ADVERTISEMENT

ಬಾಂಧವ್ಯ ವೃದ್ಧಿಗೆ ಹೊಸ ಬಲ

​ಪ್ರಜಾವಾಣಿ ವಾರ್ತೆ
Published 17 ಜೂನ್ 2014, 19:30 IST
Last Updated 17 ಜೂನ್ 2014, 19:30 IST

‘ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ  ನೆರೆ ರಾಷ್ಟ್ರವನ್ನಲ್ಲ’ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ  ಒಮ್ಮೆ ಹೇಳಿದ್ದರು. ರಾಷ್ಟ್ರದ ವಿದೇಶಾಂಗ ನೀತಿಯ ರಚನೆಗೆ ಈ ಮಾತು ದಿಕ್ಸೂಚಿ. ಹೀಗಾಗಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಿದ್ದಂತಹ ನರೇಂದ್ರ ಮೋದಿ ತಮ್ಮ ಮೊದಲ ವಿದೇಶ ಪ್ರವಾಸಕ್ಕೆ ಆಯ್ದುಕೊಂಡ ರಾಷ್ಟ್ರ ಭೂತಾನ್. 

 ಭೂತಾನ್ ಜೊತೆಗೆ ಭಾರತದ ಸಂಬಂಧ ಸದಾ ಸೌಹಾರ್ದದ ನೆಲೆಯಲ್ಲಿದೆ. ಹಿಮಾಲಯದ ತಪ್ಪಲಲ್ಲಿರುವ ಈ ಚಿಕ್ಕ ನೆರೆ ರಾಷ್ಟ್ರದ ಅಭಿವೃದ್ಧಿಗೆ 1961ರಿಂದ ಭಾರತ ಹಣಕಾಸು ನೆರವು ನೀಡುತ್ತಲೇ ಬಂದಿದೆ. ಈಗ ಮತ್ತೆ 2018ರವರೆಗೆ ₨4500 ಕೋಟಿ ಹಣಕಾಸು ನೆರವು ನೀಡಲು ಭಾರತ ಬದ್ಧವಾಗಿದೆ. ಭೂತಾನ್ ಜತೆಗಿನ ಈ ಹಳೆಯ ಬಾಂಧ­ವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಮೋದಿಯವರ ಭೇಟಿ ನೆರವಾಗಿದೆ. ಜೊತೆಗೆ ಹೊಸ ವಲಯಗಳಲ್ಲಿ ಬಾಂಧವ್ಯ ವೃದ್ಧಿಗೂ ಅವಕಾಶ­ಗಳ ಬಾಗಿಲು ತೆರೆ­ದಂತಾಗಿದೆ. ಭೂತಾನ್ ಜತೆಗಿನ ಮೈತ್ರಿಗೆ ಚೀನಾ ಸಕಲ ರೀತಿಯಲ್ಲೂ ಪ್ರಯ­ತ್ನಿಸುತ್ತಿರುವ ಸಂದರ್ಭದಲ್ಲಿ ಮೋದಿ­ಯವರ ಈ ಭೇಟಿ ಮಹತ್ವದ್ದು.

ದಕ್ಷಿಣ ಏಷ್ಯಾ ವಲಯದಲ್ಲಿ ಭಾರತ ದೊಡ್ಡ ಸವಾಲುಗಳನ್ನು ಎದುರಿಸು­ತ್ತಿದೆ. ಚೀನೀಯರಿಂದ ಹಣಕಾಸು ನೆರವು ಪಡೆದು­ಕೊಂಡು ನಿರ್ಮಿ­ಸ­ಲಾದ ಬಂದ­ರುಗಳು ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನಗಳಲ್ಲಿ ತಲೆ ಎತ್ತು­ತ್ತಿವೆ. ಅನೇಕ ಹಣಹೂಡಿಕೆ ಪ್ರಸ್ತಾವಗಳೊಂದಿಗೆ ಭೂತಾನ್ ಅನ್ನು ಒಲಿ­ಸಿ­­ಕೊ­ಳ್ಳಲೂ  ಚೀನಾ ಯತ್ನಿಸುತ್ತಿದೆ. ಈ ಎಲ್ಲಾ ವಿಚಾ­ರ­ಗಳನ್ನು ಜತೆ­ಗಿಟ್ಟು ಕೊಂಡೇ ಭೂತಾನ್‌ಗೆ ಮೋದಿ ಭೇಟಿಯನ್ನು ನಾವು ವಿಶ್ಲೇಷಿಸ­ಬೇಕಾಗುತ್ತದೆ. ಆರ್ಥಿಕ ವ್ಯವಹಾರಗಳಷ್ಟೇ ಅಲ್ಲ ಆಯಕಟ್ಟಿನ ಬಲದ ವಿಚಾರವೂ ಇಲ್ಲಿ ಮುಖ್ಯ.

ಹಿಮಾಲಯ ವಿಶ್ವವಿದ್ಯಾಲಯ ಸ್ಥಾಪಿಸುವ ಪ್ರಸ್ತಾವ, ಭೂತಾನ್ ಹಾಗೂ ಭಾರತದ ಈಶಾನ್ಯ ರಾಜ್ಯಗಳ ಮಧ್ಯೆ ಜಂಟಿ ಕ್ರೀಡಾ ಕೂಟಗಳ ಏರ್ಪಾಡು ಹಾಗೂ ಭೂತಾನ್‌ನ ವಿವಿಧ ಜಿಲ್ಲೆಗಳಲ್ಲಿ ಇ–ಲೈಬ್ರರಿಗಳನ್ನು ಸ್ಥಾಪಿಸುವ ವಿಚಾರ ದೀರ್ಘಾವಧಿಯಲ್ಲಿ ಪ್ರಮುಖ ಪ್ರಭಾವ ಬೀರುವಂತಹ ಸೌಮ್ಯ­ಶಕ್ತಿಯ (ಸಾಫ್ಟ್ ಪವರ್) ರಾಜತಾಂತ್ರಿಕತೆಯಾಗುತ್ತದೆ ಎಂಬು­ದ­ರಲ್ಲಿ ಎರಡು ಮಾತಿಲ್ಲ. ಮೋದಿ ಭೇಟಿಗೆ ಭೂತಾನ್ ಸಹ ದೊಡ್ಡ ಸ್ವಾಗ­ತವನ್ನೇ ಕೋರಿದೆ.

ಭೂತಾನ್ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡು­ವಂತಹ ಅಪರೂಪದ ಗೌರವವೂ ಮೋದಿಗೆ ಸಂದಿದೆ.  ಭೂತಾನ್ ವಿದ್ಯಾ­ರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ಭಾರತ ನೀಡಿಕೊಂಡು ಬಂದಿದೆ. ಇದು ಬರೀ ಒಂದಿಷ್ಟು ಹಣಕಾಸಿನ ನೆರವಿನ ಮಾತಲ್ಲ.

ಇದರ ಮೌಲಿಕತೆಯನ್ನು ನಾವು ಗ್ರಹಿಸಬೇಕು. ಹಾಗೆಯೇ  ಮೋದಿ ಭೇಟಿ ಸಂದರ್ಭದಲ್ಲೇ  ಹೊಸ ಸುಪ್ರೀಂಕೋರ್ಟ್ ಸಮುಚ್ಚಯ ಲೋಕಾರ್ಪಣೆ ಮಾಡಿದುದರ ಮಹತ್ವವೂ  ದೊಡ್ಡದು. ಅವರ ‘ಬಿ4ಬಿ’ ಎಂದರೆ ‘ಭೂತಾನ್‌ಗಾಗಿ ಭಾರತ, ಭಾರತ­ಕ್ಕಾಗಿ ಭೂತಾನ್’ ಎಂಬ ಘೋಷವಾಕ್ಯಕ್ಕೆ ಸಕಾರಾತ್ಮಕ ಸ್ಪಂದನ ದೊರೆತಿದೆ. ಜಲ ವಿದ್ಯುತ್ ಉತ್ಪಾದನೆಗೆ ಭೂತಾನ್ ಹೆಸರಾದುದು. ಈ ಕ್ಷೇತ್ರದಲ್ಲಿ ಸಹಕಾರ ವೃದ್ಧಿಗೆ  ಇರುವ ಅಪಾರ ಅವಕಾಶಗಳನ್ನು ಭಾರತ ಬಳಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.