ADVERTISEMENT

ಅತ್ಯಾಚಾರ ಆರೋಪಿಗಳ ರಕ್ಷಣೆ ಪ್ರಯತ್ನ: ಕುಸಿದ ನೈತಿಕತೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST
ಅತ್ಯಾಚಾರ ಆರೋಪಿಗಳ ರಕ್ಷಣೆ ಪ್ರಯತ್ನ: ಕುಸಿದ ನೈತಿಕತೆ
ಅತ್ಯಾಚಾರ ಆರೋಪಿಗಳ ರಕ್ಷಣೆ ಪ್ರಯತ್ನ: ಕುಸಿದ ನೈತಿಕತೆ   

ಎರಡು ಭೀಕರ ಅತ್ಯಾಚಾರ ಪ್ರಕರಣಗಳು ರಾಷ್ಟ್ರದ ಪ್ರಜ್ಞೆಯನ್ನು ಕಲಕಿವೆ. ಜಮ್ಮು ಬಳಿ ಕಠುವಾದಲ್ಲಿ ಜನವರಿ ತಿಂಗಳಲ್ಲಿ ಎಂಟು ವರ್ಷದ ಬಾಲೆಯನ್ನು ಅಪಹರಿಸಿ ನಡೆಸಲಾದ ಅತ್ಯಾಚಾರವು ಕೊಲೆಯಲ್ಲಿ ಅಂತ್ಯವಾಗಿದೆ. ಉತ್ತರಪ್ರದೇಶದ ಉನ್ನಾವ್‍ದಲ್ಲಿ ಕಳೆದ ವರ್ಷ ಜೂನ್ ತಿಂಗಳಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ತಂದೆ ನ್ಯಾಯಾಂಗ ಬಂಧನದಲ್ಲಿದ್ದಾಗ ಸತ್ತಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಒಂದು ಸಾಮಾನ್ಯ ಎಳೆ ಇದೆ. ಅತ್ಯಾಚಾರ ಆರೋಪಿಗಳನ್ನು ರಕ್ಷಿಸಲು ವ್ಯವಸ್ಥೆಯ ಶಕ್ತಿಗಳು, ರಾಜಕೀಯ ಹಿತಾಸಕ್ತಿಗಳು, ಅಧಿಕಾರಶಾಹಿ, ಪೊಲೀಸ್ ಹಾಗೂ ವಕೀಲರು ಮುಂದಾದಂತಹ ಬೆಳವಣಿಗೆಗಳು ಅವು. ಅತ್ಯಂತ ಕಳವಳಕಾರಿ ವಿದ್ಯಮಾನ ಇದು. ನಮ್ಮ ನಾಗರಿಕ ಸಮಾಜ ಸಾಗುತ್ತಿರುವಂತಹ ಅಧಃಪತನಕ್ಕೆ ದಿಕ್ಸೂಚಿ. ಕಠುವಾ ಸುತ್ತಮುತ್ತ ನೆಲೆಸಿದ್ದ ಬಕ್ರೆವಾಲಾ ಅಲೆಮಾರಿ ಮುಸ್ಲಿಂ ಸಮುದಾಯದ ಜನರನ್ನು ಆ ಪ್ರದೇಶದಿಂದ ಓಡಿಸುವುದಕ್ಕಾಗಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ನಡೆಸುವ ಸಂಚು ರೂಪಿಸಲಾಗಿತ್ತು ಎಂಬ ಅಂಶವಂತೂ ಆಘಾತಕಾರಿಯಾದದ್ದು. ಈ ಪುಟ್ಟ ಬಾಲೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿರುವ ರೀತಿಯ ವಿವರಗಳಲ್ಲಿ ವ್ಯಕ್ತವಾಗುವ ತಣ್ಣನೆಯ ಕ್ರೌರ್ಯ, ನಾಗರಿಕ ಸಮಾಜದಲ್ಲಿ ತಲ್ಲಣ ಮೂಡಿಸುವಂತಹದ್ದು. ಈ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರೂ ಹಣದ ಆಮಿಷಕ್ಕೊಳಗಾಗಿ ಭಾಗಿಯಾಗಿರುವುದು ನಾಚಿಕೆಗೇಡು ಮತ್ತು ತೀವ್ರ ಮಾತುಗಳಲ್ಲಿ ಖಂಡನಾರ್ಹವಾದುದು. ಸಮಾಜದಲ್ಲಿ ಕುಸಿಯುತ್ತಿರುವ ನೈತಿಕ ಮೌಲ್ಯಗಳಿಗೂ ಇದು ಪ್ರತೀಕ. ಈ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲು ವಕೀಲರು ಒಡ್ಡಿದ ತಡೆ ಹಿಂದೆ ರಾಜಕೀಯ ಹಿತಾಸಕ್ತಿಗಳು ಕೈಜೋಡಿಸಿದಂತಹ ವಿದ್ಯಮಾನ ಅರಗಿಸಿಕೊಳ್ಳಲಾಗದ ಸಂಗತಿ. ‘ಮಾಡದ ಅಪರಾಧವನ್ನು ಮುಗ್ಧ ಹಿಂದೂಗಳ ತಲೆಗಳಿಗೆ ಕಟ್ಟಲಾಗುತ್ತಿದೆ’ ಎಂದು ಆರೋಪಿಸಿ ಜಮ್ಮು ವಕೀಲರ ಸಂಘ ಈ ದಿಸೆಯಲ್ಲಿ ನಡೆಸಿದ ಪ್ರಯತ್ನ ಅಮಾನವೀಯ. ಮುಗ್ಧ ಬಾಲೆಯ ಮೇಲಿನ ಅಮಾನುಷವಾದ ಅತ್ಯಾಚಾರ ಅಪರಾಧದ ಆರೋಪಕ್ಕೆ ಕೋಮುಬಣ್ಣ ಬಳಿಯುವ ಈ ಪ್ರಯತ್ನ ಖಂಡನೀಯ. 

ಉನ್ನಾವ್ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಹಾಗೂ ಸಹಚರರು ಅತ್ಯಾಚಾರ ಆರೋಪಿಗಳಾಗಿದ್ದಾರೆ. ಆರೋಪಿಗಳ ವಿರುದ್ಧ ಅತ್ಯಾಚಾರ ದೂರು ದಾಖಲಿಸದಂತೆ ಸಂತ್ರಸ್ತೆಯನ್ನು ತಡೆಯಲು ಆಡಳಿತಯಂತ್ರ ತೋರಿರುವ ನಿಷ್ಕ್ರಿಯತೆ ಗಮನಿಸಿದಲ್ಲಿ ಕಾನೂನಿಗೆ ಬೆಲೆಯೇ ಇಲ್ಲವೇ ಎಂಬ ಅನುಮಾನ ಮೂಡುತ್ತದೆ. ಅಪರಾಧ ನಿಯಂತ್ರಣಕ್ಕೆ ಎನ್‌ ಕೌಂಟರ್ ಮದ್ದು ಎಂದು ಭಾವಿಸಿದಂತಹ ಯೋಗಿ ಆದಿತ್ಯ
ನಾಥ ನೇತೃತ್ವದ ಸರ್ಕಾರ ಉತ್ತರಪ್ರದೇಶದಲ್ಲಿದೆ. ‘ಕಾನೂನು ಸುವ್ಯವಸ್ಥೆ ಕಾಪಾಡುವುದು ಮುಖ್ಯ ಉದ್ದೇಶ’ ಎಂದು ಯೋಗಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಹೊಸತರಲ್ಲಿ ಹೇಳಿತ್ತು. ಯೋಗಿ ಆದಿತ್ಯನಾಥ ನಿವಾಸದ ಮುಂದೆ ಸಂತ್ರಸ್ತೆ ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿದಾಗ, ಕಳೆದ ವರ್ಷ ನಡೆದಿರುವ ಈ ಆತ್ಯಾಚಾರ ಆರೋಪದ ಘಟನೆ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಸಂತ್ರಸ್ತೆಯ ತಂದೆಯನ್ನು ಪೊಲೀಸರು ಬಂಧಿಸಿದ ನಂತರ ನ್ಯಾಯಾಂಗ ಬಂಧನದಲ್ಲಿದ್ದಾಗಲೇ ಅವರ ಸಾವು