ADVERTISEMENT

ನಾಯಕ ಕೇಂದ್ರಿತ ರಾಜಕಾರಣದೆಡೆಗೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2014, 19:30 IST
Last Updated 8 ಏಪ್ರಿಲ್ 2014, 19:30 IST

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುವ ಹೊತ್ತಿಗೆ ಬಿಜೆಪಿಯ ಪ್ರಣಾಳಿಕೆ ಹೊರ­ಬಂದಿದೆ. ಪ್ರಣಾಳಿಕೆ ಇಷ್ಟೊಂದು ತಡವಾದುದಕ್ಕೆ ಹಲವರು ಬಿಜೆಪಿ­ಯೊಳಗಿನ ಮುಸುಕಿನ ಗುದ್ದಾಟದಲ್ಲಿ ಕಾರಣಗಳನ್ನು ಕಂಡುಕೊಂಡರೆ ಇನ್ನು ಕೆಲವರು ‘ಹಳೆಯ’ ಮತ್ತು ‘ಹೊಸ’ ಬಿಜೆಪಿ ನಡುವಣ ಸಂಘರ್ಷ ಕಾರಣ ಎನ್ನುತ್ತಾರೆ.

ಪ್ರಣಾಳಿಕೆ ತಡವಾಗಿರುವುದನ್ನು ಧನಾತ್ಮಕವಾಗಿ ನೋಡು­ವುದಕ್ಕೂ ಸಾಧ್ಯವಿದೆ. ಕಳೆದ ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳು ಪ್ರಣಾಳಿಕೆ ರೂಪಿಸುವ ಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿವೆ. ಬಿಜೆಪಿಯ ಪ್ರಣಾಳಿಕೆ ತಡವಾಗುವುದಕ್ಕೂ ಇದೂ ಒಂದು ಕಾರಣವಾಗಿರಬಹುದು. ಇಲ್ಲಿಯ ತನಕ ಬಿಜೆಪಿ ರೂಪಿಸಿದ ಪ್ರಣಾಳಿಕೆ­ಗಳಿಗಿಂತ ಈ ಪ್ರಣಾಳಿಕೆ ಭಿನ್ನವಾಗಿದೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ‘ಹೌದು’ ಎಂದು ಉತ್ತರಿಸಬೇಕಾಗುತ್ತದೆ.

ಹಾಗೆಯೇ ಇತರ ಪಕ್ಷಗಳ ಪ್ರಣಾಳಿಕೆ­ಗಿಂತ ಬಿಜೆಪಿಯದ್ದು ಭಿನ್ನವೇ ಎಂಬ ಪ್ರಶ್ನೆಯನ್ನಿಟ್ಟುಕೊಂಡರೆ ನಮಗೆ ‘ಇಲ್ಲ’ ಎಂಬ ಉತ್ತರ ದೊರೆಯುತ್ತದೆ. ಇಲ್ಲಿಯ ತನಕದ ಬಿಜೆಪಿಯ ಪ್ರಣಾಳಿಕೆಯಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿದ್ದುದು ಸಂವಿಧಾನದ 370ನೇ ವಿಧಿ, ಸಮಾನ ನಾಗರಿಕ ಸಂಹಿತೆ, ರಾಮಜನ್ಮಭೂಮಿಯಂಥ ಕೆಲವು ಅಂಶಗಳು. ಈ ಬಾರಿಯೂ ಅವೆಲ್ಲವೂ ಇವೆ. ಆದರೆ ಅವುಗಳನ್ನು ಪ್ರತಿಪಾದಿಸುವ ಭಾಷೆ ಮಾತ್ರ ಬದಲಾಗಿದೆ. ಸಮಾನ ನಾಗರಿಕ ಸಂಹಿತೆಯನ್ನು ಮಹಿಳಾ ಸಬಲೀಕರಣದ ಪ್ರಶ್ನೆಯಾಗಿ ಪ್ರತಿಪಾದಿಸಲಾಗಿದೆ. 370ನೇ ವಿಧಿಯ ವಿಚಾರ ಬಂದಾಗ ಸಹಮತದ ಪ್ರಸ್ತಾಪವಿದೆ. ರಾಮ­ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವನ್ನು ಸಂವಿಧಾನದ ಚೌಕಟ್ಟಿನಲ್ಲಿ ಪರಿಶೀಲಿಸುವ ಭರವಸೆ ಇದೆ. ಅಂದರೆ ತನ್ನ ಸೈದ್ಧಾಂತಿಕ ನಿಲುವನ್ನು ಭಾಷೆ ಮೃದುತ್ವದಲ್ಲಿ ಮಂಡಿಸುವ ಪ್ರಯತ್ನವೊಂದನ್ನು ಬಿಜೆಪಿ ನಡೆಸಿದೆ.

ಹಳೆಯದನ್ನು ಬಿಟ್ಟುಕೊಟ್ಟರೆ ನಷ್ಟವಾಗಬಹುದು ಎಂಬ ಭಯವೂ, ಹೊಸ ಮತದಾರರಿಗೆ ಹಳೆಯ ಮಾದರಿಯಲ್ಲೇ ಹೇಳಿದರೆ ರುಚಿಸಲಾಗದು ಎಂಬ ಅಳುಕೂ ಸೈದ್ಧಾಂತಿಕ ನಿಲುವುಗಳನ್ನು ಆಧಾರವಾಗಿಟ್ಟುಕೊಂಡ ಭರವಸೆ­ಗಳನ್ನು ನಿರೂಪಿಸುವಲ್ಲಿ ಕಾಣಸಿಗುತ್ತದೆ. ಭ್ರಷ್ಟಾಚಾರ, ಆಡಳಿತ ಸುಧಾರಣೆ, ಆರ್ಥಿಕತೆ, ಆಂತರಿಕ ಭದ್ರತೆ, ಶಿಕ್ಷಣ ಇಂಥ ವಿಚಾರಗಳಿಗೆ ಬಂದರೆ ಯಾವ ಪಕ್ಷ ಬೇಕಾದರೂ ನೀಡಬಹುದಾದ ಭರವಸೆಗಳೇ ಬಿಜೆಪಿಯ ಪ್ರಣಾಳಿಕೆಯಲ್ಲಿಯೂ ಇವೆ.

ಪಕ್ಷವೊಂದು ಸೈದ್ಧಾಂತಿಕ ನಿಲುವು­ಗಳ ರಾಜಕಾರಣದಿಂದ ನಾಯಕ ಕೇಂದ್ರಿತ ರಾಜಕಾರಣದೆಡೆಗೆ ಹೊರಳಿ­ಕೊಳ್ಳುವಾಗ ಕಾರ್ಯಕ್ರಮಾಧಾರಿತ ಪ್ರಣಾಳಿಕೆಯನ್ನು ರೂಪಿಸುವುದು ಅನಿವಾರ್ಯ. ಬಿಜೆಪಿಯ ಪ್ರಣಾಳಿಕೆಗೆ ಬಂದಿರುವ ‘ಅಭಿವೃದ್ಧಿ ತಿರುವಿಗೆ’ ಅದು ಅನುಸರಿಸುತ್ತಿರುವ ಪ್ರಧಾನಿ ಅಭ್ಯರ್ಥಿ ಕೇಂದ್ರಿತ ರಾಜಕಾರಣ ಕಾರಣ­ವಾಗಿರುವಂತಿದೆ. ಸಾಮಾಜಿಕ ಕ್ಷೇತ್ರದಲ್ಲಿ ಮೀಸಲಾತಿಯಂಥ ಸುಡುವ ವಿಚಾರಗಳಿಂದ ದೂರವಿರುವ ಬಿಜೆಪಿಯ ಪ್ರಣಾಳಿಕೆ ಉಳಿದವರ ಪ್ರಣಾಳಿಕೆ­ಗಳು ಪ್ರಸ್ತಾಪಿಸದೇ ಇರುವ ಪ್ರವಾಸೋದ್ಯಮ, ತೆರಿಗೆ ಭಯೋತ್ಪಾದನೆಗಳ ಕುರಿತು ಹೇಳುತ್ತಿದೆ.

ವಿದೇಶೀ ಹೂಡಿಕೆಯನ್ನು ಪ್ರೋತ್ಸಾಹಿಸುತ್ತೇವೆ ಎನ್ನುತ್ತಲೇ ಅದರಿಂದ ಚಿಲ್ಲರೆ ವ್ಯಾಪಾರವನ್ನು ಹೊರಗಿಡುವ ಅಸಂಗತ­ವನ್ನೂ ಇಲ್ಲಿ ಕಾಣಬಹುದು. ಗುಜರಾತ್ ಮಾದರಿಯಿಂದ ಪ್ರಭಾವಿತವಾದ ಬಂದರು ಕೇಂದ್ರಿತ ಅಭಿವೃದ್ಧಿ ಪರಿಕಲ್ಪನೆಗೂ ಇಲ್ಲಿ ಸ್ಥಳ ದೊರೆತಿದೆ. ಆದರೆ ಎನ್‌ಡಿಎ ಆಡಳಿತಾವಧಿಯ ಬಂಡವಾಳ ಹಿಂದೆಗೆತಕ್ಕೆ ಹಿನ್ನಡೆಯಾಗಿದೆ. ಮೇಲ್ನೋಟಕ್ಕೆ ಇದು ಬಿಜೆಪಿ ತನ್ನ ಸಾಂಪ್ರದಾಯಿಕ ಮತದಾರರ ಜೊತೆಗೆ ಉಳಿದವರನ್ನೂ ಆಕರ್ಷಿಸುವುದಕ್ಕೆ ರೂಪುಗೊಂಡಂತೆ ಕಾಣಿಸಿದರೂ ಸೂಕ್ಷ್ಮ ಓದಿನಲ್ಲಿ ಬಿಜೆಪಿಯೂ ಸಿದ್ಧಾಂತ ಕೇಂದ್ರಿತ ರಾಜಕಾರಣದಿಂದ ನಾಯಕ ಕೇಂದ್ರಿತ ರಾಜಕಾರಣದೆಡೆಗೆ ಸಾಗುತ್ತಿರುವುದನ್ನೂ ಸೂಚಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.