ADVERTISEMENT

ಜಲ್ಲಿಕಟ್ಟು ಕ್ರೀಡೆ ನಿಯಂತ್ರಣ ತನ್ನಿ

ಸಂಪಾದಕೀಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2017, 19:30 IST
Last Updated 24 ಜನವರಿ 2017, 19:30 IST
ಜಲ್ಲಿಕಟ್ಟು ಕ್ರೀಡೆ ನಿಯಂತ್ರಣ ತನ್ನಿ
ಜಲ್ಲಿಕಟ್ಟು ಕ್ರೀಡೆ ನಿಯಂತ್ರಣ ತನ್ನಿ   
ಜಲ್ಲಿಕಟ್ಟು ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ತಮಿಳುನಾಡಿನಲ್ಲಿ  ಜನರು ನಡೆಸಿದ ಪ್ರತಿಭಟನೆಗಳು ಸ್ವಯಂಪ್ರೇರಿತವಾಗಿದ್ದವು. ಗೂಳಿಯನ್ನು ಪಳಗಿಸುವ ಈ ಗ್ರಾಮೀಣ ಕ್ರೀಡೆಯ ಮೇಲಿನ ನಿಷೇಧವನ್ನು ತೆರವುಗೊಳಿಸಬೇಕೆಂದು ಚೆನ್ನೈನ ಮರೀನಾ ಬೀಚ್ ಸೇರಿದಂತೆ ತಮಿಳುನಾಡಿನ ಹಲವೆಡೆ ಸುಮಾರು ಒಂದು ವಾರ ಕಾಲ ನಡೆದ ಪ್ರದರ್ಶನಗಳಲ್ಲಿ ಸಾಗರೋಪಾದಿಯಲ್ಲಿ  ಜನರು ಸಮಾವೇಶಗೊಂಡಿದ್ದರು.   ತಮಿಳು ಹೆಮ್ಮೆ, ತಮಿಳು ಅಸ್ಮಿತೆ ಹಾಗೂ ತಮಿಳು ಸಂಸ್ಕೃತಿಯ ಹೆಸರಲ್ಲಿ  ವಿದ್ಯಾರ್ಥಿಗಳು ಹಾಗೂ ಯುವಜನರು ಅಪಾರ ಸಂಖ್ಯೆಯಲ್ಲಿ ಒಗ್ಗೂಡಿ ಕೆಲವೆಡೆ ಅಹೋರಾತ್ರಿ ನಡೆಸಿದ ಪ್ರದರ್ಶನಗಳು  ಆಂದೋಲನದ ರೂಪ ಪಡೆದವು.  ರಾಷ್ಟ್ರದ ಗಮನ ಸೆಳೆದವು.   ತಮಿಳುನಾಡಿನ ರಾಜಕೀಯ ನಾಯಕರು, ಸಿನಿಮಾ ತಾರೆಯರು ಸೇರಿದಂತೆ ಹಲವು ಖ್ಯಾತನಾಮರೂ ತಮಿಳು ಅಸ್ಮಿತೆಯನ್ನು ಪ್ರತಿಪಾದಿಸುವ ಈ ಹೋರಾಟಕ್ಕೆ ಬೆಂಬಲ ನೀಡಿದರು. ಇಂತಹ ಸಂದರ್ಭದಲ್ಲಿ   ತಮಿಳುನಾಡು ಸರ್ಕಾರಕ್ಕೆ ಹೆಚ್ಚಿನ ರಾಜಕೀಯ ಆಯ್ಕೆಗಳು ಇರಲಿಲ್ಲ.  ಪೊಂಗಲ್ ಹಬ್ಬದ ಸಂದರ್ಭದಲ್ಲಿ ತಮಿಳುನಾಡಿನ ಸಾಂಸ್ಕೃತಿಕ ಪರಂಪರೆಯ ಅಂಗವಾಗಿ ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಗೂಳಿ ಪಳಗಿಸುವ ಈ ಕ್ರೀಡೆಯ  ಕುರಿತಂತೆ ಜನರ ಭಾವನೆಗಳು ಉಕ್ಕಿ ಹರಿದಾಗ ಸುಗ್ರೀವಾಜ್ಞೆ ಹೊರಡಿಸುವುದು ತಮಿಳುನಾಡು ಸರ್ಕಾರಕ್ಕೆ ಅನಿವಾರ್ಯವಾಗಿದ್ದೂ ನಿಜ. 
 
ಜಲ್ಲಿಕಟ್ಟು ಮೇಲೆ  ಹೇರಲಾಗಿರುವ ನಿಷೇಧಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥಕ್ಕೆ ಇನ್ನೂ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೂ ಹೆಚ್ಚೇನೂ ಮಾಡಲಾಗದ ಸ್ಥಿತಿ.  ಸುಗ್ರೀವಾಜ್ಞೆ ಜಾರಿಗೆ ಅವಕಾಶ ಮಾಡಿಕೊಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ತಮ್ಮನ್ನು ಸಂಪರ್ಕಿಸಿದಾಗ  ಜಲ್ಲಿಕಟ್ಟುವಿನ ಸಾಂಸ್ಕೃತಿಕ ಮಹತ್ವವನ್ನು ಪ್ರಧಾನಿ ನರೇಂದ್ರ ಮೋದಿಯವರೂ ಅನುಮೋದಿಸಿದ್ದರು. ಹೀಗಾಗಿ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ಕೇಂದ್ರ ಅನುಮೋದನೆ ನೀಡಿತು.  ಆದರೆ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆಗಳು ಮುಂದುವರಿದು ಹಿಂಸಾತ್ಮಕವಾದದ್ದು ವಿಷಾದನೀಯ. ಯಾವುದೇ ನಾಯಕತ್ವವಿಲ್ಲದೆ ನಡೆದ ಈ ಪ್ರತಿಭಟನೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳಲು ನಡೆಸಲಾದ ಪ್ರಯತ್ನಗಳು  ಈ ಬೆಂಕಿಗೆ ತುಪ್ಪ ಸುರಿದವು.
 
ಜಲ್ಲಿಕಟ್ಟುಗೆ ಸಂಬಂಧಿಸಿದ ಮಸೂದೆಗೆ ಈಗ  ತಮಿಳುನಾಡು ವಿಧಾನಸಭೆಯ ವಿಶೇಷ ಅಧಿವೇಶನ ಅಂಗೀಕಾರ ನೀಡಿದೆ. ಆದರೆ ಜಲ್ಲಿಕಟ್ಟುವಿನಲ್ಲಿ ಕ್ರೌರ್ಯ ಅಂತರ್ಗತವಾಗಿದ್ದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಗೆ ವಿರುದ್ಧವಾಗಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ 2014ರಲ್ಲಿ ಈ ಕ್ರೀಡೆಗೆ ನಿಷೇಧ ಹೇರಿದೆ. ತಮಿಳುನಾಡು ಮಾತ್ರ ಅಲ್ಲ ಪಂಜಾಬ್, ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾಗಳಲ್ಲೂ ಇಂತಹದೇ ಕ್ರೀಡೆಗಳನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಈಗ ತಮಿಳುನಾಡಿನ ಮಾದರಿ ಬೇರೆ ರಾಜ್ಯಗಳಿಗೂ ಪ್ರೇರಣೆಯಾಗುವುದೆ ಎಂಬುದನ್ನು ಕಾದು ನೋಡಬೇಕು. ರಾಜ್ಯ ಸರ್ಕಾರ ಕಂಬಳದ ಪರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ  ಹೇಳಿದ್ದಾರೆ. 
 
ಕ್ರೀಡೆ ಹೆಸರಿನಲ್ಲಿ ಪ್ರಾಣಿಗಳನ್ನು ಹಿಂಸಿಸುವುದು  ಹಾಗೂ ಜೀವಹಾನಿ ಅಪಾಯಗಳ ಬಗ್ಗೆ  ಆಲೋಚಿಸಬೇಕು ಎಂಬುದು ಸರಿ. ಮೊನ್ನೆ  ಭಾನುವಾರ ಸಹ ಜಲ್ಲಿಕಟ್ಟು ನಡೆಯುವಾಗಲೇ ಇಬ್ಬರು ಸತ್ತಿರುವುದು ಹಾಗೂ   ನೂರಾರು ಮಂದಿ ಗಾಯಗೊಂಡಿರುವುದೂ ಕಳವಳಕಾರಿ ಸಂಗತಿಗಳೇ.  ಅನಗತ್ಯ ಸಾವುಗಳಿಗೆ  ಜಲ್ಲಿಕಟ್ಟು ಕಾರಣವಾಗಬಾರದು.   ಆದರೆ ಇಡಿಯಾಗಿ ನಿಷೇಧಗಳನ್ನು ಹೇರುವುದರ ಬದಲು ಇಂತಹ ಕ್ರೀಡೆಗಳ ಮೇಲೆ ನಿಯಂತ್ರಣ ತರುವುದು ಒಳಿತು. ಕ್ರೌರ್ಯವನ್ನು ತಪ್ಪಿಸಲು  ನಿಯಂತ್ರಣಗಳನ್ನು ಹೇರಬೇಕು. ಪ್ರಾಣಿ ಕ್ಷೇಮಾಭಿವೃದ್ಧಿ  ಸಂಘಗಳ ಜೊತೆಗೂ  ಈ ನಿಟ್ಟಿನಲ್ಲಿ ಸಮಾಲೋಚನೆಗಳನ್ನು ನಡೆಸಬೇಕು. ಜಲ್ಲಿಕಟ್ಟು ಕ್ರೀಡೆಯೂ ಇತ್ತೀಚಿನ ದಿನಗಳಲ್ಲಿ ವಾಣಿಜ್ಯೀಕರಣಗೊಂಡು  ಜಲ್ಲಿಕಟ್ಟು ಕ್ರೀಡೆಯ ನಿಯಮಗಳು ಬದಲಾಗಿವೆ ಎಂಬ ವಾದಗಳೂ ಇವೆ.  ಇಂತಹ ಗ್ರಾಮೀಣ ಕ್ರೀಡೆಗಳ ಹಿಂದಿನ ಸಾಂಸ್ಕೃತಿಕ ಸಂವೇದನಾಶೀಲತೆಯನ್ನು ಗುರುತಿಸಬೇಕು.  ಶತಮಾನಗಳಿಂದ ನಡೆದುಕೊಂಡ ಬಂದ ಸಾಂಸ್ಕೃತಿಕ ಆಚರಣೆಗಳನ್ನು ಒಂದೇ ಏಟಿಗೆ ನಿಲ್ಲಿಸಲಾಗದು ಎಂಬುದನ್ನು ಅರಿಯಬೇಕು. ಪ್ರಾಣಿ ದಯೆ ಎಂಬುದೂ ನಮ್ಮ ಸಂಸ್ಕೃತಿಯಲ್ಲೇ ಇದೆ. ಹೀಗಾಗಿ ಜನರ ಭಾವನೆಗಳು, ಕ್ರೀಡೆಯ ಸಾಂಸ್ಕೃತಿಕ ಆಯಾಮ – ಈ ಎಲ್ಲವನ್ನೂ ಸಮಗ್ರವಾಗಿ ಪರಿಗಣಿಸಿ ನಿಲುವು ತಾಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.