ADVERTISEMENT

ಪಾತಾಳಗಂಗೆ ಬೇಡ ಸುಸ್ಥಿರ ಮಾದರಿ ಬೇಕು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2017, 19:41 IST
Last Updated 27 ಏಪ್ರಿಲ್ 2017, 19:41 IST
ಪಾತಾಳಗಂಗೆ ಬೇಡ ಸುಸ್ಥಿರ ಮಾದರಿ ಬೇಕು
ಪಾತಾಳಗಂಗೆ ಬೇಡ ಸುಸ್ಥಿರ ಮಾದರಿ ಬೇಕು   

ಭೂಮಿಯ ಆಳದಲ್ಲಿ ಸ್ವಾಭಾವಿಕವಾಗಿ ಹರಿಯುತ್ತಿರುವ ನೀರನ್ನು ‘ಪಾತಾಳಗಂಗೆ’ ಹೆಸರಿನಲ್ಲಿ ಮೇಲೆತ್ತಲು ರಾಜ್ಯ ಸರ್ಕಾರ ಮುಂದಾಗಿದೆ. ಸತತ ಬರಗಾಲದಿಂದ ಬಳಲುತ್ತಿರುವ ರಾಜ್ಯದ ಜನರಿಗೆ ನೀರು ಒದಗಿಸಲು ಈ ಯೋಜನೆ ಕೈಗೊಂಡಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೇಳಿದೆ.

ಸಮುದ್ರದ ಆಳದಲ್ಲಿರುವ ತೈಲವನ್ನು ಮೇಲೆತ್ತಿದಂತೆ ಭೂಮಿಯ ಆಳದಲ್ಲಿ ಹರಿಯುವ ನೀರನ್ನು ಮೇಲೆತ್ತಲು ‘ವಾಟರ್ ಕ್ವೆಸ್ಟ್’ ಸಂಸ್ಥೆಯೊಂದಿಗೆ ಯೋಜನೆ ಸಿದ್ಧಪಡಿಸಲಾಗಿದೆ. ಗಂಟೆಗೆ ಸರಾಸರಿ ಎಂಟು ಸಾವಿರ ಲೀಟರ್ ನೀರನ್ನು ಮೇಲೆತ್ತುವ ಬಾವಿಯನ್ನು ಕೊರೆಯಲು ತಲಾ ₹12.48 ಕೋಟಿ ವೆಚ್ಚವಾಗುತ್ತದೆ ಎನ್ನಲಾಗಿದೆ.

ಪ್ರಾಯೋಗಿಕವಾಗಿ ರಾಜ್ಯದ 10 ಕಡೆ ಇದನ್ನು ಜಾರಿಗೊಳಿಸುವ ಇರಾದೆ ಸರ್ಕಾರಕ್ಕೆ ಇದೆ. ವಿದೇಶಗಳಲ್ಲಿ ಈಗಾಗಲೇ ಹೀಗೆ ನೀರನ್ನು ಮೇಲೆತ್ತಲಾಗಿರುವ ಯಶೋಗಾಥೆಯನ್ನು ‘ವಾಟರ್ ಕ್ವೆಸ್ಟ್’ ಸಂಸ್ಥೆ ಸರ್ಕಾರದ ಮುಂದಿಟ್ಟಿದೆ. ಇವೆಲ್ಲವೂ ಕೇಳಲು ಚೆನ್ನಾಗಿವೆಯೇ ವಿನಾ ಅಂಗೀಕಾರ ಯೋಗ್ಯ ಎಂದು ಅನ್ನಿಸುವುದಿಲ್ಲ.

ರಾಜ್ಯದಲ್ಲಿ ನಜೀರ್ ಸಾಬ್ ಅವರು ಕೊಳವೆಬಾವಿಯ ಮೂಲಕ ನೀರು ಪೂರೈಸಲು ಮುಂದಾದಾಗಲೂ ಅದೊಂದು ಅತ್ಯುತ್ತಮ ಯೋಜನೆ ಎಂದೇ ಪರಿಗಣಿಸಲಾಗಿತ್ತು. ನಜೀರ್ ಸಾಬ್ ಅವರನ್ನು ‘ನೀರ್ ಸಾಬ್’ ಎಂದೇ ಕರೆಯಲಾಗುತ್ತಿತ್ತು. ಆದರೆ 25–30 ವರ್ಷದಲ್ಲಿ ನಾವು ಅಂತರ್ಜಲವನ್ನು ಬರಿದು ಮಾಡಿದ್ದೇವೆ. 2013ರಲ್ಲಿ ಕೊಳವೆಬಾವಿ ತೆಗೆಸಲು ನಿಯಂತ್ರಣ ಹೇರಿ ಅಧಿಸೂಚನೆ ಹೊರಡಿಸಿದ್ದರೂ ಎರ್ರಾಬಿರ್ರಿ ಕೊಳವೆಬಾವಿ ಕೊರೆಯುವುದು ನಿಂತಿಲ್ಲ. 

ಎರಡು  ಸಾವಿರ ಅಡಿ ಕೊರೆದರೂ ಈಗ ನೀರು ಸಿಗದೇ ಇರುವ ವಾತಾವರಣ ಸೃಷ್ಟಿಯಾಗಿದೆ. ಕೊಳವೆಬಾವಿಗಳಿಂದ ನೀರು ಸಿಗುತ್ತಿಲ್ಲ ಎಂದು ಪಾತಾಳಗಂಗೆ ಯೋಜನೆಯನ್ನು ಅನುಷ್ಠಾನಗೊಳಿಸಿದರೆ ಅದು ಮನುಕುಲಕ್ಕೆ ಮಾರಕವಾಗುವ ಸಾಧ್ಯತೆಯೇ ಹೆಚ್ಚು. ಅನೇಕ ಕಡೆ ಕೊಳವೆಬಾವಿಗಳಿಂದ ಬರುವ ನೀರಿನಲ್ಲಿ ಆರ್ಸೆನಿಕ್, ಫ್ಲೋರೈಡ್ ಮುಂತಾದ ರಾಸಾಯನಿಕಗಳು ಇವೆ ಎನ್ನುವುದು ಸಾಬೀತಾಗಿದೆ.

ADVERTISEMENT

ಹಲವು ಪ್ರದೇಶಗಳಲ್ಲಿ ಕೊಳವೆಬಾವಿಯ ನೀರು ಕುಡಿಯಲು ಯೋಗ್ಯ ಅಲ್ಲ ಎಂದು ಸರ್ಕಾರವೇ ಹೇಳಿದೆ. ಪರಿಸ್ಥಿತಿ ಹೀಗಿರುವಾಗ ನೆಲದಡಿಯಲ್ಲಿ ಇರುವ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡದೇ ಇಂತಹ ‘ಭಯಂಕರ’ ಯೋಜನೆ ಅನುಷ್ಠಾನಕ್ಕೆ ಮುಂದಾಗುವುದು ಜಾಣ ನಡೆ ಅಲ್ಲ.

‘ಅಂತರ್ಜಲ ಎನ್ನುವುದು ನಮ್ಮ ತಾತ ಮುತ್ತಾತನಿಂದ ಬಂದ ಬಳುವಳಿ ಅಲ್ಲ. ಅದು ನಮ್ಮ ಮಕ್ಕಳು, ಮೊಮ್ಮಕ್ಕಳಿಂದ ಪಡೆದ ಸಾಲ’ ಎಂದು ಜಲ ತಜ್ಞರು ಹೇಳುತ್ತಾರೆ. ಈಗ ನೀರಿಗೆ ಕೊರತೆ ಇದೆ ಎಂದು ಭೂಗರ್ಭದಲ್ಲಿರುವ ನೀರನ್ನು ಬರಿದು ಮಾಡಿದರೆ ಮುಂದಿನ ಜನಾಂಗಕ್ಕೆ ನಾವೇ ಕೊಳ್ಳಿ ಇಟ್ಟ ಹಾಗಾಗುತ್ತದೆ. ರಾಜ್ಯದಲ್ಲಿ ಸತತ ಬರಗಾಲ ಇದೆ. ಕುಡಿಯುವ ನೀರಿಗೆ ತೊಂದರೆ ಇದೆ.

ಜನರಿಗೆ ನೀರು ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲೇಬೇಕು. ಹಾಗಂತ ಭೂಮಿಯ ಒಳಕ್ಕೆ ಇರುವ ನೀರಿಗೆ ಕನ್ನ ಹಾಕುವುದು ತರವಲ್ಲ. ನೀರ ನೆಮ್ಮದಿಗೆ ಹಲವಾರು ಮಾರ್ಗಗಳಿವೆ. ಮಳೆ ನೀರು ಸಂಗ್ರಹ ಮಾಡುವುದು. ನೀರಿನ ಉಳಿತಾಯ ಮತ್ತು ಉಪಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಬೆಳೆ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಹೀಗೆ ಹಲವಾರು ದಾರಿಗಳಿವೆ.

ಬರನಿರೋಧಕ ಪದ್ಧತಿಯನ್ನು ಅಳವಡಿಸಿಕೊಂಡು ನೆಮ್ಮದಿಯಿಂದ ಇರುವ ಸಾವಿರಾರು ಜನರು ನಮ್ಮ ಮಧ್ಯೆ ಇದ್ದಾರೆ. ಬತ್ತಿ ಹೋಗಿರುವ ನದಿಯನ್ನೇ ಪುನಶ್ಚೇತನಗೊಳಿಸಿದ ಉದಾಹರಣೆ ನಮ್ಮ ಮುಂದೆ ಇದೆ. ಮುಂಬರುವ ಮಳೆಯ ನೀರನ್ನು ಇಂಗಿಸಲು ಈಗಿನಿಂದಲೇ ತಯಾರಿ ನಡೆಸಿರುವ ಜಲ ಯೋಧರು ಕಣ್ಣ ಮುಂದೆ ಇದ್ದಾರೆ. ಸ್ವಯಂಪ್ರೇರಿತರಾಗಿ ಜನರೇ ಕೆರೆಯ ಹೂಳು ತೆಗೆಯುವ ಕೆಲಸವನ್ನು ಮಾಡುತ್ತಿದ್ದಾರೆ.

ಇಂತಹ ಸುಸ್ಥಿರ ಮಾದರಿಗಳನ್ನು ರಾಜ್ಯ ಸರ್ಕಾರ ಬೆಂಬಲಿಸಬೇಕು. ಅದನ್ನು ಬಿಟ್ಟು ಭೂಮಿಯ ಆಳದಲ್ಲಿರುವ ನೀರನ್ನು ತಂದುಕೊಡುತ್ತೇವೆ, ಸಮುದ್ರದ ಉಪ್ಪು ನೀರನ್ನು ಸಿಹಿನೀರನ್ನಾಗಿ ಮಾಡಿ ಬೆಂಗಳೂರಿನ ಜನರಿಗೆ ನೀಡುತ್ತೇವೆ ಎನ್ನುವುದೆಲ್ಲ ಆತ್ಮಘಾತುಕ ಕ್ರಮಗಳಾಗುತ್ತವೆಯೇ ವಿನಾ ಜನೋದ್ಧಾರದ ಕೆಲಸವಾಗುವುದಿಲ್ಲ. ಈಗಾಗಲೇ ಹವಾಮಾನ ವೈಪರೀತ್ಯ ಹೆಚ್ಚಾಗಿದೆ. ಭೂಮಿ ಬಿಸಿಯಾಗುತ್ತಿದೆ.

ಭೂಮಿಯ ಒಳಗಿರುವ ನೀರನ್ನು ಹೊರ ತೆಗೆದರೆ ನಮ್ಮ ಭವಿಷ್ಯಕ್ಕೂ ಬೆಂಕಿ ಬೀಳಬಹುದು. ಮುಂದಿನ ಜನಾಂಗಕ್ಕೆ ಮಾರಕವಾಗುವ ಪಾತಾಳಗಂಗೆ ಯೋಜನೆಯನ್ನು ಕೈಬಿಟ್ಟು ಸುಸ್ಥಿರ ಮಾದರಿಗಳ ಬಗ್ಗೆ ರಾಜ್ಯ ಸರ್ಕಾರ ಒಲವು ತೋರುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.