ADVERTISEMENT

ಕೇಂದ್ರ ಸಂಪುಟಕ್ಕೆ ಕಾಯಕಲ್ಪ: ಸಮತೋಲನಕ್ಕೆ ಮೋದಿ ಕಸರತ್ತು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 19:30 IST
Last Updated 3 ಸೆಪ್ಟೆಂಬರ್ 2017, 19:30 IST
ಕೇಂದ್ರ ಸಂಪುಟಕ್ಕೆ ಕಾಯಕಲ್ಪ: ಸಮತೋಲನಕ್ಕೆ ಮೋದಿ ಕಸರತ್ತು
ಕೇಂದ್ರ ಸಂಪುಟಕ್ಕೆ ಕಾಯಕಲ್ಪ: ಸಮತೋಲನಕ್ಕೆ ಮೋದಿ ಕಸರತ್ತು   

ಈಗಿನ ಲೋಕಸಭೆಯ ಅವಧಿ ಇನ್ನು ಇಪ್ಪತ್ತು ತಿಂಗಳಲ್ಲಿ ಮುಗಿಯಲಿದೆ. ಕೆಲವೇ ತಿಂಗಳಲ್ಲಿ ಕರ್ನಾಟಕ ಮತ್ತು ಗುಜರಾತ್‌ ವಿಧಾನಸಭೆಗಳಿಗೆ ಚುನಾವಣೆ ನಡೆಯಬೇಕಾಗಿದೆ. ಬಿಜೆಪಿಗೆ ಈ ಎಲ್ಲ ಚುನಾವಣೆಗಳೂ ತುಂಬ ನಿರ್ಣಾಯಕ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಮಾಡುವಾಗ ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡಿದ್ದರೆ ಅದು ಸ್ವಾಭಾವಿಕ. ಹೊಸದಾಗಿ 9 ಮಂದಿಯನ್ನು ಸೇರಿಸಿಕೊಂಡಿದ್ದಾರೆ. ಸ್ವತಂತ್ರವಾಗಿ ಖಾತೆಗಳನ್ನು ನಿರ್ವಹಿಸುತ್ತಿದ್ದ ನಾಲ್ವರು ಸಹಾಯಕ ಸಚಿವರಿಗೆ ಸಂಪುಟ ದರ್ಜೆಗೆ ಬಡ್ತಿ ಕೊಟ್ಟಿದ್ದಾರೆ. ಇದು ದಕ್ಷತೆಗೆ ಸಂದ ಮಣೆ. ಆರು ಸಚಿವರ ರಾಜೀನಾಮೆ ಕೇಳಿ ಸಂಪುಟದಿಂದ ಕೈಬಿಡುವ ಮೂಲಕ ‘ಅದಕ್ಷತೆಯನ್ನು ಸಹಿಸುವುದಿಲ್ಲ’ ಎಂಬ ಸಂದೇಶ ರವಾನಿಸಿದ್ದಾರೆ. ಉಮಾಭಾರತಿ ಕೈಯಲ್ಲಿದ್ದ ಜಲಸಂಪನ್ಮೂಲ ಖಾತೆಯನ್ನು ಹಿಂದಕ್ಕೆ ತೆಗೆದುಕೊಳ್ಳಲು ಕೂಡ ಇದೇ ಕಾರಣ ಇರಬಹುದು. ಆದರೆ ಐಎಎಸ್‌, ಐಪಿಎಸ್‌ ಮತ್ತು ಭಾರತೀಯ ವಿದೇಶಾಂಗ ಸೇವೆಯಲ್ಲಿದ್ದು ನಿವೃತ್ತರಾದ ನಾಲ್ವರನ್ನು ಸೇರಿಸಿಕೊಂಡಿರುವುದು ಮಾತ್ರ ತುಂಬ ಲೆಕ್ಕಾಚಾರದ ನಡೆ.

ಇವರಲ್ಲಿ ಸತ್ಯಪಾಲ ಸಿಂಗ್‌ ಮುಂಬೈಯ ನಿವೃತ್ತ ಪೊಲೀಸ್‌ ಕಮಿಷನರ್‌. ಆರ್‌.ಕೆ. ಸಿಂಗ್‌ ಕೇಂದ್ರ ಗೃಹ ಖಾತೆಯ ನಿವೃತ್ತ ಕಾರ್ಯದರ್ಶಿ. ಹರದೀಪ್‌ ಸಿಂಗ್ ಪುರಿ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದವರು. ಅಲ್ಫೋನ್ಸ್ ಕಣ್ಣಂತಾನಂ ಅವರು ಸರ್ಕಾರದ ಉನ್ನತ ಹುದ್ದೆಗೇರಿ ರಾಜಕೀಯ ಪ್ರವೇಶಕ್ಕಾಗಿ ರಾಜೀನಾಮೆ ಕೊಟ್ಟು ಹೊರಬಂದವರು. ಇದು ವಿವಿಧ ಕ್ಷೇತ್ರಗಳ ಪರಿಣತರ ಸೇವೆಯನ್ನು ಆಡಳಿತದಲ್ಲಿ ಬಳಸಿಕೊಳ್ಳುವತ್ತ ಇನ್ನೊಂದು ಹೆಜ್ಜೆ. ಅಲ್ಫೋನ್ಸ್‌ ಅವರನ್ನು ಸೇರಿಸಿಕೊಳ್ಳುವುದರ ಹಿಂದೆ ಕೇರಳದಲ್ಲಿ ಬಿಜೆಪಿಯನ್ನು ಬಲಪಡಿಸುವುದಕ್ಕಾಗಿ ಕ್ರೈಸ್ತ ಸಮುದಾಯವನ್ನು ಒಲಿಸಿಕೊಳ್ಳುವ ಮತ್ತು ಸಂಪುಟದಲ್ಲಿ ಕ್ರೈಸ್ತರಿಗೆ ಪ್ರಾತಿನಿಧ್ಯ ಕೊಡುವ ಉದ್ದೇಶ ಎದ್ದು ಕಾಣುತ್ತದೆ. ತಮ್ಮ ಕನಸಿನ ಭಾರತ ನಿರ್ಮಾಣಕ್ಕಾಗಿ ಕಾರ್ಯೋತ್ಸಾಹ, ದಕ್ಷತೆ, ರಾಜಕಾರಣ ಮತ್ತು ವೃತ್ತಿಪರತೆಯಲ್ಲಿ ತೀಕ್ಷ್ಣ ಮತ್ತು ಸೂಕ್ಷ್ಮ ದೃಷ್ಟಿಕೋನ ಬೆಳೆಸಿಕೊಂಡವರು ಬೇಕು ಎಂಬ ಪ್ರಧಾನಿಯ ಆಶಯವೂ ಹೊಸಬರ, ವಿವಿಧ ರಂಗಗಳಲ್ಲಿ ನುರಿತವರ ಸೇರ್ಪಡೆಯ ಹಿಂದೆ ಕೆಲಸ ಮಾಡಿರಬಹುದು.

ಇತ್ತೀಚೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿದ ಜೆಡಿಯು ಮತ್ತು ಎಐಎಡಿಎಂಕೆ ಅಥವಾ ಬಿಜೆಪಿಯ ದೀರ್ಘಕಾಲೀನ ಮಿತ್ರಪಕ್ಷ ಶಿವಸೇನೆಯನ್ನು ಈ ಸಲ ಪರಿಗಣಿಸದೇ ಇರುವುದು ಗಮನಾರ್ಹ. ಸಂಖ್ಯಾಬಲಕ್ಕೆ ಅನುಗುಣವಾಗಿ ಯಾವ ಪ್ರಮಾಣದಲ್ಲಿ ಪ್ರಾತಿನಿಧ್ಯ ಕೊಡಬೇಕು ಎನ್ನುವ ಸೂತ್ರದ ಬಗ್ಗೆ ಮೂಡದ ಒಮ್ಮತ, ಎಐಎಡಿಎಂಕೆ ಒಳಗಿನ ಬಣ ರಾಜಕೀಯ ಶಮನಗೊಳ್ಳದೇ ಇರುವುದು ಈ ಮೂರು ಪಕ್ಷಗಳ ಅವಕಾಶಕ್ಕೆ ಅಡ್ಡಿಯಾದಂತಿದೆ. ಸಂವಿಧಾನದ 97ನೇ ತಿದ್ದುಪಡಿ ಪ್ರಕಾರ ಸಂಪುಟದಲ್ಲಿ ಪ್ರಧಾನಿ ಸೇರಿ ಗರಿಷ್ಠ 82 ಸಚಿವರು ಇರಬಹುದು. ಈಗಿರುವ ಸಂಖ್ಯೆ 76. ಅಂದರೆ ಇನ್ನೂ 6 ಮಂದಿಯನ್ನು ಸೇರಿಸಿಕೊಳ್ಳುವ ಅವಕಾಶವಂತೂ ಇದೆ.

