ADVERTISEMENT

ಪೌರಕಾರ್ಮಿಕರ ಮೇಲೆ ದೌರ್ಜನ್ಯ ಸಾಕು: ಕಟ್ಟುನಿಟ್ಟಿನ ಕ್ರಮ ಬೇಕು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 19:30 IST
Last Updated 20 ಅಕ್ಟೋಬರ್ 2017, 19:30 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಮಾಡಿದ ಕೆಲಸಕ್ಕೆ ಸಂಬಳ ಕೇಳುವುದು ಅಪರಾಧವೇ? ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೆ.ಆರ್‌. ಪುರ ವ್ಯಾಪ್ತಿಯ ಕಸ ಸಾಗಣೆ ಗುತ್ತಿಗೆದಾರರೊಬ್ಬರ ದೃಷ್ಟಿಯಲ್ಲಿ ಅದು ಅಪರಾಧ. ಸಂಬಳ ಕೇಳಿದ್ದಕ್ಕೆ ಮಹಿಳಾ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಅಶ್ಲೀಲವಾಗಿ ಬೈದು, ಲೈಂಗಿಕವಾಗಿ ಅನುಚಿತ ವರ್ತನೆ ತೋರಿದ ಆರೋಪದಲ್ಲಿ ಗುತ್ತಿಗೆದಾರ ನಾಗೇಶ್ ಮತ್ತು ಮೂವರು ಮೇಸ್ತ್ರಿಗಳ ಮೇಲೆ ದೂರು ದಾಖಲಾಗಿದೆ. ತಾನು ಈ ಬಗ್ಗೆ ದೂರು ಕೊಡಲು ಹೋದಾಗ ಪೊಲೀಸರು ದಾಖಲಿಸಿಕೊಳ್ಳದೆ ಸತಾಯಿಸಿದರು ಎಂದು ಸಂತ್ರಸ್ತ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಪಾಲಿಕೆಯ ಸಮಾಜ ಕಲ್ಯಾಣ ವಿಭಾಗದ ಜಂಟಿ ಆಯುಕ್ತರು ಪತ್ರ ಬರೆದರೂ ದೂರು ದಾಖಲಿಸಿಕೊಳ್ಳದೇ ಇದ್ದದ್ದು ಪೊಲೀಸರ ತಪ್ಪು. ಅದು ಗಂಭೀರ ಸ್ವರೂಪದ ಕರ್ತವ್ಯ ಲೋಪ. ಮೇಲಧಿಕಾರಿಗಳ ಸೂಚನೆಯ ನಂತರವೇ ದೂರು ದಾಖಲಿಸಿಕೊಳ್ಳಲಾಗಿದೆ. ಈ ವಿಷಯ ಗೊತ್ತಾದ ಬಳಿಕ ಗುತ್ತಿಗೆದಾರನ ಕಡೆಯವರು ಮತ್ತೆ ತಮ್ಮ ಮೇಲೆ ದೌರ್ಜನ್ಯ ನಡೆಸಿದರು ಎಂದು ಸಂತ್ರಸ್ತೆಯರು ಆರೋಪಿಸಿದ್ದಾರೆ. ಅಂದರೆ ಸಂಬಳ ಕೇಳುವುದು ಮಾತ್ರವಲ್ಲ; ಅನ್ಯಾಯ ನಡೆದಿದೆ ಎಂದು ಪೊಲೀಸರಿಗೆ ದೂರು ಕೊಡುವುದೂ ತಪ್ಪು ಎನ್ನುವ ಧೋರಣೆ ಅಹಂಕಾರದ ಪರಮಾವಧಿ. ಈ ರೀತಿಯ ಪುಂಡಾಟ ಮತ್ತು ಪೊಲೀಸರ ನಡವಳಿಕೆ... ಇವೆರಡನ್ನೂ ಸರ್ಕಾರ ತೀವ್ರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು. ಇಲ್ಲದೇ ಹೋದರೆ ದುರ್ಬಲರ ಮೇಲೆ ದಬ್ಬಾಳಿಕೆ ಮಾಡುವವರ ಸಂಖ್ಯೆ ಹೆಚ್ಚಬಹುದು. ಗುತ್ತಿಗೆದಾರರಿಗಾದರೆ ಹಣಬಲ, ಪ್ರಭಾವ ಇರುತ್ತದೆ. ಬಡಪಾಯಿ ಪೌರಕಾರ್ಮಿಕರಿಗೆ? ಅವರ ಹಿತ ಕಾಯುವುದು ಸರ್ಕಾರದ ಹೊಣೆ.

ಬೆಂಗಳೂರಿನಲ್ಲಿ ಕಸ ವಿಲೇವಾರಿ ವ್ಯವಸ್ಥೆ ಎನ್ನುವುದು ದೊಡ್ಡ ಮಾಫಿಯಾ ರೂಪ ತಳೆದಿದೆ. ಗುತ್ತಿಗೆದಾರರು ಆಡಿದ್ದೇ ಆಟ ಎನ್ನುವಂತಾಗಿದೆ. ಕಸ ಸಂಗ್ರಹ ಮತ್ತು ಸಾಗಣೆಗಾಗಿಯೇ ಬಿಬಿಎಂಪಿ ಬಜೆಟ್‌ನಲ್ಲಿ ಈ ವರ್ಷ ₹ 899 ಕೋಟಿ ಇಡಲಾಗಿದೆ. ಅಂದರೆ ಇದು ಪಾಲಿಕೆಯ ಅಂದಾಜು ಆದಾಯದ ಶೇ 10ರಷ್ಟು. ಹೋದ ಸಾಲಿನಲ್ಲಿ ಕಸ ವಿಲೇವಾರಿಗಾಗಿ ಇಟ್ಟಿದ್ದ ಹಣ ₹ 633 ಕೋಟಿ. ಆದರೆ ವಾಸ್ತವವಾಗಿ ಇಲ್ಲಿ ದಿನವೊಂದಕ್ಕೆ ಎಷ್ಟು ಕಸ ಸೃಷ್ಟಿಯಾಗುತ್ತದೆ ಎಂಬ ವೈಜ್ಞಾನಿಕ ಲೆಕ್ಕಾಚಾರವೇ ಇಲ್ಲ. ಎಲ್ಲವೂ ಅಂದಾಜಿನ ಮೇಲೇ ನಡೆಯುತ್ತಿದೆ. ಇಷ್ಟಾದರೂ ಕೋಟಿ ಕೋಟಿ ಖರ್ಚಿಗೇನೂ ಕೊರತೆ ಇಲ್ಲ. ಇದು ಜನಪ್ರತಿನಿಧಿಗಳಿಗೂ ಗೊತ್ತು, ಅಧಿಕಾರಿಗಳಿಗೂ ಗೊತ್ತು. ಆದರೂ ಅವರದು ದಿವ್ಯ ಮೌನ. ಅದಕ್ಕೆ ಕಾರಣವೇನು ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಗುತ್ತಿಗೆದಾರರು– ಅಧಿಕಾರಿಗಳು– ಜನಪ್ರತಿನಿಧಿಗಳ ಈ ಅಪವಿತ್ರ ಮೈತ್ರಿ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತಿದೆ. ಇದನ್ನು ಮುರಿಯಬೇಕು, ಗುತ್ತಿಗೆ ಪೌರಕಾರ್ಮಿಕರಿಗೆ ನೇರವಾಗಿ ವೇತನ ಪಾವತಿ ಮಾಡಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇದೆ. ಆದರೆ ಅದು ಈಡೇರದೇ ಇರುವುದಕ್ಕೂ ಈ ಅಪವಿತ್ರ ಮೈತ್ರಿಯೇ ಕಾರಣ. ಅಷ್ಟೇ ಅಲ್ಲದೆ, ವೇತನದಲ್ಲಿ ಕೂಡ ಬಹಳಷ್ಟು ತಾರತಮ್ಯ ನಡೆಯುತ್ತಿದೆ. ಧರ್ಮಸಿಂಗ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಕಲಬುರ್ಗಿ ಮಹಾನಗರ ಪಾಲಿಕೆಯ ಗುತ್ತಿಗೆ ಪೌರಕಾರ್ಮಿಕರ ವೇತನವನ್ನು ಹೆಚ್ಚಿಸಲಾಗಿತ್ತು. ಅದೊಂದೇ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಗುತ್ತಿಗೆ ಪೌರಕಾರ್ಮಿಕರಿಗೆ ಈಗ 26 ದಿನದ ಕೆಲಸಕ್ಕೆ ₹ 14,040 ಪಾವತಿಯಾಗುತ್ತಿದೆ. ಅಲ್ಲಿ ಗುತ್ತಿಗೆ ವ್ಯವಸ್ಥೆ ಇದ್ದರೂ ವೇತನದ ಭಾಗವನ್ನು ನೇರವಾಗಿ ಪೌರಕಾರ್ಮಿಕರ ಬ್ಯಾಂಕ್‌ ಖಾತೆಗೇ ಜಮಾ ಮಾಡಲಾಗುತ್ತಿದೆ. ಆದರೆ ಬೆಂಗಳೂರು ಮಾತ್ರವಲ್ಲ; ರಾಜ್ಯದ ಬೇರೆ ಕಡೆಯ ಪೌರಕಾರ್ಮಿಕರಿಗೆ ಇಂತಹ ಅದೃಷ್ಟ ಇಲ್ಲ. ಒಂದೇ ರಾಜ್ಯದಲ್ಲಿ ಈ ರೀತಿ ವೇತನ ಮತ್ತು ಪಾವತಿ ವಿಧಾನದಲ್ಲಿ ತಾರತಮ್ಯ ಸರಿಯಲ್ಲ. ಇದನ್ನು ತಕ್ಷಣ ಸರಿಪಡಿಸಬೇಕು. ಆಗ ಮಾತ್ರ ಪೌರಕಾರ್ಮಿಕರ ಮೇಲೆ ಗುತ್ತಿಗೆದಾರರು ನಡೆಸುವ ಶೋಷಣೆಗೆ ಕಡಿವಾಣ ಹಾಕಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT