ADVERTISEMENT

ಕ್ರಿಮಿಯಾ ಬಿಕ್ಕಟ್ಟು ಉಲ್ಬಣ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ಕ್ರಿಮಿಯಾದಲ್ಲಿ ರಾಜಕೀಯ ಮತ್ತು ಸೇನಾ ಪರಿಸ್ಥಿತಿ ಆತಂಕಕಾರಿ  ಮಟ್ಟ ಬಂದು ತಲುಪಿದೆ. ಅಲ್ಲಿ ನಡೆದ ಜನಮತಗಣನೆಯ ಸಂದರ್ಭದಲ್ಲಿ ರಷ್ಯಾದ ಪರ ಅಲ್ಲಿನ ಬಹುತೇಕ ಜನರ ಒಲವು ವ್ಯಕ್ತವಾದ ಬೆನ್ನಲ್ಲೇ ರಷ್ಯಾದ ಅಧ್ಯಕ್ಷ ಪುಟಿನ್ ಅವರು ಕ್ರಿಮಿಯಾದ ಪ್ರಧಾನಿ ಸೆರ್ಗಿ ಅವರ ಜತೆ ಮಂಗಳ­ವಾರ ಒಪ್ಪಂದಕ್ಕೆ ಸಹಿ ಹಾಕಿದ್ದು ಇದರ ಪ್ರಕಾರ ಕ್ರಿಮಿಯಾ ರಷ್ಯಾದ ಅವಿ­ಭಾಜ್ಯ ಅಂಗ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.

ಒಪ್ಪಂದಕ್ಕೆ ಸಹಿ­ಹಾಕಿದ ಕ್ಷಣದಿಂದ ಕ್ರಿಮಿಯಾ ರಿಪಬ್ಲಿಕ್ ರಷ್ಯಾದ ಅವಿಭಾಜ್ಯಭಾಗ ಎಂದು ಕ್ರೆಮ್ಲಿನ್ ಹೇಳಿಕೊಂಡಿದೆ. ಇದು ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸಿದೆ. ವರದಿ­ಗಳ ಪ್ರಕಾರ ಜನಮತಗಣನೆಯ ಸಂದರ್ಭದಲ್ಲಿ ಶೇ 97ರಷ್ಟು ಜನರು ರಷ್ಯಾದ ಜತೆ ಕ್ರಿಮಿಯಾ ಸೇರ್ಪಡೆಯ ಪರವಾಗಿ ಮತ ಚಲಾಯಿಸಿದ್ದಾರೆ. ಆದರೆ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ಇದನ್ನು ತಿರಸ್ಕ­ರಿ­ಸಿವೆ.

ಯೂರೋಪ್ ಒಕ್ಕೂಟಕ್ಕೆ ಇದು ಸಮ್ಮತವಲ್ಲ. ಕಳೆದ ಶತಮಾನದ ಅಂತ್ಯದ ವರೆಗೆ ಕ್ರಿಮಿಯಾ ಸೋವಿಯತ್ ಒಕ್ಕೂಟದ ಒಂದು ಭಾಗವೇ ಆಗಿತ್ತು. ಅಲ್ಲಿನ ಬಹುತೇಕ ನಿವಾಸಿಗಳು ರಷ್ಯನ್ ಭಾಷೆ ಮಾತನಾಡು­ವ­ವರೇ ಆಗಿದ್ದಾರೆ. ಆದ್ದರಿಂದ ಜನಮತಗಣನೆಯ ಫಲಿತಾಂಶ ನಿರೀಕ್ಷಿತವೇ ಆಗಿತ್ತು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು  ಜನಮತಗಣನೆಯ  ಫಲಿ­ತಾಂಶ­ವನ್ನು  ಈಗಾಗಲೇ ತಿರಸ್ಕರಿಸಿದ್ದಾರೆ. ಪ್ರತೀಕಾರದ ಬೆದರಿಕೆ ಹಾಕಿ­ದ್ದಾರೆ. ಅಮೆರಿಕ ಮತ್ತು ಯೂರೋಪ್ ಒಕ್ಕೂಟ, ರಷ್ಯಾ ಹಾಗೂ ಕ್ರಿಮಿ­ಯಾದ ಅಧಿಕಾರಿಗಳಿಗೆ ದಿಗ್ಬಂಧನ ಹೇರಿದೆ. ರಷ್ಯಾ ಇದಕ್ಕೆಲ್ಲ ಬಗ್ಗುವ ರಾಷ್ಟ್ರವಲ್ಲ. ಶೀತಲ ಸಮರದ ದಿನಗಳು ಮತ್ತೆ ಮರಳುವ ಲಕ್ಷಣಗಳು ಗೋಚರಿಸುತ್ತಿರುವುದು ಆತಂಕಕಾರಿ.

ತನ್ನ ಪಶ್ಚಿಮದ ಗಡಿಯ ಬಳಿ ಅಮೆರಿಕ ಹಿಡಿತ ಸಾಧಿಸುವುದು ರಷ್ಯಾಕ್ಕೆ ಇಷ್ಟ­ವಿಲ್ಲ. ರಷ್ಯಾಕ್ಕೆ ಈ ಪ್ರದೇಶ ಆಯಕಟ್ಟಿನ ಸ್ಥಳ ಬೇರೆ ಆಗಿದೆ. ಉದ್ವಿಗ್ನ ಪರಿ­ಸ್ಥಿ­ತಿ­ಯನ್ನು ಶಮನಗೊಳಿಸಲು ಅಂತರರಾಷ್ಟ್ರೀಯ ಮಟ್ಟದ ಪ್ರಯತ್ನಗ­ಳಾಗ­ಬೇಕಿದೆ. ಆದರೆ ಕಳೆದ ವಾರ ಉಕ್ರೇನ್ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಯಲ್ಲಿ ನಡೆದ ಚರ್ಚೆ ಸಕಾರಾತ್ಮಕ ಪರಿಣಾಮ ಬೀರಿಲ್ಲ. ದಿಗ್ಬಂಧನ ರಷ್ಯಾದ ಮೇಲೆ ಅಂತಹ ಪರಿಣಾಮವನ್ನು ಬೀರದು. ಸದ್ಯದ ಪರಿಸ್ಥಿತಿ ಮುಂದುವರಿ­ದರೆ ಉಕ್ರೇನ್ ನಲ್ಲಿ ಅಂತರ್ಯುದ್ಧ ಆರಂಭವಾಗುವ ಸಾಧ್ಯತೆ ಇದೆ. ಇದು ನಿಯಂತ್ರಣ ಮೀರುವ ಸಂಭವ ಇದ್ದು ಇದನ್ನು ತಪ್ಪಿಸಲು  ರಾಜಕೀಯ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳನ್ನು  ಮುಂದುವರಿ­ಸುವುದು  ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.