ADVERTISEMENT

ಅವಾಂತರಗಳಿಂದ ಹೊರಬರಲಿ

​ಪ್ರಜಾವಾಣಿ ವಾರ್ತೆ
Published 25 ಮೇ 2014, 19:30 IST
Last Updated 25 ಮೇ 2014, 19:30 IST

ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ್‌ ಕೇಜ್ರಿವಾಲ್ ಅವರು ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿರುವುದು ಮುಂದುವರಿ­ದಿದೆ. ಬಿಜೆಪಿ ನಾಯಕ ನಿತಿನ್ ಗಡ್ಕರಿ  ಹೂಡಿರುವ ಮಾನನಷ್ಟ ಮೊಕ­ದ್ದಮೆಗೆ ಸಂಬಂಧಿಸಿದಂತೆ ಹಣ ನೀಡಿ ವೈಯಕ್ತಿಕ ಜಾಮೀನು ಪಡೆದು­ಕೊಳ್ಳು­ವುದನ್ನು ನಿರಾಕರಿಸಿ ಕೇಜ್ರಿವಾಲ್  ಜೈಲು ಸೇರಿದ್ದಾರೆ. ಇದರಿಂದ ಅವರು ಸುದ್ದಿಯಲ್ಲೇನೊ ಇರಬಹುದು.  ಆದರೆ ಇದು  ಬೇಡದ ವಿಚಾರಗಳಿಗಾಗಿ ಶಕ್ತಿ ವ್ಯಯ ಮಾಡುತ್ತಾ ತಮ್ಮ ಮೇಲೆ ಜನ ಇರಿಸಿರುವ  ಭರವಸೆಯನ್ನು ಹಾಳು ಮಾಡಿಕೊಳ್ಳುವ ವ್ಯರ್ಥಪ್ರಯತ್ನವಷ್ಟೆ.

ಜೊತೆಗೆ ತಾನು ಬಲಿಪಶು ಎಂದು ಬಿಂಬಿಸಿಕೊಳ್ಳುವುದರಿಂದ ಜನರ ಸಹಾನುಭೂತಿ ಗಳಿಸುವುದೂ ಸಾಧ್ಯವಿಲ್ಲ. ಪ್ರತಿಭಟನೆ ಅಥವಾ ಸಂಘರ್ಷಗಳಿಗಷ್ಟೇ  ಈ ಪಕ್ಷ ಸೀಮಿತ­ವಾದದ್ದು ಎಂಬಂತಹ ಭಾವನೆಗಳೂ ಜನರಲ್ಲಿ ಬಲಗೊಳ್ಳಲು ಇಂತಹ ನಡೆ ಸಹಕಾರಿಯಾಗುತ್ತದೆ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಹೋರಾಟದ ನಂತರ ಪರ್ಯಾಯ ರಾಜಕೀಯ ಶಕ್ತಿಯಾಗಿ ಎಎಪಿ ಹೊರ­ಹೊಮ್ಮಿತ್ತು. ಸವಕಲಾದ ಸಿದ್ಧಾಂತ­ಗಳಿಂದ ತುಂಬಿದ್ದ ರಾಜಕಾರಣಕ್ಕೆ ಹೊಸ ಧ್ವನಿ ತರುವಲ್ಲಿ ಎಎಪಿಯ ಯುವಬೆಂಬಲಿಗರು ಯಶಸ್ವಿಯಾಗಿದ್ದರು. ರಾಜಕೀಯ ಕುರಿತಂತೆ ಜನರಿಗಿದ್ದ ಸಿನಿಕತನದ ಭಾವನೆಯನ್ನು ಅಳಿಸಿ­ಹಾಕಲೂ ಈ ಪ್ರಯೋಗ ಒಂದಿಷ್ಟು ಯಶಸ್ವಿಯೂ ಆಗಿತ್ತು .  ಆದರೆ ಈಗ ಎಎಪಿ ಸಂಸ್ಥಾಪಕ ಸದಸ್ಯರಲ್ಲೇ ಒಬ್ಬ­ರಾದ  ಶಾಜಿಯಾ ಇಲ್ಮಿ ಹಾಗೂ ಕ್ಯಾಪ್ಟನ್ ಗೋಪಿನಾಥ್ ರಾಜೀನಾಮೆ ನೀಡಿರುವುದು ಪಕ್ಷದೊಳಗೆ ಹೆಚ್ಚುತ್ತಿ­ರುವ ಭಿನ್ನಮತ ಹೊರಬಂದಂತಾಗಿದೆ. ಈ ಹಿಂದೆಯೂ  ಕೆಲವು ಪ್ರಮುಖರು ಎಎಪಿಗೆ ರಾಜೀನಾಮೆ ನೀಡಿರುವುದು ಎಎಪಿ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದೇನೂ ಅಲ್ಲ.

