ADVERTISEMENT

ಭಾರತ– ಪಾಕ್ ವಾಕ್ಸಮರದಾಚೆಗೂ ವಿಶ್ವಸಂಸ್ಥೆಯ ಆಶಯ ಬಿಂಬಿತವಾಗಲಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2017, 19:30 IST
Last Updated 25 ಸೆಪ್ಟೆಂಬರ್ 2017, 19:30 IST
ಭಾರತ– ಪಾಕ್ ವಾಕ್ಸಮರದಾಚೆಗೂ ವಿಶ್ವಸಂಸ್ಥೆಯ ಆಶಯ ಬಿಂಬಿತವಾಗಲಿ
ಭಾರತ– ಪಾಕ್ ವಾಕ್ಸಮರದಾಚೆಗೂ ವಿಶ್ವಸಂಸ್ಥೆಯ ಆಶಯ ಬಿಂಬಿತವಾಗಲಿ   

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕಿಸ್ತಾನ ಪ್ರಧಾನಿಗೆ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರು ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ 22 ನಿಮಿಷಗಳ ಕಾಲ ಭಾಷಣ ಮಾಡಿದ ಅವರು, ಪಾಕಿಸ್ತಾನದ ಕೃತ್ಯಗಳನ್ನು ಪರಿಣಾಮಕಾರಿಯಾಗಿ ಬಯಲಿಗೆಳೆದಿದ್ದಾರೆ. ಈ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಾಯಂ ಪ್ರತಿನಿಧಿಯಾಗಿರುವ ಮಲೀಹಾ ಲೋಧಿ ಅವರು, ಕಾಶ್ಮೀರದಲ್ಲಿ ಪೆಲೆಟ್ ಬಂದೂಕು ದಾಳಿಯ ಸಂತ್ರಸ್ತೆ ಎಂದು ಗಾಜಾದ ಬಾಲಕಿಯ ಚಿತ್ರ ತೋರಿಸಿ ನಗೆಪಾಟಲಿಗೀಡಾದ ವಿದ್ಯಮಾನವೂ ನಡೆದಿದೆ. ಭಯೋತ್ಪಾದನೆ, ಹವಾಮಾನ ಬದಲಾವಣೆ, ಬಡತನ, ನಿರುದ್ಯೋಗ, ಮಹಿಳಾ ಸಬಲೀಕರಣ, ವಲಸೆ, ಪರಮಾಣು ಪ್ರಸರಣದಂತಹ ಸವಾಲುಗಳ ಬಗ್ಗೆಯೂ ಸುಷ್ಮಾ ಸ್ವರಾಜ್ ಮಾತನಾಡಿದ್ದಾರೆ. ಸೈಬರ್ ಭದ್ರತೆ ಎಂಬುದು ಆಳವಾದ ಅಭದ್ರತೆಯ ವಿಚಾರವಾಗಿದೆ ಎಂಬುದನ್ನು ಅವರು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಭದ್ರತಾ ಮಂಡಳಿ ಸುಧಾರಣೆ ವಿಚಾರವನ್ನೂ ಸುಷ್ಮಾ ನೆನಪಿಸಿದ್ದಾರೆ.

ಭಯೋತ್ಪಾದನೆ ನಿಗ್ರಹಕ್ಕೆ ವಿಶ್ವಸಂಸ್ಥೆ ಆದ್ಯತೆ ನೀಡಿದೆ ಎಂಬುದು ಗೊತ್ತಿರುವ ಸಂಗತಿ. ಅಂತರರಾಷ್ಟ್ರೀಯ ಭಯೋತ್ಪಾದನೆ ಮೇಲೆ ಸಮಗ್ರ ನಿರ್ಣಯಕ್ಕೆ 1996ರಲ್ಲೇ ವಿಶ್ವಸಂಸ್ಥೆ ಪ್ರಸ್ತಾವ ಮಂಡಿಸಿತ್ತು. ಆದರೆ ಎರಡು ದಶಕಗಳ ನಂತರವೂ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ ಎಂಬುದು ವಿಪರ್ಯಾಸ. ಈ ವಿಚಾರವನ್ನೂ ಸುಷ್ಮಾ ಸ್ವರಾಜ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಭಯೋತ್ಪಾದನೆ ಕುರಿತಂತೆ ಜಾಗತಿಕವಾಗಿ ಅಂಗೀಕಾರವಾಗಬಹುದಾದ ‘ವಿವರಣೆ’ಯೊಂದರ ಬಗ್ಗೆ ಒಮ್ಮತಕ್ಕೆ ಬರುವ ಅಗತ್ಯದ ಬಗ್ಗೆ ಅವರು ಮಂಡಿಸಿದ ವಿಚಾರಗಳು ಮುಖ್ಯವಾದವು. ಭಯೋತ್ಪಾದನೆಗೆ ಸರ್ವಸಮ್ಮತ ವಿವರಣೆಯೇ ಸಾಧ್ಯವಾಗಿಲ್ಲ ಎಂದರೆ ಅದರ ವಿರುದ್ಧ ಹೇಗೆ ಹೋರಾಡುತ್ತೀರಿ ಎಂಬ ಅವರ ಪ್ರಶ್ನೆ ಸರಿಯಾದುದು.

ವಿಶ್ವ ಸಂಸ್ಥೆ ಮಹಾ ಅಧಿವೇಶನದಲ್ಲಿ ಕಳೆದ ಅನೇಕ ವರ್ಷಗಳಿಂದ ಪಾಕಿಸ್ತಾನದ ವಿಚಾರ ದೊಡ್ಡದಾಗಿ ಪ್ರಸ್ತಾಪವಾಗುತ್ತಿದೆ ಎಂಬುದು ವಿಷಾದನೀಯ. ಭಾರತ, ಪಾಕಿಸ್ತಾನಗಳು ಪರಸ್ಪರ ಹಳಿದುಕೊಳ್ಳುವುದಕ್ಕೆ ಇದು ವೇದಿಕೆಯಾಗುವುದು ದುರದೃಷ್ಟಕರ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಭಾರತ ವಿರೋಧಿ ಪ್ರಯತ್ನಗಳನ್ನು ಪ್ರತಿರೋಧಿಸುವ ಅಗತ್ಯ ಭಾರತಕ್ಕೆ ಸೃಷ್ಟಿಯಾಗುವುದರಿಂದ ಇದು ಅನಿವಾರ್ಯವಾಗುತ್ತಿರಬಹುದು. ಆದರೆ ಅಂತರರಾಷ್ಟ್ರೀಯ ಸಮುದಾಯದಲ್ಲಿ ದೊಡ್ಡ ಪಾತ್ರ ನಿರ್ವಹಿಸುವ ಕುರಿತಂತೆ ಭಾರತದ ಆಶಯಗಳನ್ನು ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಬಿಂಬಿಸಲು ಭಾರತಕ್ಕೆ ಇದು ದೊಡ್ಡ ಅವಕಾಶವೂ ಆಗಿರುತ್ತದೆ ಎಂಬುದನ್ನು ಮರೆಯಲಾಗದು. ಹೀಗಾಗಿ, ಅಂತರರಾಷ್ಟ್ರೀಯ ಸಮುದಾಯದ ಸದಸ್ಯ ರಾಷ್ಟ್ರವಾಗಿ ತನ್ನ ಪಾತ್ರವನ್ನು ಭಾರತ ಹೇಗೆ ಕಂಡುಕೊಳ್ಳುತ್ತದೆ ಎಂಬುದು ಮುಖ್ಯ. ಭೂ ಮಂಡಲದ ಇನ್ನೂ ಹೆಚ್ಚಿನ ಕಾಳಜಿಗಳಿಗೆ ಭಾರತ ದನಿ ಕೊಡುವಂತಾಗಬೇಕು. ವಿಶ್ವಸಂಸ್ಥೆ ಮಹಾ ಅಧಿವೇಶನ ಜಾಗತಿಕ ಸಂವಾದಗಳನ್ನು ರೂಪಿಸಲು, ತೀವ್ರಗೊಳಿಸಲು ಭಾರತಕ್ಕೆ ಲಭ್ಯವಿರುವ ವೇದಿಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.