ADVERTISEMENT

ಮಳೆ ಕೊರತೆ ನಿರ್ವಹಣೆಗೆ ಸೂಕ್ತ ಸನ್ನದ್ಧತೆ ಬೇಕು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2017, 19:30 IST
Last Updated 7 ಆಗಸ್ಟ್ 2017, 19:30 IST
ಮಳೆ ಕೊರತೆ ನಿರ್ವಹಣೆಗೆ ಸೂಕ್ತ ಸನ್ನದ್ಧತೆ ಬೇಕು
ಮಳೆ ಕೊರತೆ ನಿರ್ವಹಣೆಗೆ ಸೂಕ್ತ ಸನ್ನದ್ಧತೆ ಬೇಕು   

ರಾಜ್ಯದ ಪಾಲಿಗೆ ಮುಂಗಾರು ಈ ಬಾರಿಯೂ ಕೈಕೊಟ್ಟಿದೆ. ನೈರುತ್ಯ ಮಳೆ ಮಾರುತಗಳು ತಮ್ಮ ಚಂಚಲತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿವೆ. ದೇಶದ ಕೆಲವೆಡೆ ಅತಿವೃಷ್ಟಿ, ಹಲವೆಡೆ ಅನಾವೃಷ್ಟಿ ಸೃಷ್ಟಿಯಾಗಿದೆ. ಒಂದೇ ಮಳೆಗಾಲದಲ್ಲಿನ ಹವಾಮಾನದ ಈ ಎಲ್ಲ ವೈಪರೀತ್ಯಗಳಿಗೆ ಇಡೀ ದೇಶವೇ ಸಾಕ್ಷಿಯಾಗಿದೆ. ದಕ್ಷಿಣ ಭಾರತ ಹೊರತುಪಡಿಸಿ, ದೇಶದ ಉಳಿದ ಭಾಗಗಳಲ್ಲಿ ನಿರೀಕ್ಷೆಯಂತೆ ವಾಡಿಕೆಯ ಮಳೆ ಸುರಿದಿದೆ. ಗುಜರಾತ್‌, ಒಡಿಶಾ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಕಂಡುಬಂದಿದೆ. ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಮಳೆ ಕಡಿಮೆ ಆಗಿರುವುದರಿಂದ ಆತಂಕ ಸೃಷ್ಟಿಯಾಗಿದೆ. ತಮಿಳುನಾಡು ಮತ್ತು ಕೇರಳಗಳಲ್ಲಿ ಈ ಕೊರತೆ ಪ್ರಮಾಣ ಇನ್ನೂ ಹೆಚ್ಚಿಗೆ ಇದೆ. ಕಾವೇರಿ ಜಲಾನಯನ ಪ್ರದೇಶದಲ್ಲಿನ ಸದ್ಯದ ಪರಿಸ್ಥಿತಿ ಕಳವಳಕಾರಿಯಾಗಿದೆ. ಹಾರಂಗಿ ಹೊರತುಪಡಿಸಿ, ಉಳಿದೆಲ್ಲ ಜಲಾಶಯಗಳಿಗೆ ಸಾಕಷ್ಟು ನೀರು ಹರಿದುಬಂದಿಲ್ಲ. ಇದರಿಂದಾಗಿ ಕೃಷಿ ಚಟುವಟಿಕೆಗೆ ಹಿನ್ನಡೆ ಆಗಿದೆ. ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದ್ದುದಕ್ಕಿಂತ ಕಡಿಮೆ ನೀರು ಈ ಜಲಾಶಯಗಳಲ್ಲಿದೆ. ನೀರು ಬಿಡುವಂತೆ ಒತ್ತಾಯಿಸಿ ಕಾವೇರಿ ಕೊಳ್ಳದ ರೈತರುಬೀದಿಗೂ ಇಳಿದಿದ್ದಾರೆ. ಕೋರ್ಟ್ ತೀರ್ಪು ಪಾಲಿಸಲು ತಮಿಳುನಾಡಿಗೆ ನೀರು ಹರಿಸುವ ಅನಿವಾರ್ಯವೂ ಇದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಜಲವಿವಾದ ಇನ್ನಷ್ಟು ತೀವ್ರಗೊಳ್ಳಬಹುದು. ಮಳೆಗಾಲ ಇನ್ನೂ ಮುಗಿದಿಲ್ಲ. ಆದರೂ ಮಳೆ ಕೊರತೆ ಪೂರ್ಣ ಪ್ರಮಾಣದಲ್ಲಿ ತುಂಬಿಕೊಳ್ಳುವುದು ಕಷ್ಟ.

ದಕ್ಷಿಣದ ರಾಜ್ಯಗಳಲ್ಲಿನ ಮಳೆ ಕೊರತೆ ಹೊರತಾಗಿಯೂ ಹವಾಮಾನ ಇಲಾಖೆಯ ಅಂದಾಜಿನಂತೆ, ದೇಶದ ಇತರ ಭಾಗಗಳಲ್ಲಿ ಒಳ್ಳೆಯ ಮಳೆಯಾಗಿದೆ. ಇದರಿಂದ ಮುಂಗಾರು ಹಂಗಾಮಿನ ಕೃಷಿ ಫಸಲು ಹಿಂದಿನ ವರ್ಷಕ್ಕಿಂತ ಹೆಚ್ವಿಗೆ ಇರಲಿದೆ. ಈ ವಿದ್ಯಮಾನ ಮಾತ್ರ ಆಶಾದಾಯಕ. ಮುಂಗಾರು ಹಂಗಾಮಿನ ಕೃಷಿ ಉತ್ಪಾದನೆಯು ಹಿಂದಿನ ವರ್ಷದ ಉತ್ಪಾದನೆ (13.80 ಕೋಟಿ ಟನ್‌) ಮೀರಿಸಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಅಂದಾಜಿಸಿದೆ. ದಕ್ಷಿಣದ ರಾಜ್ಯಗಳಿಗೆ ಇದೇ ಮಾತನ್ನು ಅನ್ವಯಿಸಲಿಕ್ಕಾಗದು. ದಕ್ಷಿಣದಲ್ಲಿನ ಕೃಷಿ ಉತ್ಪಾದನೆ ಕಡಿಮೆಯಾಗಿದ್ದರೂ, ಉತ್ತರದ ರಾಜ್ಯಗಳಲ್ಲಿ ಉತ್ಪಾದನೆ ಹೆಚ್ವಿಗೆ ಇರುವುದರಿಂದ ಸಮೃದ್ಧ ಫಸಲು ನಿರೀಕ್ಷಿಸಬಹುದಾಗಿದೆ. ಮಳೆ ಸೃಷ್ಟಿಸಿದ ಎರಡು ಬಗೆಯ ಪ್ರತಿಕೂಲಗಳ ಹೊರತಾಗಿಯೂ ಕೃಷಿ ಇಳುವರಿ ಹೆಚ್ಚಿಗೆ ಇರುವುದರಿಂದ ದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ಎದುರಾಗಲಾರದು ಎನ್ನುವುದು ಸಮಾಧಾನ ನೀಡುವ ಸಂಗತಿಯಾಗಿದೆ.

ನಮ್ಮಲ್ಲಿ ಕೃಷಿ ಉತ್ಪನ್ನಗಳ ರಾಷ್ಟ್ರೀಯ ಮಾರುಕಟ್ಟೆ ಪರಿಕಲ್ಪನೆ ಇನ್ನೂ ಬಾಲ್ಯಾವಸ್ಥೆಯಲ್ಲಿ ಇರುವುದರಿಂದ ಆಹಾರ ಧಾನ್ಯಗಳ ಬೆಲೆ ಏರುಗತಿಯಲ್ಲಿದೆ. ಸಾಗಾಣಿಕೆ ಸಮಸ್ಯೆ, ಉಗ್ರಾಣ ಮತ್ತು ಶೈತ್ಯಾಗಾರಗಳ ಕೊರತೆಯ ಕಾರಣಕ್ಕೆ ಪೂರೈಕೆ ಸಮಸ್ಯೆ ಎದುರಾಗಲಿದೆ. ಕೃತಕ ಅಭಾವ ಕೂಡ ಸೃಷ್ಟಿಯಾಗಲಿದೆ. ಟೊಮೆಟೊ ಮತ್ತು ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಮಧ್ಯವರ್ತಿಗಳು ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿರುವುದಕ್ಕೆ ಇದು ನಿದರ್ಶನವಾಗಿದೆ. ಮುಂಗಾರು ವೈಫಲ್ಯವು ರೈತಾಪಿ ವರ್ಗವನ್ನು ತೀವ್ರ ಸ್ವರೂಪದ ಸಂಕಷ್ಟಕ್ಕೆ ದೂಡುತ್ತದೆ. ರೈತರ ಸಂಕಟ ದೂರ ಮಾಡಲು ರಾಜ್ಯ ಸರ್ಕಾರವು ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಪರ್ಯಾಯ ಬೆಳೆಗಳ ಬಗ್ಗೆ ರೈತರಿಗೆ ಸಲಹೆ–ಸೂಚನೆ ನೀಡಬೇಕು. ಆಹಾರ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಕೃಷಿಕರು ಮತ್ತು ಬಳಕೆದಾರರನ್ನು ಹಲವು ಬಗೆಯಲ್ಲಿ ಕಾಡುವ ಬರಗಾಲ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿರ್ವಹಿಸಬೇಕಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.