ADVERTISEMENT

ನಿರೀಕ್ಷಿತ ವಿಜಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2014, 19:30 IST
Last Updated 8 ಜೂನ್ 2014, 19:30 IST

ಸಿರಿಯಾದ ಅಧ್ಯಕ್ಷರಾಗಿ  ಬಷರ್ ಅಲ್– ಅಸ್ಸಾದ್ ಅವರು ಮೂರನೇ ಬಾರಿಗೆ  ಆಯ್ಕೆಯಾಗಿರುವುದು ಅನಿರೀಕ್ಷಿತವೇನಲ್ಲ. ಮತದಾನ ನಡೆದದ್ದೇ ಸರ್ಕಾರದ ಹಿಡಿತ ಇದ್ದ ಪ್ರದೇಶಗಳಲ್ಲಿ.  ಬಂಡುಕೋರರ ಹಿಡಿತ ಇರುವ ಉತ್ತರ ಹಾಗೂ ಪೂರ್ವ ಪ್ರದೇಶಗಳು ಮತದಾನದಲ್ಲೇ ಭಾಗವಹಿಸಲಿಲ್ಲ. 

ಸಹಜವಾಗಿಯೇ ಶೇ 89ರಷ್ಟು ಮತ ಗಳಿಸುವ ಮೂಲಕ   ಅಸ್ಸಾದ್ ಜಯಭೇರಿ ಬಾರಿಸಿದ್ದಾರೆ. ಆದ್ದರಿಂದ ಮೂರನೇ ಬಾರಿಗೆ ರಾಷ್ಟ್ರದ ಅಧ್ಯಕ್ಷರಾಗಿ ಏಳು ವರ್ಷ ಅವಧಿಗೆ ಅಧಿಕಾರ ವಹಿಸಿಕೊಳ್ಳಲು ಮುಂದಾಗಿದ್ದಾರೆ. ಸಿರಿಯಾದ ಪ್ರತಿಪಕ್ಷಗಳಲ್ಲಿರುವ  ಅವರ ವಿರೋಧಿಗಳು  ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿದ್ದುಕೊಂಡು ಈ ವಿರೋಧಿಗಳನ್ನು ಬೆಂಬಲಿಸುತ್ತಿರುವವರು, ‘ಅಸ್ಸಾದ್ ಆಡಳಿತ ಅಂತ್ಯವಾಗುತ್ತದೆ’ ಎಂಬಂತಹ ಭವಿಷ್ಯವಾಣಿಯನ್ನು  ಕಳೆದ ಮೂರು ವರ್ಷಗಳಿಂದ ನುಡಿ­ಯು­ತ್ತಲೇ ಬಂದಿ­ದ್ದರು.

ಆದರೆ ಅಧಿಕಾರದ ಮೇಲೆ ಅಸ್ಸಾದ್ ಸಾಧಿಸಿರುವ ಹಿಡಿತ ಬಲ­ವಾಗಿಯೇ ಇದೆ.  ಸರ್ವಾಧಿಕಾರದ ಆಡಳಿತದಿಂದಾಗಿ ಅಸ್ಸಾದ್  ತೀವ್ರ ಟೀಕೆ­ಗಳಿಗೂ ಗುರಿಯಾಗಿದ್ದಾರೆ.  ಆದರೂ ಸಂಘರ್ಷದಿಂದ ನಲುಗಿರುವ ಸಿರಿಯಾವನ್ನು ಹಳಿಗೆ ತರಬಲ್ಲ ಏಕೈಕ ನಾಯಕ ಎಂಬಂತೆಯೂ ಅಸ್ಸಾದ್ ಅವರನ್ನು ಬಿಂಬಿಸಲಾಗುತ್ತದೆ.  ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳನ್ನು  ಗೌರವಿಸುತ್ತಾ ಜಾತ್ಯತೀತ ಆಡಳಿತ ತರಬಲ್ಲ ವ್ಯಕ್ತಿ ಅಸ್ಸಾದ್ ಎಂಬ ನಿರೀಕ್ಷೆ ಜನರಲ್ಲಿದೆ.

ಇತ್ತೀಚೆಗಷ್ಟೇ ನಡೆದ ಈಜಿಪ್ಟ್ ಅಧ್ಯಕ್ಷೀಯ ಚುನಾವಣೆಗೂ ಸಿರಿಯಾದ ಚುನಾವಣೆಗೂ  ಅನೇಕ ಸಾಮ್ಯಗಳಿವೆ. ಎರಡೂ ರಾಷ್ಟ್ರಗಳಲ್ಲಿ ಆಯ್ಕೆ­ಯಾದ ಅಧ್ಯಕ್ಷರು ಭಾರಿ ವಿಜಯ ಗಳಿಸಿದರು.  ಆದರೆ ಈ ಜಯಭೇರಿಗಳು ಎಷ್ಟು ವಿಶ್ವಾಸಾರ್ಹ ಎಂಬುದು ಪ್ರಶ್ನೆ.  ಈಜಿಪ್ಟ್ ನಲ್ಲಿ ಅನೇಕ ಮತದಾರರು ಚುನಾ­ವಣೆಗೇ ಬಹಿಷ್ಕಾರ ಹಾಕಿದರು.

ಸಿರಿಯಾದಲ್ಲಿ ಬಂಡುಕೋರ ಪ್ರದೇಶ­ಗಳಲ್ಲಿ ಚುನಾವಣೆಗಳೇ ನಡೆಯಲಿಲ್ಲ.  ಈ ಕುರಿತಂತೆ  ಪಾಶ್ಚಿಮಾತ್ಯ ರಾಷ್ಟ್ರ­ಗಳ ಪ್ರತಿಕ್ರಿಯೆಗಳು ಆಸಕ್ತಿದಾಯಕ. ಈಜಿಪ್ಟ್ ನ ಹೊಸ ಅಧ್ಯಕ್ಷರಾಗಿ ಮಾಜಿ ಸೇನಾ ಮುಖ್ಯಸ್ಥ   ಅಬ್ದೆಲ್   ಫತಾ ಅಲ್ – ಸಿಸಿ  ಅವರ ಆಯ್ಕೆ­ಯನ್ನು  ಅಮೆ­ರಿಕ, ಬ್ರಿಟನ್,   ಫ್ರಾನ್ಸ್ ಸ್ವಾಗತಿಸಿವೆ. ಆದರೆ ಸಿರಿಯಾದ ಚುನಾವಣೆ ‘ದೊಡ್ಡ ಸೊನ್ನೆ’ ಎಂದು ಅಮೆರಿಕದ ವಿದೇಶಾಂಗ  ಕಾರ್ಯದರ್ಶಿ ಜಾನ್ ಕೆರ್ರಿ   ಹೀಗಳೆದಿದ್ದಾರೆ.  

ಅಸ್ಸಾದ್ ವಿರೋಧಿ ಬಂಡುಕೋರ ಗುಂಪು­ಗಳಿಗೆ ಬೆಂಬ­ಲ­ವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ನೀಡುತ್ತಿವೆ. ಹೀಗಿದ್ದೂ ಅಸ್ಸಾದ್ ತಲೆಬಾಗದಿರುವುದು  ಪಾಶ್ಚಿಮಾತ್ಯ ರಾಷ್ಟ್ರಗಳ ಅಸಹನೆಗೆ ಕಾರಣ­ವಾಗಿದೆ.   ಈಗ  ಈ  ಚುನಾವಣೆಯ ನಂತರ ಹಿಂದಿಗಿಂತಲೂ ಹೆಚ್ಚು ಬಲಿಷ್ಠರಾಗಿ ಅಸ್ಸಾದ್ ಹೊರಹೊಮ್ಮಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಬಂಡುಕೋರ­ರನ್ನು ಸದೆಬಡಿದು ಸರ್ಕಾರ ಸಾಕಷ್ಟು ಪ್ರಾಬಲ್ಯ ಸಾಧಿಸಿದೆ.  ಯುದ್ಧ­ಭೂಮಿಯ ಈ ಗಳಿಕೆಯ ನಂತರದ ಚುನಾವಣಾ ವಿಜಯ,   ತಮ್ಮ ಸ್ಥಾನ­ವ­ನ್ನಿನ್ನೂ  ಗಟ್ಟಿಗೊಳಿಸಿಕೊಳ್ಳಲು ಅಸ್ಸಾದ್ ಅವರಿಗೆ ನೆರವಾಗಲಿದೆ.  ಈ ವಿಜಯವನ್ನು ಯುದ್ಧಕ್ಕೆ ದೊರೆತ ಅನುಮೋದನೆ ಎಂದು ಅಸ್ಸಾದ್ ವ್ಯಾಖ್ಯಾನಿಸಬಹುದು. 

ಆದರೆ ಅದು ನಿಜವಲ್ಲ.  ವಿರೋಧಿಗಳೊಂದಿಗೆ ಸಂಧಾನಕ್ಕೆ ಅವರು ಯತ್ನಿಸ­ಬೇಕು,  ನಾಗರಿಕ ಅಂತರ್ಯುದ್ಧ ದೀರ್ಘಕಾಲ­ದವರೆಗೆ ಎಳೆದು­ಕೊಂಡು ಹೋಗಿದೆ. ಅಪಾರ ಸಾವುನೋವುಗಳಾಗಿವೆ. ಇದನ್ನು ರಾಜಕೀಯವಾಗಿ ಅಂತ್ಯಗೊಳಿಸಲು ಪ್ರಯತ್ನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT