ADVERTISEMENT

ರಾಜ್ಯದಲ್ಲಿ ಲಿಂಗಾನುಪಾತ ಕುಸಿತ ಎಚ್ಚರಿಕೆ ಗಂಟೆಯಾಗಿ ಪರಿಗಣಿಸಿ

ಸಂಪಾದಕೀಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2017, 19:30 IST
Last Updated 1 ಆಗಸ್ಟ್ 2017, 19:30 IST
ರಾಜ್ಯದಲ್ಲಿ ಲಿಂಗಾನುಪಾತ ಕುಸಿತ ಎಚ್ಚರಿಕೆ ಗಂಟೆಯಾಗಿ ಪರಿಗಣಿಸಿ
ರಾಜ್ಯದಲ್ಲಿ ಲಿಂಗಾನುಪಾತ ಕುಸಿತ ಎಚ್ಚರಿಕೆ ಗಂಟೆಯಾಗಿ ಪರಿಗಣಿಸಿ   

ರಾಜ್ಯದ 13 ಜಿಲ್ಲೆಗಳಲ್ಲಿ ಲಿಂಗಾನುಪಾತ ತೀವ್ರ ಇಳಿಮುಖ ಹಾದಿಯಲ್ಲಿದೆ ಎಂಬುದು ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ ವರದಿಯಿಂದ ಬಹಿರಂಗವಾಗಿದೆ. ಇದು ಆತಂಕಕಾರಿ ಪರಿಸ್ಥಿತಿ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿನ ಅಂಕಿಅಂಶವಂತೂ ಹೆಚ್ಚು ಗಾಬರಿ ಹುಟ್ಟಿಸುವಂತೆ ಇದೆ. 2015–16ರ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಜನನ ಪ್ರಮಾಣ 1000 ಗಂಡುಮಕ್ಕಳಿಗೆ 1067 ಇತ್ತು. ಎಂದರೆ ನೈಸರ್ಗಿಕ ಮಾನದಂಡಗಳಿಗೆ ಅನುಸಾರವಾಗಿ ಇದು ಸರಿಯಾದ ಹಾಗೂ ಆರೋಗ್ಯಕರವಾದ ಮಾದರಿ. ಆದರೆ ಅದರ ಮರು ವರ್ಷವೇ ಅಂದರೆ 2016–17ರ ಮಾರ್ಚ್‌ವರೆಗಿನ ಅವಧಿಯಲ್ಲಿ ಈ ಪ್ರಮಾಣ 929ಕ್ಕೆ ತೀವ್ರ ಕುಸಿತ ಕಂಡಿದೆ ಎಂದರೆ ಅಚ್ಚರಿಯ ಸಂಗತಿ.

ಈ ಬೆಳವಣಿಗೆಯನ್ನು ಎಚ್ಚರಿಕೆ ಗಂಟೆಯಾಗಿ ಭಾವಿಸಬೇಕು. ಹೆಣ್ಣುಮಕ್ಕಳ ಸಂಖ್ಯೆ ಕುಸಿಯುತ್ತಿರುವ ಭಾರತದ ವಿದ್ಯಮಾನವನ್ನು ‘ರಾಷ್ಟ್ರೀಯ ತುರ್ತುಪರಿಸ್ಥಿತಿ’ ಎಂದು ಈಗಾಗಲೇ ವಿಶ್ವಸಂಸ್ಥೆ ಹೇಳಿರುವುದನ್ನು ಇಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳಬೇಕು. ಹೆಣ್ಣುಮಕ್ಕಳ ಸಂಖ್ಯೆ ಕುಸಿಯಲು ಹೆಣ್ಣು ಭ್ರೂಣ ಹತ್ಯೆಯೇ ಕಾರಣ. ಸಾಮಾಜಿಕ ಆಚಾರವಿಚಾರಗಳು, ಸಂಪ್ರದಾಯಗಳು ಹೆಣ್ಣುಮಗುವಿನ ಬಗ್ಗೆ ಅನಾದರ ರೂಪಿಸುತ್ತಿರುವುದು, ಹೆಣ್ಣುಮಗು ಹುಟ್ಟುವುದೇ ಬೇಡ ಎಂಬಂಥ ಮನಸ್ಥಿತಿ ಸೃಷ್ಟಿಸುತ್ತಿರುವುದು ಇಂದಿಗೂ ಮುಂದುವರಿದಿದೆ ಎಂಬುದು ವಿಷಾದನೀಯ.

ಹೆಣ್ಣು ಜನ್ಮ ಎತ್ತಿ, ‘ಬಾಳೆಲೆ ಬೀಸಿ ಒಗೆದ್ಯಾಂಗ’ ಆಗಿ ಸಾಯುವುದಕ್ಕಿಂತ ಹುಟ್ಟದೇನೇ ಇದ್ದರೆ ವರದಕ್ಷಿಣೆಯೂ ಉಳಿತಾಯ ಎಂಬಂತಹ ಮನೋಭಾವ ಪ್ರಾಬಲ್ಯ ಪಡೆಯುತ್ತಿರುವುದು ಇದಕ್ಕೆ ಕಾರಣ. ಎಷ್ಟೆಲ್ಲಾ ಕಾನೂನುಗಳಿದ್ದರೂ ವರದಕ್ಷಿಣೆ ಪಿಡುಗು ಇಂದಿಗೂ ಮುಂದುವರಿದಿದೆ. ಈಗಲೂ ವಿವಾಹ ಸಂದರ್ಭದಲ್ಲಿ ‘ದೀರ್ಘ ಸುಮಂಗಲೀ ಭವ, ಅಷ್ಟ ಪುತ್ರ ಪ್ರಾಪ್ತಿರಸ್ತು’ ಎಂದು ವಧುವಿಗೆ ಆಶೀರ್ವಾದ ಮಾಡಲಾಗುತ್ತದೆ. ಈ ಬಗೆಯ ಆಶೀರ್ವಾದದಲ್ಲೇ ಹೆಣ್ಣು ಮಗುವಿನ ಬಗೆಗಿನ ಅನಾದರ ವ್ಯಕ್ತ. ಇಂತಹ ಮನಸ್ಥಿತಿ ಕಡೆಗೆ ಪ್ರೇರಕವಾಗಿರುವುದು ಹೆಣ್ಣು ಭ್ರೂಣ ಹತ್ಯೆಗೆ. ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಆರ್ಥಿಕ ಸಮೃದ್ಧಿ ಹಾಗೂ ಶಿಕ್ಷಣವೂ ಸಫಲವಾಗಿಲ್ಲ ಎಂಬುದು ವಿಷಾದನೀಯ. ಮೈಸೂರು ಜಿಲ್ಲೆಯಲ್ಲಿ ಸತತ ಮೂರು ವರ್ಷಗಳಿಂದ ಲಿಂಗಾನುಪಾತ ಕುಸಿಯುತ್ತಿದೆ. ನೀರಾವರಿ ಪ್ರದೇಶವಾಗಿ ಸಕ್ಕರೆಯ ಕಣಜ ಎನಿಸಿರುವ ಮಂಡ್ಯ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 1000 ಗಂಡುಮಕ್ಕಳಿಗೆ 928 ಹೆಣ್ಣುಮಕ್ಕಳಿದ್ದಾರೆ ಎಂಬ ಅಂಶ ಆಘಾತಕಾರಿಯಾದುದು. ಮಂಡ್ಯ ಜಿಲ್ಲೆಯಲ್ಲಿ ಲಿಂಗ ಪತ್ತೆ ಮಾಡಿ ಹೆಣ್ಣು ಭ್ರೂಣ ಹತ್ಯೆ ಮಾಡುವುದು ನಿರಂತರವಾಗಿದೆ. ಜೊತೆಗೆ ಹುಟ್ಟಿದ ಹೆಣ್ಣುಕೂಸನ್ನು ಕಸದ ತೊಟ್ಟಿಗೆ ಎಸೆಯುವ ಅನೇಕ ಘಟನೆಗಳು ಇಲ್ಲಿ ನಡೆದಿವೆ ಎಂಬುದನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಡೆಸಿರುವ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಪ್ರಸವಪೂರ್ವ ಲಿಂಗ ಪತ್ತೆ ತಂತ್ರಜ್ಞಾನ ನಿಯಂತ್ರಣ ಹಾಗೂ ದುರ್ಬಳಕೆ ತಡೆ ಕಾಯ್ದೆ (ಪಿಎನ್‌ಡಿಟಿ ಕಾಯ್ದೆ) 1996ರ ಜನವರಿಯಿಂದ ಮತ್ತು ಗರ್ಭಧಾರಣೆ ಪೂರ್ವ ಹಾಗೂ ಪ್ರಸವಪೂರ್ವ ಪತ್ತೆ ತಂತ್ರಜ್ಞಾನ (ಲಿಂಗ ಆಯ್ಕೆ ನಿಷೇಧ) ತಿದ್ದುಪಡಿ ಕಾಯ್ದೆ (ಪಿಸಿ ಅಂಡ್ ಪಿಎನ್‌ಡಿಟಿ ಕಾಯ್ದೆ) 2003ರಿಂದ ರಾಷ್ಟ್ರದಾದ್ಯಂತ ಜಾರಿಯಲ್ಲಿವೆ. ಹೀಗಿದ್ದೂ ಕಳೆದ 14 ವರ್ಷಗಳಲ್ಲಿ ರಾಜ್ಯದಲ್ಲಿ 79 ಸ್ಕ್ಯಾನಿಂಗ್ ಸೆಂಟರ್‌ಗಳ ವಿರುದ್ಧ ಮಾತ್ರ ಪ್ರಕರಣಗಳು ದಾಖಲಾಗಿವೆ. ಇನ್ನು ಶಿಕ್ಷೆಯಾಗುವುದಂತೂ ದೂರವೇ ಉಳಿಯಿತು. ಹೆಣ್ಣು ಭ್ರೂಣ ಹತ್ಯೆ ಪಿಡುಗಿನ ಬಗ್ಗೆ ಸುಪ್ರೀಂ ಕೋರ್ಟ್ ಪದೇ ಪದೇ ಕಳವಳ ವ್ಯಕ್ತಪಡಿಸುತ್ತಲೇ ಬಂದಿದೆ.

ಪಿಸಿ ಅಂಡ್ ಪಿಎನ್‌ಡಿಟಿ ಕಾಯ್ದೆಯ ಅಡಿ ತನಿಖೆ ನಿರ್ವಹಿಸುವವರಿಗೆ ವಿಶೇಷ ತರಬೇತಿ ನೀಡಬೇಕು ಎಂಬಂತಹ ಸಲಹೆಯನ್ನೂ ಸುಪ್ರೀಂ ಕೋರ್ಟ್ ನೀಡಿತ್ತು. ಇದನ್ನು ಪಾಲಿಸಿ ಕಾನೂನು ಅನುಷ್ಠಾನ ಪ್ರಕ್ರಿಯೆಯನ್ನು ಬಿಗಿಗೊಳಿಸಬೇಕು. ಆರೋಗ್ಯ ಇಲಾಖೆ ನೋಟಿಸ್ ನೀಡುವುದಕ್ಕಷ್ಟೇ ಸೀಮಿತವಾಗಿದ್ದರೆ ಸಾಲದು. ಹೆಣ್ಣು ಭ್ರೂಣ ಹತ್ಯೆಗೆ ಶಿಕ್ಷಾ ಭಯವನ್ನು ಮೂಡಿಸುವುದೂ ಅಗತ್ಯ. ಮೊದಲಿಗೆ ಹೆಣ್ಣುಮಗು ಕುರಿತಾದ ನಕಾರಾತ್ಮಕ ಧೋರಣೆ ತೊಲಗಿಸಬೇಕು. ಇದಕ್ಕಾಗಿ ವಿವಿಧ ನೆಲೆಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಹೆಣ್ಣಿನ ಕುರಿತಾದ ಧೋರಣೆಗಳನ್ನು ಬದಲಿಸಲು ಪಠ್ಯಗಳಲ್ಲಿ ಲಿಂಗತ್ವ ನ್ಯಾಯದ ಪಾಠಗಳನ್ನು ಅಳವಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.