ADVERTISEMENT

ಜನಸ್ನೇಹಿ ಕಾರ್‌ ಪೂಲಿಂಗ್‌ ವಿರುದ್ಧ ಸಾರಿಗೆ ಇಲಾಖೆ ಅಸಂಗತ ನಡೆ

ಸಂಪಾದಕೀಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2017, 19:30 IST
Last Updated 7 ಫೆಬ್ರುವರಿ 2017, 19:30 IST
ಜನಸ್ನೇಹಿ ಕಾರ್‌ ಪೂಲಿಂಗ್‌ ವಿರುದ್ಧ ಸಾರಿಗೆ ಇಲಾಖೆ ಅಸಂಗತ ನಡೆ
ಜನಸ್ನೇಹಿ ಕಾರ್‌ ಪೂಲಿಂಗ್‌ ವಿರುದ್ಧ ಸಾರಿಗೆ ಇಲಾಖೆ ಅಸಂಗತ ನಡೆ   
ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ  ಬಾಡಿಗೆ ಕಾರು ಸೇವೆ ಒದಗಿಸುವ ಓಲಾ ಮತ್ತು ಉಬರ್‌ ಸಂಸ್ಥೆಗಳು, ‘ಕಾರ್‌ ಪೂಲ್‌ ಮತ್ತು ಷೇರ್‌’ ಹೆಸರಿನಲ್ಲಿ ನೀಡುತ್ತಿರುವ ಸೇವೆ ವಿವಾದಕ್ಕೀಡಾಗಿರುವುದು ಅನಪೇಕ್ಷಿತ . ಬೇರೆ, ಬೇರೆ ವ್ಯಕ್ತಿಗಳು  ಒಂದೇ ದಿಕ್ಕಿನೆಡೆಗೆ ಸಾಗಲು   ಒಂದೇ ಕಾರನ್ನು  ಬಳಸುವ ಸೇವೆ ಜಾರಿಗೆ ಬಂದ ಸರಿಸುಮಾರು ಒಂದೂವರೆ ವರ್ಷದ ನಂತರ ಸಾರಿಗೆ ಇಲಾಖೆಯು ಈ ಬಗ್ಗೆ ತಕರಾರು ಎತ್ತಿರುವುದು ಅಸಂಗತ. ಮೋಟಾರು ವಾಹನ ಕಾಯ್ದೆ ಪಾಲನೆ ಬಗ್ಗೆ ಅಧಿಕಾರಿಗಳಿಗೆ ಇಲ್ಲಿಯವರೆಗೆ ನೆನಪೇ ಇರಲಿಲ್ಲ. ಈಗ ‘ಜ್ಞಾನೋದಯ’ ಆಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಕಾಯ್ದೆಯಲ್ಲಿ ಅವಕಾಶ ಇಲ್ಲದ ಸೌಲಭ್ಯವನ್ನು ಇದುವರೆಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ತಪ್ಪೆಂದು ತಿಳಿಯಲು ಇಷ್ಟು ದಿನ ಬೇಕಾಯಿತೇ ಎಂದು ಯಾರಾದರೂ ಕೇಳಬಹುದು.
 
