ADVERTISEMENT

ಆವೇಶದಿಂದ ಪ್ರಯೋಜನವಿಲ್ಲ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2014, 19:30 IST
Last Updated 14 ಡಿಸೆಂಬರ್ 2014, 19:30 IST

ಶಾರದಾ ಚಿಟ್ ಫಂಡ್ ಹಗರಣ ಪಶ್ಚಿಮ ಬಂಗಾಳದ ಪ್ರಭಾವಿ ರಾಜಕಾರಣಿಗಳನ್ನು, ಹಾಲಿ ಮತ್ತು ನಿವೃತ್ತ ಅಧಿಕಾರಿಗಳನ್ನು   ಸುತ್ತಿ­ಕೊಳ್ಳುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಮುಖರೇ ಹಗರಣದಲ್ಲಿದ್ದಾರೆ. ಸಂಸದರಾದ ಕುಣಾಲ್ ಘೋಷ್, ಸೃಂಜಯ ಬೋಸ್ ಹಾಗೂ ಪಕ್ಷದ ಉಪಾಧ್ಯಕ್ಷ ರಜತ್ ಮಜುಂದಾರ್ ಜೈಲಿನಲ್ಲಿದ್ದಾರೆ. ಈಗ ಸಾರಿಗೆ ಸಚಿವ ಮದನ್ ಮಿತ್ರಾ ಬಂಧಿತರಾಗಿದ್ದಾರೆ. ಇನ್ನೊಬ್ಬ ಸಂಸದ ಶುಭೇಂದು ಅಧಿಕಾರಿ ಅವರನ್ನು ಸಿಬಿಐ ಹಿಂದೆಯೇ ಪ್ರಶ್ನಿಸಿತ್ತು. ಕೋಲ್ಕತ್ತ ಪೊಲೀಸ್ ಕಮಿಷನರ್ ಸುರ್ಜಿತ್ ಕರ್ ಪುರಕಾಯಸ್ತ ಮೇಲೂ ಅದು ಕಣ್ಣಿಟ್ಟಿದೆ. ಈ ಹಗರಣದಲ್ಲಿ ಪಕ್ಷದ ಇತರ ಪ್ರಮುಖರ ಪಾತ್ರದ ತನಿಖೆ ನಡೆಸುವಂತೆ ಘೋಷ್ ಕೆಲ ತಿಂಗಳ ಕೆಳಗೆ ಮುಖಂಡರಿಗೆ ಪತ್ರ ಬರೆದಿದ್ದರು. ನಿಜವಾದ ಅಪರಾಧಿಗಳನ್ನು ಹಿಡಿಯದೆ ತಮ್ಮನ್ನು ಬಲಿಪಶು ಮಾಡಲಾಗಿದೆ ಎಂದು ಜೈಲಲ್ಲೇ ಆತ್ಮಹತ್ಯೆಗೆ ಯತ್ನಿಸಿ­ದ್ದರು.

ಶಾರದಾ ಸಂಸ್ಥಾಪಕ ಸುದೀಪ್ತ ಸೇನ್ ಕಳೆದ ವರ್ಷ ಮಮತಾ ಅವರ ಕಲಾಕೃತಿಗಳ ಖರೀದಿಗೆ ₨ 1.86 ಕೋಟಿ ವ್ಯಯಿಸಿದ್ದು ದೊಡ್ಡ ಸುದ್ದಿಯಾ­ಗಿತ್ತು. ಆದರೆ ಹಗರಣ ಬೆಳಕಿಗೆ ಬಂದು ಇದರ ಉರುಳು ತಮ್ಮ ಪಕ್ಷಕ್ಕೆ ಸುತ್ತು­ವುದು ಖಚಿತವಾಗುತ್ತಿದ್ದಂತೆ ಮಮತಾ ಅವರು ಪಕ್ಷದ ನಾಲ್ವರು ಪ್ರಮು­ಖರನ್ನು ಹೆಸರಿಸಿ ‘ಅವರೇನು ಕಳ್ಳರೆ? ಅವರು ಕಳ್ಳರು ಎನ್ನುವುದಾದರೆ ನಾನೂ ಕಳ್ಳಿ’ ಎಂದು ಬಹಿರಂಗ ಸಭೆ­ಯಲ್ಲಿಯೇ ಆಕ್ರೋಶದಿಂದ ಹೇಳಿದ್ದರು. ಮುಗ್ಧರು ಎಂದು ಆಗ ಅವರು ಉಲ್ಲೇಖಿಸಿದ್ದ ನಾಲ್ವರಲ್ಲಿ ಈಗ ಮೂವರು ಕಂಬಿ ಎಣಿಸುತ್ತಿದ್ದಾರೆ.

ಮಿತ್ರಾ ಬಂಧನದ ಬಳಿಕವಂತೂ ಮಮತಾ ಸಹನೆ ಕಳೆದುಕೊಂಡಿದ್ದಾರೆ. ಅವರ ಮಾತಿನ ಧಾಟಿ ಕಾನೂನಿನ ಪ್ರಕ್ರಿಯೆಗಳನ್ನೇ ಪ್ರಶ್ನಿ­ಸುವಂತಿದೆ. ರಾಜ್ಯವೊಂದರ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರಿಗೆ ಇದು ಶೋಭಿಸುವ ನಡವಳಿಕೆ ಅಲ್ಲ. ಸಿಬಿಐ ವಿನಾಕಾರಣ ಟಿಎಂಸಿಗೆ ಕಳಂಕ ಹಚ್ಚಲು ಯತ್ನಿಸುತ್ತಿದೆ ಎಂಬ ಅನುಮಾನ ಅವರಿಗೆ ಇದ್ದರೆ ಕಾನೂನು, ಕೋರ್ಟ್‌ಗಳ ಮೊರೆ ಹೋಗಬೇಕೇ ಹೊರತು ಬೀದಿ ಕಾಳಗದ ಮಾತು ಆಡ­ಬಾರದು. ಏಕೆಂದರೆ ಹಿಂದೆ ಅನೇಕ ಸಲ ಅವರದೇ ಪಕ್ಷ ಕೇಂದ್ರದಲ್ಲಿ ಅಧಿ­ಕಾರದ ಮೈತ್ರಿಕೂಟದ ಭಾಗವಾಗಿತ್ತು. ಆಗೆಲ್ಲ ಸಿಬಿಐಯನ್ನು ತಾವೇ ಹಾಡಿ ಹೊಗಳಿದ್ದನ್ನು ಮರೆಯಬಾರದು.

ಶಾರದಾ ಹಗರಣ ಸಣ್ಣಮಟ್ಟದ್ದೇನಲ್ಲ. ಬಹುತೇಕ ಬಡವರು, ಜನ­ಸಾಮಾ­ನ್ಯರನ್ನು ಒಳಗೊಂಡ 17 ಲಕ್ಷ ಜನ ಕಷ್ಟಪಟ್ಟು ಗಳಿಸಿದ್ದ ಹಣವನ್ನು ಈ ಚಿಟ್ ಫಂಡ್‌ನಲ್ಲಿ ಹೂಡಿದ್ದರು. ಅದರ ಒಟ್ಟು ಮೊತ್ತ ಸುಮಾರು ₨ 2,500 ಕೋಟಿ. ಇದರಲ್ಲಿ ಭಾರೀ ಪ್ರತಿಫಲ ಸಿಗಲಿದೆ ಎಂದು ಜನರಿಗೆ ಪುಸಲಾಯಿಸಿದವರಲ್ಲಿ ಟಿಎಂಸಿಯ ಮಹಾ ಮುಖಂಡರೆಲ್ಲ ಇದ್ದಾರೆ.  ಅವರೆಲ್ಲ ಕೋಟಿಗಟ್ಟಲೆ ಲಾಭವನ್ನೂ ಪಡೆದಿದ್ದಾರೆ. ಆದರೆ ಚಿಟ್ ಫಂಡ್ ದಿವಾಳಿಯಿಂದ ಹೂಡಿಕೆದಾರರು ಸರ್ವನಾಶವಾಗಿದ್ದಾರೆ. ಎಷ್ಟೋ ಜನ ಕಂಗಾಲಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಮತಾ ಅನುಕಂಪ ತೋರಿಸ­ಬೇಕಾಗಿರುವುದು ಹೀಗೆ ಹಣ ಕಳೆದುಕೊಂಡವರ ಬಗ್ಗೆಯೇ ಹೊರತು ಹಣ ಕಬಳಿಸಿ ಜೈಲಿಗೆ ಹೋದವರ, ಮುಂದೆ ಹೋಗಲಿರುವವರ ಬಗ್ಗೆ ಅಲ್ಲ. ಸಿಬಿಐ ಕೂಡ ಯಾವುದೇ ಒತ್ತಡಕ್ಕೆ ಮಣಿಯದೆ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ, ಹೂಡಿಕೆದಾರರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು. ಜನರೂ ಬ್ಲೇಡ್ ಕಂಪೆನಿಗಳ ಬಗ್ಗೆ ಇನ್ನಾದರೂ ಎಚ್ಚರ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.