ಇನ್ನು, ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಎರಡು ಅಚ್ಚರಿಗಳಿವೆ. ಧರ್ಮದ ಮಾನ್ಯತೆ ಆಮಿಷ ಮುಂದಿಟ್ಟು ಲಿಂಗಾಯತ– ವೀರಶೈವರನ್ನು ಬಿಜೆಪಿಯ ತೆಕ್ಕೆಯಿಂದ ತನ್ನೆಡೆ ಸೆಳೆಯಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಅದಕ್ಕೆ ತಿರುಗೇಟು ಕೊಡಲು ರಾಜ್ಯದ ಲಿಂಗಾಯತ ಸಮುದಾಯದವರೊಬ್ಬರಿಗೆ ಮಂತ್ರಿ ಸ್ಥಾನ ಕೊಡಬಹುದು ಎಂಬ ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಉತ್ತರ ಕನ್ನಡ ಕ್ಷೇತ್ರದಿಂದ 5 ಸಲ ಆಯ್ಕೆಯಾದ ಅನಂತಕುಮಾರ ಹೆಗಡೆ ಅವರಿಗೆ ಅವಕಾಶ ಸಿಕ್ಕಿದೆ. ಮಂತ್ರಿ ಸ್ಥಾನ ಅನೇಕ ಜವಾಬ್ದಾರಿಯನ್ನೂ ಹೊರಿಸುತ್ತದೆ ಎನ್ನುವುದನ್ನು ಅವರು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಪ್ರಚೋದನಕಾರಿ ಮತ್ತು ವಿವಾದಾತ್ಮಕ ಹೇಳಿಕೆಗಳಿಂದ ಇನ್ನಾದರೂ ದೂರ ಇರಬೇಕು. ಕೌಟುಂಬಿಕವಾಗಿ ತಮಿಳುನಾಡು–ಆಂಧ್ರದ ನಂಟು ಹೊಂದಿದ್ದರೂ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್‌ ಅವರಿಗೆ ಸಂಪುಟ ದರ್ಜೆಗೆ ಬಡ್ತಿ ಮತ್ತು ಅತ್ಯಂತ ಮಹತ್ವದ ರಕ್ಷಣಾ ಖಾತೆ ದೊರೆತಿದೆ. ಇಂದಿರಾ ಗಾಂಧಿ ಅವರನ್ನು ಬಿಟ್ಟರೆ ಈ ಖಾತೆಗೆ ಮಹಿಳೆಯೊಬ್ಬರ ಉಸ್ತುವಾರಿ ಇದು ಎರಡನೇ ಸಲ. ಆದರೆ ಇಂದಿರಾ ಅವರು ಪ್ರಧಾನಿಯ ಕರ್ತವ್ಯದ ಜತೆಗೆ ಇದನ್ನೂ ನೋಡಿಕೊಳ್ಳುತ್ತಿದ್ದರು. ಆ ದೃಷ್ಟಿಯಿಂದ ನಿರ್ಮಲಾ ಅವರು ರಕ್ಷಣಾ ಖಾತೆಯ ಮೊದಲ ಪೂರ್ಣಕಾಲಿಕ ಸ್ವತಂತ್ರ ಸಚಿವೆ. ಈ ಸರ್ಕಾರದಲ್ಲಿ ರಕ್ಷಣೆ, ವಿದೇಶಾಂಗ ವ್ಯವಹಾರ, ವಾರ್ತಾ ಮತ್ತು ಪ್ರಸಾರದಂತಹ ಮೂರು ಮಹತ್ವದ ಖಾತೆಗಳು ಮಹಿಳೆಯರ ಕೈಯಲ್ಲಿವೆ ಎನ್ನುವುದು ಈ ಸಲದ ವಿಸ್ತರಣೆಯಲ್ಲಿ ಎದ್ದುಕಾಣುವ ಅಂಶ. ಮೋದಿ ಸಮತೋಲನದ ಕಸರತ್ತು ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.