ADVERTISEMENT

ಪೌಷ್ಟಿಕಾಂಶ ಸಮಸ್ಯೆ: ಜನಜಾಗೃತಿಯೇ ಮದ್ದು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 19:30 IST
Last Updated 2 ಅಕ್ಟೋಬರ್ 2017, 19:30 IST
ಪೌಷ್ಟಿಕಾಂಶ ಸಮಸ್ಯೆ: ಜನಜಾಗೃತಿಯೇ ಮದ್ದು
ಪೌಷ್ಟಿಕಾಂಶ ಸಮಸ್ಯೆ: ಜನಜಾಗೃತಿಯೇ ಮದ್ದು   

ದೇಶಕ್ಕೆ ಆಹಾರ ಭದ್ರತೆ ಸಿಕ್ಕಿದೆ. ’ಹಸಿರು ಕ್ರಾಂತಿ’ಯು ಆಹಾರ ಉತ್ಪನ್ನಗಳ ಕೊರತೆ ನೀಗಿಸಿದೆ. ಹಾಗಿದ್ದರೆ ದೇಶದ ಜನರ ಆರೋಗ್ಯ ಸೂಚ್ಯಂಕ ಆಶಾದಾಯಕ ಮಟ್ಟದಲ್ಲಿದೆಯೇ ಎಂದು ಕೇಳಿಕೊಂಡರೆ, ಎಂದಿನಂತೆ ನಿರಾಶಾದಾಯಕ ಉತ್ತರವೇ ಲಭಿಸುತ್ತದೆ. ಆಹಾರದ ಕೊರತೆಯಿಂದ ಅಪೌಷ್ಟಿಕತೆ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳಿಂದ ನರಳುವವರ ಸ್ಥಿತಿ ಒಂದೆಡೆಯಾದರೆ, ಅನಾರೋಗ್ಯಕರ ಜೀವನಶೈಲಿಯಿಂದ ಸ್ವತಃ ಆರೋಗ್ಯ ಸಮಸ್ಯೆಗಳನ್ನು ಆವಾಹಿಸಿಕೊಳ್ಳುವವರದು ಮತ್ತೊಂದು ವರ್ಗ. ಇಂತಹ ಎರಡನೇ ಬಗೆಯ ಸ್ವಯಂಕೃತಾಪರಾಧಿಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ದೇಶದ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕದ ನಗರವಾಸಿ ಪುರುಷ ಮತ್ತು ಮಹಿಳೆಯರಲ್ಲಿನ ಕೊಲೆಸ್ಟರಾಲ್‌ ಮಟ್ಟ ಇಡೀ ದೇಶದಲ್ಲೇ ಎರಡನೇ ಅತಿ ಹೆಚ್ಚಿನದು ಎಂಬುದು ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್‌ಐಎನ್‌) ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಕೆಟ್ಟ ಮಟ್ಟದ ಟ್ರೈಗ್ಲಿಸರಾಯ್ಡ್‌ ಸಹ ಅವರಲ್ಲಿ ಅಧಿಕ ಪ್ರಮಾಣದಲ್ಲಿದ್ದು, ಹೃದ್ರೋಗ ಸೇರಿದಂತೆ ಹಲವು ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಸಮೀಕ್ಷೆಗೆ ಒಳಪಟ್ಟ 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ ಜನರಲ್ಲಿ ಎಲ್‌ಡಿಎಲ್‌ ಕೊಲೆಸ್ಟರಾಲ್‌ (ಕೆಟ್ಟ ಕೊಲೆಸ್ಟರಾಲ್‌) ಪ್ರಮಾಣ ಹೆಚ್ಚಾಗಿರುವುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧೀನದ ಈ ಪ್ರಮುಖ ಸಂಸ್ಥೆಯ ಅಧ್ಯಯನ ವರದಿ ಎತ್ತಿ ಹಿಡಿದಿದೆ. ಧೂಮಪಾನ ಹಾಗೂ ಮದ್ಯಪಾನ ಇಂತಹ ಸ್ಥಿತಿಗೆ ತಮ್ಮದೇ ಕೊಡುಗೆ ನೀಡುತ್ತಿರುವುದನ್ನೂ ವರದಿ ಒತ್ತಿ ಹೇಳಿದೆ.

