕೂ ಎಡೆಮಾಡಿಕೊಟ್ಟಿವೆ. ಹೀಗಾಗಿ ಎಲ್ಲ ಬಣಗಳಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಬಗೆಹರಿಸುವ ವ್ಯಾಪಕ ಸುಧಾರಣಾ  ಕ್ರಮಗಳನ್ನು ಈಗ ಜಾರಿಗೆ ತರುತ್ತಿರುವುದು ಉತ್ತಮ ಬೆಳವಣಿಗೆ. ರಾಜ್ಯಗಳ ದೂರುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲೂ ಈ ಹೊಸ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದೂ  ನಿರೀಕ್ಷಿಸಬಹುದು. ರಾಜ್ಯಗಳ ದೂರುಗಳ ಪ್ರಾಥಮಿಕ ವಿಚಾರಣೆಗೆ ಜಲ ಪರಿಣತರು ಮತ್ತು ನೀತಿ ನಿರೂಪಕರನ್ನು ಒಳಗೊಂಡ ವಿವಾದ ಇತ್ಯರ್ಥ ಸಮಿತಿಯನ್ನು (ಡಿಆರ್‌ಸಿ) ಇದಕ್ಕಾಗಿ ರಚಿಸಲಾಗುತ್ತಿದೆ. ಬಹುತೇಕ ವಿವಾದಗಳನ್ನು  ಡಿಆರ್‌ಸಿ ಮಟ್ಟದಲ್ಲೇ ಇತ್ಯರ್ಥಗೊಳಿಸುವ ನಿರೀಕ್ಷೆ ಹೊಂದಿರುವಂತಹದ್ದು ಮಹತ್ವದ ಸಂಗತಿ. ಡಿಆರ್‌ಸಿ ನಿರ್ಧಾರವನ್ನು ಒಪ್ಪಿಕೊಳ್ಳದ ರಾಜ್ಯಗಳು ನ್ಯಾಯಕ್ಕಾಗಿ ನ್ಯಾಯಮಂಡಳಿಗೆ ಮೊರೆ ಹೋಗಲು ಅವಕಾಶ ಕಲ್ಪಿಸಲಾಗುತ್ತದೆ.

ಈಗ ಅಸ್ತಿತ್ವದಲ್ಲಿ ಇರುವ ನ್ಯಾಯಮಂಡಳಿಗಳ ವಿಲೀನ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಒಂದೇ ನ್ಯಾಯಮಂಡಳಿ ರಚನೆ, ಅಗತ್ಯಕ್ಕೆ ತಕ್ಕಂತೆ ಪೀಠಗಳ ಸ್ಥಾಪನೆ, ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡಲು ಮೂರು ವರ್ಷಗಳ ಕಾಲಮಿತಿ ನಿಗದಿ, ಐತೀರ್ಪು ಪ್ರಕಟವಾಗುತ್ತಿದ್ದಂತೆ ಕೇಂದ್ರದ ಮರ್ಜಿಗೂ ಕಾಯದೆ ಹೊರಬೀಳುವ ಅಧಿಸೂಚನೆ, ಪೀಠಗಳ ವಿಸರ್ಜನೆ ಮುಂತಾದವು ಜಲ ವಿವಾದಗಳಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ನೆರವಾಗಲಿವೆ. ಈ ಉದ್ದೇಶ ಸಾಕಾರಗೊಳಿಸಲು ‘ಅಂತರರಾಜ್ಯ ಜಲ ವಿವಾದ ಕಾಯ್ದೆ’ಗೆ (1956) ತಿದ್ದುಪಡಿ ತರಲು ಮಸೂದೆ ಮಂಡಿಸಲು ಕೇಂದ್ರವು ಕಾರ್ಯೋನ್ಮುಖವಾಗಿದೆ.

