ADVERTISEMENT

ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಮಹತ್ತರ ಮೈಲುಗಲ್ಲು

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST
ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಮಹತ್ತರ ಮೈಲುಗಲ್ಲು
ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಮಹತ್ತರ ಮೈಲುಗಲ್ಲು   

ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಇದೀಗ ಭಾರತದ ಮಹತ್ವದ ಹೆಜ್ಜೆಗುರುತುಗಳು ಹೊಳೆಯುತ್ತಿವೆ. ಲಂಡನ್‌ನಲ್ಲಿ ಭಾನುವಾರ ನಡೆದ ವಿಶ್ವಕಪ್‌ ಮಹಿಳಾ ಕ್ರಿಕೆಟ್‌ ಫೈನಲ್‌ನಲ್ಲಿ ಭಾರತದ ವನಿತೆಯರು ಆತಿಥೇಯ ಇಂಗ್ಲೆಂಡ್‌ ಎದುರು ಸೋತಿದ್ದಾರೆ. ಆದರೆ ರೋಚಕ ಪೈಪೋಟಿ ನೀಡಿ ಪ್ರಶಸ್ತಿಯ ಹೆಬ್ಬಾಗಿಲಲ್ಲಿ ಎಡವಿದ್ದಾರೆ. ಭಾರತ ಈ ಕೂಟದಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಶ್ರೀಲಂಕಾ, ವೆಸ್ಟ್‌ ಇಂಡೀಸ್‌, ಪಾಕಿಸ್ತಾನ ತಂಡಗಳನ್ನೇ ಸೋಲಿಸಿದೆ. ಮಿಥಾಲಿರಾಜ್‌, ಜೂಲನ್‌ ಗೋಸ್ವಾಮಿ, ಹರ್ಮನ್‌ಪ್ರೀತ್‌ ಕೌರ್‌, ಸ್ಮೃತಿ ಮಂದಾನಾ, ಪೂನಮ್‌ ರಾವತ್‌ ಮುಂತಾದವರ ಆಟಕ್ಕೆ ಮಹಿಳಾ ಕ್ರಿಕೆಟ್‌ ಲೋಕವೇ ಬೆಕ್ಕಸ ಬೆರಗಾಗಿದೆ. ತಂಡದ ನಾಯಕಿ ಮಿಥಾಲಿ ಅವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಆರು ಸಾವಿರ ರನ್‌ಗಳ ಗಡಿ ದಾಟಿದ ಮೊದಲ ಮಹಿಳೆ ಎಂಬ ದಾಖಲೆ ಹೊಂದಿದ್ದಾರೆ.

ಜೂಲನ್‌ ಗೋಸ್ವಾಮಿ ಎರಡು ತಿಂಗಳ ಹಿಂದೆಯೇ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕಿನ 181ನೇ ವಿಕೆಟ್‌ ಉರುಳಿಸಿದಾಗ, ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್‌ ಗಳಿಸಿದ ವಿಶ್ವದಾಖಲೆಯ ಗೌರವ ಪಡೆದರು. ಅಷ್ಟರವರೆಗೆ ಈ ದಾಖಲೆ ಆಸ್ಟ್ರೇಲಿಯಾದ ಕ್ಯಾಥರಿನ್‌ ಹೆಸರಿನಲ್ಲಿತ್ತು. ಮಹಿಳಾ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಅತ್ಯಂತ ಪ್ರಬಲ ತಂಡಗಳಲ್ಲಿ ಒಂದು. ಈ ತಂಡ ವಿಶ್ವಕಪ್‌ ಕೂಟದಲ್ಲಿ ಆರು ಸಲ ಪ್ರಶಸ್ತಿ ಗೆದ್ದಿದ್ದರೆ, ಎರಡು ಸಲ ಫೈನಲ್‌ನಲ್ಲಿ ಎಡವಿದೆ. ಘಟಾನುಘಟಿ ಆಟಗಾರ್ತಿಯರಿರುವ ಈ ತಂಡದ ಎದುರು ಭಾರತದ ಹರ್ಮನ್‌ಪ್ರೀತ್‌ ಕೌರ್‌ ಅಜೇಯ 171 ರನ್‌ ಗಳಿಸಿದ್ದೊಂದು ವೀರಗಾಥೆಯೇ ಹೌದು. ಇಂಗ್ಲೆಂಡ್‌ ಕೂಡಾ ಅತ್ಯಂತ ಪ್ರಬಲ ತಂಡ. ಏಳು ಸಲ ಫೈನಲ್‌ ತಲುಪಿ ನಾಲ್ಕು ಸಲ ಟ್ರೋಫಿ ಎತ್ತಿಕೊಂಡಿರುವ ಇಂಗ್ಲೆಂಡ್‌ ಎದುರು ಈ ಕೂಟದ ಲೀಗ್‌ ಹಂತದ ಮೊದಲ ಪಂದ್ಯದಲ್ಲಿಯೇ ಭಾರತದ ಆಟಗಾರ್ತಿಯರು ಗೆದ್ದಿರುವುದನ್ನು ಮರೆಯುವಂತಿಲ್ಲ. ಪುರುಷರ ಕ್ರಿಕೆಟ್‌ನಷ್ಟೇ ಮಹಿಳಾ ಕ್ರಿಕೆಟ್‌ ಕೂಡಾ ಈಚೆಗೆ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುವಂತೆ ಮಾಡುವ ದಿಸೆಯಲ್ಲಿ ಭಾರತದ ಆಟಗಾರ್ತಿಯರು ಅನನ್ಯ ಕೊಡುಗೆ ನೀಡಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್‌ ಸಂಸ್ಥೆಯು ಎಪ್ಪತ್ತರ ದಶಕದ ಆರಂಭದಲ್ಲಿ ಹುಟ್ಟು ಪಡೆದಾಗ ಹೆಚ್ಚಿನ ಉತ್ತೇಜನ ಸಿಕ್ಕಿರಲಿಲ್ಲ. ಈ ಸಂಸ್ಥೆಗೆ 1973ರಲ್ಲಿ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ಕೌನ್ಸಿಲ್‌ನ ಸದಸ್ಯತ್ವವೂ ಸಿಕ್ಕಿತು. 1978ರಲ್ಲಿ ಈ ಸಂಸ್ಥೆಗೆ ಸರ್ಕಾರದಿಂದ ಮಾನ್ಯತೆಯೂ ದೊರೆಯಿತು. ಈ ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆ ನಿರಂತರವಾಗಿ ನಡೆಯತೊಡಗಿತು. 1975ರಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬಂದು ಮೂರು ಪಂದ್ಯಗಳಲ್ಲಿ ಆಡಿತು. ಈ ದೇಶದ ಮಹಿಳಾ ಕ್ರಿಕೆಟ್‌ ಮಟ್ಟಿಗೆ ಅದೇ ಮೊದಲ ಅಂತರರಾಷ್ಟ್ರೀಯ ಸರಣಿ. ನಂತರ ಆಸ್ಟ್ರೇಲಿಯಾ, ವೆಸ್ಟ್‌ ಇಂಡೀಸ್‌, ನ್ಯೂಜಿಲೆಂಡ್‌, ಇಂಗ್ಲೆಂಡ್‌ ತಂಡಗಳ ವಿರುದ್ಧವೂ ಈ ನಾಡಿನ ಆಟಗಾರ್ತಿಯರು ಗಮನ ಸೆಳೆದರು. 1995ರಲ್ಲಿ ನ್ಯೂಜಿಲೆಂಡ್‌ನಲ್ಲೇ ನಡೆದ ಏಕದಿನ ಸರಣಿಯಲ್ಲಿ ಭಾರತ ಗೆದ್ದಿತು. 1978ರಿಂದ ನಡೆಯುತ್ತಿರುವ ಪ್ರತಿ ವಿಶ್ವಕಪ್‌ ಕೂಟದಲ್ಲಿಯೂ ಭಾರತ ಪಾಲ್ಗೊಳ್ಳುತ್ತಲೇ ಬಂದಿದೆ.

