ADVERTISEMENT

ಅನಗತ್ಯ ವಿವಾದ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2014, 19:30 IST
Last Updated 9 ಏಪ್ರಿಲ್ 2014, 19:30 IST

ರಾಜ್ಯದ ಎಂಟು ಅಧಿಕಾರಿಗಳನ್ನು ಚುನಾವಣಾ ಆಯೋಗದ ನಿರ್ದೇ­ಶನ­­ದಂತೆ  ವರ್ಗಾವಣೆ ಮಾಡಲಾಗದು ಎಂದು ಸವಾಲು ಎಸೆದಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಡೆಗೂ ತಮ್ಮ ಪಟ್ಟು ಸಡಿಲಿಸಿ ಅಧಿಕಾರಿಗಳಿಗೆ  ವರ್ಗಾವಣೆ ಆದೇಶ ಜಾರಿ ಮಾಡಿದ್ದಾರೆ. 

ಈ ವಿಚಾರದಲ್ಲಿ, ಚುನಾವಣಾ ಆಯೋಗದ ಮೇಲೆ ಮಮತಾ ಬ್ಯಾನರ್ಜಿ ಅವರ ವಾಗ್ದಾಳಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವಂತಹ ಸ್ಥಿತಿ ತಂದೊಡ್ಡಿತ್ತು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ  ನಡೆಸುವ  ಹೊಣೆ ಹೊತ್ತಿರುವ  ಆಯೋಗದ ನಿರ್ಧಾರಕ್ಕೆ ಪ್ರತಿಭಟನೆ ತೋರುವ ಮೂಲಕ ಅನಗತ್ಯ ವಿವಾದವನ್ನು ಮಮತಾ ಬ್ಯಾನರ್ಜಿ ಅವರು ಸೃಷ್ಟಿಸಿದ್ದು ಅನಪೇಕ್ಷಣೀಯ.

ಚುನಾವಣಾ ಪ್ರಕ್ರಿಯೆಯ ಪರಿಶುದ್ಧತೆ ಕಾಯ್ದುಕೊಳ್ಳುವುದಕ್ಕಾಗಿ ಇಂತಹ ಕ್ರಮ­ಗಳನ್ನು ಕೈಗೊಳ್ಳಲು ಸಂವಿಧಾನದ 324ನೇ ವಿಧಿ ಅನ್ವಯ ಚುನಾ­ವಣಾ ಆಯೋಗಕ್ಕೆ ಪರಮಾಧಿಕಾರ  ಇದ್ದೇ ಇದೆ ಎಂಬುದು ರಾಜ್ಯವೊಂದರ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಅವರಿಗೆ ತಿಳಿದಿರಬೇಕಿತ್ತು.  ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ. ಆಯೋಗಕ್ಕೆ ನೀಡಲಾಗಿರುವ ಸ್ವಾತಂತ್ರ್ಯದ ಮೇಲೆ ಮಿತಿ ಹೇರಲಾಗದು. 

ಹಾಗಾದಾಗ ಚುನಾವಣೆ ಪ್ರಕ್ರಿಯೆ­­ಯಲ್ಲಿರಬೇಕಾದ ಮುಕ್ತತೆ, ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ.   ಕಳೆದ ವರ್ಷವೂ ಇದೇ ಸಮಯದಲ್ಲೇ ಪಂಚಾಯಿತಿ ಚುನಾವಣೆಗಳ ದಿನಾಂಕ ನಿಗದಿ ಹಾಗೂ ಚುನಾವಣೆಗಳಿಗಾಗಿ ಕೇಂದ್ರೀಯ ಅರೆಸೇನಾ ಪಡೆಗಳ ನಿಯೋ­ಜನೆ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಜೊತೆ ಮಮತಾ ಬ್ಯಾನರ್ಜಿ  ಸಂಘರ್ಷಕ್ಕೆ ಇಳಿದಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು. 

ಆಗ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿ ಬ್ಯಾನರ್ಜಿ  ಅವರನ್ನು ತಣ್ಣಗಾಗಿ­ಸಿತ್ತು.  ಈಗಲೂ, ತನ್ನ ವಿರೋಧಿಗಳ ಪಿತೂರಿಗೆ ಚುನಾವಣಾ ಆಯೋಗ ಮಣಿದಿದೆ ಎಂಬಂತಹ ಮಮತಾ ಬ್ಯಾನರ್ಜಿಯವರ ಆರೋಪಗಳು ಅತಿ­ರೇಕದ್ದು. ಮುಖ್ಯಮಂತ್ರಿ ಹುದ್ದೆಯ ಘನತೆಗೆ ತಕ್ಕದ್ದಲ್ಲ.

ಅಧಿಕಾರಿಗಳ ವರ್ಗಾ­ವಣೆ ಆಗಬೇಕೆಂಬ ಬಗ್ಗೆ  ಮುಕ್ತ ಹಾಗೂ ನ್ಯಾಯ­ಸಮ್ಮತ ಚುನಾವಣೆ­ಗ­ಳನ್ನು ನಡೆಸಬೇಕಿರುವ ಹೊಣೆ ಹೊತ್ತಿರುವ ಚುನಾ­ವಣಾ ಆಯೋಗಕ್ಕೆ   ಬಲವಾದ ಕಾರಣಗಳು ಇದ್ದಲ್ಲಿ ಅದನ್ನು ಗೌರವಿಸ­ಬೇಕಾ­ದದ್ದು  ರಾಜ್ಯ ಸರ್ಕಾರದ ಕರ್ತವ್ಯ.  ಆಡಳಿತ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪೂರ್ವಗ್ರಹ­ಗಳನ್ನು ಈ ಅಧಿಕಾರಿಗಳು ಹೊಂದಿದ್ದಾರೆ ಎಂಬಂತಹ ದೂರುಗಳಿಂದಾಗಿ ವರ್ಗಾವಣೆಗೆ ನಿರ್ದೇಶನಗಳನ್ನು ಚುನಾ­ವಣಾ ಆಯೋಗ  ನೀಡಿತ್ತು. 

ಎಲ್ಲ ಬಗೆಯ ಪೂರ್ವಗ್ರಹ  ಮುಕ್ತ ವಾತಾ­ವರಣ­ದಲ್ಲಿ ನ್ಯಾಯಸಮ್ಮತ ಚುನಾ­ವಣೆ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯವೇ ಆಗಿದೆ ಎಂಬು­ದನ್ನು ಜನಪ್ರತಿನಿಧಿಗಳು ಅರಿತು­ಕೊಳ್ಳುವುದು ಅವಶ್ಯ. ಬಹುಹಂತದ ಚುನಾವಣೆಗಳು ರಾಷ್ಟ್ರದಲ್ಲಿ ನಡೆ­ಯು­ತ್ತಿರುವ ಈ ಸಂದ­ರ್ಭ­ದಲ್ಲಿ ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾ­ರದ ನಡುವಣ ಕಿತ್ತಾಟ ವಾತಾವರಣವನ್ನು ಹದಗೆಡಿಸುವಂತಹದ್ದು.

ಲೋಕ­ಸಭೆ ಚುನಾ­ವಣೆ ನಂತರ  ರಾಷ್ಟ್ರೀಯ ರಾಜಕಾರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಆಶಯ ಹೊಂದಿರುವ ಮಮತಾ ಬ್ಯಾನರ್ಜಿ ಅವರು ಸಾಂವಿ­ಧಾನಿಕ ಸಂಸ್ಥೆ­ಗಳನ್ನು ಗೌರವಿಸುವುದನ್ನು  ಮೊದಲು ಕಲಿತುಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.