ಸಂಭವಿಸಿ, ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ‘ಸಾವಿಗೆ ಹೊಡೆತ ಕಾರಣ’ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿಸಿದೆ. ಈ ಎಲ್ಲಾ ಬೆಳವಣಿಗೆ ನಂತರವಷ್ಟೇ, ಶಾಸಕನ ಸೋದರನನ್ನು ಬಂಧಿಸಲಾಗಿದ್ದು ಆತನ ವಿರುದ್ಧ ಸಾಕ್ಷ್ಯ ಇದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಎಂದರೆ, ಸಂತ್ರಸ್ತೆಯು ಎಫ್ಐಆರ್ ದಾಖಲಿಸಲು ಈವರೆಗೆ ಪ್ರಯತ್ನಿಸುತ್ತಿದ್ದಾಗ ಇವರೆಲ್ಲಾ ಏನು ಮಾಡುತ್ತಿದ್ದರು ಎಂಬುದು ಪ್ರಶ್ನೆ. ‘ಉನ್ನಾವ್ ಪ್ರಕರಣ ಅನುಮಾನಾಸ್ಪದವಾಗಿದೆ’ ಎಂದು  ಅಲಹಾಬಾದ್ ಹೈಕೋರ್ಟ್ ಸಹ ಅಭಿಪ್ರಾಯ ವ್ಯಕ್ತಪಡಿಸಿದೆ. ಇಷ್ಟೆಲ್ಲಾ ಆದ ನಂತರ ಈಗ ಆದಿತ್ಯನಾಥ ನೇತೃತ್ವದ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ. ಒಟ್ಟಾರೆ ಈ  ಪ್ರಕರಣವು ಉತ್ತರಪ್ರದೇಶ ಕಾನೂನು ಮತ್ತು ಸುವ್ಯವಸ್ಥೆಯ ದೋಷಗಳನ್ನು ದೊಡ್ಡ ಮಟ್ಟದಲ್ಲಿ ಎತ್ತಿ ತೋರಿಸಿದೆ. ‘ಬೇಟಿ ಬಚಾವೊ ಬೇಟಿ ಪಢಾವೊ’ ಆಂದೋಲನದ ಮೂಲಕ ಬಿಜೆಪಿ ಸರ್ಕಾರ ಹೆಣ್ಣುಮಕ್ಕಳ ಕುರಿತಂತೆ ಪಸರಿಸಿದ್ದ ಸದ್ಭಾವನೆ ಈ ಪ್ರಕರಣಗಳಿಂದ ಕೊಚ್ಚಿ ಹೋಗಿದೆ. ಹೆಣ್ಣುಮಕ್ಕಳ ಮೇಲಿನ ಅಪರಾಧ ಪ್ರಕರಣಗಳ ವಿರುದ್ಧ ಹೋರಾಡಲು, ಇರುವ  ಕಾನೂನನ್ನು ಬಳಸುವುದಕ್ಕೂ ಇರುವ ಅಡ್ಡಿ ಆತಂಕಗಳನ್ನು ಈ ಪ್ರಕರಣಗಳು ನಿರೂಪಿಸಿವೆ. ಶಿಕ್ಷಾಭಯವೇ ಇಲ್ಲದ ಸ್ಥಿತಿ ಇರುವುದನ್ನೂ ಇವು ಸಾರಿ ಹೇಳುತ್ತಿವೆ. ಹೆಣ್ಣುಮಕ್ಕಳ ಮೇಲಿನ ಅಪರಾಧ ಪ್ರಕರಣಗಳಿಗೆ ಕಠಿಣ ಶಿಕ್ಷೆ ಇದೆ ಎಂಬ ಸಂದೇಶ ಅಪರಾಧಿಗಳ ಮನದಾಳಗಳಿಗೆ ಇಳಿಯಬೇಕು. ಆರೋಪಗಳ ವಿರುದ್ಧ ತ್ವರಿತವಾಗಿ ತನಿಖೆ ನಡೆದು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತಾಗಲು ನಮ್ಮ  ಆಡಳಿತ ವ್ಯವಸ್ಥೆ ಶ್ರಮಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT