ADVERTISEMENT

ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ ಶಾಶ್ವತ ಯೋಜನೆ ರೂಪಿಸಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 20:25 IST
Last Updated 23 ಏಪ್ರಿಲ್ 2017, 20:25 IST
ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ ಶಾಶ್ವತ ಯೋಜನೆ ರೂಪಿಸಿ
ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ ಶಾಶ್ವತ ಯೋಜನೆ ರೂಪಿಸಿ   

ಬೆಳ್ಳಂದೂರು ಕೆರೆ ರಕ್ಷಣೆಗೆ ಕಳೆದ ವಾರ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ಹಲವಾರು ಕ್ರಮಗಳನ್ನು ಪ್ರಕಟಿಸಿದೆ. ಈ ಪೈಕಿ, ಕೆರೆ ವ್ಯಾಪ್ತಿಯಲ್ಲಿರುವ  ಎಲ್ಲಾ ಕೈಗಾರಿಕಾ ಘಟಕಗಳನ್ನೂ ಮುಚ್ಚಬೇಕು ಎಂಬಂತಹ ತೀವ್ರ ಕ್ರಮವನ್ನೂ ಎನ್‌ಜಿಟಿ ಸೂಚಿಸಿರುವುದು ಮಹತ್ವದ್ದು.

ಬೆಳ್ಳಂದೂರು ಕೆರೆಯ ಸಂರಕ್ಷಣೆ ಕುರಿತು ನೀಡಲಾಗಿದ್ದ ಅನೇಕ ನಿರ್ದೇಶನಗಳನ್ನು ಪಾಲಿಸದೆ ಸರ್ಕಾರ ಹಾಗೂ ಸಂಬಂಧಿಸಿದ ಸಂಸ್ಥೆಗಳು ನಿರ್ಲಕ್ಷ್ಯ ಧೋರಣೆ ತಾಳಿರುವುದಕ್ಕೆ ಎನ್‌ಜಿಟಿ ತೀವ್ರ ಆಕ್ರೋಶವನ್ನೂ ವ್ಯಕ್ತಪಡಿಸಿದೆ. ಹೀಗಾಗಿ, ಕೂಡಲೇ ಕೆರೆ ಪುನಶ್ಚೇತನ ಕಾರ್ಯ ಆರಂಭಿಸಿ ಒಂದು ತಿಂಗಳೊಳಗೇ ಪೂರ್ಣಗೊಳಿಸಬೇಕೆಂಬ ನಿರ್ದೇಶನವನ್ನು ರಾಜ್ಯ ಸರ್ಕಾರಕ್ಕೆ ಎನ್‌ಜಿಟಿ ನೀಡಿದೆ. 

ಈ ಆದೇಶ ಪರಿಪಾಲಿಸದಿದ್ದಲ್ಲಿ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾಗುತ್ತದೆ ಎಂಬಂಥ  ಎಚ್ಚರಿಕೆಯನ್ನೂ ನೀಡಿರುವುದು ಈ ಬಗ್ಗೆ ಎನ್‌ಜಿಟಿ ತಾಳಿರುವ ಬಿಗಿ ನಿಲುವಿಗೆ ಸಾಕ್ಷಿ. ಎನ್‌ಜಿಟಿ ತಳೆದಿರುವ ಈ ಕಠಿಣ ನಿಲುವು ಅರ್ಥವಾಗುವಂತಹದ್ದೇ. ಏಕೆಂದರೆ, ಕೆರೆಯ ಮಾಲಿನ್ಯ ನಿಯಂತ್ರಿಸುವಲ್ಲಿ ಅಧಿಕಾರಿಗಳು ತಳೆದಿರುವ ನಿರ್ಲಕ್ಷ್ಯ ಎದ್ದು ಕಾಣಿಸುವಂತಹದ್ದು.

ADVERTISEMENT

ಕೆರೆ ಸುತ್ತ ಹಸಿರು ವಲಯ ನಿರ್ಬಂಧವನ್ನು ಎನ್‌ಜಿಟಿ ಈ ಹಿಂದೆ ವಿಧಿಸಿತ್ತು. ಆದರೆ ಈ ನಿರ್ಬಂಧ ವಿಧಿಸುವುದಕ್ಕೆ ಮೊದಲೇ ಮಂಜೂರಾಗಿದ್ದ ಯೋಜನೆಗಳಿಗೆ ವಿನಾಯಿತಿ ಇದೆ ಎಂದು ಬಿಲ್ಡರ್‌ಗಳಿಗೆ ಆಶ್ವಾಸನೆ ನೀಡುವಂತಹ ಸುತ್ತೋಲೆಯನ್ನು ಹೊರಡಿಸಿದ್ದ ಸರ್ಕಾರ ಎನ್‌ಜಿಟಿ ಆದೇಶವನ್ನು ಗಂಭೀರವಾಗಿ ಪರಿಗಣಿಸದಿರುವುದಕ್ಕೆ ನಿದರ್ಶನವಾಗಿತ್ತು.

ಅಧಿಕಾರಿಗಳ ಈ ಉಡಾಫೆ ಧೋರಣೆಗೆ ಸಿವಿಲ್ ಕೋರ್ಟ್ ಅಧಿಕಾರವಿರುವ ನ್ಯಾಯಮಂಡಳಿ ತರಾಟೆಗೆ ತೆಗೆದುಕೊಂಡ ನಂತರ ಕ್ಷಮೆ ಕೋರಿ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಸಹಜವಾಗಿಯೇ ರಾಜ್ಯ ಸರ್ಕಾರದ ಇಂತಹ ಲಘು ಧೋರಣೆಯ ಬಗ್ಗೆ ಎನ್‌ಜಿಟಿ ತಳೆದಿರುವ ಬಿಗಿ ನಿಲುವಿನ ಹಿಂದಿರುವ  ಕಾಳಜಿಯನ್ನು ಆಡಳಿತಯಂತ್ರ ಅರ್ಥ ಮಾಡಿಕೊಳ್ಳುವುದು ಅಗತ್ಯ.

ಬೆಳ್ಳಂದೂರು ಕೆರೆ ಪುನರುಜ್ಜೀವನದ ಬಗ್ಗೆ ವಿವಿಧ ಕೋರ್ಟ್‌ ಆದೇಶಗಳನ್ನು ಸರ್ಕಾರ ಸರಿಯಾಗಿ ಪಾಲಿಸದೆ ನಿರ್ಲಕ್ಷ್ಯ ಮುಂದುವರಿಸಿದ್ದು ಅಕ್ಷಮ್ಯ. ಕೆರೆ ಪುನರುಜ್ಜೀವನಕ್ಕೆ ಸರ್ಕಾರಿ ಇಲಾಖೆಗಳು ಒಂದು ವರ್ಷದಿಂದ ಸಭೆ ನಡೆಸುತ್ತಾ ಬರೀ ಕಾಲಹರಣ ಮಾಡಿವೆ. ಹೆಚ್ಚಿನ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ವಿಷಾದನೀಯ.

ಈಗ ಕೆರೆ ಸುತ್ತಮುತ್ತ ಯಾರೇ ತ್ಯಾಜ್ಯ ಸುರಿದರೂ ಅವರಿಗೆ ₹ 5 ಲಕ್ಷ ದಂಡ ವಿಧಿಸುವ  ಬಗ್ಗೆ ಎನ್‌ಜಿಟಿ ನೀಡಿರುವ ನಿರ್ದೇಶನ ಸ್ವಾಗತಾರ್ಹ. ಬೆಳ್ಳಂದೂರು ಕೆರೆ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ 488  ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಘಟಕಗಳಿವೆ.

ಬಿಬಿಎಂಪಿ, ಬಿಡಿಎ, ನಗರಾಭಿವೃದ್ಧಿ ಇಲಾಖೆ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಸಮಿತಿಯನ್ನು ರಚಿಸಿ ಈ ಕೈಗಾರಿಕಾ ಘಟಕಗಳನ್ನು ಜಂಟಿ ಪರಿವೀಕ್ಷಣೆಗೆ ಒಳಪಡಿಸಬೇಕು ಎಂದೂ ಎನ್‌ಜಿಟಿ ನಿರ್ದೇಶನ ನೀಡಿದೆ. 

ಬೆಳ್ಳಂದೂರು ಕೆರೆಯ ಸಮಸ್ಯೆ ದಶಕಗಳಿಂದ ಗಂಭೀರ ಸ್ವರೂಪದಲ್ಲಿದೆ. 2005ರಲ್ಲಿ ಇದು ಮೇರೆ ಮೀರಿತು. 2015ರಲ್ಲಿ ಕೆರೆಯಲ್ಲಿ ಬೆರೆತ ರಾಸಾಯನಿಕದಿಂದ ಹೊತ್ತಿಕೊಂಡಂಥ ಬೆಂಕಿ ಜಾಗತಿಕ ಸುದ್ದಿಯಾಗಿತ್ತು. ಬೆಳ್ಳಂದೂರಿನಂತಹ ದೊಡ್ಡ ಕೆರೆಗೆ ದೊಡ್ಡ ಜಲಾನಯನ ಪ್ರದೇಶ ಬೇಕು. ಆದರೆ ಕೆರೆ ಸುತ್ತಮುತ್ತ ಕೈಗಾರಿಕೆ ಘಟಕಗಳು ಮಾತ್ರವಲ್ಲ ಜನವಸತಿಯ ಅಪಾರ್ಟ್‌ಮೆಂಟ್ ಸಮುಚ್ಚಯಗಳ ತ್ಯಾಜ್ಯಗಳೂ  ಕೆರೆ ಪರಿಸರವನ್ನು ಹಾಳು ಮಾಡುತ್ತಿರುವಂತಹ ಪರಿಸ್ಥಿತಿ ಇದೆ.

ಬೆಂಗಳೂರಿನ ಹಿತಕರ ಹವೆಯ ಖ್ಯಾತಿಗೆ ಈ ನಗರದಲ್ಲಿದ್ದ ನೂರಾರು ಕೆರೆಗಳೂ ಕಾರಣವಾಗಿದ್ದವು ಎಂಬುದನ್ನು ಮರೆಯುವಂತಿಲ್ಲ.  ಆದರೆ ಬೆಳೆಯುತ್ತಿರುವ ನಗರ, ಅನೇಕ ಕೆರೆಗಳನ್ನು ಆಪೋಶನ ತೆಗೆದುಕೊಂಡಿದೆ. ಈಗ ಪರಿಸರ ಸಮತೋಲನ ಕಾಪಾಡುವುದಕ್ಕಾಗಿ ಇರುವ ಕೆರೆಗಳ ಪುನುರುಜ್ಜೀವನ ಅಗತ್ಯ.

ಬೆಳ್ಳಂದೂರು ಕೆರೆ ಮಾತ್ರವಲ್ಲ ರಾಜ್ಯದ ಎಲ್ಲಾ ಕೆರೆಗಳ ಪುನರುಜ್ಜೀವನ ಅಗತ್ಯ. ಹಾಗೆಯೇ ಕೆರೆಗಳ ಸಂರಕ್ಷಣೆಗೆ  ಸದ್ಯದ ತುರ್ತು ಕ್ರಮ ಅನುಸರಿಸಿದರಷ್ಟೇ ಸಾಲದು. ಶಾಶ್ವತ ಯೋಜನೆಯನ್ನು  ಅಳವಡಿಸಿಕೊಳ್ಳುವುದೂ ಅವಶ್ಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.