ADVERTISEMENT

1997ರಲ್ಲಿ ಭಾರತವೇ ವಿಶ್ವಕಪ್‌ಗೆ ಆತಿಥ್ಯ ವಹಿಸಿತ್ತು. ಮಹಿಳಾ ಕ್ರಿಕೆಟ್‌ನ ಸಂಘಟಿತ ಸ್ವರೂಪ ಪರಿಣಾಮಕಾರಿಯಾಯಿತು. ಆಟಗಾರ್ತಿಯರಿಂದ ಶ್ರೇಷ್ಠ ಸಾಮರ್ಥ್ಯ ಮೂಡಿಬರತೊಡಗಿತು. ಲಾರ್ಡ್ಸ್‌ನಲ್ಲಿ ಭಾರತೀಯ ವನಿತೆಯರು ಸೋತು ಗೆದ್ದಿದ್ದಾರೆ. ಈ ನಾಡಿನಲ್ಲಿ ಪುರುಷರ ಕ್ರಿಕೆಟ್ ಸದಾ ಸುದ್ದಿಯಲ್ಲಿರುತ್ತದೆ. ಇದೀಗ ಈ ನಾಡಿನ ಆಟಗಾರ್ತಿಯರು ಜಗತ್ತಿನಾದ್ಯಂತ ಕ್ರಿಕೆಟ್‌ಪ್ರಿಯರ ಮನಗೆದ್ದಿದ್ದಾರೆ. ಈ ದೇಶದಲ್ಲಿ ಮನೆ ಮಾತಾಗಿದ್ದಾರೆ. ಮಹಿಳಾ ಕ್ರಿಕೆಟ್‌ಗೆ ಹಿಂದಿನಿಂದಲೂ ಆರ್ಥಿಕ ಸಮಸ್ಯೆ ಇನ್ನಿಲ್ಲದಂತೆ ಕಾಡಿದೆ. ಪ್ರಸಕ್ತ ಯಶಸ್ಸಿನ ಹಾದಿಯಲ್ಲಿರುವ ಮಹಿಳಾ ಕ್ರಿಕೆಟ್‌ನತ್ತ ಕಾರ್ಪೊರೇಟ್‌ ಸಂಸ್ಥೆಗಳು ನೆರವಿನ ಹಸ್ತ ನೀಡುವ ಸಾಧ್ಯತೆಗಳಿವೆ. ಈ ನಾಡಿನ ವನಿತೆಯರ ಯಶೋಗಾಥೆ ಮುಂದಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್‌ಗೆ ಹೊಸರಂಗು ತುಂಬಲಿದೆ. ಈ ಯಶಸ್ಸಿನ ಓಟದಲ್ಲಿ ಕನ್ನಡತಿಯರ ಸಾಧನೆಯೂ ಗಮನಾರ್ಹ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಶತಕ ಗಳಿಸಿದ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಕನ್ನಡತಿ ಶಾಂತಾ ರಂಗಸ್ವಾಮಿ ಅವರದು. ಇದೀಗ ಲಂಡನ್‌ನಲ್ಲಿ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಆಡಿದ ಬ್ಯಾಟ್ಸ್‌ವುಮನ್‌ ವೇದಾ ಕೃಷ್ಣಮೂರ್ತಿ ಮತ್ತು ಬೌಲರ್‌ ರಾಜೇಶ್ವರಿ ಗಾಯಕವಾಡ್‌ ಕನ್ನಡತಿಯರು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.