ADVERTISEMENT

ಲೋಕಪಾಲ ನೇಮಕ: ಕೋರ್ಟ್ ಸಲಹೆ ಗಂಭೀರವಾಗಿ ಪರಿಗಣಿಸಿ

ಸಂಪಾದಕೀಯ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2016, 19:35 IST
Last Updated 25 ನವೆಂಬರ್ 2016, 19:35 IST
ಲೋಕಪಾಲ ನೇಮಕ: ಕೋರ್ಟ್ ಸಲಹೆ ಗಂಭೀರವಾಗಿ ಪರಿಗಣಿಸಿ
ಲೋಕಪಾಲ ನೇಮಕ: ಕೋರ್ಟ್ ಸಲಹೆ ಗಂಭೀರವಾಗಿ ಪರಿಗಣಿಸಿ   
ಲೋಕಪಾಲರ ನೇಮಕಕ್ಕೆ ಕಾಯಿದೆ ರಚನೆಯಾಗಿ ಮೂರು ವರ್ಷಗಳಾಗಿವೆ. ಆದರೆ ಈವರೆಗೆ ರಾಷ್ಟ್ರಕ್ಕೆ ಲೋಕಪಾಲ ನೇಮಕವಾಗಲಿಲ್ಲ. ಸಹಜವಾಗಿಯೇ ಇದು ಸುಪ್ರೀಂ ಕೋರ್ಟ್ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕ ಆಡಳಿತ ಸ್ವಚ್ಛಗೊಳಿಸಲು ಸರ್ಕಾರಕ್ಕೆ ಇರುವ ಬದ್ಧತೆಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
 
ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ತರಲು  ಬಲವಾದ ಲೋಕಪಾಲ ಅಥವಾ ಲೋಕಾಯುಕ್ತ ವ್ಯವಸ್ಥೆ ರೂಪಿಸಲು ರಾಜಕೀಯ ಪಕ್ಷಗಳಿಗೆ ಇಷ್ಟವಿಲ್ಲ ಎಂಬುದು ಸರ್ವವೇದ್ಯ.  ಇಲ್ಲದಿದ್ದಲ್ಲಿ ಲೋಕಪಾಲ ನೇಮಕ ವಿಚಾರ  ಐದು ದಶಕಗಳಿಗೂ ಹೆಚ್ಚು ಕಾಲದಿಂದ ನನೆಗುದಿಗೆ ಸಿಲುಕುತ್ತಿರಲಿಲ್ಲ.  ಕಡೆಗೂ 2014ರ ಜನವರಿಯಲ್ಲಿ ರಾಷ್ಟ್ರದಲ್ಲಿ ಲೋಕಪಾಲ  ಕಾನೂನು ಜಾರಿಗೆ ಬಂದಿದೆ. ಈಗ ಲೋಕಪಾಲ ನೇಮಕಕ್ಕೆ ತಾಂತ್ರಿಕ ಕಾರಣವೊಂದು ಅಡ್ಡಿಯಾಗಿದೆ ಎಂಬುದು ವಿಪರ್ಯಾಸ. 
 
2013ರ ಲೋಕಪಾಲ ಹಾಗೂ ಲೋಕಾಯುಕ್ತ ಕಾಯಿದೆಯ ಪ್ರಕಾರ, ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯಲ್ಲಿ  ಲೋಕಸಭೆ ಸ್ಪೀಕರ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಜೊತೆಗೆ  ಪ್ರತಿಪಕ್ಷದ ನಾಯಕರೂ ಇರಬೇಕು.  ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ಶೇ 10ರಷ್ಟೂ ಸ್ಥಾನ ಗಳಿಸದ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಪಕ್ಷದ ನಾಯಕನ ಸ್ಥಾನಮಾನ ಸಿಕ್ಕಿಲ್ಲ.  ಹೀಗಾಗಿ ಲೋಕಪಾಲ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲು ಸಮಿತಿ ರಚನೆಯಾಗದೆ ನನೆಗುದಿಗೆ ಸಿಲುಕಿದೆ ಎಂಬುದು ವಿಪರ್ಯಾಸ.
 