ರಾಜಕೀಯ ಪಕ್ಷವನ್ನು ರಚಿಸಿದ ನಂತರ ಈಗಲೂ ತಾವು ಚಳವಳಿ­ಯೊಂದನ್ನು ಮುನ್ನಡೆಸುತ್ತಿದ್ದೇವೆ ಎಂಬಂತಹ ಭ್ರಮೆಯಲ್ಲೇ ಎಎಪಿ ನಾಯಕರು ಮುಳುಗಿರುವುದು ಸರಿಯಲ್ಲ. 2013ರ ಡಿಸೆಂಬರ್‌ನಲ್ಲಿ  ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ ಎಎಪಿ ಅಪಾರ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಆದರೆ, ಕಾಂಗ್ರೆಸ್ ಜೊತೆ ಸರ್ಕಾರವನ್ನೂ ರಚಿಸಿ ನಂತರ  49 ದಿನಗಳಲ್ಲೇ  ಅಧಿಕಾರವನ್ನು ತ್ಯಜಿಸಿದ ಎಎಪಿ  ಜನರ ನಿರೀಕ್ಷೆಗಳನ್ನೇ  ಹುಸಿ­ಗೊಳಿಸಿತ್ತು. ಈ ಬಗ್ಗೆ ನಂತರ  ದೆಹಲಿ ಮತದಾರರ ಕ್ಷಮಾಪಣೆಯನ್ನೂ ಕೇಜ್ರಿ­­ವಾಲ್ ಕೋರಿದ್ದರು.  ಇಷ್ಟೆಲ್ಲಾ ಅವಾಂತರಗಳ ನಡುವೆಯೂ ಲೋಕ­ಸಭಾ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಎಎಪಿ ನಾಲ್ಕು ಸ್ಥಾನ­ಗಳನ್ನು ಗಳಿಸಿ­ಕೊಂಡಿದೆ. 

ಆದರೆ  ದೆಹಲಿಯಲ್ಲಿ ಎಎಪಿಗೆ ಒಂದೇ ಒಂದು ಲೋಕ­ಸಭಾ ಸ್ಥಾನ ಗೆಲ್ಲಲಾಗಿಲ್ಲ. ಹೀಗಿದ್ದೂ ವಿಧಾನಸಭೆ ಚುನಾವಣೆಗಳಲ್ಲಿ ಗೆದ್ದದ್ದ­ಕ್ಕಿಂತ ನಾಲ್ಕು ಲಕ್ಷ ಹೆಚ್ಚು ಮತಗಳನ್ನು ಎಎಪಿ  ಪಡೆದುಕೊಂಡಿದೆ ಎಂಬುದು ಸಕಾ­ರಾತ್ಮಕ ಅಂಶ.  ಎಎಪಿಯ ಸಮಸ್ಯೆ ಎಂದರೆ  ಅದು ಸಂಘಟನಾತ್ಮಕ ಜಾಲ­ವನ್ನು ರಾಷ್ಟ್ರದಲ್ಲಿ ಬೆಳೆಸದೇ ಇರುವುದು.  ಯೋಜಿತ ರೀತಿಯಲ್ಲಿ ಪಕ್ಷವನ್ನು ಬೆಳೆಸುವಂತಹ   ವ್ಯವಸ್ಥೆಯೇ  ಇನ್ನೂ  ಎಎಪಿಯಲ್ಲಿ ರೂಪು­ಗೊಂಡಿಲ್ಲ.

ಪಕ್ಷದ  ದೀರ್ಘಾವಧಿ ಯೋಜನೆಗಳೇನು ಎಂಬ ಬಗ್ಗೆ ಸ್ಪಷ್ಟ­ತೆಯೂ ಇಲ್ಲ. ರಾಜಕೀಯ ಎಂಬುದು ಗಂಭೀರವಾದುದು ಎಂಬುದನ್ನು ಎಎಪಿ ಮೊದಲು ತಿಳಿಯಬೇಕು.  ಅನಗತ್ಯ ವಿಚಾರಗಳಿಗಾಗಿ ಸಂಘರ್ಷ­ಕ್ಕಿಳಿ­ಯು­­ವುದು ಪಕ್ಷದ ವರ್ಚಸ್ಸಿಗೆ ಹಾನಿ ಉಂಟು ಮಾಡುವಂತಹದ್ದು ಎಂಬು­ದನ್ನು ಹಿಂದಿನ ಕೆಲವು ಅನುಭವಗಳಿಂದಲಾದರೂ ಎಎಪಿ ಪಾಠ ಕಲಿಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.