ADVERTISEMENT

ಆರ್‌ಬಿಐ ನೀತಿ: ಕಾಣದ ಹೊಸತನ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2014, 19:30 IST
Last Updated 2 ಏಪ್ರಿಲ್ 2014, 19:30 IST

ಹೊಸ ಹಣಕಾಸು ವರ್ಷಕ್ಕೆ (2014­–15) ಸಂಬಂಧಿಸಿದಂತೆ ಭಾರ­ತೀಯ ರಿಸರ್ವ್‌ ಬ್ಯಾಂಕ್‌ ಮಂಗಳವಾರ ಪ್ರಕಟಿಸಿದ ಮೊದಲ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಯಥಾಸ್ಥಿತಿ ಹೊರತುಪಡಿಸಿದರೆ ಹೊಸ­­­­ತೇನೂ ಕಾಣು­ವುದಿಲ್ಲ. ಅಲ್ಪಾವಧಿ ಬಡ್ಡಿ ದರಗಳಲ್ಲಿ ಬದ­ಲಾವಣೆ ಮಾಡದಿರುವುದಕ್ಕೆ ಚುನಾ­ವಣಾ ನೀತಿ ಸಂಹಿತೆ ಕಾರಣ­ವಾಗಿರ­ಬಹುದು.

ಆರ್‌ಬಿಐನ ಈ  ನಡೆಯು, ಕೈಗಾರಿಕೆ ಮತ್ತು ಉದ್ಯಮ ವಲಯದಲ್ಲಿ ಸಹಜವಾ­ಗಿಯೇ ನಿರಾಶೆ ಮೂಡಿಸಿದೆ.  ಕೇಂದ್ರೀಯ ಬ್ಯಾಂಕ್‌ನ ಹಾದಿ­ಯ­ಲ್ಲಿಯೇ ಸಾಗಲು ನಿರ್ಧರಿಸಿರುವ ವಾಣಿಜ್ಯ ಬ್ಯಾಂಕ್‌ಗಳು, ಗೃಹ, ವಾಹನ, ವಾಣಿಜ್ಯ ಮತ್ತಿತರ ಸಾಲಗಳ ಮೇಲಿನ ಬಡ್ಡಿ ದರ ಕಡಿಮೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿರುವುದು ಗ್ರಾಹಕರ ಪಾಲಿಗೆ ಕಹಿಯಾಗಿ ಪರಿಣಮಿಸಲಿದೆ. ಹಣದುಬ್ಬರ ನಿಗ್ರಹಕ್ಕೆ ಮತ್ತೆ ಆದ್ಯತೆ ನೀಡಿರುವುದು ಈ ಬಾರಿಯೂ ಸ್ಪಷ್ಟಗೊಳ್ಳುತ್ತದೆ. ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ಮತ್ತು ಚಿಲ್ಲರೆ ಹಣದುಬ್ಬರವು ‘ಹಿತಕರ ಮಟ್ಟ’ದಲ್ಲಿ ಇರುವಾಗ, ಅಲ್ಪಾವಧಿ ಬಡ್ಡಿ ದರ ಕಡಿಮೆಯಾಗಲಿದೆ ಎಂದೇ ಉದ್ಯಮ ವಲಯ ಬಹುವಾಗಿ ನಿರೀಕ್ಷಿಸಿತ್ತು.

ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಬಡ್ಡಿ ದರಗಳು ಕಡಿಮೆ­ಯಾಗುವುದು ಸದ್ಯಕ್ಕೆ ಅನಿವಾ­ರ್ಯ­ವೂ ಆಗಿದೆ. ಕೈಗಾರಿಕಾ ಬೆಳವಣಿಗೆ ಕುಂಠಿತಗೊಂಡಿರುವ  ಸದ್ಯದ  ನಿರಾಶಾದಾಯಕ ಸಂದರ್ಭದಲ್ಲಿ ಬಡ್ಡಿ ದರ­ಗಳಲ್ಲಿ ಕಡಿತ ಮಾಡಿದ್ದರೆ ಅದರಿಂದ ಸರಕುಗಳಿಗೆ ಬೇಡಿಕೆ ಹೆಚ್ಚಳಗೊಂಡು ಬಂಡವಾಳ ಹೂಡಿಕೆ ಪ್ರಕ್ರಿಯೆಗೆ ಚಾಲನೆ ಸಿಗುತ್ತಿತ್ತು. ಅಂತಹ ನಿರೀಕ್ಷೆಯನ್ನು ಕೇಂದ್ರೀಯ ಬ್ಯಾಂಕ್‌ ಹುಸಿ ಮಾಡಿದೆ.  ಇನ್ನೊಂದು ಅರ್ಥದಲ್ಲಿ ಅಲ್ಪಾವಧಿ ಬಡ್ಡಿ ದರಗಳು ಈಗಾಗಲೇ ಗರಿಷ್ಠ ಮಟ್ಟ ತಲುಪಿದ್ದು, ಮುಂಬರುವ ದಿನಗಳಲ್ಲಿ ಕಡಿಮೆಯಾಗುವ ಸಾಧ್ಯತೆ­ಗಳಿವೆ ಎನ್ನುವ ಆಶಾಭಾವನೆಯನ್ನೂ ಮೂಡಿಸಿದೆ. ಅಂತಹ ನಿರೀಕ್ಷೆ ಆದಷ್ಟು ಬೇಗ ಕಾರ್ಯಗತ­ಗೊಳ್ಳಲಿ.