ಆದರೆ ಸಿಬಿಐ ನಿರ್ದೇಶಕ, ಮುಖ್ಯ ಮಾಹಿತಿ ಕಮಿಷನರ್ ಹಾಗೂ ಮುಖ್ಯ ಜಾಗೃತ ಕಮಿಷನರ್ ನೇಮಕಗಳಿಗೆ ಸಂಬಂಧಿಸಿದ  ಆಯ್ಕೆ ಪ್ರಕ್ರಿಯೆ ವೇಳೆ ‘ಪ್ರತಿಪಕ್ಷದ ನಾಯಕ’ ಎಂಬುದರ ಬದಲಿಗೆ  ‘ಅತಿ ದೊಡ್ಡ ವಿರೋಧಪಕ್ಷದ ನಾಯಕ’ ಎಂಬುದನ್ನು ಸೇರಿಸಿಕೊಂಡು  ಬದಲಾವಣೆ ಮಾಡಿಕೊಳ್ಳಲಾಗಿದೆ. ಇದನ್ನೇ ಲೋಕಪಾಲ ವಿಚಾರದಲ್ಲೂ ಏಕೆ ಮಾಡಲಾಗುತ್ತಿಲ್ಲ? ಈ ಒಂದು ನೆಪ ಒಡ್ಡಿ ಲೋಕಪಾಲ ನೇಮಕ ವಿಳಂಬ ಮಾಡುವುದು ಎಷ್ಟು ಸಮರ್ಥನೀಯ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿರುವುದು ಸರಿಯಾಗಿಯೇ ಇದೆ. ಅಲ್ಲದೆ, ಅತಿ ದೊಡ್ಡ ವಿರೋಧ ಪಕ್ಷದ ನಾಯಕರನ್ನು ಲೋಕಪಾಲ ಆಯ್ಕೆ ಸಮಿತಿಯ ಭಾಗವಾಗಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ 2014ರ ಲೋಕಪಾಲ ಕಾನೂನಿಗೆ ತಿದ್ದುಪಡಿ ತರುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ ಎಂಬ ಸರ್ಕಾರದ ಸಮಜಾಯಿಷಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಲ್ಲ. ಈ ವಿಚಾರದಲ್ಲಿನ ವಿಳಂಬಗತಿಯನ್ನು ಕೋರ್ಟ್ ಪ್ರಶ್ನಿಸಿದೆ.  
 
ಇತ್ತೀಚೆಗಿನ ನೋಟುಗಳ ರದ್ದತಿ ಕ್ರಮವನ್ನು ಭ್ರಷ್ಟಾಚಾರ ವಿರೋಧಿ ಕ್ರಮ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಹಾಗೆಯೇ ಭ್ರಷ್ಟಾಚಾರ ಸ್ವಚ್ಛಗೊಳಿಸಲು ಸರ್ಕಾರ ಬದ್ಧವಾಗಿದ್ದಲ್ಲಿ ಲೋಕಪಾಲ  ಸಹ ಸರಿಯಾದ ದಿಕ್ಕಿನಲ್ಲಿ ಇರಿಸಿದ ಹೆಜ್ಜೆ ಎನ್ನಬಹುದು.  ಆದರೆ ‘ಈ ವಿಚಾರದಲ್ಲಿ ಸರ್ಕಾರ ಕುಂಟುತ್ತಿದೆ ಎಂಬ ಭಾವನೆ ಏಕೆ ಬರಬೇಕು’ ಎಂಬಂಥ  ಸುಪ್ರೀಂ ಕೋರ್ಟ್ ಪ್ರಶ್ನೆಯನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಬೇಕು. ಜನಾಂದೋಲನದ ನಂತರ ಅಂಗೀಕಾರವಾದ ಲೋಕಪಾಲ ಕಾಯಿದೆ ತಾಂತ್ರಿಕ ಅಂಶವೊಂದರ ಕಾರಣದಿಂದ ದುರ್ಬಲವಾಗುವುದು ಸರಿಯಲ್ಲ.
 
ಈ ಹಿಂದಿನ ಎಲ್ಲಾ ಸರ್ಕಾರಗಳೂ ಲೋಕಪಾಲ ವ್ಯವಸ್ಥೆ ಜಾರಿಯ ಯತ್ನಗಳನ್ನು ಚಿವುಟಿಕೊಂಡೇ ಬಂದಿವೆ. ಆದರೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನೇತೃತ್ವದ ಚಳವಳಿಯಿಂದಾಗಿ 2013ರ  ಡಿಸೆಂಬರ್‌ನಲ್ಲಿ ಯುಪಿಎ ಸರ್ಕಾರದ ಆಡಳಿತವಿದ್ದಾಗ ಲೋಕಪಾಲ ಮಸೂದೆಗೆ ಸಂಸತ್ತು ಅನುಮೋದನೆ ನೀಡಿತ್ತು. ದಿನನಿತ್ಯ ಒಂದಾದ ಮೇಲೆ ಒಂದು ಹಗರಣ ವರದಿಯಾಗುತ್ತಿದ್ದ ಆ ಕಾಲದಲ್ಲಿ  ಉನ್ನತ ಅಧಿಕಾರ ಕೇಂದ್ರಗಳಲ್ಲಿನ  ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನೇತೃತ್ವದ ಚಳವಳಿ ಸಾರ್ವಜನಿಕ ಪ್ರಜ್ಞೆಯನ್ನು ಕಲಕಿತ್ತು. ಬಹುಶಃ ರಾಷ್ಟ್ರದಲ್ಲಿ ಕರ್ನಾಟಕ ಬಿಟ್ಟರೆ  ಬೇರೆ ಯಾವುದೇ ರಾಜ್ಯದಲ್ಲೂ  ಲೋಕಾಯುಕ್ತ  ಸಂಸ್ಥೆಯಿಂದ ನಿರ್ದಿಷ್ಟ ಪರಿಣಾಮಗಳಾಗಿಲ್ಲ. ಈಗ ಕರ್ನಾಟಕದಲ್ಲೂ ಲೋಕಾಯುಕ್ತ ಸಂಸ್ಥೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ ಎಂಬುದು ಬೇರೆ ಮಾತು. ರಾಜ್ಯದಲ್ಲೂ ಈಗ ಲೋಕಾಯುಕ್ತರು ನೇಮಕಗೊಂಡಿಲ್ಲ.
 
ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಲೋಕಾಯುಕ್ತ  ನೇಮಕಕ್ಕೆ ಸಂಬಂಧಿಸಿದಂತೆ ಅಲ್ಲಿನ ಆಗಿನ ರಾಜ್ಯಪಾಲರ ಜೊತೆಗೆ ದೀರ್ಘ ಕಾಲದ ಕಾನೂನಿನ ಸಮರವೂ ನಡೆದಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ಲೋಕಪಾಲ ಆಯ್ಕೆ ಸಮಿತಿಗೆ ಸಂಬಂಧಿಸಿದ  ಕಾನೂನು ತಿದ್ದುಪಡಿಗೆ  ವಿಫಲವಾದಲ್ಲಿ ತಾನೇ ಆದೇಶ ಹೊರಡಿಸುವುದಾಗಿ ಸುಪ್ರೀಂ ಕೋರ್ಟ್ ಹಾಕಿರುವ ಬೆದರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೇ ಸಂಸತ್‌ನಲ್ಲಿ ಈ ತಿದ್ದುಪಡಿ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಇದನ್ನು ತ್ವರಿತಗೊಳಿಸಬೇಕು.  ಈ ವಿಚಾರವನ್ನು ಪ್ರತಿಪಕ್ಷಗಳೂ ವಿವಾದವಾಗಿಸದಿರುವುದು ಅಚ್ಚರಿದಾಯಕ. ಆಮ್ ಆದ್ಮಿ ಪಕ್ಷ ಕೂಡ ಈ ವಿಚಾರ ಕೈಬಿಟ್ಟಂತಿರುವುದು ಸೋಜಿಗದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.