ADVERTISEMENT

ರೈಲು ದುರಂತ ಅಕ್ಷಮ್ಯ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2017, 19:30 IST
Last Updated 21 ಆಗಸ್ಟ್ 2017, 19:30 IST
ರೈಲು ದುರಂತ ಅಕ್ಷಮ್ಯ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ
ರೈಲು ದುರಂತ ಅಕ್ಷಮ್ಯ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ   

ಉತ್ತರ ಪ್ರದೇಶದ ಮುಜಫ್ಫರ್‌ನಗರದ ಬಳಿ, ಪುರಿ– ಹರಿದ್ವಾರದ ನಡುವೆ ಸಂಚರಿಸುತ್ತಿದ್ದ ಉತ್ಕಲ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿ ಉರುಳಿ 23 ಮಂದಿ ಪ್ರಾಣ ಕಳೆದುಕೊಂಡು, 150ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ರೈಲ್ವೆ ಅಧಿಕಾರಶಾಹಿಯ ಅಸೀಮ ನಿರ್ಲಕ್ಷ್ಯಕ್ಕೆ ಈ ದುರಂತ ಸ್ಪಷ್ಟ ಸಾಕ್ಷಿ. ಅಧಿಕಾರಿಗಳು ಮತ್ತು ಸಿಬ್ಬಂದಿ ನಡುವಣ ಸಂಪರ್ಕದ ಕೊರತೆಯೇ ದುರಂತಕ್ಕೆ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಜನರು ಪ್ರಾಣ ಕಳೆದುಕೊಂಡಿರುವುದು ನಮ್ಮ ಆಡಳಿತ ವ್ಯವಸ್ಥೆ ಎಷ್ಟು ಜಡ್ಡುಗಟ್ಟಿದೆ ಎನ್ನುವುದನ್ನೂ  ಎತ್ತಿ ತೋರಿಸಿದೆ. ಹೊಸದಾಗಿ ಕೈಗೊಂಡ ರೈಲ್ವೆ ಸುರಕ್ಷತೆಯ ಬಗ್ಗೆ, ತಂತ್ರಜ್ಞಾನ ಉನ್ನತೀಕರಣದ ಬಗ್ಗೆ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಹೇಳುತ್ತಿರುವುದೆಲ್ಲವೂ ‘ಬರಿಯ ಬುರುಡೆ ಇರಬಹುದೇ?’ ಎನ್ನಿಸುವಂತೆ ಇತ್ತೀಚೆಗೆ ಸಾಲುಸಾಲಾಗಿ ರೈಲು ಅಪಘಾತಗಳು ನಡೆಯುತ್ತಿವೆ. ಈ ವರ್ಷದ ಆರಂಭದಿಂದ ಇದುವರೆಗಿನ ಅವಧಿಯಲ್ಲಿ ಒಟ್ಟು ಏಳು ರೈಲು ಅಪಘಾತಗಳು ಸಂಭವಿಸಿವೆ ಎನ್ನುವುದು ನಿರ್ಲಕ್ಷಿಸಬಹುದಾದ ಸಂಗತಿಯಂತೂ ಅಲ್ಲ. ರೈಲು ಹಳಿಯ ರಿಪೇರಿ ಕೆಲಸ ನಡೆಯುತ್ತಿದೆ ಎನ್ನುವ ವಿಷಯವನ್ನು ರೈಲಿನ ಚಾಲಕನಿಗೆ ತಿಳಿಸದೇ ಇರುವುದು ಸಣ್ಣ ಲೋಪ ಎನ್ನಲಾಗದು. ರಿಪೇರಿ ಮಾಡುತ್ತಿದ್ದವರು ಕನಿಷ್ಠ ಕೆಂಪು ಬಾವುಟವನ್ನಾಗಲೀ, ಸೂಚನಾ ಫಲಕವನ್ನಾಗಲೀ ಹಾಕಿರಲಿಲ್ಲ ಎನ್ನಲಾಗುತ್ತದೆ. ಇಲಾಖೆಯಲ್ಲಿ ಯಾವುದೇ ರಿಪೇರಿ ಕೆಲಸ ಮಾಡುವುದಾದರೂ ಎಲ್ಲ ವಿಭಾಗಗಳಿಗೆ ಮೊದಲೇ ಲಿಖಿತವಾಗಿ ತಿಳಿಸಬೇಕು. ನಿರ್ವಹಣೆಯ ಬಗ್ಗೆ ಉನ್ನತ ಅಧಿಕಾರಿಗಳಿಂದ ಲಿಖಿತ ಅನುಮತಿ ಪಡೆದಿರಬೇಕು.

ಆದರೆ ನೂರು ಕಿ.ಮೀ. ವೇಗದಲ್ಲಿ ರೈಲು ಓಡಿಸಿಕೊಂಡು ಬರುತ್ತಿದ್ದ ಚಾಲಕ, ಈ ಬಗ್ಗೆ ಯಾವುದೇ ಮಾಹಿತಿಯಿಲ್ಲದೆ, ಹಳಿಯಲ್ಲಿ ರಿಪೇರಿ ಕೆಲಸ ಮಾಡುವುದನ್ನು ನೋಡಿ ರೈಲು ನಿಲ್ಲಿಸಲು ಯತ್ನಿಸಿದ್ದಾರೆಂದರೆ, ಇಲಾಖೆ ಎಷ್ಟು ಬೇಜವಾಬ್ದಾರಿಯಿಂದ ವರ್ತಿಸಿದೆ ಎನ್ನುವುದು ಗೊತ್ತಾಗುತ್ತದೆ. ಪ್ರತಿದಿನ 2.2 ಕೋಟಿ ಜನರು ನಮ್ಮ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಜನಸಾಮಾನ್ಯರ ಕೈಗೆಟಕುವ ದರದಲ್ಲಿ ಉತ್ತಮ ಸೇವೆ ಸಿಗುತ್ತಿದೆ ಎಂಬ ನಂಬಿಕೆಯಿಂದ ಪ್ರಯಾಣಿಸುವವರ ಪ್ರಾಣದ ಬಗ್ಗೆ ಇಲಾಖೆಯಲ್ಲಿ ಇಷ್ಟೊಂದು ನಿರ್ಲಕ್ಷ್ಯ ಸರಿಯೇ? ನೌಕರರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂದು ಉಸ್ತುವಾರಿ ನಡೆಸಬೇಕಾದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಸಂಬಳ, ಸವಲತ್ತುಗಳನ್ನು ಏರಿಸಿಕೊಂಡು ಆರಾಮವಾಗಿರುವ ಸಿಬ್ಬಂದಿ ಆ ಸಂಬಳಕ್ಕೆ ತಕ್ಕಂತೆ ನಿಷ್ಠೆಯಿಂದ ಕೆಲಸ ಮಾಡುವುದಿಲ್ಲವೆಂದರೆ ಏನರ್ಥ? 

ಬಜೆಟ್‌ನಲ್ಲಿ ತಂತ್ರಜ್ಞಾನ ಉನ್ನತೀಕರಣದ ಬಗ್ಗೆ ಭಾರೀ ಭರವಸೆಗಳನ್ನು ನೀಡುವ ಸರ್ಕಾರ, ಪ್ರತಿ ತಿಂಗಳೂ ಎಂಬಂತೆ ನಡೆಯುತ್ತಿರುವ ರೈಲು ಅಪಘಾತಗಳನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ? ಲೆಕ್ಕಪತ್ರಗಳ ಇಲಾಖೆಯಲ್ಲಾದರೆ ‘ಮಾನವ ಸಹಜ ತಪ್ಪು’ ಎಂದು ತಿದ್ದಿಕೊಳ್ಳಬಹುದು. ಆದರೆ ಜನರ ಅಮೂಲ್ಯ ಪ್ರಾಣಕ್ಕೆ ಎರವಾಗುವ ರೈಲು ಅಪಘಾತಗಳಲ್ಲಿ ಅಧಿಕಾರಿಗಳ ತಪ್ಪುಗಳನ್ನು ಸಹಜ ಎನ್ನಲಾಗುತ್ತದೆಯೇ? ‘ದುರಂತಕ್ಕೆ ಕಾರಣರಾದ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಒಬ್ಬರನ್ನು ವರ್ಗಾಯಿಸಲಾಗಿದೆ. ಮೂವರು ಉನ್ನತ ಅಧಿಕಾರಿಗಳನ್ನು ರಜೆಯ ಮೇಲೆ ಕಳುಹಿಸಲಾಗಿದೆ’ ಎಂದು ಇಲಾಖೆ ಸ್ಪಷ್ಟೀಕರಣ ಕೊಟ್ಟರೂ, ಇದರಿಂದ ಅಪಘಾತಗಳು ಕಡಿಮೆಯಾಗುತ್ತದೆ ಎಂದು ನಂಬಲು ಸಾಧ್ಯವೇ? ಈ ಹಿಂದಿನ ಅಪಘಾತ ಪ್ರಕರಣಗಳಲ್ಲೂ ಹೀಗೆಯೇ ಅಮಾನತು ಮತ್ತು ವರ್ಗಾವಣೆಗಳು ನಡೆದಿರಲಿಲ್ಲವೇ? ದಿನನಿತ್ಯದ ರೈಲು ಓಡಾಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗದೆ ಏದುಸಿರು ಬಿಡುತ್ತಿರುವ ಇಲಾಖೆ, ಹೈಸ್ಪೀಡ್‌ ರೈಲು, ಬುಲೆಟ್‌ ಟ್ರೇನ್‌ ಮುಂತಾದ ಯೋಜನೆಗಳ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ನಿರ್ಲಕ್ಷ್ಯದ ಮೂಲಕ ಜನರ ಪ್ರಾಣದ ಜತೆ ಚೆಲ್ಲಾಟ ಆಡುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸೂಕ್ತ ತನಿಖೆಗೆ ಒಳಪಡಿಸಿ ಕಠಿಣ ಶಿಕ್ಷೆ ವಿಧಿಸಬೇಕಾದ ಅಗತ್ಯವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.