ADVERTISEMENT

ಇಂಧನ ದರ ನಿತ್ಯ ಪರಿಷ್ಕರಣೆ ತರ್ಕಬದ್ಧ ಸುಧಾರಣಾ ಕ್ರಮ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 19:31 IST
Last Updated 14 ಏಪ್ರಿಲ್ 2017, 19:31 IST
ಇಂಧನ ದರ ನಿತ್ಯ ಪರಿಷ್ಕರಣೆ ತರ್ಕಬದ್ಧ ಸುಧಾರಣಾ ಕ್ರಮ
ಇಂಧನ ದರ ನಿತ್ಯ ಪರಿಷ್ಕರಣೆ ತರ್ಕಬದ್ಧ ಸುಧಾರಣಾ ಕ್ರಮ   

ಜಾಗತಿಕ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ದರ ಆಧರಿಸಿ, ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳನ್ನು ಪ್ರತಿದಿನವೂ ಪರಿಷ್ಕರಿಸಲು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ನಿರ್ಧರಿಸಿವೆ. ಇಂಧನ ಮಾರಾಟ ವಲಯದಲ್ಲಿ ತುಂಬ ವರ್ಷಗಳಿಂದ ಎದುರು ನೋಡುತ್ತಿದ್ದ ಸುಧಾರಣಾ ಕ್ರಮ ಇದಾಗಿದೆ. ಇಂಧನಗಳ ದರ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲೂ ಇದರಿಂದ ನೆರವಾಗಲಿದೆ.  ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕುಸಿತಗೊಂಡಾಗ ಅದರ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತಿರಲಿಲ್ಲ. ಇನ್ನು ಮುಂದೆ ಅಂತಹ ತಾರತಮ್ಯ ಕೊನೆಗೊಳ್ಳಲಿದೆ.

ಇಂತಹ ಸುಧಾರಣೆಗೆ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌, ಭಾರತ್‌ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂ ಸಂಸ್ಥೆಗಳು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಇಂಧನ ಮಾರಾಟದ ಖಾಸಗಿ ಸಂಸ್ಥೆಗಳಾದ ಎಸ್ಸಾರ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಕೂಡ ಇದೇ ವ್ಯವಸ್ಥೆ ಅನುಸರಿಸುವ ಸಾಧ್ಯತೆ ಇದೆ. ಜಾಗತಿಕ ಹಣಕಾಸು ಮತ್ತು ಸರಕು ಮಾರುಕಟ್ಟೆ ಜತೆ ದೇಶಿ ಅರ್ಥ ವ್ಯವಸ್ಥೆಯು ತಳಕು ಹಾಕಿಕೊಂಡಿರುವಾಗ, ಹದಿನೈದು ದಿನಗಳವರೆಗೆ ಇಂಧನಗಳ ದರ ಬದಲಿಸದಿರುವುದು ತರ್ಕಹೀನ ನಿಲುವಾಗಿತ್ತು. ಇಂಧನ ಬಳಕೆ ವಿಷಯದಲ್ಲಿ ಆಮದನ್ನೇ ಹೆಚ್ಚಾಗಿ ಅವಲಂಬಿಸಿರುವ ಆರ್ಥಿಕತೆಯಲ್ಲಿ, ತೈಲೋತ್ಪನ್ನಗಳ ದರಗಳನ್ನು ರಾಜಕೀಯ ಪರಿಗಣನೆಗೆ ಬದಲಾಗಿ ಮಾರುಕಟ್ಟೆ ಶಕ್ತಿಗಳೇ ನಿರ್ಧರಿಸುವುದು ಹೆಚ್ಚು ಅಪೇಕ್ಷಣೀಯ. 

2010ರಲ್ಲಿ ಪೆಟ್ರೋಲ್‌ ಮತ್ತು 2014ರಲ್ಲಿ ಡೀಸೆಲ್‌ ದರಗಳನ್ನು ಸರ್ಕಾರದ ನಿಯಂತ್ರಣದಿಂದ ಕೈಬಿಡಲಾಗಿತ್ತು. ಆದರೆ ತಾಂತ್ರಿಕವಾಗಿ ತೈಲ ಮಾರಾಟ ಸಂಸ್ಥೆಗಳೇ ದರ ನಿಗದಿಪಡಿಸುತ್ತಿದ್ದವು. ಹೀಗಾಗಿ ಅನೇಕ ಸಂದರ್ಭಗಳಲ್ಲಿ ರಾಜಕೀಯ ನಿರ್ಧಾರಗಳು ಪ್ರಭಾವ ಬೀರುತ್ತಿದ್ದವು. ಪ್ರತಿ ದಿನ ದರ ನಿಗದಿ ಮಾಡುವ ಹೊಸ ವ್ಯವಸ್ಥೆಯಲ್ಲಿ ಇಂತಹ ರಾಜಕೀಯ ಪ್ರಭಾವ ಇನ್ನು ಮುಂದೆ ಪರಿಗಣನೆಗೆ ಬರಲಾರದು. ಹದಿನೈದು ದಿನಗಳ ಅವಧಿಯಲ್ಲಿನ ಕಚ್ಚಾ ತೈಲ ದರ ಮತ್ತು ಕರೆನ್ಸಿ ದರ ಏರಿಳಿತ ಆಧರಿಸಿ ದರ ನಿಗದಿ ಮಾಡುತ್ತಿದ್ದರಿಂದ ತೈಲ ಮಾರಾಟ ಸಂಸ್ಥೆಗಳು ನಷ್ಟಕ್ಕೆ ಗುರಿಯಾಗುತ್ತಿದ್ದವು.

ಆರಂಭದಲ್ಲಿ ಐದು ನಗರಗಳಲ್ಲಿ ಪ್ರಾಯೋಗಿಕವಾಗಿ ಮೇ ತಿಂಗಳಿನಿಂದ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಅದರ ಯಶಸ್ಸು ಆಧರಿಸಿ ಕ್ರಮೇಣ ದೇಶದಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ. ಅಲ್ಲಿಯವರೆಗೆ ಹಾಲಿ ವ್ಯವಸ್ಥೆಯಾಗಿರುವ ಪ್ರತಿ ಹದಿನೈದು ದಿನಗಳಿಗೊಮ್ಮೆ ಇಂಧನ ದರ ಪರಿಷ್ಕರಣೆ ನಡೆಯಲಿದೆ. ಹೊಸ ಪದ್ಧತಿಯು ದರ ಏರಿಕೆ ಸಂದರ್ಭದಲ್ಲಿನ ಗ್ರಾಹಕರ ಮೇಲಿನ ಹೊರೆಯನ್ನು ಗಮನಾರ್ಹವಾಗಿ ತಗ್ಗಿಸಲಿದೆ. ಪೈಸೆಗಳ ಲೆಕ್ಕದಲ್ಲಿನ ದರ ಏರಿಕೆ ಮತ್ತು ಇಳಿಕೆಯು ಗ್ರಾಹಕರ ಪಾಲಿಗೆ ಹೊರೆಯಾಗುವುದಿಲ್ಲ. ಪ್ರತಿದಿನ ದರ ಮಟ್ಟದಲ್ಲಿನ ಆಂಶಿಕ ಬದಲಾವಣೆಯು ಗ್ರಾಹಕರಿಗೆ ಹೊರೆಯಾಗಲಾರದು ಮತ್ತು ಇಂಧನ ಹಣದುಬ್ಬರಕ್ಕೂ ಕಾರಣವಾಗಲಾರದು. ಈ ಹೊಸ ವ್ಯವಸ್ಥೆ ಜಾರಿಯಲ್ಲಿ ಕೆಲ ಸಮಸ್ಯೆಗಳೂ ಎದುರಾಗುವ ಸಾಧ್ಯತೆ ಇದೆ.