 ವಾಹನ ದಟ್ಟಣೆಯಿಂದ ತತ್ತರಿಸುತ್ತಿರುವ ರಾಜಧಾನಿಯಲ್ಲಿ ಒಬ್ಬರಿಗಿಂತ ಹೆಚ್ಚು ಪ್ರಯಾಣಿಕರು ಒಂದೇ ಕಡೆಗೆ ಹೋಗುವಾಗ ‘ಕಾರ್‌ ಪೂಲಿಂಗ್’ ಬಳಸಿದರೆ ವಾಹನ ದಟ್ಟಣೆ, ವಾಯುಮಾಲಿನ್ಯ ಗಣನೀಯವಾಗಿ ತಗ್ಗಲಿದೆ. ಅಲ್ಲದೇ ಸಮಯ, ಇಂಧನದ ಉಳಿತಾಯವೂ ಆಗಲಿದೆ. ಇಷ್ಟೆಲ್ಲ ಅನುಕೂಲಗಳು ಇರುವಾಗ ಏಕಾಏಕಿ ‘ಕಾರ್‌ ಹಂಚಿಕೆ’ ಸೌಲಭ್ಯ ನಿಲ್ಲಿಸಲು ಸಾರಿಗೆ ಇಲಾಖೆ ಮುಂದಾಗಿರುವುದು ಸಾರ್ವಜನಿಕ ವಿರೋಧಿ ನಡೆಯಾಗಿದೆ.  ರಾಜಧಾನಿಯಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ನಗರ ಸಂಚಾರ ಪೊಲೀಸರೇ ಈ ಹಿಂದೆ 2015ರಲ್ಲಿ ‘ಕಾರ್‌ ಪೂಲಿಂಗ್‌’ ಪರವಾಗಿ ಜಾಗೃತಿ ಅಭಿಯಾನ ನಡೆಸಿದ್ದರು. ಈಗ ಅದೇ ಸರ್ಕಾರದ ಮತ್ತೊಂದು ಇಲಾಖೆ  ಕಾರುಗಳ ಪೂಲಿಂಗ್‌ ಸೌಲಭ್ಯಕ್ಕೆ  ತಕರಾರು ಎತ್ತಿದೆ! ಜೊತೆಗೆ ‘ಓಲಾ ಷೇರ್‌ ಮತ್ತು ಉಬರ್‌ ಪೂಲ್‌’ ಸೇವೆಗಳಿಗೆ ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶವಿಲ್ಲ. ಆದರೆ, ಜನರಿಗೆ ಅನುಕೂಲವಾಗುವಂತಹ ಸಾರಿಗೆ ಸೇವೆಗೆ ಅನುಮತಿ ನೀಡಲು ಕರ್ನಾಟಕ ರಾಜ್ಯ ಸಾರಿಗೆ ನಿಯಮಗಳಲ್ಲಿ ಅವಕಾಶವೂ ಇದೆ.
 
ಹೀಗಾಗಿ ಈ ಸೇವೆಗಳಿಗೆ ಅನುಮತಿ ನೀಡುವಂತೆ ಕೋರಿ ಮನವಿ ಕೊಡಿ’ ಎಂದು ಸಾರಿಗೆ ಇಲಾಖೆ ಹೇಳಿರುವುದಂತೂ ಅಸಂಗತ. ಮನವಿ ಏಕೆ ಕೊಡಬೇಕು? ಇದು ಅನುಮಾನಾಸ್ಪದ. ವ್ಯವಹಾರ ಕುದುರಿಸಲು ಸೃಷ್ಟಿಸಿಕೊಳ್ಳುವ ಅವಕಾಶವೇ ಇದು ಎಂದು ಪ್ರಶ್ನಿಸಬೇಕಾಗುತ್ತದೆ. ಇಂಧನ ಹಾಗೂ  ಗ್ರಾಹಕರ ಹಣ ಉಳಿತಾಯದ ಜೊತೆಗೆ ಇತರ ಅನುಕೂಲಗಳನ್ನೂ ಒದಗಿಸುವ ಇಂತಹ ಯೋಜನೆಯನ್ನು ತಾನಾಗಿಯೇ ಪ್ರಚುರಗೊಳಿಸಬೇಕಾದುದು ತನ್ನ ಹೊಣೆಗಾರಿಕೆ ಎಂಬುದನ್ನು ಸಾರಿಗೆ ಇಲಾಖೆ ಮೊದಲು ಅರಿಯಲಿ.
 
ನಗರದಲ್ಲಿನ ಲಕ್ಷಾಂತರ ವಾಹನಗಳ ದಟ್ಟಣೆಯಿಂದಾಗಿ ವಾಹನಗಳು ಆಮೆಗತಿಯಲ್ಲಿ ಚಲಿಸುವಂತಹ ಪರಿಸ್ಥಿತಿ ಇದೆ.  ಪ್ರತಿ ಗಂಟೆಗೆ 10 ಕಿ.ಮೀ.ಗಿಂತ ಕಡಿಮೆ ವೇಗದಲ್ಲಿ ವಾಹನಗಳು ಸಾಗುವುದರಿಂದ ವಾಹನ ಸವಾರರು  ವಿಪರೀತ ಕಿರಿಕಿರಿ ಅನುಭವಿಸುವಂತಹ ಸ್ಥಿತಿ ಇದೆ.  ಇಂತಹ ಸಂದರ್ಭದಲ್ಲಿ  ಹೆಚ್ಚು ಅನುಕೂಲಕರವಾಗಿದ್ದು, ಕಿಸೆಗೂ ಭಾರವಾಗದೆ ಆಯ್ಕೆ ಸ್ವಾತಂತ್ರ್ಯವೂ ಇರುವ   ಕಾರು ಹಂಚಿಕೆ ಸೌಲಭ್ಯವನ್ನು ನಿಲ್ಲಿಸಲು ಹೊರಟಿರುವುದು  ಜನವಿರೋಧಿ ಕ್ರಮ ಎನ್ನದೆ ವಿಧಿ ಇಲ್ಲ. ಈ ನಾಗರಿಕಸ್ನೇಹಿ ಸೌಲಭ್ಯವನ್ನು ನೋಡುವ ದೃಷ್ಟಿಕೋನವೂ ಸಾರಿಗೆ ಇಲಾಖೆಯಲ್ಲಿ ಬದಲಾಗಬೇಕಾಗಿದೆ.
 
ಕ್ಯಾಬ್‌ ಹಂಚಿಕೆ ಸೌಲಭ್ಯವನ್ನು ರಾಜ್ಯ ಸರ್ಕಾರವು ಅನೇಕ ಕಾರಣಗಳಿಗೆ ಬೆಂಬಲಿಸಬೇಕೆ ಹೊರತು ಅದಕ್ಕೆ ಕಡಿವಾಣ ಹಾಕಲು ಮುಂದಾಗುವುದು ಸರಿಯಲ್ಲ. ಇಂತಹ ಸೇವೆಯು ಮುಂಬೈ, ಚೆನ್ನೈ, ಕೋಲ್ಕತ್ತ ಮತ್ತು ಹೈದರಾಬಾದ್‌ಗಳಲ್ಲೂ ಜಾರಿಯಲ್ಲಿ ಇದೆ. ಅಲ್ಲಿ ಎದುರಾಗದ ಕಾಯ್ದೆ ಸಮಸ್ಯೆ ಬೆಂಗಳೂರಿನಲ್ಲಷ್ಟೇ ಉದ್ಭವಿಸಿರುವುದಕ್ಕೆ ಕಾರಣ ಏನು ಎನ್ನುವುದನ್ನು ಜನರು  ತಿಳಿಯಬಯಸುತ್ತಾರೆ. ಕಾರ್‌ ಷೇರಿಂಗ್‌ ಸೌಲಭ್ಯದಿಂದ ಬೆಂಗಳೂರು  ಮಹಾನಗರ ಸಾರಿಗೆ ನಿಗಮಕ್ಕೆ (ಬಿಎಂಟಿಸಿ) ನಷ್ಟ ಉಂಟಾಗುತ್ತಿದೆ ಎನ್ನುವ ಕಾರಣ ನೀಡುವುದು ಸಮರ್ಥನೀಯವಲ್ಲ. ಟ್ಯಾಕ್ಸಿ ಸೇವಾ ಸಂಸ್ಥೆಗಳು ಕಾಂಟ್ರ್ಯಾಕ್ಟ್‌ ಕ್ಯಾರೇಜ್‌ ಪರ್ಮಿಟ್‌ ಪಡೆದಿವೆ.
 
ಹೀಗಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಮಾತ್ರ ಪ್ರಯಾಣಿಕರನ್ನು ಕರೆದೊಯ್ಯಬಹುದಾಗಿದ್ದು ಮಧ್ಯದಲ್ಲಿ ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಅವರಿಷ್ಟದ ಜಾಗದಲ್ಲಿ ಇಳಿಸಲು ಅನುಮತಿ ಇಲ್ಲ ಎಂಬಂತಹ ಸಾರಿಗೆ ಅಧಿಕಾರಿಗಳ ವಾದ ಹಾಸ್ಯಾಸ್ಪದ. ಕಾಲಕ್ಕೆ ತಕ್ಕಂತೆ ಕಾನೂನಿನಲ್ಲಿ ತಿದ್ದುಪಡಿ ಮಾಡಿ ಜನಸ್ನೇಹಿ ಕ್ರಮಗಳನ್ನು ಕೈಗೊಳ್ಳುವುದು  ಚುನಾಯಿತ ಸರ್ಕಾರದ ಪ್ರಾಥಮಿಕ ಕರ್ತವ್ಯವೂ ಆಗಿರುತ್ತದೆ. ಅಧಿಕಾರಶಾಹಿಯ ಮೂರ್ಖ ನಿಲುವಿಗೆ ಸರ್ಕಾರ ತಕ್ಷಣ ತಡೆಯೊಡ್ಡಬೇಕಾಗಿದೆ. ಮೊಬೈಲ್ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ಮಧ್ಯೆ ಇರುವ  ತೊಡಕುಗಳನ್ನು ಪರಿಹರಿಸಿಕೊಳ್ಳಲು ಸರ್ಕಾರ ಮತ್ತು ಟ್ಯಾಕ್ಸಿ ಸಂಸ್ಥೆಗಳು ಮುಂದಾಗಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.