ADVERTISEMENT

ಆಡಳಿತದಲ್ಲಿ ರಾಜಕಾರಣಿಗಳ ಹಸ್ತಕ್ಷೇಪವೂ ನಿಲ್ಲಲಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST
ಆಡಳಿತದಲ್ಲಿ ರಾಜಕಾರಣಿಗಳ ಹಸ್ತಕ್ಷೇಪವೂ ನಿಲ್ಲಲಿ
ಆಡಳಿತದಲ್ಲಿ ರಾಜಕಾರಣಿಗಳ ಹಸ್ತಕ್ಷೇಪವೂ ನಿಲ್ಲಲಿ   

‘ಪ್ರತಿ ತಿಂಗಳೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಸಬೇಕು. ಸಭೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಓ ಕಡ್ಡಾಯವಾಗಿ ಹಾಜರಿರಬೇಕು. ಸರ್ಕಾರದ ಮಹತ್ವದ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಸತತ ಹತ್ತು ಗಂಟೆಗಳ ಕಾಲ ವಿಧಾನಸೌಧದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು ಸಭೆಯಲ್ಲೇ ಒಂದಿಬ್ಬರು ಸಚಿವರು ಮತ್ತು ಕೆಲವು ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಂಡಿದ್ದಾರೆ. ಆಡಳಿತಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಇಂತಹ ಸಭೆಗಳು ಅನಿವಾರ್ಯ. ಆದರೆ ಇದು ಬರೀ  ಆಗಾಗ್ಗೆ ನಡೆಸುವಂತಹ ವಿಧ್ಯುಕ್ತ ಕ್ರಿಯೆ ಎಂಬಷ್ಟಕ್ಕೇ ಸೀಮಿತವಾದರೆ ಪ್ರಯೋಜನವಿಲ್ಲ.

ಬಾಯಿಮಾತಿನ ಎಚ್ಚರಿಕೆಯ ನುಡಿಗಳು ಕ್ರಿಯೆಗಳಾಗಿ ಜನರನ್ನು ತಲುಪಬೇಕು. ಇದಕ್ಕೆ ಅಗತ್ಯವಾಗಿ ಬೇಕಾದುದು ರಾಜಕೀಯ ಹಸ್ತಕ್ಷೇಪಗಳಿಲ್ಲದ ಕೆಲಸದ ಸಂಸ್ಕೃತಿ. ಒಳ್ಳೆಯ ಅಧಿಕಾರಿಗಳು ಸರ್ಕಾರಕ್ಕೆ ಬೇಕಿಲ್ಲ ಎಂಬಂಥ ಭಾವನೆ ಜನರಲ್ಲಿ ಮೂಡುವಂತಾಗಬಾರದು. ಅಧಿಕಾರ ದುರುಪಯೋಗ ಪ್ರಕರಣದಲ್ಲಿ ಕಲಬುರ್ಗಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದರೂ ಅವರನ್ನು ಅಮಾನತು ಮಾಡದೆ ಸೇವೆಯಲ್ಲಿ ಮುಂದುವರಿಸಿರುವುದು ಸಭೆಯಲ್ಲಿ ಮುಖ್ಯಮಂತ್ರಿಯವರ ಗಮನಕ್ಕೆ ಬಂದಿದೆ. ಅಧಿಕಾರಿಯ ರಕ್ಷಣೆಗೆ ಯತ್ನಿಸಿದ ಸಚಿವರ ವಿರುದ್ಧವೂ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತ ಪಡಿಸಿ, ಸ್ಥಳದಲ್ಲೇ ಅಧಿಕಾರಿಯ ಅಮಾನತು ಆದೇಶ ಹೊರಡಿಸಿರುವುದು ಗಮನಾರ್ಹ.   ಸ್ವತಃ ಮುಖ್ಯಮಂತ್ರಿಯವರ ಕಚೇರಿಯ ಪತ್ರಗಳಿಗೂ ಸೂಕ್ತ ಸ್ಪಂದನೆ ದೊರಕುತ್ತಿಲ್ಲ ಎಂಬುದು ಗಂಭೀರವಾದ ಸಂಗತಿ. ಮುಖ್ಯಮಂತ್ರಿಯವರ ಕಚೇರಿ ಕೆಲಸವೇ ನಿಧಾನವಾದರೆ ಉಳಿದ ಸಚಿವರ ಖಾತೆಗಳಲ್ಲಿ ಎಷ್ಟು ವೇಗ ಪಡೆದುಕೊಳ್ಳಲು ಸಾಧ್ಯ? 

ಬಹುತೇಕ ಅಧಿಕಾರಿಗಳ ಸೋಂಬೇರಿತನಕ್ಕೆ ಇಲಾಖೆಯ ಸಚಿವರ ಕಾರ್ಯವೈಖರಿಯೇ ಕಾರಣ ವಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೆ. ಅಧಿಕಾರಿಗಳು ಶಿಸ್ತಿನಿಂದ, ಚುರುಕಾಗಿ, ನಿಯಮಬದ್ಧವಾಗಿ ಕೆಲಸ ಮಾಡಬೇಕೆಂದರೆ ಸರ್ಕಾರ ಅದಕ್ಕೆ ಪೂರಕವಾದ ಒಟ್ಟಾರೆ ವಾತಾವರ
ಣವನ್ನು ಸೃಷ್ಟಿ ಮಾಡಬೇಕಾಗುತ್ತದೆ. ದಕ್ಷ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ಮತ್ತು ಭ್ರಷ್ಟ ಅಧಿಕಾರಿಗಳಿಗೆ ತಕ್ಷಣ ಶಿಕ್ಷೆ ಕೊಡಿಸುವಂತಹ ಇಚ್ಛಾಶಕ್ತಿ ಸರ್ಕಾರಕ್ಕೆ ಇರಬೇಕಾಗುತ್ತದೆ. ಆದರೆ ನಮ್ಮಲ್ಲಿ ಎಷ್ಟೋ ಇಲಾಖೆಗಳಲ್ಲಿ ಸಚಿವರು ಮತ್ತು ಶಾಸಕರು ತಮಗೆ ಬೇಕಾದ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಕೂರಿಸಿಕೊಂಡು ತಮಗೆ ಬೇಕಾದ ಕೆಲಸಗಳನ್ನಷ್ಟೇ ಮಾಡಿಸುವ ವ್ಯವಸ್ಥೆ ಇದೆ. ಹೀಗೆ ಅಧಿಕಾರಿಗಳನ್ನು ಆಯ್ಕೆ ಮಾಡುವಾಗ ಜಾತಿ ಮತ್ತು ಹಣವೂ ಮುಖ್ಯ ಪಾತ್ರ ವಹಿಸುತ್ತಿರುವುದು ಗುಟ್ಟೇನಲ್ಲ.

ಹರ್ಷ ಗುಪ್ತಾ, ಸುಬೋಧ್‌ ಯಾದವ್‌ ಅವರಂತಹ ಕೆಲವು ದಕ್ಷ ಐಎಎಸ್‌ ಅಧಿಕಾರಿಗಳು ಎಷ್ಟು ಹುದ್ದೆಗಳಿಂದ, ಎಷ್ಟು ಸಲ, ಏಕೆ ಎತ್ತಂಗಡಿಯಾದರು ಎನ್ನುವುದು ನಮ್ಮ ಕಣ್ಣಮುಂದೆಯೇ ಇದೆ. ಹೀಗೆ ಒಳ್ಳೆಯ ಅಧಿಕಾರಿಗಳಿಗೆ ಪ್ರೋತ್ಸಾಹ ಇಲ್ಲ, ಶಿಕ್ಷೆ ಇದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ.  ಐಎಎಸ್ ಅಧಿಕಾರಿಗಳಷ್ಟೇ ಅಲ್ಲ ಎಲ್ಲಾ ಹಂತಗಳ ಅಧಿಕಾರಿಗಳನ್ನೂ ಎತ್ತಂಗಡಿ ಮಾಡುವಂತಹದ್ದು ನಡೆದೇ ಇದೆ. ಹೀಗಾಗಿ ಮುಖ್ಯಮಂತ್ರಿಯವರ ಇಂತಹ ಸಭೆಗಳು ಕೇವಲ ವಿಧ್ಯುಕ್ತ ಸಭೆಗಳಷ್ಟೇ ಆಗಬಾರದು. ಅಧಿಕಾರಿಗಳಲ್ಲಿ ವೃತ್ತಿಪರತೆ ಬರಬೇಕಿದ್ದರೆ ರಾಜಕಾರಣಿಗಳಲ್ಲೂ ಆ ವೃತ್ತಿಪರತೆಯ ಗುಣ ಕಾಣಿಸಿಕೊಳ್ಳಬೇಕು. ಅಧಿಕಾರಿಗಳನ್ನು ವರ್ಗಾವಣೆ ಮಾಡುವುದೇ ದಂಧೆ ಅಥವಾ ಶಿಕ್ಷೆ ಎಂದಾದಲ್ಲಿ ವ್ಯವಸ್ಥೆಯ ಸುಧಾರಣೆ ಸಾಧ್ಯವಿಲ್ಲ.

ಪ್ರತಿ ತಿಂಗಳೂ ಜಿಲ್ಲಾ ಕೇಂದ್ರಗಳಲ್ಲಿ ಜನಸಂಪರ್ಕ ಸಭೆ ನಡೆಸುವುದು ಮತ್ತು ಸ್ಥಳದಲ್ಲೇ ಸಮಸ್ಯೆಗಳನ್ನು ಪರಿಹರಿಸುವುದು ಒಳ್ಳೆಯ ಕ್ರಮವೆ. ‘ತಕ್ಷಣ ಪರಿಹಾರ ಒದಗಿಸಲು ಸಾಧ್ಯವಿಲ್ಲದ ಅರ್ಜಿಗಳನ್ನು ಮೂರು ದಿನ ಅಥವಾ ಒಂದು ವಾರದೊಳಗೆ ವಿಲೇವಾರಿ ಮಾಡಬೇಕು’ ಎಂದು ಮುಖ್ಯಮಂತ್ರಿ ಕಟ್ಟುನಿಟ್ಟಾಗಿ ನೀಡಿರುವ ಆದೇಶ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರಲಿದೆ ಎನ್ನುವುದನ್ನು ಜನರು ಗಮನಿಸುತ್ತಾರೆ. ಸರ್ಕಾರ ಎಷ್ಟೇ ಒಳ್ಳೆಯ ಯೋಜನೆಗಳನ್ನು ಪ್ರಕಟಿಸಿದರೂ ಅದು ಜನರನ್ನು ಸುಲಭವಾಗಿ ತಲುಪದಿದ್ದರೆ ಪ್ರಯೋಜನವಿಲ್ಲ. ಅಧಿಕಾರಿಗಳು ಕಾನೂನುಬದ್ಧವಾಗಿ ಕೆಲಸ ಮಾಡಲು ಬಿಡಿ. ಲೋಕಾಯುಕ್ತ, ಕೆಪಿಎಸ್‌ಸಿ ಮುಂತಾದ ಆಯಕಟ್ಟಿನ ಸ್ಥಳಗಳಿಗೆ ಅಧಿಕಾರಿಗಳನ್ನು ನೇಮಿಸುವಾಗ ಭ್ರಷ್ಟರನ್ನು ದೂರವಿಟ್ಟು, ದಕ್ಷರಿಗೆ ಮಣೆ ಹಾಕುವುದು ಕೂಡ ಈ ನಿಟ್ಟಿನಲ್ಲಿ ಅತ್ಯಂತ ಮುಖ್ಯವಾದ ಕೆಲಸ ಎನ್ನುವುದನ್ನು ಸರ್ಕಾರ ಮನಗಾಣಬೇಕು. ಇಲ್ಲವಾದಲ್ಲಿ ಇಂತಹ ಸಭೆಗಳೂ ಕೇವಲ ಬಾಯುಪಚಾರದ ನಡೆಗಳಷ್ಟೇ ಆಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.