ADVERTISEMENT

ಭಯೋತ್ಪಾದನಾ ದಾಳಿ ತಡೆ ಆದ್ಯತೆಯಾಗಲಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2016, 19:30 IST
Last Updated 4 ಜುಲೈ 2016, 19:30 IST
ಭಯೋತ್ಪಾದನಾ ದಾಳಿ ತಡೆ ಆದ್ಯತೆಯಾಗಲಿ
ಭಯೋತ್ಪಾದನಾ ದಾಳಿ ತಡೆ ಆದ್ಯತೆಯಾಗಲಿ   

ಢಾಕಾ ಹಾಗೂ ಬಾಗ್ದಾದ್ ಮೇಲಿನ ಭಯೋತ್ಪಾದನಾ ದಾಳಿಗಳು ಇಂದು ಜಗತ್ತು ಎದುರಿಸುತ್ತಿರುವ ಸವಾಲುಗಳನ್ನು ಮತ್ತೆ ನೆನಪಿಸಿವೆ. ಧರ್ಮದ ಹೆಸರಲ್ಲಿ ನಡೆಸುವ ಇಂತಹ ದಾಳಿ, ಹಿಂಸೆ ಹೊಸದಲ್ಲ. ಆದರೆ ಇದು ಸೃಷ್ಟಿಸುವ ಭೀತಿ, ನಿರಂತರವಾಗಿ ವಿಶ್ವವನ್ನು ಕಾಡುವ ಭೀತಿಯಾಗುತ್ತದೆ ಎಂಬುದು ನಮಗೆ ನೆನಪಿರಬೇಕು.

ಢಾಕಾದ ಆಕ್ರಮಣಕಾರರು ಸುಶಿಕ್ಷಿತರು, ಶ್ರೀಮಂತರು ಎಂಬುದನ್ನು ಗಮನಿಸಬೇಕು. ಸಿದ್ಧಾಂತಗಳ  ಪ್ರಭಾವಗಳಿಗೆ ಸುಲಭವಾಗಿ ಒಳಗಾಗಬಲ್ಲ ಯುವ ಸಮುದಾಯ, ಮೂಲಭೂತವಾದ ಹಾಗೂ ಉಗ್ರಗಾಮಿ ಸಿದ್ಧಾಂತಗಳ  ಆಕರ್ಷಣೆಗಳಿಗೆ ಸಿಲುಕುತ್ತಿರುವುದು ಆತಂಕಕಾರಿ. ಉಗ್ರರಾಗುವುದು ಹೊಸ ಫ್ಯಾಷನ್ ಎಂಬಂತಾಗುತ್ತಿರುವುದನ್ನು ಕಡೆಗಣಿಸಲಾಗದು.

‘ಬಡತನ ಹಾಗೂ ಅನಕ್ಷರತೆ ಜನರನ್ನು  ಇಸ್ಲಾಮಿಕ್  ಭಯೋತ್ಪಾದಕರನ್ನಾಗಿಸುತ್ತದೆ ಎಂದು ದಯವಿಟ್ಟು ಹೇಳಬೇಡಿ’ ಎಂದು ತಮ್ಮ ವಿಚಾರಧಾರೆಗಳಿಗಾಗಿ ಬಾಂಗ್ಲಾದೇಶದಿಂದ ಗಡೀಪಾರಾಗಿರುವ  ಲೇಖಕಿ ತಸ್ಲಿಮಾ ನಸ್ರೀನ್ ಹೇಳಿರುವ ಮಾತುಗಳೂ ಇಲ್ಲಿ ಪ್ರಸ್ತುತ.  ಹೀಗಾಗಿ ಭಯೋತ್ಪಾದನೆ ಸಿದ್ಧಾಂತದ ಪರಿಕಲ್ಪನೆಗಳ ಬಗ್ಗೆ ಪುನರ್ವಿಮರ್ಶೆ ಅಗತ್ಯ. ವಿದೇಶಿಯರು  ಹೆಚ್ಚು ಹೋಗುವಂತಹ ರೆಸ್ಟೊರೆಂಟ್ ಅನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದರ ಹಿಂದಿನ ಉದ್ದೇಶವೂ ಸ್ಪಷ್ಟ.

 ಈ ದಾಳಿಯಲ್ಲಿ ಭಾರತೀಯ ಯುವತಿ ಸೇರಿದಂತೆ 28 ಮಂದಿ ಹತ್ಯೆಯಾಗಿದ್ದು ಹೆಚ್ಚಿನವರು ವಿದೇಶಿಯರೇ ಆಗಿದ್ದಾರೆ. ವಿದೇಶಿಯರಿಗೆ ಬಾಂಗ್ಲಾದೇಶ ಅಸುರಕ್ಷಿತ ಎಂಬ ಸಂದೇಶವನ್ನು ಈ ಮೂಲಕ ಸಾರಲಾಗಿದೆ. ಅದರಲ್ಲೂ ಕುರಾನ್ ಪಠಿಸಿದವರನ್ನು ಬೇರ್ಪಡಿಸಿ ಮುಸ್ಲಿಮೇತರರನ್ನು ಕತ್ತು ಸೀಳಿ ಹೇಯವಾಗಿ ಹತ್ಯೆ ಮಾಡಿರುವುದು ಅಮಾನವೀಯ.

ಕಾಫಿರರ ಹತ್ಯೆಗಾಗಿ ಪವಿತ್ರ ರಂಜಾನ್ ಮಾಸವನ್ನೇ ಉದ್ದೇಶಪೂರ್ವಕವಾಗಿ ಜಿಹಾದಿಗಳು ಆಯ್ದುಕೊಂಡಿರುವುದು ಸ್ಪಷ್ಟ.  ಓರ್ಲಾಂಡೊ, ಇಸ್ತಾಂಬುಲ್, ಢಾಕಾ ಹಾಗೂ ಬಾಗ್ದಾದ್‌ಗಳಲ್ಲಿ ನೂರಾರು ಜನರ ಸಾವುನೋವುಗಳಿಂದ ಇದನ್ನು ರಕ್ತಸಿಕ್ತ ಮಾಸವಾಗಿಸಿದ್ದು ವಿಷಾದನೀಯ. ವಿಶ್ವದ ಬಹುಸಂಖ್ಯಾತ ಮುಸ್ಲಿಮರಿಗೆ ರಂಜಾನ್ ಎನ್ನುವುದು ಉಪವಾಸ, ಪ್ರಾರ್ಥನೆ ಹಾಗೂ ಅಧ್ಯಾತ್ಮ ಸಾಧನೆಯ ಸಂದರ್ಭ ಎಂಬುದನ್ನು ಜಿಹಾದಿಗಳು ಮರೆತಿದ್ದಾರೆ. 

ಅಧಿಕೃತ ವರದಿ ಪ್ರಕಾರ, ಢಾಕಾ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್  (ಐಎಸ್) ಕೈವಾಡ ಇಲ್ಲ.   ಆಡಳಿತ ಪಕ್ಷ ಅವಾಮಿ ಲೀಗ್ ವಿರುದ್ಧದ  ಉಗ್ರ ಸಂಘಟನೆಗಳು  ಐಎಸ್ಐ ನೆರವಿನೊಂದಿಗೆ ಈ ದಾಳಿ ನಡೆಸಿವೆ ಎಂದು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಆದರೆ ಈ ವಿಚಾರದಿಂದೇನೂ    ಸಮಾಧಾನಪಟ್ಟುಕೊಳ್ಳುವಂತಿಲ್ಲ. ಏಕೆಂದರೆ,  ಅಲ್ಪಸಂಖ್ಯಾತರು, ವಿದೇಶಿಯರ ವಿರುದ್ಧ ಈ ದಾಳಿಯಲ್ಲಿ ತೋರ್ಪಡಿಸಿರುವ ದ್ವೇಷ ಹಾಗೂ ಹಿಂಸಾಚಾರದ ವಿಧಾನ  ಐಎಸ್ ಮಾದರಿಯದ್ದೇ ಆಗಿದೆ. ಜೊತೆಗೆ  ಇಂತಹ ಕಾರ್ಯಾಚರಣೆಗಳಿಗೆ  ಜಾಗತಿಕವಾದ  ಉಗ್ರ  ಇಸ್ಲಾಮಿಕ್ ಕಾರ್ಯಸೂಚಿಯೂ ಸ್ಫೂರ್ತಿಯಾಗಿರುತ್ತದೆ ಎಂಬಂತಹ ಆಯಾಮವನ್ನು ಕಡೆಗಣಿಸಲಾಗದು.

ಬಾಂಗ್ಲಾದಲ್ಲಿ ಕಳೆದ ಮೂರು ವರ್ಷಗಳಲ್ಲಿ ಅನೇಕ ನಾಸ್ತಿಕರು, ಬುದ್ಧಿಜೀವಿಗಳು, ಲೈಂಗಿಕ ಅಲ್ಪಸಂಖ್ಯಾತರು, ಹಿಂದೂ ಅರ್ಚಕರು ಹಾಗೂ ಸೆಕ್ಯುಲರ್ ಬ್ಲಾಗರ್‌ಗಳ ಹತ್ಯೆಯಾಗಿದೆ. ಶಿಯಾ ಮಸೀದಿಗಳ ಮೇಲೆ ದಾಳಿಗಳೂ ನಡೆದಿವೆ.  ಇಂತಹ  ಪ್ರತೀ ಹತ್ಯೆ ಅಥವಾ ದಾಳಿ, ಉಗ್ರರ ಗುಂಪಿನ ಹೆಚ್ಚುತ್ತಿರುವ ಪ್ರಭಾವವನ್ನು ಸೂಚಿಸುವಂತಹದ್ದು.  

ಆದರೆ  ಷೇಕ್ ಹಸೀನಾರ ಅವಾಮಿ ಲೀಗ್ ಸರ್ಕಾರ  ಹಾಗೂ ಪ್ರತಿಪಕ್ಷವಾದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ)  ಮಧ್ಯದ ರಾಜಕೀಯ ಸೆಣಸಾಟದೊಳಗೆ ಈ ವಿಚಾರ ಗೌಣವಾದದ್ದು ದುರಂತ. ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ  ಕ್ರಮ ಕೈಗೊಳ್ಳುವುದೇ ಸರ್ಕಾರದ ಆದ್ಯತೆಯಾಯಿತು.   ಈ ಸೆಣಸಾಟ ರಾಷ್ಟ್ರದಲ್ಲಿ ಇಸ್ಲಾಮ್ ಮೂಲಭೂತವಾದ ಬೆಳೆಯಲು ಅವಕಾಶ ಮಾಡಿಕೊಟ್ಟಿದೆ. ರಾಜಕೀಯ ತೀವ್ರಗಾಮಿತನವನ್ನೂ  ಹೆಚ್ಚಿಸಿದೆ.

  ಹಾಗೆಯೇ ನೆಲೆ ವಿಸ್ತರಿಸಿಕೊಳ್ಳಲು  ಐಎಸ್ ಹಾಗೂ ಅಲ್ ಕೈದಾ ಇನ್  ಇಂಡಿಯನ್ ಸಬ್ ಕಾಂಟಿನೆಂಟ್‌ಗೆ  (ಎಕ್ಯುಐಎಸ್‌)  ಅವಕಾಶ ಕಲ್ಪಿಸುತ್ತಿದೆ. ಈ ಬೆಳವಣಿಗೆಗಳಿಗೆ ಭಾರತ ಹಾಗೂ ಅಂತರರಾಷ್ಟ್ರೀಯ ಸಮುದಾಯ ಕಣ್ಮುಚ್ಚಿ ಕುಳಿತುಕೊಳ್ಳಲಾಗದು. ಭಾರತದ ಭದ್ರತೆಯ ಮೇಲೂ ಇದು ಪರಿಣಾಮ ಬೀರುವಂತಹದ್ದು. ಈ ಬಗ್ಗೆ ಭಾರತ ಎಚ್ಚರ ವಹಿಸಬೇಕು. ಆಧುನಿಕ ನಾಗರಿಕ ಬದುಕನ್ನು ವಿನಾಶದೆಡೆಗೆ ಒಯ್ಯುವ  ಇಂತಹ ಭಯೋತ್ಪಾದನಾ ದಾಳಿಗಳ ತಡೆಗೆ ವಿಶ್ವ ಒಂದಾಗಬೇಕು.

ಭಯೋತ್ಪಾದನಾ ಪ್ರತಿರೋಧ ಕಾರ್ಯತಂತ್ರಗಳಲ್ಲದೆ ಯುವಜನರು ಉಗ್ರವಾದದೆಡೆ ಆಕರ್ಷಿತವಾಗದಂತೆಯೂ ಕಾರ್ಯಕ್ರಮಗಳನ್ನು ರೂಪಿಸಬೇಕು.  ಏಕೆಂದರೆ ಅಮೆರಿಕ ನೇತೃತ್ವದ ‘ಭಯೋತ್ಪಾದನೆ ವಿರುದ್ಧ ಜಾಗತಿಕ ಸಮರ’ದಂತಹ ಯೋಜನೆಯೇ  ಇಸ್ಲಾಮಿಕ್ ಸ್ಟೇಟ್ (ಐಎಸ್) ಹುಟ್ಟಿಗೆ ಕಾರಣವಾದದ್ದನ್ನು ಜಗತ್ತು ಮರೆತಿಲ್ಲ. ಹೀಗಾಗಿ ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಎಚ್ಚರದಿಂದ ನಿಭಾಯಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT