ADVERTISEMENT

ಭಾರತೀಯ ಮೂಲದವರ ಬೇಡಿಕೆ, ಸಮಸ್ಯೆಗೆ ಗಮನಕೊಡಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 20:14 IST
Last Updated 10 ಜನವರಿ 2017, 20:14 IST
ಭಾರತೀಯ ಮೂಲದವರ ಬೇಡಿಕೆ, ಸಮಸ್ಯೆಗೆ ಗಮನಕೊಡಿ
ಭಾರತೀಯ ಮೂಲದವರ ಬೇಡಿಕೆ, ಸಮಸ್ಯೆಗೆ ಗಮನಕೊಡಿ   

ಮೂರು ದಿನಗಳ ಪ್ರವಾಸಿ ಭಾರತೀಯ ದಿವಸ್‌ ಕಾರ್ಯಕ್ರಮಕ್ಕೆ ಸೋಮವಾರ ತೆರೆಬಿದ್ದಿದೆ. ಅದಕ್ಕೆ ದೊರೆತ ಪ್ರಚಾರ, ಪಾಲ್ಗೊಂಡ ಪ್ರತಿನಿಧಿಗಳ ಸಂಖ್ಯೆ, ನಡೆದ ಸಂವಾದ– ಮುಖಾಮುಖಿಗಳನ್ನು ಪರಿಗಣಿಸಿದರೆ ಅದು ಯಶಸ್ವಿ ಎಂದು ವ್ಯಾಖ್ಯಾನಿಸಬಹುದು. ಆದರೆ ಅದನ್ನು ದಾಟಿ ಔದ್ಯೋಗಿಕ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಅದು ಫಲಪ್ರದ ಎನಿಸಿಕೊಳ್ಳಲು ಹೊರಗಿನಿಂದ ಒಂದಿಷ್ಟು ಬಂಡವಾಳವೂ ಹರಿದು ಬರಬೇಕು. ಅದಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಬೇಕು.

ಅದು ಹೂಡಿಕೆದಾರರಿಗೆ ಮನವರಿಕೆ ಆಗಬೇಕು. ಏಕೆಂದರೆ ಪ್ರವಾಸಿ ಭಾರತೀಯ ದಿವಸ್‌ಗೆ ಆಹ್ವಾನಿತರಾದವರು ಮತ್ತು ನೋಂದಾಯಿಸಿಕೊಂಡವರಲ್ಲಿ ಬಹುತೇಕರು ‘ಸಾಗರೋತ್ತರ ಭಾರತೀಯರು’ ಎಂದೇ ಕರೆಸಿಕೊಳ್ಳುವ ಭಾರತೀಯ ಮೂಲದ ವಿದೇಶಿ ಪ್ರಜೆಗಳು ಮತ್ತು ಅನಿವಾಸಿ ಭಾರತೀಯರು (ಎನ್‌ಆರ್‌ಐ).  ಈ ದೇಶದ ಜತೆ ಕರುಳು ಬಳ್ಳಿ ಸಂಬಂಧ ಹೊಂದಿದವರು. ಇವರೆಲ್ಲರ ವಂಶದ ಮೂಲ ಬೇರುಗಳು ಇಲ್ಲಿಯೇ ಇವೆ.

ಸಾಗರೋತ್ತರ ಭಾರತೀಯರ  ಪೂರ್ವಿಕರು ಒಂದು, ಎರಡು, ಮೂರು... ಹೀಗೆ ಅನೇಕ ತಲೆಮಾರುಗಳ ಹಿಂದೆ ಜೀವನೋಪಾಯಕ್ಕಾಗಿ ಅಥವಾ ಬಲವಂತದ ದುಡಿಮೆಗಾಗಿ ಭಾರತದ ಸೀಮೆಯನ್ನು ದಾಟಿ ಸಾವಿರಾರು ಕಿಲೋ ಮೀಟರ್‌ಗಳಷ್ಟು ದೂರದ ದೇಶಗಳಿಗೆ ಹೋದವರು. ಅಲ್ಲಿಯೇ ಬದುಕು ಕಟ್ಟಿಕೊಂಡವರು. ಈಗ ಆ ಕುಟುಂಬಗಳು ಆ ದೇಶದ ನೆಲದಲ್ಲಿ, ಸಮಾಜದಲ್ಲಿ ಹಾಸು ಹೊಕ್ಕಾಗಿವೆ.

ಎಷ್ಟೋ ಭಾರತೀಯ ಮೂಲದವರು ಅಲ್ಲೆಲ್ಲ ಪ್ರಧಾನಿ, ರಾಷ್ಟ್ರಾಧ್ಯಕ್ಷ, ಪಾರ್ಲಿಮೆಂಟ್‌ ಸದಸ್ಯರಾಗಿದ್ದಾರೆ.   ಟ್ರಿನಿಡಾಡ್‌ ಮತ್ತು ಟೊಬ್ಯಾಗೊ, ಗಯಾನಾ, ಸುರಿನಾಮ್‌, ಅಮೆರಿಕ, ಬ್ರಿಟನ್‌, ಕೆನಡಾ, ಫಿಜಿ, ಮಲೇಷ್ಯಾ, ಇಂಡೊನೇಷ್ಯಾ, ಸಿಂಗಪುರ, ದಕ್ಷಿಣ ಆಫ್ರಿಕ, ಮಾರಿಷಸ್‌, ಆಸ್ಟ್ರೇಲಿಯ ಸೇರಿ ಅನೇಕ ದೇಶಗಳಲ್ಲಿ ಭಾರತೀಯ ಮೂಲದವರು ಗಣನೀಯ ಸಂಖ್ಯೆಯಲ್ಲಿದ್ದಾರೆ.

ಕೊಲ್ಲಿ ರಾಷ್ಟ್ರಗಳಲ್ಲಿನ ಲಕ್ಷಾಂತರ ಅನಿವಾಸಿ ಭಾರತೀಯರು ತಾವೂ ಬೆಳೆದಿದ್ದಾರೆ, ಆ ದೇಶಗಳನ್ನೂ ಬೆಳೆಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಈಗ ವಿಶ್ವದ ವಿವಿಧ ದೇಶಗಳಲ್ಲಿ ಇರುವ ಭಾರತೀಯ ಮೂಲದವರ, ಅನಿವಾಸಿ  ಭಾರತೀಯರ ಸಂಖ್ಯೆ ಸುಮಾರು 3 ಕೋಟಿ. ಇವರು ಸ್ವದೇಶಕ್ಕೆ ರವಾನಿಸುವ ಹಣ ವರ್ಷಕ್ಕೆ ಸರಿಸುಮಾರು ₹ 4.80 ಲಕ್ಷ ಕೋಟಿ.

ಇದೇನೂ ಸಣ್ಣ ಮೊತ್ತವಲ್ಲ. ಹೀಗಾಗಿ ಅನಿವಾಸಿ ಮತ್ತು ಸಾಗರೋತ್ತರ ಭಾರತೀಯ ಸಮುದಾಯ ಸದಾ ಸ್ಮರಣೆಗೆ ಅರ್ಹ. ಅವರ ಕೊಡುಗೆಯನ್ನು ಗೌರವಿಸುವ, ಇಲ್ಲಿನ ಸರ್ಕಾರ ಮತ್ತು ಜನರ ಜತೆ ಸಂವಾದಕ್ಕೆ ವೇದಿಕೆ ಒದಗಿಸುವ ಪ್ರವಾಸಿ ಭಾರತೀಯ ದಿವಸ್‌ ಈ ಕಾರಣಕ್ಕಾಗಿ ವಿಶಿಷ್ಟವೂ ಹೌದು.

ಈ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಾಗರೋತ್ತರ ಭಾರತೀಯ ಪೌರತ್ವ ಕಾರ್ಡ್‌ ಪಡೆಯುವ ನಿಯಮಾವಳಿ ಸರಳಗೊಳಿಸುವುದಾಗಿ ಹೇಳಿರುವುದು ಸ್ವಾಗತಾರ್ಹ. ಎಫ್‌ಡಿಐ ಎಂದೇ ಜನಪ್ರಿಯವಾದ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಅವರು,  ‘ಮೊದಲು ಭಾರತದ ಅಭಿವೃದ್ಧಿ’ (ಫಸ್‌್ಟ ಡೆವಲಪ್‌ ಇಂಡಿಯಾ) ಎಂದು ಬದಲಿಸುವಂತೆ ಕರೆ ಕೊಟ್ಟಿದ್ದು ಸಕಾಲಿಕವಾಗಿದೆ.

ಭಾರತೀಯ ಪ್ರತಿಭೆಗಳು ವಿದೇಶಕ್ಕೆ ಹೋಗುವುದರಿಂದ ದೇಶಕ್ಕೆ ಹಾನಿ, ಅದು ‘ಪ್ರತಿಭಾ ಪಲಾಯನ’ ಎಂಬುದು ಇದುವರೆಗಿನ ರೂಢಿಗತ ಗ್ರಹಿಕೆ. ಆದರೆ ಪ್ರಧಾನಿ ಹೇಳಿದಂತೆ ಅದು ‘ಪ್ರತಿಭಾ ಪಲಾಯನವಲ್ಲ; ಪ್ರತಿಭಾ ಗಳಿಕೆ’. ಸಾಗರೋತ್ತರ ಮತ್ತು ಅನಿವಾಸಿ ಭಾರತೀಯರ ಕೊಡುಗೆಗಳನ್ನು ಗಣನೆಗೆ ತೆಗೆದುಕೊಂಡರೆ  ಈ ಮಾತು ನಿಜ. ಆದರೆ ಬರೀ ಹೊಗಳಿಕೆಯಿಂದ ಹೊಟ್ಟೆ ತುಂಬುವುದಿಲ್ಲ.

ಭಾರತಕ್ಕೆ ಬರಲು ವೀಸಾ ಮಂಜೂರು, ಪಾಸ್‌ಪೋರ್ಟ್‌ ನವೀಕರಣದಲ್ಲಿ ಆಗುತ್ತಿರುವ ತೊಂದರೆ, ವಿದೇಶಗಳಲ್ಲಿ ಉದ್ಯೋಗದ ಸ್ಥಳ ಮತ್ತು ವಿಷಯಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಈ ಸಮಾವೇಶದಲ್ಲಿನ ಪ್ರತಿನಿಧಿಗಳು ಮಾಡಿಕೊಂಡ ಮನವಿಯ ಬಗ್ಗೆ ಪ್ರಧಾನಿ ಗಮನ ಹರಿಸಬೇಕು.  ಈ ಸಮುದಾಯ ಭಾರತದಲ್ಲಿ ಬಂಡವಾಳ ಹೂಡಲು ಸಿದ್ಧವಾಗಿದೆ  ಎಂದರೆ ಅದರ ಹಿಂದೆ ಬರೀ ಲಾಭ ಗಳಿಕೆಯೊಂದೇ ದೃಷ್ಟಿಯಲ್ಲಿ ಇರುವುದಿಲ್ಲ.

ADVERTISEMENT

ತಮ್ಮ ಪೂರ್ವಿಕರ ತಾಯ್ನಾಡಿಗೆ ಏನಾದರೂ ಕಾಣಿಕೆ ಕೊಡಬೇಕು ಎಂಬ ತುಡಿತ ಇರುತ್ತದೆ. ಜತೆಗೆ ವ್ಯಾವಹಾರಿಕ ಲೆಕ್ಕಾಚಾರಗಳೂ ಇರುತ್ತವೆ.  ಅವರಿಗೆ ಉತ್ತೇಜನ ಕೊಡುವ  ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸುರಕ್ಷತೆ, ಉತ್ತಮ ಜೀವನ ಮಟ್ಟದ ಖಾತರಿ ಕೂಡ  ಬೇಕಾಗುತ್ತದೆ. ಅನಿವಾಸಿಗಳಿಗಾಗಿಯೇ ಪ್ರತ್ಯೇಕ ಅವಕಾಶಗಳನ್ನು ಸೃಷ್ಟಿಸಬೇಕು. ಆಗ ಮಾತ್ರ ಪ್ರವಾಸಿ ಭಾರತೀಯ ದಿವಸ್‌ ಏರ್ಪಡಿಸಿದ್ದಕ್ಕೂ ಸಾರ್ಥಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.