ADVERTISEMENT

ರಸ್ತೆ ಸುರಕ್ಷತೆಗೆ ಗಮನ ನೀಡಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2014, 19:30 IST
Last Updated 5 ಜೂನ್ 2014, 19:30 IST

ನವದೆಹಲಿಯಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್‌ ಮುಂಡೆ ಅವರ ಕಾರು ಅಪಘಾತಕ್ಕೀಡಾಗಿ ಸಚಿವರು ಸಾವನ್ನಪ್ಪಿದ ಬಳಿಕ ದೇಶದಲ್ಲಿ ರಸ್ತೆ ಅಪಘಾತಗಳ ಬಗ್ಗೆ ಹೊಸ ವಿಚಾರ ವಿಮರ್ಶೆ ಶುರುವಾಗಿದೆ. ನವದೆಹಲಿಯಂತಹ ಅತ್ಯಂತ ಹೆಚ್ಚು ಸುರಕ್ಷಿತ ಸಂಚಾರಿ ವಲಯದಲ್ಲೇ ಈ ರೀತಿ ಕಾರು ಅಪಘಾತವಾಗಿ, ಸಚಿವರು ಸಾವನ್ನಪ್ಪುವುದಾದರೆ, ಉಳಿದ ನಗರಗಳ ಮತ್ತು ಹೆದ್ದಾರಿಗಳ ಸ್ಥಿತಿ ಹೇಗಿರಬಹುದು ಎನ್ನುವುದು ಊಹೆಗೆ ಬಿಟ್ಟ ವಿಷಯ. ಈ ಕಾರು ಅಪಘಾತದಲ್ಲಿ ತಪ್ಪು ಯಾವ ಕಾರಿನ ಚಾಲಕನದ್ದು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಆದರೆ ಟ್ರಾಫಿಕ್‌ ಸಿಗ್ನಲ್‌ನಲ್ಲಿ ನಿರ್ಲಕ್ಷ್ಯದ ಚಾಲನೆಯಿಂದ ಆ ಅಪಘಾತವಾಗಿದೆ ಎನ್ನುವುದು ಸ್ಪಷ್ಟ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಪ್ರತಿದಿನವೂ 400ರಷ್ಟು ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಅಂದರೆ ದೇಶದಾದ್ಯಂತ ರಸ್ತೆ ಅಪಘಾತಗಳಲ್ಲಿ ವರ್ಷಕ್ಕೆ ಸುಮಾರು ಒಂದೂವರೆ ಲಕ್ಷ ಜನರು ಪ್ರಾಣ ತೆರುತ್ತಿದ್ದಾರೆ ಎನ್ನುವುದು ಆತಂಕಕಾರಿ ವಿಚಾರವೇ ಸರಿ. ಸಂಚಾರಿ ನಿಯಮಗಳನ್ನು ಎಷ್ಟೇ ಕಠಿಣಗೊಳಿಸಿದರೂ ನಮ್ಮಲ್ಲಿ ಜನರು ಅವುಗಳ ಉಲ್ಲಂಘನೆಯನ್ನು ‘ಹೆಮ್ಮೆ ’ ಎಂದೇ ತಿಳಿದುಕೊಳ್ಳುವುದಿದೆ. ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ನಾಗರಿಕ ಪ್ರಜ್ಞೆ ಕಡಿಮೆ ಎನ್ನುವುದು ನಿಜವೇ. ಆದರೆ ಜೀವವನ್ನೇ ಬಲಿ ತೆಗೆದುಕೊಳ್ಳುವ ರಸ್ತೆ ಅಪಘಾತಗಳ ಬಗ್ಗೆಯಾದರೂ ಜನರು ಹೆಚ್ಚಿನ ಕಾಳಜಿ ವಹಿಸಬೇಡವೆ? ಗಮ್ಯ ಸೇರಲು ವಾಹನಗಳಲ್ಲಿ ತಡವಾಗಿ ಹೊರಡುವುದು, ಆ ಬಳಿಕ ಸಮಯ ಹೊಂದಿಸಿಕೊಳ್ಳಲು ವೇಗವಾಗಿ ಅಜಾಗರೂಕತೆಯಿಂದ ವಾಹನ ಚಲಾಯಿಸುವುದು- ನಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರುವ ಸಂಗತಿ. ವೇಗಮಿತಿಯ ಬೋರ್ಡುಗಳಾಗಲೀ, ಸಂಚಾರಿ ಪೊಲೀಸರ ದಂಡಗಳಾಗಲೀ ಇಂತಹ ಪ್ರವೃತ್ತಿಯನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿಲ್ಲ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕೈಗೊಳ್ಳುವ ಕ್ರಮಗಳೂ ಬಹಳಷ್ಟು ಸಲ ಪಕ್ಷಪಾತದ್ದೇ ಆಗಿರುತ್ತವೆ. ಮಹಾನಗರಗಳಲ್ಲಿ ವಿ.ಐ.ಪಿ.ಗಳ ವಿರುದ್ಧ ರಸ್ತೆ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುವುದು ಕಡಿಮೆಯೇ. ಅದರಲ್ಲೂ ಇತ್ತೀಚೆಗೆ ವಿ.ಐ.ಪಿ.ಗಳ ಸಂಖ್ಯೆ ಹೆಚ್ಚುತ್ತಿದ್ದು, ಮಹಾನಗರಗಳಲ್ಲಿ ಅವರ ವಾಹನಗಳು ವೇಗವಾಗಿ ಸಂಚರಿಸುವುದಕ್ಕೆ ಸಂಚಾರಿ ದೀಪಗಳನ್ನು ಹೊಂದಿಸಿ ಅನುವು ಮಾಡಿಕೊಡುವುದೇ ಪೊಲೀಸರ ಬಹುದೊಡ್ಡ ಜವಾಬ್ದಾರಿ ಎನ್ನುವಂತಾಗಿದೆ. ಬಹುತೇಕ ರಸ್ತೆಗಳಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳು ಮತ್ತು ರಸ್ತೆ ವಿಭಜಕಗಳು ಅಪಘಾತಕ್ಕೆ ಕಾರಣವಾಗುತ್ತಿವೆ.

ಹೆದ್ದಾರಿಗಳಲ್ಲಂತೂ ಮೃತ್ಯುಸದೃಶ ತಿರುವುಗಳು ಹೆಚ್ಚು ಬಲಿಗಳನ್ನು ಪಡೆಯುತ್ತಿವೆ. ರಸ್ತೆಗಳನ್ನು ನಿರ್ಮಿಸುವುದು ಮಾತ್ರವಲ್ಲ, ಅವುಗಳ ನಿರ್ವಹಣೆಯೂ ಮುಖ್ಯ ಎನ್ನುವುದನ್ನು ನಾವು ಗಮನಿಸುತ್ತಿಲ್ಲ.  ಬಹುತೇಕ ಹೆದ್ದಾರಿಗಳಲ್ಲಿ ಕಳಪೆ ನಿರ್ವಹಣೆಯೇ ಬಹುದೊಡ್ಡ ಸಮಸ್ಯೆ. ರಸ್ತೆಗಳ ರಿಪೇರಿಗೆ ಅಗೆದು ಹೊಂಡ ತೆಗೆದಿಡುವುದು, ಅಂತಹ ಕಡೆ ಸೂಕ್ತ ಮುನ್ನೆಚ್ಚರಿಕೆ ಬೋರ್ಡುಗಳನ್ನು ಹಾಕದಿರುವುದು, ಸಮಯಬದ್ಧವಾಗಿ ರಿಪೇರಿ ಕಾಮಗಾರಿಗಳನ್ನು ಮುಗಿಸದೆ ವಿಳಂಬನೀತಿ ಅನುಸರಿಸುವುದು- ಹೀಗೆ ರಸ್ತೆಗಳಿಗೆ ಸಂಬಂಧಿಸಿ ಎಲ್ಲವೂ ಬೇಕಾಬಿಟ್ಟಿಯೇ. ರಸ್ತೆ ಸುರಕ್ಷತೆಗೆ ಅತ್ಯಾಧುನಿಕ ವಿಧಾನಗಳನ್ನು ಅನುಸರಿಸುವ ಅಗತ್ಯ ಈಗ ಹಿಂದೆಂದಿಗಿಂತ ಹೆಚ್ಚಿದೆ. ಸರ್ಕಾರ ಮತ್ತು ಜನರು ಒಟ್ಟು ಸೇರಿ ಹೆಚ್ಚು ಜವಾಬ್ದಾರಿಯಿಂದ ನಿರ್ವಹಿಸಬೇಕಾದ ಕೆಲಸವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.