ADVERTISEMENT

ದಿನದಿಂದ ದಿನಕ್ಕೆ ಕುಸಿಯುತ್ತಿದೆ ರಾಜಭವನಗಳ ಘನತೆ, ಗೌರವ

​ಪ್ರಜಾವಾಣಿ ವಾರ್ತೆ
Published 29 ಜನವರಿ 2017, 19:30 IST
Last Updated 29 ಜನವರಿ 2017, 19:30 IST
ದಿನದಿಂದ ದಿನಕ್ಕೆ ಕುಸಿಯುತ್ತಿದೆ ರಾಜಭವನಗಳ ಘನತೆ, ಗೌರವ
ದಿನದಿಂದ ದಿನಕ್ಕೆ ಕುಸಿಯುತ್ತಿದೆ ರಾಜಭವನಗಳ ಘನತೆ, ಗೌರವ   

ರಾಜ್ಯಪಾಲ ಹುದ್ದೆಯ ಅಗತ್ಯ ಇದೆಯೇ? ಇತ್ತೀಚಿನ ಕೆಲ ಬೆಳವಣಿಗೆಗಳ ನಂತರ ಈ ಪ್ರಶ್ನೆ ಕೇಳಿಕೊಳ್ಳುವ ಸನ್ನಿವೇಶ ನಿರ್ಮಾಣವಾಗಿದೆ.  ಏಕೆಂದರೆ, ಮೇಘಾಲಯದ ರಾಜ್ಯಪಾಲರಾಗಿದ್ದ ವಿ. ಷಣ್ಮುಗನಾಥನ್‌ ಅವರು ಲೈಂಗಿಕ ಹಗರಣದ ಆರೋಪ ಕೇಳಿ ಬಂದ ನಂತರ ಮೊನ್ನೆ ಮೊನ್ನೆ, ಅಂದರೆ ಗಣರಾಜ್ಯೋತ್ಸವದ ದಿನದಂದೇ ರಾಜೀನಾಮೆ ಕೊಟ್ಟಿದ್ದಾರೆ.

ಕೆಲವು ವರ್ಷಗಳ ಹಿಂದೆ ಅವಿಭಜಿತ ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದ ನಾರಾಯಣ ದತ್ತ ತಿವಾರಿ ಅವರು ಇಂಥದೇ ಪ್ರಕರಣವೊಂದರಲ್ಲಿ ಅನಿವಾರ್ಯವಾಗಿ ರಾಜೀನಾಮೆ ಕೊಡಬೇಕಾಗಿ ಬಂದಿತ್ತು. ಇವರಿಬ್ಬರೂ ರಾಜಭವನವನ್ನು ಕಾಮಚೇಷ್ಟೆಯ ಕೇಂದ್ರವಾಗಿ ಮಾಡಿದ  ಕಳಂಕ ಹೊತ್ತು ಹೊರನಡೆದವರು.

ಸ್ವಯಂಕೃತ ತಪ್ಪುಗಳಿಂದಾಗಿ ಆ ಹುದ್ದೆಯಿಂದ ಇಳಿಯಲೇಬೇಕಾದ ಅನಿವಾರ್ಯವನ್ನು ತಾವೇ ತಾವಾಗಿ ತಂದುಕೊಂಡವರು. ತಿವಾರಿ ಅವರ ಲೈಂಗಿಕ ಚೇಷ್ಟೆಯ ಸಿ.ಡಿ.ಗಳು ಅವರನ್ನಷ್ಟೇ ಅಲ್ಲದೆ ಇಡೀ ಸರ್ಕಾರವನ್ನೇ ಮುಜುಗರಕ್ಕೆ ಈಡು ಮಾಡಿದ್ದವು. ಷಣ್ಮುಗನಾಥನ್ ಅವರ ಮೇಲಿನ ಆರೋಪಗಳಂತೂ ಇನ್ನೂ ಗಂಭೀರ.

ರಾಜಭವನದಲ್ಲಿನ ಉದ್ಯೋಗವೊಂದಕ್ಕೆ ಅರ್ಜಿ ಹಾಕಿ ಸಂದರ್ಶನ ಎದುರಿಸಲು ಬಂದ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ, ರಾಜಭವನವನ್ನು ‘ಯುವತಿಯರ ಕ್ಲಬ್‌’ ಆಗಿ ಪರಿವರ್ತಿಸಿದ್ದಾರೆ ಎಂದು ರಾಜಭವನದ 90ಕ್ಕೂ ಹೆಚ್ಚು ಸಿಬ್ಬಂದಿ ರಾಷ್ಟ್ರಪತಿ ಮತ್ತು ಪ್ರಧಾನಿಗೆ ಲಿಖಿತ ದೂರು ಸಲ್ಲಿಸಿದ ಬಳಿಕ ಷಣ್ಮುಗನಾಥನ್‌ಗೆ ಬೇರೆ ಆಯ್ಕೆಗಳೇ ಇರಲಿಲ್ಲ.

ಅವರನ್ನು ಆ ಹುದ್ದೆಗೆ ನೇಮಕ ಮಾಡಿದ್ದ ಈಗಿನ ಎನ್‌ಡಿಎ ಸರ್ಕಾರ ಕೂಡ ಅವರ ನಡವಳಿಕೆ ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ ಅರುಣಾಚಲಪ್ರದೇಶ ರಾಜ್ಯಪಾಲರಾಗಿದ್ದ ಜೆ.ಪಿ. ರಾಜಖೋವಾ ಅವರು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದರು.

ಇಷ್ಟಾದರೂ ‘ರಾಜೀನಾಮೆ ಕೊಡುವುದಿಲ್ಲ’ ಎಂದು ಮೊಂಡಾಟ ಮಾಡಿ ಕೊನೆಗೆ ರಾಷ್ಟ್ರಪತಿಯಿಂದ ವಜಾ ಆಗಿದ್ದರು. ವಿಪರ್ಯಾಸ ಎಂದರೆ ತೆರವಾಗಿದ್ದ ಅರುಣಾಚಲಪ್ರದೇಶದ ಹೆಚ್ಚುವರಿ ರಾಜ್ಯಪಾಲರಾಗಿಯೂ ಷಣ್ಮುಗನಾಥನ್ ಕಾರ್ಯನಿರ್ವಹಿಸುತ್ತಿದ್ದರು.

ರಾಜಭವನದಲ್ಲಿ ಎಂಥ ವ್ಯಕ್ತಿಗಳು ಇದ್ದರು, ಇದ್ದಾರೆ ಎಂದು ಒಮ್ಮೆ ಅವಲೋಕನ ಮಾಡಿದರೆ ತಲೆ ತಗ್ಗಿಸುವಂತಾಗುತ್ತದೆ. ಭ್ರಷ್ಟರು, ಕಳಂಕಿತರು, ಆ ಹುದ್ದೆಗೆ ಬಂದ ನಂತರವೂ ಸಕ್ರಿಯ ರಾಜಕಾರಣದ ವ್ಯಾಮೋಹ ಬಿಡದವರು, ತಮ್ಮ ಸುಖ ಭೋಗಗಳಿಗಾಗಿ ಮತ್ತು ಖಾಸಗಿ ಓಡಾಟಕ್ಕಾಗಿ ಸಾರ್ವಜನಿಕರ ತೆರಿಗೆ ಹಣವನ್ನು ನೀರಿನಂತೆ ಖರ್ಚು ಮಾಡಿದವರೆಲ್ಲ ಕಣ್ಣ ಮುಂದೆ ಬಂದು ಹೋಗುತ್ತಾರೆ. 

ಇಂತಹವರಿಗೆಲ್ಲ ಸುವಿಶಾಲ ರಾಜಭವನ ಎಂದರೆ ಐಷಾರಾಮಿ ಬದುಕಿನ ಮೋಜು ಕೇಂದ್ರ. ಇನ್ನು, ರಾಜ್ಯಪಾಲರು ಸ್ಥಾನಬಲದಿಂದಾಗಿ ಆಯಾ ರಾಜ್ಯಗಳಲ್ಲಿನ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುತ್ತಾರೆ. ಕೆಲ ರಾಜ್ಯಪಾಲರು ಅಲ್ಲೆಲ್ಲ ಮಾಡಿದ ಅವಾಂತರ ಅಷ್ಟಿಷ್ಟಲ್ಲ. ಭ್ರಷ್ಟಾಚಾರಕ್ಕೆ, ಲಂಚಗುಳಿತನಕ್ಕೆ ಆ ಸ್ಥಾನವನ್ನು ಬಳಸಿಕೊಂಡ ರಾಜ್ಯಪಾಲರನ್ನು ನಾವೆಲ್ಲ ಕಂಡಿದ್ದೇವೆ. ಕುಲಪತಿಗಳ ಹುದ್ದೆಗಳನ್ನು ಹರಾಜು ಹಾಕಿ ಹೆಚ್ಚು ಹಣ ಕೊಟ್ಟವರಿಗೆ ನೇಮಕಾತಿ ಪತ್ರ ನೀಡಿದ ರಾಜ್ಯಪಾಲರಿದ್ದಾರೆ.

ತಮ್ಮನ್ನು ನೇಮಕ ಮಾಡಿದ ರಾಜಕೀಯ ಪಕ್ಷ ಮತ್ತು ನಾಯಕರನ್ನು ಮೆಚ್ಚಿಸಲು ಅಧಿಕಾರ ದುರ್ಬಳಕೆ ಮಾಡಿಕೊಂಡು ಬೇರೆ ಪಕ್ಷಗಳ ರಾಜ್ಯ ಸರ್ಕಾರಗಳಿಗೆ ಕಿರುಕುಳ ಕೊಟ್ಟ, ವಜಾ ಮಾಡಿದ, ವಿನಾಕಾರಣ ರಾಷ್ಟ್ರಪತಿ ಆಳ್ವಿಕೆ ಹೇರಿದವರಿದ್ದಾರೆ. ಈ ಕಾರಣಕ್ಕಾಗಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡೂ ಅಧಿಕಾರಕ್ಕೆ ಅಂಟಿಕೊಂಡವರನ್ನು ನೋಡಿದ್ದೇವೆ.

ರಾಜ್ಯಪಾಲರ ಹುದ್ದೆ ನಮಗೆ ಬ್ರಿಟಿಷರ ಬಳುವಳಿ. ರಾಜ್ಯಗಳನ್ನು ಹದ್ದುಬಸ್ತಿನಲ್ಲಿ ಇಡಲು ಈ ಹುದ್ದೆ ಅವರಿಗೆ ಬೇಕಾಗಿತ್ತು. ಆದರೆ ಸ್ವಾತಂತ್ರ್ಯಾನಂತರ ವಿರೋಧ, ಆಕ್ಷೇಪಗಳ ನಡುವೆಯೂ ಈ ಹುದ್ದೆ ಮುಂದುವರಿದಿದೆ. ಅಧಿಕಾರದಿಂದ ಹೊರಗಿದ್ದಾಗ ರಾಜ್ಯಪಾಲ ಹುದ್ದೆಯನ್ನು ವಿರೋಧಿಸುವ ನಮ್ಮ ರಾಜಕೀಯ ಪಕ್ಷಗಳ ನಿಲುವು ತಾವೇ ಅಧಿಕಾರ ಹಿಡಿದಾಗ ಏಕಾಏಕಿ ಬದಲಾಗುತ್ತದೆ.

ತಮ್ಮ ಹಿಂಬಾಲಕರಿಗೆ ಪುನರ್ವಸತಿ ಕಲ್ಪಿಸಲು ಅವು ಈ ಹುದ್ದೆಯನ್ನು ಬಳಸಿಕೊಳ್ಳುತ್ತಿವೆ. ಇಂತಹ ಆಷಾಢಭೂತಿತನ, ದ್ವಂದ್ವ ನೀತಿ ಸಾಕು. ಒಕ್ಕೂಟ ವ್ಯವಸ್ಥೆಗೆ ಮಾರಕವಾದ, ಬೊಕ್ಕಸಕ್ಕೆ ಭಾರವಾದ ಈ ಹುದ್ದೆಯನ್ನು ರದ್ದು ಮಾಡಲು ಎಲ್ಲ ಪಕ್ಷಗಳು ಒಮ್ಮತಕ್ಕೆ ಬರಬೇಕು. ಈ ದಿಸೆಯಲ್ಲಿ ಗಂಭೀರ ಆಲೋಚನೆಗೆ ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT