ADVERTISEMENT

ಎಚ್ಚರಿಕೆ ಗಂಟೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2014, 19:30 IST
Last Updated 27 ಅಕ್ಟೋಬರ್ 2014, 19:30 IST

ಇರಾಕ್‌ ಮತ್ತು ಸಿರಿಯಾದಲ್ಲಿ ‘ಇಸ್ಲಾಮಿಕ್‌ ಸ್ಟೇಟ್‌’ (ಐ.ಎಸ್)  ಸ್ಥಾಪ­ನೆಗೆ ಮುಂದಾಗಿರುವ  ಐ.ಎಸ್ ಉಗ್ರರ   ವಿರುದ್ಧ ಕಾರ್ಯಾ­ಚರಣೆಗೆ ಅಮೆರಿಕದ ಜತೆ  ಕೆನಡಾ  ಕೈಜೋಡಿಸಿದೆ. ಇದೇ ಸಂದರ್ಭದಲ್ಲಿ ಕೆನಡಾದಲ್ಲಿ ಗುಂಡಿನ ದಾಳಿ ನಡೆದಿದೆ. ಈಚಿನ ವರ್ಷಗಳಲ್ಲಿ ಪ್ರಮುಖ ದಾಳಿ­ಗ­ಳಿಗೆ ತುತ್ತಾಗದೆ ತಮ್ಮದು ‘ಶಾಂತಿಯ ನೆಲೆವೀಡು’ ಎಂದು ಕರೆದು­ಕೊಳ್ಳುತ್ತಿದ್ದ ಅಲ್ಲಿನ ನಾಗರಿಕರು, ಕಳೆದ ವಾರ ಬರೀ ಮೂರು ದಿನಗಳ ಅಂತರ­ದಲ್ಲಿ ಎರಡು ಬಾರಿ ನಡೆದ ಗುಂಡಿನ ದಾಳಿಗಳಿಂದ ತತ್ತರಿಸಿದ್ದಾರೆ. ದಾಳಿಗಳಿಗೆ ಕಾರಣ ಸ್ಪಷ್ಟವಾಗಿಲ್ಲ. ಆದರೂ, ಇದೊಂದು ಭಯೋತ್ಪಾದಕ ಕೃತ್ಯ ಎಂದು ಪ್ರಧಾನಿ ಸ್ಟೀವನ್‌ ಹಾರ್ಪರ್‌ ಘೋಷಿಸಿದ್ದಾರೆ. ಇತ್ತೀಚೆಗೆ ಮುಸುಕುಧಾರಿಯೊಬ್ಬ ರಾಜಧಾನಿ ಒಟ್ಟಾವದಲ್ಲಿನ ಯುದ್ಧ ಸ್ಮಾರಕ­ವೊಂದರ ಬಳಿ ಸೈನಿಕನನ್ನು ಗುಂಡಿಟ್ಟು ಕೊಂದು, ನಂತರ ಸನಿಹದಲ್ಲಿರುವ ಸಂಸತ್‌ ಕಟ್ಟಡದ ಮೇಲೆ ದಾಳಿ ನಡೆಸಿದ್ದ. ಒಳಗೆ ಸಂಸದರು ಸಭೆ ನಡೆಸುತ್ತಿದ್ದಾಗಲೇ ಕೇಳಿಬಂದ ಗುಂಡಿನ ಮೊರೆತಕ್ಕೆ ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದರು.

ಭದ್ರತಾ ಸಿಬ್ಬಂದಿ ಕೂಡಲೇ ಆತನನ್ನು ಕೊಂದು ಹೆಚ್ಚಿನ ಅನಾಹುತ ತಪ್ಪಿಸಿದ್ದರು. ಇದಕ್ಕೆ ಎರಡು ದಿನಗಳ ಹಿಂದೆ ಮಾಂಟ್ರಿಯಲ್‌ ನಗರದಲ್ಲಿ ವ್ಯಕ್ತಿಯೊಬ್ಬ ಇಬ್ಬರು ಸೈನಿಕರ ಮೇಲೆ ಕಾರು ಹತ್ತಿಸಿದ್ದ. ಅವರಲ್ಲಿ ಒಬ್ಬ ಸೈನಿಕ ಸತ್ತು ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದ. ಈ ವ್ಯಕ್ತಿಯನ್ನೂ ಸ್ಥಳದಲ್ಲಿದ್ದ ಇತರ ಸೈನಿಕರು ಕೊಂದು ಹಾಕಿದ್ದರು. ಈತ ‘ಇಸ್ಲಾಮಿಕ್‌ ಸ್ಟೇಟ್‌’ ಪ್ರಚಾರದ ಪ್ರಭಾವಕ್ಕೆ ಒಳಗಾಗಿ­ರು­ವು­ದಾಗಿ ಸಾಮಾಜಿಕ ಜಾಲ­ತಾಣಗಳಲ್ಲಿ ಹೇಳಿಕೊಂಡಿರುವುದು ಪತ್ತೆ­ಯಾ­ಗಿದೆ. ಈ ವಿಚಾರದಲ್ಲಿ ಕೆನಡಾ ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕಾ­ಗಿದೆ.  ವಸ್ತುನಿಷ್ಠವಾಗಿ ತನಿಖೆಗಳು ನಡೆ­ಯಬೇಕು.  ಆದರೆ  ಯುರೋಪ್ ಹಾಗೂ ಉತ್ತರ ಅಮೆರಿಕದಲ್ಲಿ ನೆಲೆಸಿ­ರುವ ವಲಸಿಗ ಸಮುದಾಯದಲ್ಲಿ ಹೆಚ್ಚುತ್ತಿ­ರುವ ಐ.ಎಸ್ ಪ್ರಚಾರದ ಪ್ರಭಾ­ವ­ವನ್ನು  ಕಡೆಗಣಿಸಲಾಗದು. ಇತ್ತೀಚೆ­ಗಷ್ಟೇ   ಐ.ಎಸ್‌ಗೆ ಸೇರ್ಪಡೆ­ಯಾಗಲು  30 ಕೆನಡಿಯನ್ನರು ದೇಶ ತೊರೆದಿ­ದ್ದಾರೆ ಎಂದು ಕೆನಡಾ ಸರ್ಕಾರವೇ ಪ್ರಕಟಿಸಿತ್ತು.

ಬಹುಸಂಸ್ಕೃತಿಯ ಸಹಿಷ್ಣು ಸಮಾಜವನ್ನು ಕೆನಡಾ ಯಶಸ್ವಿಯಾಗಿ ಕಟ್ಟಿದೆ.  ಮಿಲಿಟರಿ ಭದ್ರತೆಗಿಂತ ಮಾನವ ಭದ್ರತೆಗೆ ಹೆಚ್ಚಿನ ಒತ್ತು ನೀಡಿದ ರಾಷ್ಟ್ರ ಇದು. ಆದರೆ ಕಳೆದ ದಶಕದಲ್ಲಿ ಈ ದೃಷ್ಟಿ ಬದಲಾಗಿದೆ. ಭಯೋತ್ಪಾ­ದನೆ ವಿರುದ್ಧದ ಅಮೆರಿಕ ನೇತೃತ್ವದ ಯುದ್ಧಕ್ಕೆ ಕೆನಡಾ ಸರ್ಕಾರ ಕೈಜೋಡಿಸಿದೆ.  ಹಾಗೆಯೇ ಕೆನಡಾಗೆ ಭಯೋತ್ಪಾದನೆ ಹೊಸದೇನಲ್ಲ.  1985ರಲ್ಲಿ ಕೆನಡಾ­ದಿಂದ ಕಾರ್ಯಾಚರಣೆ ಮಾಡುತ್ತಿದ್ದ ಸಿಖ್‌ ಉಗ್ರರು ಏರ್‌ ಇಂಡಿಯಾ ವಿಮಾನ ಪತನಕ್ಕೆ ಕಾರಣವಾಗಿ 329 ಜನರನ್ನು ಬಲಿ ತೆಗೆದುಕೊಂಡಿದ್ದರು. ಬಬ್ಬರ್‌ ಖಲ್ಸಾ, ಎಲ್‌ಟಿಟಿಇ ಅಂತಹ ಭಯೋತ್ಪಾದಕ ಸಂಘಟನೆಗಳು ಮತ್ತು ಜಿಹಾದಿಗಳ ಪ್ರಚಾರ ಭರಾಟೆ, ನಿಧಿ ಸಂಗ್ರಹದಂತಹ ಕೃತ್ಯ ಮಿತಿ­ಮೀರಿದ್ದರೂ  ಅಲ್ಲಿನ ಸರ್ಕಾರ ಉಪೇಕ್ಷಿಸುತ್ತಲೇ ಬಂದಿತ್ತು. ಈಗ ತನ್ನ ನೆಲ­ದಲ್ಲೇ ಆಗಿರುವ ದಾಳಿಗಳಿಂದಾಗಿ   ತನ್ನ ಸೌಮ್ಯವಾದಿ ನಿಲುವಿನ ಬಗ್ಗೆ ಮರುಚಿಂತಿಸುವ ಅಗತ್ಯ ಕೆನಡಾಗೆ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.