ADVERTISEMENT

ಕಡ್ಡಾಯ ಶಿಕ್ಷಣ ಎನ್ನುವ ಕಾಗದದ ಮೇಲಿನ ಆದರ್ಶ

​ಪ್ರಜಾವಾಣಿ ವಾರ್ತೆ
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
ಕಡ್ಡಾಯ ಶಿಕ್ಷಣ ಎನ್ನುವ ಕಾಗದದ ಮೇಲಿನ ಆದರ್ಶ
ಕಡ್ಡಾಯ ಶಿಕ್ಷಣ ಎನ್ನುವ ಕಾಗದದ ಮೇಲಿನ ಆದರ್ಶ   

ಬೆಂಗಳೂರಿನ ಎಚ್‌ಬಿಆರ್‌ ಬಡಾವಣೆಯ ಮೂರು ಕೊಳೆಗೇರಿಗಳಲ್ಲಿನ 249 ಮಕ್ಕಳು ಈವರೆಗೆ ಶಾಲೆಯೇ ಮೆಟ್ಟಿಲನ್ನೇ ಹತ್ತಿಲ್ಲ ಎನ್ನುವ ಸಂಗತಿ ಶಿಕ್ಷಣ ಇಲಾಖೆಯ ಕಾರ್ಯವೈಖರಿಗೆ ಹಿಡಿದಿರುವ ಕನ್ನಡಿಯಾಗಿದೆ. ಇದು  ಶಿಕ್ಷಣ ಇಲಾಖೆಯ ವೈಫಲ್ಯವನ್ನು ಎತ್ತಿತೋರಿಸುವುದರ ಜೊತೆಗೆ, ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಳಿಸುವ ರಾಜ್ಯ ಸರ್ಕಾರದ ಬದ್ಧತೆ ಕಾಗದದ ಮೇಲಷ್ಟೇ ಉಳಿದಿರುವುದನ್ನು ಸೂಚಿಸುತ್ತಿದೆ. ಮಕ್ಕಳ ಹಕ್ಕುಗಳ ಆಯೋಗ ನಡೆಸಿರುವ ಸಮೀಕ್ಷೆ ಮೂರು ಕೊಳೆಗೇರಿಗಳಿಗೆ ಮಾತ್ರ ಸೀಮಿತವಾಗಿದ್ದು, ಈ ಸಂಖ್ಯೆ ಬೆಂಗಳೂರಿನ ಉಳಿದ ಕೊಳೆಗೇರಿಗಳು ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಶಾಲೆಗಳಿಂದ ಹೊರಗುಳಿದಿರಬಹುದಾದ ಮಕ್ಕಳ ಬಹುದೊಡ್ಡ ಸಮೂಹವನ್ನು ಪ್ರತಿನಿಧಿಸುವಂತಿದೆ. ಸರ್ಕಾರದ ಅಧಿಕಾರ ಕೇಂದ್ರ ಇರುವ ನಗರದಲ್ಲೇ ಪರಿಸ್ಥಿತಿ ಹೀಗಿದ್ದರೆ, ರಾಜಧಾನಿಯಿಂದ ದೂರವಿರುವ ಸಣ್ಣಪುಟ್ಟ ಊರುಗಳಲ್ಲಿ ಅದೆಷ್ಟು ಮಕ್ಕಳು ಅಕ್ಷರವಂಚಿತರಾಗಿರಬಹುದು ಎನ್ನುವುದರ ಕಲ್ಪನೆ ಗಾಬರಿಹುಟ್ಟಿಸುವಂತಹದ್ದು.

6 ರಿಂದ 14 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2009ರಲ್ಲಿ ಜಾರಿಗೊಂಡಿತು. ಈ ಕಾಯ್ದೆ ಜಾರಿಗೊಂಡು ಏಳು ವರ್ಷಗಳು ಕಳೆದರೂ ಸಾವಿರಾರು ಮಕ್ಕಳು ಶಾಲೆಗಳಿಂದ ಹೊರಗೇ ಉಳಿದಿದ್ದಾರೆ. ಇವರಲ್ಲಿ ಕೆಲವರು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದರೆ, ಮತ್ತೆ ಕೆಲವರು ತಮ್ಮ ಅಪ್ಪ–ಅಮ್ಮಂದಿರ ದೈನಿಕದ ಜವಾಬ್ದಾರಿಗಳಿಗೆ ಹೆಗಲು ನೀಡುತ್ತಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂಥ ಕೆಲವು ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ ಬದುಕನ್ನು ಹಾಳು ಮಾಡಿಕೊಳ್ಳುವುದೂ ಇದೆ. ಆಹಾರ–ಕೆಲಸ ಹುಡುಕಿಕೊಂಡು ಊರೂರು ಅಲೆಯುವ ಕುಟುಂಬಗಳ ವಲಸೆ ಪ್ರವೃತ್ತಿ ಕೂಡ ಮಕ್ಕಳ ಶಿಕ್ಷಣಕ್ಕೆ ಅಡಚಣೆಯಾಗಿದೆ. ಅಲೆಮಾರಿ ಮಕ್ಕಳನ್ನು ಕೂಡ ಶಾಲೆಗಳಿಗೆ ಕರೆತರಲು ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಿಸುವ ನಿಟ್ಟಿನಲ್ಲಿ ‘ಸರ್ವ ಶಿಕ್ಷಣ ಅಭಿಯಾನ’ ಚಾಲ್ತಿಯಲ್ಲಿದೆ. ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಯಾವುದೇ ಬಗೆಯ ಸಾಮಾಜಿಕ, ಪ್ರಾದೇಶಿಕ ಹಾಗೂ ಲಿಂಗ ತಾರತಮ್ಯವನ್ನು ತೊಡೆದುಹಾಕುವುದು ಈ ಅಭಿಯಾನದ ಧ್ಯೇಯವಾಗಿದೆ. ‘ಅನ್ನಭಾಗ್ಯ’, ‘ಕ್ಷೀರಭಾಗ್ಯ’ದಂಥ ಕಾರ್ಯಕ್ರಮಗಳು ಮಕ್ಕಳನ್ನು ಶಾಲೆಗಳಿಗೆ ಆಕರ್ಷಿಸಲು ರೂಪಿಸಿರುವ ಯೋಜನೆಗಳಾಗಿವೆ. ವಿವಿಧ ಕಾರಣಗಳಿಂದ ಮನೆಯಲ್ಲೇ ಉಳಿದ ಮಕ್ಕಳನ್ನು ಶಾಲೆಗೆ ನೋಂದಣಿ ಮಾಡಿಸುವ ಶಿಕ್ಷಣ ಇಲಾಖೆಯ ‘ಸೇತುಬಂಧ’ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಆದರೆ, ಇವೆಲ್ಲ ಕಾರ್ಯಕ್ರಮಗಳ ನಂತರವೂ ಶಾಲೆಗಳ ಚೌಕಟ್ಟಿನಿಂದ ಮಕ್ಕಳು ಹೊರಗುಳಿದಿರುವುದು ಆತಂಕ ಉಂಟುಮಾಡುವ ಸಂಗತಿ. ಇದು ಶಿಕ್ಷಣ ಇಲಾಖೆಯ ಯೋಜನೆಗಳ ಸಮರ್ಪಕ ಅನುಷ್ಠಾನದ ಬಗ್ಗೆ ಗುಮಾನಿ ಉಂಟುಮಾಡುವಂತಿದೆ. ಈ ಅನುಮಾನವನ್ನು, ಬೆಂಗಳೂರಿನ ಕೊಳೆಗೇರಿಗಳಲ್ಲಿನ ಶಿಕ್ಷಣವಂಚಿತ ಮಕ್ಕಳನ್ನು ಯಾವ ಸರ್ಕಾರಿ ಅಧಿಕಾರಿಯೂ ಸಂಪರ್ಕಿಸಿಲ್ಲ ಎನ್ನುವುದು ಬಲಗೊಳಿಸುವಂತಿದೆ. ಬಳ್ಳಾರಿ, ರಾಯಚೂರು, ಕಲಬುರ್ಗಿ ಭಾಗಗಳಿಂದ ಬೆಂಗಳೂರಿಗೆ ವಲಸೆ ಬಂದಿರುವ ಅನೇಕ ಕುಟುಂಬಗಳಿಗೆ ಉಚಿತ ಶಿಕ್ಷಣ ಸವಲತ್ತಿನ ಕುರಿತು ತಿಳಿವಳಿಕೆ ಇಲ್ಲದಿರುವುದು ಕೂಡ ನಮ್ಮ ಯೋಜನೆಗಳು ಮೇಲ್ಮಟ್ಟದಲ್ಲೇ ಜಾರಿಗೊಳ್ಳುತ್ತಿರುವುದಕ್ಕೆ ಉದಾಹರಣೆಯಾಗಿದೆ.

ADVERTISEMENT

ಮಕ್ಕಳ ಶಿಕ್ಷಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುತ್ತಿದ್ದರೂ, ಲಕ್ಷಾಂತರ ಮಕ್ಕಳು ಈಗಲೂ ಬೀದಿಗಳಲ್ಲಿ ಹಾಗೂ ಮನೆಗಳಲ್ಲಿ ಉಳಿದಿದ್ದಾರೆ. 2014ರ ಮಕ್ಕಳ ಜನಗಣತಿಯ ಪ್ರಕಾರ, ರಾಜ್ಯದಲ್ಲಿ 1.70 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಗಳಿಂದ ಹೊರಗಿದ್ದಾರೆ. 2012–13ರಲ್ಲಿ ಈ ಸಂಖ್ಯೆ 22,738ರಷ್ಟಿತ್ತು. ಅಂದರೆ, ಎರಡು ವರ್ಷಗಳ ಅಂತರದಲ್ಲೇ ಶಾಲೆಗಳಿಂದ ಹೊರಗುಳಿದ ಮಕ್ಕಳ ಸಂಖ್ಯೆ ರಾಜ್ಯದಲ್ಲಿ ಸುಮಾರು ಏಳು ಪಟ್ಟು ಹೆಚ್ಚಾಗಿದೆ. ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಊಟದಂತಹ ಆಕರ್ಷಣೆಗಳ ನಡುವೆಯೂ ಬಡಮಕ್ಕಳು, ವಿಶೇಷವಾಗಿ ಹೆಣ್ಣುಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಶಾಲೆಗಳಲ್ಲಿ ಮಕ್ಕಳ ಕೊರತೆಯ ಕಾರಣಗಳನ್ನು ನೀಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಹಸನ ಪ್ರತಿ ವರ್ಷವೂ ನಡೆಯುತ್ತಿದೆ. ಇನ್ನೊಂದೆಡೆ ಶಿಕ್ಷಣದ ಖಾಸಗೀಕರಣಕ್ಕೆ ಸರ್ಕಾರದ ಉತ್ತೇಜನವೂ ದೊರೆಯುತ್ತಿದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ನಿರ್ಲಕ್ಷ್ಯ ಅನೈತಿಕವಾದುದು. ಮಕ್ಕಳನ್ನು ತಮ್ಮ ಹಕ್ಕುಗಳಿಂದ ವಂಚಿಸುವ ಧೋರಣೆ ಸಂವಿಧಾನದ ಉಲ್ಲಂಘನೆಯೂ ಹೌದು ಎನ್ನುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.