ನಗರೀಕರಣದಿಂದ ಆರ್ಥಿಕ ಬೆಳವಣಿಗೆಯಾಗಿದೆ. ಇದು ಕುಟುಂಬಗಳ ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ. ಸಹಜವಾಗಿಯೇ ಜನರ ಜೀವನಶೈಲಿ, ಆಹಾರಕ್ರಮವೂ ಅದಕ್ಕೆ ತಕ್ಕಂತೆ ಬದಲಾಗಿದೆ. ಕೊಬ್ಬಿನಾಂಶ ಹೆಚ್ಚಾಗಿರುವ ಸಂಸ್ಕರಿತ ಆಹಾರ, ಸಿದ್ಧ ಆಹಾರಗಳಿಗೆ ಮೊರೆ ಹೋಗುತ್ತಿರುವ ಜನ, ಸಾಂಪ್ರದಾಯಿಕ ಆಹಾರಗಳನ್ನು ಮರೆಯುತ್ತಿದ್ದಾರೆ. ನಗರದ ಯಾಂತ್ರೀಕೃತ ಜೀವನವು ದೈಹಿಕ ಚಟುವಟಿಕೆಗಳನ್ನೂ ದುಸ್ತರವಾಗಿಸಿದೆ. ನಗರಗಳು, ಪಟ್ಟಣಗಳ ಬೀದಿ ಬೀದಿಗಳಲ್ಲಿ ತಲೆ ಎತ್ತುತ್ತಿರುವ ಆಹಾರ ಮಳಿಗೆಗಳು ಜನರ ಜಿಹ್ವಾ ಚಾಪಲ್ಯವನ್ನು ತಣಿಸುತ್ತಿವೆ. ಆದರೆ ಆರೋಗ್ಯಕ್ಕೆ ಪೂರಕವಾದ ಪೌಷ್ಟಿಕಾಂಶಯುಕ್ತ ಆಹಾರಕ್ಕೆ ಅವು ಒತ್ತು ನೀಡುವುದು ಕನಸಿನ ಮಾತೇ ಸರಿ. ಕಾಯಿಲೆ ಬಂದು ತಮ್ಮ ಮನೆಯ ಬಾಗಿಲು ತಟ್ಟುವವರೆಗೂ ಜನರಿಗೂ ಈ ಬಗ್ಗೆ ಯೋಚಿಸುವಷ್ಟು ವ್ಯವಧಾನ ಇಲ್ಲ. ಹೀಗಾಗಿ ಪೌಷ್ಟಿಕ ಆಹಾರದ ಭದ್ರತೆ ಒಂದು ಸವಾಲಾಗಿಯೇ ಮುಂದುವರಿಯುತ್ತಿದೆ. ಭಾರತದಲ್ಲಿ ಶೇ 25ರಷ್ಟು ಸಾವುಗಳು ಹೃದ್ರೋಗಗಳಿಂದಲೇ ಸಂಭವಿಸುತ್ತಿವೆ ಎಂಬುದನ್ನು ಸಹ ಈ ಹಿಂದೆಯೇ ಅಂಕಿಅಂಶಗಳು ಸಾಬೀತುಪಡಿಸಿವೆ.

ADVERTISEMENT

ವೃದ್ಧಾಪ್ಯ, ಆನುವಂಶೀಯತೆಯಂತಹ ಕಾರಣಗಳು ಅನಿಯಂತ್ರಿತ. ಆದರೆ ಬೊಜ್ಜು, ನಿದ್ರಾಹೀನತೆ, ಮಧುಮೇಹ, ಅಧಿಕ ರಕ್ತದೊತ್ತಡ, ದೈಹಿಕ ಚಟುವಟಿಕೆಯ ಕೊರತೆ, ಅಧಿಕ ಕೊಲೆಸ್ಟರಾಲ್‌ ಮಟ್ಟ, ಧೂಮಪಾನ ಮುಂತಾದವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಆಯಾ ವ್ಯಕ್ತಿಯ ಕೈಯಲ್ಲೇ ಇರುತ್ತದೆ. ರಾಷ್ಟ್ರ ಅಭಿವೃದ್ಧಿ ಹೊಂದಬೇಕಾದರೆ ಆರ್ಥಿಕ ಬೆಳವಣಿಗೆಯೊಂದೇ ಮುಖ್ಯವಲ್ಲ. ಜನ ಆರೋಗ್ಯಪೂರ್ಣವಾಗಿ ಇರಬೇಕಾದುದೂ ಅಷ್ಟೇ ಮುಖ್ಯ. ಹೀಗಾಗಿ ನಾಗರಿಕರ ಆರೋಗ್ಯದ ಬಗ್ಗೆ ಎನ್‌ಐಎನ್‌ಯಂತಹ ಸಂಸ್ಥೆಗಳು ಆಗಾಗ್ಗೆ ಬಾರಿಸುವ ಎಚ್ಚರಿಕೆಯ ಕರೆಗಂಟೆಗೆ ಸರ್ಕಾರ ಕಿವಿಗೊಡಬೇಕು. ಆರೋಗ್ಯ ಸೇವೆಗಳಿಗಷ್ಟೇ ಒತ್ತು ನೀಡಿದರೆ ಸಾಲದು, ಪೌಷ್ಟಿಕತೆಯ ಕ್ಷೇತ್ರಕ್ಕೂ ಆದ್ಯತೆ ಸಿಗುವಂತಾಗಬೇಕು. ಇದು ಸಾಕಾರಗೊಳ್ಳಬೇಕಾದರೆ, ಪೌಷ್ಟಿ­ಕಾಂಶ ಪೂರೈಕೆಯ ಎಲ್ಲ ಆಯಾಮ­ಗಳನ್ನೂ ಮೊದಲಿಗೆ ಸರಿಯಾಗಿ ಅರ್ಥ ಮಾಡಿ­ಕೊಳ್ಳಬೇಕಿದೆ. ಹಣಕಾಸು ಸಂಪನ್ಮೂಲವೊಂದರಿಂದಲೇ ಈ ನಿಟ್ಟಿನಲ್ಲಿ ಯಶಸ್ಸು ಸಾಧ್ಯವಿಲ್ಲ. ಆರೋಗ್ಯ ಕಾಪಾಡಿಕೊಳ್ಳುವ ನೆಲೆಯಲ್ಲಿ ಜನಜಾಗೃತಿ ಮೂಡಿಸಬೇಕಾದುದೂ ಕರ್ನಾಟಕ ಈ ಸಂದರ್ಭದಲ್ಲಿ ಮಾಡಬೇಕಾದ ತುರ್ತು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.