ADVERTISEMENT

ನ್ಯಾಯಮೂರ್ತಿಗೇ ಜೈಲು ಶಿಕ್ಷೆ ನ್ಯಾಯಾಂಗಕ್ಕೊಂದು ಕಪ್ಪುಚುಕ್ಕೆ

​ಪ್ರಜಾವಾಣಿ ವಾರ್ತೆ
Published 10 ಮೇ 2017, 19:30 IST
Last Updated 10 ಮೇ 2017, 19:30 IST
ನ್ಯಾಯಮೂರ್ತಿಗೇ ಜೈಲು ಶಿಕ್ಷೆ ನ್ಯಾಯಾಂಗಕ್ಕೊಂದು ಕಪ್ಪುಚುಕ್ಕೆ
ನ್ಯಾಯಮೂರ್ತಿಗೇ ಜೈಲು ಶಿಕ್ಷೆ ನ್ಯಾಯಾಂಗಕ್ಕೊಂದು ಕಪ್ಪುಚುಕ್ಕೆ   

ಕಲ್ಕತ್ತ  ಹೈಕೋರ್ಟ್ ನ್ಯಾಯಮೂರ್ತಿ ಚಿನ್ನಸ್ವಾಮಿ ಸ್ವಾಮಿನಾಥನ್‌ ಕರ್ಣನ್‌ ಅವರನ್ನು ಶಿಸ್ತಿನ ಪರಿಧಿಯೊಳಗೆ ತರಲು ಸುಪ್ರೀಂ ಕೋರ್ಟ್ ಅನೇಕ ಸಲ ಪ್ರಯತ್ನಿಸಿತ್ತು. ಆದರೆ ಅವೆಲ್ಲ ವಿಫಲವಾಗಿದ್ದರಿಂದ ವಿಧಿಯಿಲ್ಲದೆ ಕೊನೆಗೆ ಅತ್ಯಂತ ಕಠೋರ ನಿರ್ಧಾರವನ್ನೇ ತೆಗೆದುಕೊಂಡಿದೆ. ಅವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

ಇಂತಹ ಅಸಾಧಾರಣ ವಿದ್ಯಮಾನ  ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು. ಉನ್ನತ ನ್ಯಾಯಾಲಯಗಳ ಹಾಲಿ ನ್ಯಾಯಮೂರ್ತಿಗಳ ವಿಷಯ ಒಂದೆಡೆ ಇರಲಿ; ನಿವೃತ್ತ ನ್ಯಾಯಮೂರ್ತಿಗಳ ವಿಚಾರದಲ್ಲಿಯೂ ಜೈಲು ಶಿಕ್ಷೆ ವಿಧಿಸುವಂತಹ ಉಗ್ರ ನಿರ್ಣಯಕ್ಕೆ ಸುಪ್ರೀಂ ಕೋರ್ಟ್ ಹಿಂದೆಂದೂ ಬಂದಿರಲಿಲ್ಲ. ಕ್ಷಮಾಪಣೆ, ತಪ್ಪೊಪ್ಪಿಗೆಯನ್ನು ಒಪ್ಪಿಕೊಂಡು ಔದಾರ್ಯ ಪ್ರದರ್ಶಿಸಿತ್ತು. ಆದರೆ ಕರ್ಣನ್‌ ಮಾತ್ರ, ತಮ್ಮಿಂದಾದ ಸರಣಿ ಪ್ರಮಾದಗಳನ್ನು ಒಪ್ಪಿಕೊಳ್ಳುವ ದೊಡ್ಡತನವನ್ನು ಪ್ರದರ್ಶಿಸಲೇ ಇಲ್ಲ. ಬದಲಾಗಿ ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ಕೆಣಕುತ್ತಲೇ ಬಂದರು. ತಾನು ದಲಿತ ಎನ್ನುವ ಕಾರಣಕ್ಕಾಗಿ ನ್ಯಾಯಾಂಗ ತನ್ನ ಬಗ್ಗೆ ಪೂರ್ವಗ್ರಹ ಪೀಡಿತವಾಗಿದೆ ಎಂದು ದೂರುತ್ತಲೇ ಹೋದರು. ಅದನ್ನು ಗುರಾಣಿಯಾಗಿ ಮಾಡಿಕೊಳ್ಳುವ ಒಂದೇ ಒಂದು ಅವಕಾಶವನ್ನೂ ಬಿಟ್ಟುಕೊಡಲಿಲ್ಲ.  ವಿವಾದ ಎಂದರೆ ಅವರಿಗೆ ಅಚ್ಚುಮೆಚ್ಚು ಎಂದು ಕಾಣುತ್ತದೆ.  ಹಾಗಾಗಿಯೇ ಮದ್ರಾಸ್‌ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದಾಗ ಸಹೋದ್ಯೋಗಿ ನ್ಯಾಯಮೂರ್ತಿಗಳ ಬಗ್ಗೆ ಅಗೌರವದಿಂದ ನಡೆದುಕೊಂಡರು. ಮುಖ್ಯ ನ್ಯಾಯಮೂರ್ತಿಗಳನ್ನೂ ಬಿಡದೆ ನಿಂದಿಸಿದ್ದರು. ಅವರ ಕೊಠಡಿಗೆ ನುಗ್ಗಿ ಕೂಗಾಡಿದ್ದರು. ತಮಗೆ ತಾವೇ ಏಕಪಕ್ಷೀಯ ಆದೇಶಗಳನ್ನು ಹೊರಡಿಸಿದ್ದರು, ತಮ್ಮ ಅಧಿಕಾರವ್ಯಾಪ್ತಿ ಮೀರಿ ತಡೆಯಾಜ್ಞೆಗಳನ್ನು ನೀಡಿದ್ದರು. ಅಧೀನ ನ್ಯಾಯಾಲಯಗಳ ನ್ಯಾಯಾಧೀಶರ ನೇಮಕ ಕುರಿತಂತೆ ಹೈಕೋರ್ಟ್‌ ಪೀಠವೊಂದು ವಿಚಾರಣೆ ನಡೆಸುತ್ತಿರುವಾಗ ಆ ಸಭಾಂಗಣದೊಳಗೆ ಅತಿಕ್ರಮವಾಗಿ ಪ್ರವೇಶಿಸಿ ಗಲಾಟೆ ಎಬ್ಬಿಸಿದ್ದರು. ನ್ಯಾಯಪೀಠವನ್ನು ಅವಹೇಳನ ಮಾಡಿದ್ದರು. ಸಾಕಷ್ಟು ಅವಕಾಶಗಳನ್ನು ಕೊಟ್ಟರೂ ಅವರು ಸರಿ ಹೋಗದೇ ಇದ್ದಾಗ ಕಲ್ಕತ್ತ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು. ಅದರ ನಂತರವಾದರೂ ಅವರು ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬಹುದಾಗಿತ್ತು. ಆದರೆ ಅಲ್ಲಿಯೂ ತಮ್ಮ ಚಾಳಿಯನ್ನು ಬಿಡಲೇ ಇಲ್ಲ. ಅದೇ ಅವರಿಗೆ ಮುಳುವಾಯಿತು.

ಮದ್ರಾಸ್‌ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಅನೇಕ ನ್ಯಾಯಮೂರ್ತಿಗಳು ಭ್ರಷ್ಟರು ಎಂದು ಅವರು ಪ್ರಧಾನಿಗೆ ಬರೆದ ಪತ್ರ, ಅದನ್ನು  ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್ ನಡೆಸಿದ ವಿಚಾರಣೆ ಹಲವು ಆಯಾಮಗಳನ್ನು ಪಡೆದುಕೊಂಡಿದೆ.  ಆದರೆ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಅಧಿಕಾರಕ್ಕೇ ಸವಾಲು ಹಾಕುವಂತೆ  ಕರ್ಣನ್‌ ಹೊರಡಿಸಿದ ವಿವಿಧ ಆದೇಶಗಳು ಇಡೀ ನ್ಯಾಯಾಂಗವನ್ನು ಮುಜುಗರಕ್ಕೆ ನೂಕಿದ್ದು ಸುಳ್ಳೇನಲ್ಲ. ಇಂತಹ ಸನ್ನಿವೇಶಕ್ಕೆ ಕಾರಣನಾಗುವ ವ್ಯಕ್ತಿಗೆ ಸೂಕ್ತ ವೃತ್ತಿಪರ ಸಲಹೆ ಅಥವಾ ಆಪ್ತ ಸಮಾಲೋಚನೆ ನೀಡಬಹುದಾದ ಆಂತರಿಕ ಶಿಸ್ತು ಸಮಿತಿಯಂತಹ  ಸಾಂಸ್ಥಿಕ ವ್ಯವಸ್ಥೆಯೂ ಇಲ್ಲ.

ADVERTISEMENT

ಕರ್ಣನ್‌  ಪ್ರಕರಣ ನ್ಯಾಯಾಂಗದ ಚರಿತ್ರೆಯಲ್ಲಿ ಒಂದು ಕಪ್ಪು ಚುಕ್ಕಿಯಾಗಿಯೇ ಉಳಿಯಲಿದೆ. ಆದರೆ ಅವರಿಗೆ ನೀಡಿದ ಶಿಕ್ಷೆ, ‘ತಪ್ಪು ಮಾಡಿದವರು ಯಾರೇ ಇದ್ದರೂ, ಎಷ್ಟೇ ದೊಡ್ಡವರಿದ್ದರೂ ಕಾನೂನಿನ ಮುಂದೆ ಸಮಾನರು; ತಪ್ಪಿಗೆ ಅನುಗುಣವಾಗಿ ಶಿಕ್ಷೆ ಅನುಭವಿಸಲೇಬೇಕು’ ಎನ್ನುವ ಸ್ವಾಭಾವಿಕ ನ್ಯಾಯ ತತ್ವವನ್ನು ಎತ್ತಿ ಹಿಡಿದಿದೆ. ಇಲ್ಲಿ ಇನ್ನೊಂದು ಸಂದೇಹ ಉದ್ಭವಿಸುವುದು ಸಹಜ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕದಲ್ಲಿ ಪಾರದರ್ಶಕತೆ ತರಲು ಸಂಸತ್ತು ಅಂಗೀಕರಿಸಿದ್ದ ನ್ಯಾಯಾಂಗ ನೇಮಕಾತಿ ಆಯೋಗ ರಚನೆ ಕಾಯ್ದೆಯನ್ನು ಸಂವಿಧಾನಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅದಕ್ಕೆ ಬದಲಾಗಿ ಕೆಲ ವರ್ಷಗಳ ಕೆಳಗೆ ತಾನೇ ಜಾರಿಗೊಳಿಸಿದ್ದ ಕೊಲಿಜಿಯಂ ವ್ಯವಸ್ಥೆ ಮೂಲಕವೇ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಕರ್ಣನ್‌ ಕೂಡ ಈ ಕೊಲಿಜಿಯಂನಿಂದಲೇ ಬಂದವರು. ಈಗ ಅವರೇ ಶಿಕ್ಷೆಗೆ ಒಳಗಾಗಿರುವುದಿಂದ, ಕೊಲಿಜಿಯಂ ಮೂಲಕ ಆಯ್ಕೆ ಪದ್ಧತಿ ಬಗ್ಗೆಯೂ  ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ. ಅಲ್ಲದೆ, ಕರ್ಣನ್‌ ಪ್ರಕರಣದಿಂದ ನ್ಯಾಯಾಂಗದ ಘನತೆಗೆ ಆಗಿರುವ ಧಕ್ಕೆಯನ್ನು ಸರಿಪಡಿಸಲು ಸಾಕಷ್ಟು ಸಮಯವೂ ಬೇಕಾಗುತ್ತದೆ. ಇಂತಹ ಪ್ರಸಂಗ ಇನ್ನೆಂದೂ ಮರುಕಳಿಸಬಾರದು. ಅದಕ್ಕೆ ಬೇಕಾದ ವ್ಯವಸ್ಥೆ, ನಿಯಂತ್ರಣ ರೂಪಿಸಲು ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.