ಸದ್ಯದ ಆರ್ಥಿಕ ಪರಿಸ್ಥಿತಿಯ ನಿರಾಶಾದಾಯಕ ಚಿತ್ರಣ ಏನೇ ಇರಲಿ, 2014–15ನೇ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 5.5 ರಷ್ಟಾ­ಗಲಿದೆ ಎಂದು ಅಂದಾಜಿಸಿ­ರುವುದು ಮಾತ್ರ ಆಶಾದಾಯಕ­ವಾ­ಗಿದೆ. ಕೈಗಾರಿಕೆ ಮತ್ತು ಸೇವಾ ವಲಯದಲ್ಲಿನ ಸುಧಾರಣೆಯು ವೃದ್ಧಿ ದರ ಹೆಚ್ಚಿಸಲು ಖಂಡಿತ­ವಾಗಿಯೂ ನೆರವಾಗಲಿದೆ. 

ಉಳಿತಾಯ ಖಾತೆ­ಯಲ್ಲಿ ಕನಿಷ್ಠ ಮೊತ್ತ ಕಾಯ್ದು­ಕೊಳ್ಳದ ಗ್ರಾಹ­ಕರಿಗೆ ಯಾವುದೇ ದಂಡ ವಿಧಿಸ­ಬಾರದು ಎಂದು ಆರ್‌ಬಿಐ, ಸ್ಪಷ್ಟ ಸೂಚನೆ ನೀಡಿರುವುದು ‘ಗ್ರಾಹಕ ಸ್ನೇಹಿ’ ನಿರ್ಧಾರ­ವಾಗಿದೆ. ಅದರಲ್ಲೂ ವಿಶೇಷವಾಗಿ ಖಾಸಗಿ ಬ್ಯಾಂಕ್‌ಗಳು ವಿಧಿಸುತ್ತಿದ್ದ ದಂಡ ಈಗ ಕೊನೆಯಾಗ­ಲಿದ್ದು, ಗ್ರಾಹ­ಕರು ನೆಮ್ಮದಿಯ ನಿಟ್ಟುಸಿರು ಬಿಡಲಿ­ದ್ದಾರೆ.  ಹೊಸ ಬ್ಯಾಂಕ್‌ಗಳ ಲೈಸನ್ಸ್‌ ನೀಡಿಕೆಗೆ ಸಂಬಂಧಿ­ಸಿದ ವಿವಾದವೂ  ಈಗ ಬಗೆಹರಿದಿರುವುದು ಇನ್ನೊಂದು ಸಕಾರಾತ್ಮಕ ಬೆಳವಣಿಗೆ.

ಚುನಾವಣಾ ಆಯೋಗವು ಆರ್‌ಬಿಐಗೆ ಹಸಿರು ನಿಶಾನೆ ನೀಡಿರುವುದರಿಂದ  ಹೊಸ ಬ್ಯಾಂಕ್‌ಗಳು ಶೀಘ್ರದಲ್ಲಿಯೇ ಕಾರ್ಯಾ­ರಂಭ ಮಾಡಲಿವೆ. ಹೊಸ ಬ್ಯಾಂಕ್‌ ಸ್ಥಾಪನೆಗೆ ಒಟ್ಟು 25 ಅರ್ಜಿಗಳು ಬಂದಿದ್ದು, ಅರ್ಹತೆ ಆಧರಿಸಿ ಅನುಮತಿ ನೀಡುವ ವಿಚಾರವು ಸಾರ್ವ­ಜನಿಕ ವಲಯದಲ್ಲಿ ಸಹಜ­ವಾಗಿಯೇ ಸಾಕಷ್ಟು ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.