ADVERTISEMENT

ಕಾವೇರಿ, ಮಹಾದಾಯಿ ವಿವಾದ ಸೇರಿದಂತೆ ಒಟ್ಟು ಎಂಟು ನ್ಯಾಯಮಂಡಳಿಗಳು ಸದ್ಯಕ್ಕೆ ಅಸ್ತಿತ್ವದಲ್ಲಿವೆ. ಈ ನ್ಯಾಯಮಂಡಳಿಗಳಲ್ಲಿ ನಡೆಯುವ ವಿಚಾರಣೆ ಮತ್ತು ಅಂತಿಮ ತೀರ್ಪು ನೀಡಿಕೆಗೆ ಕಾಲಮಿತಿಯೇ ಇಲ್ಲ. ವಿವಾದಗಳನ್ನು ವಿನಾಕಾರಣ ಲಂಬಿಸಲಾಗುತ್ತಿದೆ. ಕೇಂದ್ರ ಸರ್ಕಾರವು ತನ್ನ ರಾಜಕೀಯ ಲಾಭ – ನಷ್ಟದ ಲೆಕ್ಕಾಚಾರ ಹಾಕಿ ಅಧಿಸೂಚನೆ ಹೊರಡಿಸುತ್ತದೆ ಎಂಬ ಆರೋಪಗಳಿವೆ. ತೀರ್ಪಿನ ಪುನರ್ ಪರಿಶೀಲನೆ ಕೋರಿ ಮೇಲ್ಮನವಿ ಅರ್ಜಿ ಸಲ್ಲಿಸಲೂ ಅವಕಾಶ ಇದೆ. ಇವೆಲ್ಲವೂ ಜಲ ವಿವಾದಗಳನ್ನು ಸಾಕಷ್ಟು ಗೋಜಲುಗೊಳಿಸಿವೆ. ಜತೆಗೆ ವರ್ಷಗಳ ಉದ್ದಕ್ಕೂ ಇತ್ಯರ್ಥ ಕಾಣದೆ, ವೃಥಾ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಿವೆ. ಈ ವಿಷಯದಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿರುವುದೂ ನಿಜ. ಕಾಯಂ ನ್ಯಾಯಮಂಡಳಿ ರಚಿಸಬೇಕು ಎನ್ನುವುದು ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಬಹುದಿನಗಳ ಬೇಡಿಕೆಯಾಗಿತ್ತು. ಹಲವು ರಾಜ್ಯಗಳ ವಿವಾದಗಳನ್ನು ನ್ಯಾಯಮಂಡಳಿಯೊಂದೇ ಇತ್ಯರ್ಥಪಡಿಸಬಹುದೇ? ನ್ಯಾಯಮಂಡಳಿ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದೇ? ಎನ್ನುವ ಅನುಮಾನಗಳಿಗೆ ಮಾತ್ರ ಉತ್ತರ ಸಿಕ್ಕಿಲ್ಲ. ಶಾಶ್ವತ ಏಕೈಕ ನ್ಯಾಯಮಂಡಳಿ ರಚನೆಯ ಸಾಂಸ್ಥಿಕ ವ್ಯವಸ್ಥೆಯು ಇನ್ನಷ್ಟೇ ರೂಪುಗೊಳ್ಳಬೇಕಾಗಿದೆ. ನ್ಯಾಯಮಂಡಳಿ ನೀಡುವ ತೀರ್ಪು ರಾಜ್ಯಗಳಿಗೆ ಒಪ್ಪಿಗೆಯಾಗುವುದೇ ಎನ್ನುವ ಸಂದೇಹವೂ ಇಲ್ಲಿ ಉದ್ಭವವಾಗುತ್ತದೆ.  ತೀರ್ಪು ಒಪ್ಪಿಕೊಳ್ಳಲು ರಾಜ್ಯಗಳು ಹೊಣೆಗಾರಿಕೆಯಿಂದ ವರ್ತಿಸಿ, ರಾಜಕೀಯ ಇಚ್ಛಾಶಕ್ತಿಯನ್ನೂ ಪ್ರದರ್ಶಿಸಬೇಕಾಗುತ್ತದೆ. ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರಗಳು ಮುಕ್ತ ಮನಸ್ಸು ಹೊಂದಿದ್ದರೆ ಮಾತ್ರ ಹೊಸ ವ್ಯವಸ್ಥೆ ಯಶಸ್ವಿಯಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.