ADVERTISEMENT

ರಾಜಕೀಯ ನಾಮನಿರ್ದೇಶನ ಬೇಡ

​ಪ್ರಜಾವಾಣಿ ವಾರ್ತೆ
Published 22 ಮೇ 2014, 19:30 IST
Last Updated 22 ಮೇ 2014, 19:30 IST

ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಿಧಾನಪರಿಷತ್‌ ಚುನಾವಣೆ ಬಂದಿದೆ. ಜೂನ್‌ ತಿಂಗಳಿನಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಜೊತೆಗೆ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ಚುನಾವಣೆಯೂ ಇದೆ. ಅಲ್ಲದೆ ಐದು ಮಂದಿ ಗಣ್ಯರನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡುವ ಅವಕಾಶ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಲಭ್ಯವಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ನಾಮನಿರ್ದೇಶನ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ ಅನೇಕ ಸಲ ರಾಜಕಾರಣಿಗಳು ಈ ಕರ್ತವ್ಯವನ್ನು ಮರೆಯುತ್ತಾರೆ. ಮೇಲ್ಮನೆಗೆ ನಾಮಕರಣ ಎನ್ನುವುದು ರಾಜಕೀಯ ಪುನರ್‌ವಸತಿಯಂತಾಗಿದೆ. ಇದು ಸರ್ವಥಾ ಸಲ್ಲ.

ಸಾಹಿತ್ಯ, ಕಲೆ, ಸಹಕಾರ ಚಳವಳಿ, ವಿಜ್ಞಾನ ಮತ್ತು ಸಮಾಜ ಸೇವೆಯಲ್ಲಿ ತೊಡಗಿಕೊಂಡ ವ್ಯಕ್ತಿಗಳನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಬಹುದು ಎಂಬ ನಿಯಮ ಇದೆ. ಆದರೆ ಅನೇಕ ಬಾರಿ ಸಮಾಜ ಸೇವೆಯ ಹೆಸರಿನಲ್ಲಿ ರಾಜಕಾರಣಿಗಳನ್ನೇ ನಾಮನಿರ್ದೇಶನ ಮಾಡುವ ಪರಿಪಾಠ ಬೆಳೆದುಬಂದಿದೆ. 

ನೇರ ಚುನಾವಣೆಯಲ್ಲಿ ಸೋಲು ಅನುಭವಿಸಿದ ರಾಜಕಾರಣಿಗಳು, ಮುಖ್ಯಮಂತ್ರಿ ಅಥವಾ ಪ್ರಭಾವಿ ರಾಜಕಾರಣಿಗಳಿಗೆ ಆತ್ಮೀಯರಾಗಿರುವವರನ್ನು ವಿಧಾನ ಪರಿಷತ್‌ಗೆ ನೇಮಕ ಮಾಡುವುದು ರೂಢಿಯಲ್ಲಿದೆ. ಹೀಗೆ ಮಾಡಿದರೆ ಇತರ ಕ್ಷೇತ್ರಗಳ ಗಣ್ಯರಿಗೆ ಅನ್ಯಾಯವಾಗುತ್ತದೆ.

ಸಿದ್ದರಾಮಯ್ಯ ಸರ್ಕಾರ ಇಂತಹ ಪದ್ಧತಿಗೆ ಕಡಿವಾಣ ಹಾಕಿ ಯೋಗ್ಯರನ್ನು ನಾಮಕರಣ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರ  ದಾವಣಗೆರೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್‌ ಜಬ್ಬಾರ್‌ ಅವರನ್ನು ನಾಮನಿರ್ದೇಶನ ಮಾಡಿತು. ಇದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಎಚ್ಚರ ವಹಿಸಬೇಕು.

ಕಲೆ, ವಿಜ್ಞಾನ, ಸಾಹಿತ್ಯ ಮುಂತಾದ ಕ್ಷೇತ್ರಗಳ ಗಣ್ಯರು ನೇರ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವ ಸಾಧ್ಯತೆ ಇರುವುದಿಲ್ಲ.  ಆದರೆ ಅಂತಹವರೂ ಸದನದಲ್ಲಿ ಭಾಗವಹಿಸಬೇಕೆಂಬುದು ಸಂವಿಧಾನದ ಆಶಯ. ಈ ಕಾರಣಕ್ಕಾಗಿಯೇ ನಾಮನಿರ್ದೇಶನದ ಅವಕಾಶ ಕಲ್ಪಿಸಲಾಗಿದೆ. ಅದನ್ನೂ ರಾಜಕಾರಣಿಗಳು ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ.

ಸಮಾಜ ಸೇವೆಯ ಹೆಸರಿನಲ್ಲಿ ವೃತ್ತಿನಿರತ ರಾಜಕಾರಣಿಗಳನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲು ರಾಜ್ಯ ಸರ್ಕಾರ  ಮುಂದಾದರೆ ಅದನ್ನು ರಾಜ್ಯಪಾಲರು ತಡೆಯಬೇಕು. ಈ ಹಿಂದೆ ಟಿ.ಎನ್‌.ಚತುರ್ವೇದಿ ಅವರು ಇಂತಹ ಕೆಲಸ ಮಾಡಿದ್ದರು. ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ಹೆಸರು ತಿರಸ್ಕರಿಸಿದ್ದರು.

ಈಗಲೂ  ರಾಜಕಾರಣಿಗಳು ನೇಮಕವಾಗುವ ಸಂಭವವಿದ್ದರೆ ರಾಜ್ಯಪಾಲರು ಅದಕ್ಕೆ ಅವಕಾಶ ನೀಡಬಾರದು. ರಾಜ್ಯ ಸರ್ಕಾರಕ್ಕೆ ಬುದ್ಧಿ ಹೇಳಿ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು. ಸೂಕ್ತ ವ್ಯಕ್ತಿಗಳೇ ನಾಮನಿರ್ದೇಶನಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT