ADVERTISEMENT

ಫುಟ್‌ಬಾಲ್ ಆಟಕ್ಕೆ ಹೊಸ ಮೆರುಗು ಸಿಗಲಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ಫುಟ್‌ಬಾಲ್ ಆಟಕ್ಕೆ ಹೊಸ ಮೆರುಗು ಸಿಗಲಿ
ಫುಟ್‌ಬಾಲ್ ಆಟಕ್ಕೆ ಹೊಸ ಮೆರುಗು ಸಿಗಲಿ   

ಹದಿನೇಳು ವರ್ಷದೊಳಗಿನವರ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಶನಿವಾರ (ಅ. 28) ರಾತ್ರಿ ಮುಕ್ತಾಯವಾಯಿತು. ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವು ಪ್ರಶಸ್ತಿ ಗೆದ್ದಿತು. ಸ್ಪೇನ್ ತಂಡವು ರನ್ನರ್ಸ್ ಅಪ್ ಆಯಿತು.

ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಭಾರತವೂ ಕ್ರೀಡಾಪ್ರೇಮಿಗಳ ಮನ ಗೆದ್ದಿತು. ಅದಕ್ಕಾಗಿಯೇ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರು, ‘ಭಾರತ ಈಗ ಫುಟ್‌ಬಾಲ್ ದೇಶ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಭಾರತದಲ್ಲಿ ಟೂರ್ನಿಯ ಆಯೋಜನೆಗೆ ಅನುಮತಿ ನೀಡುವಾಗ ಫಿಫಾ ಹತ್ತಾರು ಬಾರಿ ಯೋಚಿಸಿತ್ತು. ಮೂಲಸೌಲಭ್ಯಗಳು, ಕ್ರೀಡಾಂಗಣಗಳ ಗುಣಮಟ್ಟದ ಕುರಿತು ಹಲವು ಬಾರಿ ಪರಿಶೀಲನೆ ನಡೆಸಿತ್ತು. ಕ್ರಿಕೆಟ್‌ ಜನಪ್ರಿಯತೆ ಉತ್ತುಂಗದಲ್ಲಿರುವ ಭಾರತದಲ್ಲಿ ಫುಟ್‌ಬಾಲ್‌ ಯಶಸ್ಸು ಪಡೆಯುವ ವಿಶ್ವಾಸ ಬಹುತೇಕರಿಗೆ ಇರಲಿಲ್ಲ. ಆದರೆ ಎಲ್ಲ ಸವಾಲುಗಳನ್ನೂ ಮೀರಿ ಟೂರ್ನಿ ಸಫಲವಾಗಿದೆ.

ADVERTISEMENT

ದೇಶದಲ್ಲಿ ಫುಟ್‌ಬಾಲ್ ಆಟಕ್ಕೆ ಹೊಸ ರೂಪ ಸಿಗುವ ಭರವಸೆ ಮೂಡಿದೆ. 87 ವರ್ಷಗಳ ಇತಿಹಾಸದಲ್ಲಿ ಪುರುಷರ, ಮಹಿಳೆಯರ ಹಾಗೂ ಜೂನಿಯರ್ ವಿಭಾಗಗಳೂ ಸೇರಿದಂತೆ ಒಟ್ಟು 77 ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಗಳು ನಡೆದಿವೆ. ಆದರೆ, ಭಾರತಕ್ಕೆ ಯಾವುದೇ ಟೂರ್ನಿಯಲ್ಲಿ ಆಡುವ ಅಥವಾ ಆತಿಥ್ಯ ವಹಿಸುವ ಅವಕಾಶ ಸಿಕ್ಕಿರಲಿಲ್ಲ.

ಈ ಬಾರಿ ಎರಡೂ ಲಭಿಸಿದವು. ಕೋಲ್ಕತ್ತ, ಕೊಚ್ಚಿ, ಗುವಾಹಟಿ, ಮಡಗಾಂವ್, ನವದೆಹಲಿ, ನವೀ ಮುಂಬೈ ನಗರಗಳಲ್ಲಿ ಪಂದ್ಯಗಳು ಆಯೋಜನೆಗೊಂಡವು. 24 ದೇಶಗಳ ತಂಡಗಳು ಸ್ಪರ್ಧಿಸಿದವು. ಆರು ಗುಂಪುಗಳಲ್ಲಿ ಲೀಗ್ ಹಂತದ ಪಂದ್ಯಗಳು ನಡೆದವು. 12 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಪಂದ್ಯಗಳನ್ನು ವೀಕ್ಷಿಸಿದ್ದು ದಾಖಲೆಯಾಗಿದೆ.

‘ಎ’ ಗುಂಪಿನ ಮೂರು ಪಂದ್ಯಗಳಲ್ಲಿ ಆಡಿದ ಅಮರಜೀತ್ ಸಿಂಗ್ ನಾಯಕತ್ವದ ಭಾರತ ತಂಡವು ಸೋತಿತು. ಆದರೆ ಹೆಜ್ಜೆಗುರುತು ಮೂಡಿಸುವಲ್ಲಿ ಹಿಂದೆ ಬೀಳಲಿಲ್ಲ. ನವದೆಹಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತದ ಜೀಕ್ಸನ್ ಸಿಂಗ್ ಗೋಲು ಗಳಿಸಿದರು. ಫಿಫಾ ವಿಶ್ವಕಪ್ ಟೂರ್ನಿಗಳ ಇತಿಹಾಸದಲ್ಲಿ ಭಾರತವು ಗಳಿಸಿದ ಪ್ರಥಮ ಗೋಲು ಅದಾಗಿತ್ತು. ಬೆಂಗಳೂರಿನ ಸಂಜೀವ್ ಸ್ಟಾಲಿನ್ ಮತ್ತು ಹೆನ್ರಿ ಅಂತೋಣಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದು ಹೆಮ್ಮೆಯ ವಿಷಯ.

ಆದರೆ, ಫುಟ್‌ಬಾಲ್ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿರುವ ಬೆಂಗಳೂರು ಅವಕಾಶ ಕಳೆದುಕೊಂಡಿದ್ದು ವಿಷಾದನೀಯ. 2014ರಲ್ಲಿ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲಿ ಕ್ರೀಡಾಂಗಣ ಮತ್ತು ಮೂಲಸೌಲಭ್ಯಗಳ ಬಗ್ಗೆ ಅತೃಪ್ತಿ ವ್ಯಕ್ತವಾಗಿತ್ತು. ಆದರಿಂದಾಗಿ ಬೆಂಗಳೂರು, ಪಂದ್ಯ ಆಯೋಜನೆಯ ಅವಕಾಶ ಕಳೆದುಕೊಂಡಿತ್ತು. ರಾಜ್ಯ ಫುಟ್‌ಬಾಲ್ ಸಂಸ್ಥೆ ಮತ್ತು ಸರ್ಕಾರದ ಲೋಪ ಇದಕ್ಕೆ ಕಾರಣ.

ಫಿಫಾದ ಮೆಚ್ಚುಗೆಗೆ ಪಾತ್ರವಾಗಿರುವ ಭಾರತವು ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಟೂರ್ನಿಗಳ ಆಯೋಜನೆ ಅವಕಾಶ ಪಡೆಯುವ ನಿರೀಕ್ಷೆ ಮೂಡಿದೆ. ಈಗ ಮೂಡಿರುವ ಚೇತೋಹಾರಿ ವಾತಾವರಣವನ್ನು ಕ್ರೀಡೆಯ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳಬೇಕು.

ಜೂನಿಯರ್ ಮತ್ತು ಸೀನಿಯರ್ ಹಂತದಲ್ಲಿ ಆಟಗಾರರ ಬೆಳವಣಿಗೆಗೆ ಒತ್ತು ನೀಡಬೇಕು. ಆಸಕ್ತಿ ಇರುವ ಮಕ್ಕಳಿಗೆ ತರಬೇತಿ, ವಿದ್ಯಾಭ್ಯಾಸ ನೀಡುವ ವ್ಯವಸ್ಥೆ ರೂಪುಗೊಳ್ಳಬೇಕು. ಮುಂಬರುವ ಫಿಫಾ ವಿಶ್ವಕಪ್‌ ಟೂರ್ನಿಗಳಲ್ಲಿ ಭಾರತ ತಂಡವು ತನ್ನ ಸಾಮರ್ಥ್ಯದ ಮೇಲೆ ಪ್ರವೇಶ ಗಿಟ್ಟಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.