ADVERTISEMENT

ನಟಿ ಅಪಹರಣ–ಅತ್ಯಾಚಾರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 19:30 IST
Last Updated 14 ಜುಲೈ 2017, 19:30 IST
ನಟಿ ಅಪಹರಣ–ಅತ್ಯಾಚಾರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ
ನಟಿ ಅಪಹರಣ–ಅತ್ಯಾಚಾರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ   

ಸಿನಿಮಾ ನಟಿಯೊಬ್ಬರ ಅಪಹರಣ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳ ಚಿತ್ರರಂಗದ ಜನಪ್ರಿಯ ನಟ ದಿಲೀಪ್ ಬಂಧನ ಸ್ವಾಗತಾರ್ಹ. ಇದು ಪ್ರಕರಣದ ಸತ್ಯಾಸತ್ಯತೆಯನ್ನು ಬಯಲು ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇರಿಸಿರುವ ಪ್ರಮುಖ ಹೆಜ್ಜೆಯಾಗಿದೆ. ಬಂಧನಕ್ಕೊಳಗಾಗಿರುವ ನಟನ ಬಗೆಗಿನ ಗುರುತರ ಆರೋಪಗಳು ನಾಗರಿಕ ಜಗತ್ತನ್ನು ಗಾಬರಿಗೊಳಿಸುವಂತಿವೆ. ಸಹ ಕಲಾವಿದೆಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಲು ಸುಪಾರಿ ನೀಡಲಾಗಿದೆ ಎನ್ನುವ ಆರೋಪಕ್ಕೆ ಪೊಲೀಸರು ನಡೆಸಿರುವ ಪ್ರಾಥಮಿಕ ತನಿಖೆ ಪುಷ್ಟಿ ನೀಡಿದೆ. ಫೆ. 17ರಂದು ಚಿತ್ರೀಕರಣ ಮುಗಿಸಿಕೊಂಡು ರಾತ್ರಿಯಲ್ಲಿ ಮನೆಗೆ ತೆರಳುತ್ತಿದ್ದ ನಟಿಯೊಬ್ಬರನ್ನು ಅಪಹರಿಸಿ, ಚಲಿಸುವ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಈ ಬಗ್ಗೆ ನಟಿ ನೀಡಿದ ದೂರನ್ನು ಆಧರಿಸಿ ಪಲ್ಸರ್‍ ಸುನಿ ಎನ್ನುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಈತನ ಮೇಲೆ ಇಪ್ಪತ್ತಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಅಪರಾಧ ಹಿನ್ನೆಲೆಯ ಈತ ದಿಲೀಪ್‌ಗೆ ಪತ್ರ ಬರೆದಿದ್ದು, ದುಡ್ಡು ನೀಡುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ.

ಪ್ರಕರಣದ ಸಂಚಿನ ವಿವರಗಳು ನಿಜವಾಗಿದ್ದಲ್ಲಿ, ಅದೊಂದು ಪೈಶಾಚಿಕ ಕೃತ್ಯವೇ ಸರಿ. ಈ ವರ್ಷದ ಮಾರ್ಚ್‌ನಲ್ಲಿ ಕೊನೆಯುಸಿರೆಳೆದ ನಟ ಕಲಾಭವನ್ ಮಣಿ ಅವರ ಸಾವಿನ ಪ್ರಕರಣದಲ್ಲೂ ದಿಲೀಪ್‍ ಹೆಸರು ಪ್ರಸ್ತಾಪವಾಗಿದೆ. ಅತ್ಯಾಚಾರ, ಕೊಲೆಯ ಸಂಚುಗಳಲ್ಲಿ ಕಲಾವಿದರು ಪಾಲ್ಗೊಳ್ಳುವುದು ಸಿನಿಮಾ ನಟ–ನಟಿಯರನ್ನು ಅಭಿಮಾನಿಸುವ ಸಹೃದಯರಿಗೆ ಬಗೆಯುವ ವಿಶ್ವಾಸದ್ರೋಹವಾಗಿದೆ.
ನಟಿಯ ವಿರುದ್ಧದ ಲೈಂಗಿಕ ದೌರ್ಜನ್ಯಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ದಿಲೀಪ್‌ರ ವಿವಾಹೇತರ ಸಂಬಂಧದ ಕುರಿತು ಅವರ ಮೊದಲ ಪತ್ನಿಗೆ ಮಾಹಿತಿ ನೀಡಿದ್ದೇ ಈ ದ್ವೇಷಕ್ಕೆ ಕಾರಣ ಎನ್ನುವ ಊಹೆಯಿದೆ. ರಿಯಲ್‍ ಎಸ್ಟೇಟ್‍ ವ್ಯವಹಾರದಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ಉಂಟಾದ ಮನಸ್ತಾಪದಿಂದ ದಿಲೀಪ್‍ ಪ್ರತೀಕಾರ ಕೈಗೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಕಾರಣ ಏನೇ ಇದ್ದರೂ, ಲೈಂಗಿಕ ದೌರ್ಜನ್ಯದ ಮೂಲಕ ಬುದ್ಧಿ ಕಲಿಸುವ ಯೋಚನೆಯೇ ಅಮಾನವೀಯವಾದುದು. ಹೆಣ್ಣನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಲೈಂಗಿಕ ದೌರ್ಜನ್ಯವನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳುವ ಕೆಟ್ಟ ಪರಂಪರೆ ಇದು. ಚಲನಚಿತ್ರ ಮಾಧ್ಯಮದಿಂದ ಉಂಟಾಗಬಹುದಾದ ಸಾಮಾಜಿಕ ಪರಿಣಾಮಗಳ ಕುರಿತು ಸಮಾಜ ನಂಬಿಕೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ಪ್ರಸ್ತುತ ಘಟನೆ ಸಿನಿಮಾ ಕಲಾವಿದರ ವ್ಯಕ್ತಿತ್ವವನ್ನು ಅನುಮಾನದಿಂದ ನೋಡಲು ಕಾರಣವಾಗಿದೆ. ಕೆಲವು ಸಿನಿಮಾ ನಾಯಕರು ಜನಪ್ರಿಯತೆಯ ದಂತ
ಗೋಪುರದಲ್ಲಿ ಮಾನವೀಯತೆಯನ್ನು ಕಳೆದುಕೊಂಡು ರಾಕ್ಷಸಿ ಪ್ರವೃತ್ತಿ ರೂಢಿಸಿಕೊಂಡಿದ್ದಾರೆ ಎನ್ನುವುದಕ್ಕೆ ಈ ಪ್ರಸಂಗ ಉದಾಹರಣೆಯಂತಿದೆ. ಪುರುಷಕೇಂದ್ರಿತ ಚಿತ್ರರಂಗವು ನಾಯಕಿಯರನ್ನು ಭೋಗದ ಸರಕುಗಳಂತೆ ಪರಿಗಣಿಸಿರುವುದಕ್ಕೆ ಹಲವು ನಿದರ್ಶನಗಳಿವೆ. ನಟನೆಯ ಅವಕಾಶ
ಗಳಿಗಾಗಿ ಲೈಂಗಿಕ ಶೋಷಣೆಗೆ ಗುರಿಯಾಗುವ ಅನಿವಾರ್ಯ ಕುರಿತು ಅನೇಕ ನಟಿಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇಂಥ ಆರೋಪ
ಗಳು ಕೇಳಿಬಂದಾಗಲೆಲ್ಲ, ಅವುಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನವನ್ನು ಚಿತ್ರೋದ್ಯಮ ಮಾಡುತ್ತಿರುತ್ತದೆ. ಕೆಲವು ಸಂದರ್ಭಗಳಲ್ಲಿ ಅಳಲು ತೋಡಿಕೊಂಡ ನಟಿಯನ್ನೇ ದೋಷಿಯ ಸ್ಥಾನದಲ್ಲಿ ನಿಲ್ಲಿಸುವುದಿದೆ. ಪ್ರಸಕ್ತ ಪ್ರಕರಣದಲ್ಲಿ ಉದ್ಯಮದ ಒಳಗಿನಿಂದಲೇ ಪ್ರತಿರೋಧ ವ್ಯಕ್ತವಾಗಿದೆ.  ಸಿನಿಮಾ  ಕಲಾವಿದೆಯರು ಹಾಗೂ ತಂತ್ರಜ್ಞರನ್ನೊಳಗೊಂಡ ‘ವಿಮೆನ್ ಇನ್ ಸಿನಿಮಾ ಕಲೆಕ್ಟಿವ್’ ಎಂಬ ಸಂಘಟನೆ ಈ ಗಂಭೀರ ವಿಚಾರವನ್ನು ಚರ್ಚೆಯ ಮುನ್ನೆಲೆಗೆ ತಂದಿದೆ.     ಕಳಂಕಿತ ನಟನನ್ನು ಕೇರಳ ಚಿತ್ರರಂಗದ ಕಲಾವಿದರ ಒಕ್ಕೂಟ ಹಾಗೂ ನಿರ್ಮಾಪಕರ, ಕಾರ್ಮಿಕರ ಸಂಘಟನೆಗಳು ಈಗ ಹೊರಹಾಕಿರುವುದು ಚಿತ್ರೋದ್ಯಮಕ್ಕೆ ನೈತಿಕಸ್ಪರ್ಶ ತಂದುಕೊಡುವ ನಡವಳಿಕೆ.

ದಿಲೀಪ್ ಸಿನಿಮಾ ಕಲಾವಿದ ಮಾತ್ರವಲ್ಲದೆ, ಪ್ರದರ್ಶಕ ವಲಯ, ಹೋಟೆಲ್ ಉದ್ಯಮ, ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಹೊಂದಿರುವ ಪ್ರಭಾವಶಾಲಿ. ಬಹು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಈ ನಟನ ವಿರುದ್ಧದ ತನಿಖೆ ಹಾದಿತಪ್ಪದಂತೆ ಪೊಲೀಸರು ಎಚ್ಚರ ವಹಿಸಬೇಕಾಗಿದೆ. ಯಾವುದೇ ಪ್ರಭಾವಕ್ಕೆ ಮಣಿಯದೆ ಅತ್ಯಾಚಾರ ಪ್ರಕರಣದ ತನಿಖೆಯನ್ನು ತಾರ್ಕಿಕವಾಗಿ ಕೊನೆಮುಟ್ಟಿಸುವ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಕೇರಳ ಸರ್ಕಾರದ್ದಾಗಿದೆ. ಈ ಪ್ರಕರಣದ ಫಲಿತಾಂಶ ಚಿತ್ರರಂಗದ ಎಲ್ಲ ಪಟ್ಟಭದ್ರರಿಗೂ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಮನಸ್ಥಿತಿಯವರಿಗೂ ಪಾಠವಾಗಬೇಕು. ಮಹಿಳೆಯರು ಚಿತ್ರರಂಗದಲ್ಲಿ ಆತ್ಮಗೌರವದಿಂದ ಕಾರ್ಯ ನಿರ್ವಹಿಸುವುದಕ್ಕೆ ಬೇಕಾದ ನೈತಿಕ ಸ್ಥೈರ್ಯವನ್ನು ತಂದುಕೊಡುವುದಕ್ಕೂ ಈ ಪ್ರಕರಣದ ಫಲಿತಾಂಶ ಪ್ರೇರಣೆಯಾಗಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.