ADVERTISEMENT

ಗಾಳಿಸುದ್ದಿಗಳಿಗೆ ಕಿವಿಗೊಡಬೇಡಿ ಜಾಗೃತಿ ಮೂಡಿಸುವುದು ಅಗತ್ಯ

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:30 IST
Last Updated 25 ಮೇ 2018, 19:30 IST
ಗಾಳಿಸುದ್ದಿಗಳಿಗೆ ಕಿವಿಗೊಡಬೇಡಿ ಜಾಗೃತಿ ಮೂಡಿಸುವುದು ಅಗತ್ಯ
ಗಾಳಿಸುದ್ದಿಗಳಿಗೆ ಕಿವಿಗೊಡಬೇಡಿ ಜಾಗೃತಿ ಮೂಡಿಸುವುದು ಅಗತ್ಯ   

ಅಪರಿಚಿತ ವ್ಯಕ್ತಿಗಳನ್ನು ‘ಮಕ್ಕಳ ಕಳ್ಳರು’ ಎಂದು ಶಂಕಿಸಿ ಹಿಡಿದು ಮನಬಂದಂತೆ ಥಳಿಸುವ ಪ್ರಕರಣಗಳು ಹೆಚ್ಚುತ್ತಿರುವುದು ಸರ್ಕಾರ ಮತ್ತು ನಾಗರಿಕ ಸಮಾಜ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಾಜಸ್ಥಾನದ ಕಾಲೂರಾಮ್‌ ಎಂಬುವರನ್ನು ಮಕ್ಕಳ ಕಳ್ಳನೆಂದು ಶಂಕಿಸಿ ಮನಸೋ ಇಚ್ಛೆ ಥಳಿಸಿ ಕೊಲೆ ಮಾಡಲಾಗಿದೆ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಆ ನಿರುದ್ಯೋಗಿ ಬಡವ, ತಲೆಕೂದಲು ಮತ್ತು ಗಡ್ಡ ಬೋಳಿಸದೇ ಇದ್ದುದೇ ಆತನ ಮೇಲೆ ಜನರಿಗೆ ಅನುಮಾನ ಮೂಡಲು ಕಾರಣ! ಅದಕ್ಕೂ ಮುನ್ನ ತಿರುವಣ್ಣಾಮಲೈಯಲ್ಲಿ ರುಕ್ಮಿಣಿ ಎಂಬ 65ರ ಹಿರಿಯ ಮಹಿಳೆಯನ್ನೂ ಹೀಗೆಯೇ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಪುಟ್ಟ ಮಗುವೊಂದಕ್ಕೆ ಪ್ರೀತಿಯಿಂದ ಚಾಕೊಲೆಟ್‌ ನೀಡಿದ್ದೇ ಆ ತಾಯಿ ಮಾಡಿದ ತಪ್ಪು! ಮನುಷ್ಯತ್ವದಲ್ಲಿ ನಂಬಿಕೆ ಇರುವವರು ಯಾರೂ ಇಂತಹ ಅಮಾನವೀಯ ಕೃತ್ಯಗಳನ್ನು ಸಮರ್ಥಿಸಲು ಸಾಧ್ಯವಿಲ್ಲ.

ನಾಗರಿಕ ಸಮಾಜದಲ್ಲಿ ಕಾನೂನನ್ನು ಕೈಗೆತ್ತಿಕೊಂಡು ‘ಶಿಲಾಯುಗ’ದ ಜನರಂತೆ ವರ್ತಿಸುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ; ಅವರನ್ನು ನಿಯಂತ್ರಿಸುವಲ್ಲಿ ನಮ್ಮ ಕಾನೂನು ವ್ಯವಸ್ಥೆ ವಿಫಲವಾಗಿದೆ ಎನ್ನುವುದನ್ನು ಈ ಪ್ರಕರಣಗಳು ಎತ್ತಿ ತೋರಿಸುತ್ತಿವೆ. ‘ಮಕ್ಕಳ ಕಳ್ಳರು ಬಂದಿದ್ದಾರೆ’ ಎಂಬ ವದಂತಿಗಳನ್ನು ನಂಬಿ ಕಳೆದ 25 ದಿನಗಳಲ್ಲಿ ನಮ್ಮ ರಾಜ್ಯವೊಂದರಲ್ಲೇ ಅಮಾಯಕರಿಗೆ ಥಳಿಸಿದ 81 ಪ್ರಕರಣಗಳು ವರದಿಯಾಗಿವೆ. ಹೀಗೆ ಏಟು ತಿಂದವರು ಭಿಕ್ಷುಕರು, ಮಾನಸಿಕ ಅಸ್ವಸ್ಥರು, ಕೂಲಿ ಕಾರ್ಮಿಕರು ಮತ್ತು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುವವರು ಎನ್ನುವುದು ಏನನ್ನು ಸೂಚಿಸುತ್ತದೆ? ಈ ಸಮಾಜದಲ್ಲಿ ಬಡವರಿಗೆ ಮತ್ತು ದುರ್ಬಲರಿಗೆ ಬದುಕುವ ಹಕ್ಕು ಇಲ್ಲವೆಂದೇ? ದುರ್ಬಲರಿಗೆ ರಕ್ಷಣೆ ಕೊಡಬೇಕಾದ ಪೊಲೀಸ್‌ ವ್ಯವಸ್ಥೆ ಅದಕ್ಷವಾಗಿದೆಯೆಂದೇ? ನಿಜಕ್ಕೂ ನಾಗರಿಕ ಸಮಾಜ ನಾಚಿಕೆಯಿಂದ ತಲೆ ತಗ್ಗಿಸಬೇಕಾದ ಸಂಗತಿಯಿದು.

ಚಿತ್ರದುರ್ಗ, ಬಳ್ಳಾರಿ, ಯಾದಗಿರಿ, ಕಲಬುರ್ಗಿ, ಹಾಸನ ಮುಂತಾದ ಜಿಲ್ಲೆಗಳಿಂದ ಪೊಲೀಸರಿಗೆ ಅಪರಿಚಿತರ ಬಗ್ಗೆ ಆತಂಕದ ಕರೆಗಳು ಬಂದಿರುವುದನ್ನು ಗಮನಿಸಿದರೆ, ಸಮಾಜದಲ್ಲಿ ಮಕ್ಕಳ ಕಳ್ಳರ ಬಗೆಗಿನ ಭಯ ಸಮೂಹಸನ್ನಿಯಾಗಿ ಪರಿವರ್ತನೆ ಆದಂತಿದೆ. ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಹರಡುತ್ತಿರುವ ಬೇಜವಾಬ್ದಾರಿ ವದಂತಿಗಳೂ ಈ ಸಮೂಹಸನ್ನಿಗೆ ಕೊಡುಗೆ ನೀಡುತ್ತಿವೆ. ದೃಶ್ಯ ಮಾಧ್ಯಮಗಳು ಮಕ್ಕಳ ಕಳ್ಳರ ಬಗ್ಗೆ ವಿಶೇಷ ವರದಿಗಳನ್ನು ಪ್ರಸಾರ ಮಾಡುವಾಗ, ಪ್ರಚೋದಕವಲ್ಲದ ಸಂಯಮದ ಭಾಷೆ ಬಳಸುವ ಅಗತ್ಯ ಇಲ್ಲಿ ಎದ್ದು ಕಾಣುತ್ತಿದೆ. ಸೈಬರ್‌ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ ಎನ್ನುವುದನ್ನೂ ಈ ಸನ್ನಿವೇಶ ಒತ್ತಿ ಹೇಳುತ್ತಿದೆ. ಕೊಲೆ, ಹಲ್ಲೆ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಬಂಧಿಸಿ ಅವರಿಗೆ ಶೀಘ್ರವೇ ಕಠಿಣ ಶಿಕ್ಷೆ ವಿಧಿ ಸುವಂತಾಗಬೇಕು. ಗಾಳಿಸುದ್ದಿಗಳ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಪೊಲೀಸರು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಸಾಮಾಜಿಕ ಕಾಳಜಿಯ ಸಂಘ ಸಂಸ್ಥೆಗಳೂ ಪೊಲೀಸರ ಜತೆಗೆ ಕೈಜೋಡಿಸಬೇಕು. ‘ಕಾನೂನು ಕೈಗೆತ್ತಿಕೊಂಡವರು ಅದಕ್ಕೆ ತಕ್ಕ ಪ್ರತಿಫಲವನ್ನು ಶೀಘ್ರವೇ ಅನುಭವಿಸಲೇಬೇಕಾಗುತ್ತದೆ’ ಎನ್ನುವುದು ಇಡೀ ಸಮಾಜಕ್ಕೆ ಗೊತ್ತಾಗುವಂತೆ ಈ ಕ್ರಮಗಳು ಇರಬೇಕು. ಇಲ್ಲವಾದಲ್ಲಿ ನಾವು ಮತ್ತೆ ಯಾವ ನಾಗರಿಕ ಕಾನೂನುಗಳೂ ಇಲ್ಲದಿದ್ದ ಶಿಲಾಯುಗಕ್ಕೆ ಮರಳುವ ದಿನಗಳು ದೂರವಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.