ದೇಶದಾದ್ಯಂತ ಇರುವ 58 ಸಾವಿರಕ್ಕೂ ಹೆಚ್ಚಿನ ಪೆಟ್ರೋಲ್‌ ಪಂಪ್‌ಗಳಲ್ಲಿ ಈ ಹೊಸ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದು ಮುಖ್ಯ. ಗ್ರಾಹಕರಿಗೆ ಬದಲಾದ ದರ ಗೊತ್ತಾಗುವುದು ಹೇಗೆ, ಪೆಟ್ರೋಲ್‌ ಪಂಪ್‌ಗಳಲ್ಲಿ ದರ ಪರಿಷ್ಕರಣೆಯು ಸಂಪೂರ್ಣ ಸ್ವಯಂಚಾಲಿತ ಆಗಿರಲಿದೆಯೇ, ಈ ದರ ಏರಿಳಿತಕ್ಕೆ ತಕ್ಕಂತೆ ಟ್ಯಾಕ್ಸಿ ಮತ್ತು ಸರಕು ಸಾಗಣೆ ವಾಹನಗಳ ಬಾಡಿಗೆ ದರ ನಿಗದಿ ಸಮರ್ಪಕವಾಗಿ ಇರಲಿದೆಯೇ ಎನ್ನುವ ಸಂದೇಹಗಳಿಗೆ ಸಮಾಧಾನಕರ ಉತ್ತರ ಸಿಗಬೇಕಾಗಿದೆ. ದಿನ ಬೆಳಗಾಗುವುದರೊಳಗೆ ನಡೆಯುವ ದರ ವ್ಯತ್ಯಾಸದ ಪರಿಣಾಮವಾಗಿ, ಇಂಧನ ಸಂಗ್ರಹಿಸಿ ಇಟ್ಟುಕೊಂಡಿರುವ ಪೆಟ್ರೋಲ್‌ ಪಂಪ್‌ ಮಾಲೀಕರಿಗೆ ಆಗುವ ನಷ್ಟ ಭರ್ತಿ ಮಾಡಿಕೊಡಲು ಯಾವ ವ್ಯವಸ್ಥೆ ಇದೆ ಎನ್ನುವುದು ಸ್ಪಷ್ಟಗೊಳ್ಳಬೇಕಾಗಿದೆ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜಾರಿಯಲ್ಲಿ ಇರುವ ಈ ವ್ಯವಸ್ಥೆ, ಅಭಿವೃದ್ಧಿಶೀಲ ದೇಶವಾಗಿರುವ ಭಾರತದಲ್ಲಿ ಯಶಸ್ವಿಯಾಗುವುದೇ ಕಾದು ನೋಡಬೇಕಾಗಿದೆ. ಇಂಧನಗಳ ಮೇಲೆ ಮಾರಾಟ ತೆರಿಗೆ ವಿಧಿಸುವ ಅಧಿಕಾರವು ಈಗಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿಯಲ್ಲಿ ಇದೆ. ಕಚ್ಚಾ ತೈಲದ ದರ ಇಳಿದಿದ್ದರೂ ತೆರಿಗೆ ಹೊರೆ ಹೆಚ್ಚಿಗೆ ಇದೆ. ಕಚ್ಚಾ ತೈಲ ದರ ಇಳಿಕೆಯ ಪ್ರಯೋಜನವು ಗ್ರಾಹಕರಿಗೆ ಪೂರ್ಣವಾಗಿ ದೊರೆಯದಿರುವುದಕ್ಕೆ ಇದು ಕೂಡ ಕಾರಣವಾಗಿದೆ. ಇಂತಹ ಸಿಕ್ಕುಗಳೆಲ್ಲ ದೂರವಾದರೆ ಮಾತ್ರ ಹೊಸ ವ್ಯವಸ್ಥೆಯ ಸಂಪೂರ್ಣ ಪ್ರಯೋಜನವು ಗ್ರಾಹಕರಿಗೆ ದೊರೆತೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT