ADVERTISEMENT

ವಲಸಿಗರ ವಿರುದ್ಧ ಅಸಹನೆ ಕಠಿಣ ಕ್ರಮ ಕೈಗೊಳ್ಳಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2017, 19:30 IST
Last Updated 26 ಫೆಬ್ರುವರಿ 2017, 19:30 IST
ವಲಸಿಗರ ವಿರುದ್ಧ ಅಸಹನೆ  ಕಠಿಣ ಕ್ರಮ ಕೈಗೊಳ್ಳಿ
ವಲಸಿಗರ ವಿರುದ್ಧ ಅಸಹನೆ ಕಠಿಣ ಕ್ರಮ ಕೈಗೊಳ್ಳಿ   
ಬೇರೆ ಸಮುದಾಯದವರು ಎಂಬ ಒಂದೇ ಕಾರಣಕ್ಕಾಗಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡುವುದನ್ನು ಯಾರೂ ಒಪ್ಪುವುದು ಸಾಧ್ಯವಿಲ್ಲ. ಹೀಗಾಗಿಯೇ ಅಮೆರಿಕದ ಕನ್ಸಾಸ್ ನಗರದ ಆಸ್ಟಿನ್ ಬಾರ್‌ನಲ್ಲಿ ಹೈದರಾಬಾದ್‌ನ  ಯುವ  ಎಂಜಿನಿಯರ್ ಶ್ರೀನಿವಾಸ ಕೂಚಿಭೊಟ್ಲ ಅವರ ಅಪ್ರಚೋದಿತ  ಹತ್ಯೆ ಪ್ರಕರಣ ಕಳವಳಕಾರಿಯಾದುದು. ‘ನನ್ನ ರಾಷ್ಟ್ರ ಬಿಟ್ಟು ತೊಲಗಿ’ ಎಂದು ಕೂಗುತ್ತಾ  ಗುಂಡು ಹಾರಿಸಿದಾತ ಅಮೆರಿಕದ  ನೌಕಾಪಡೆಯ ಮಾಜಿ ಸೈನಿಕ.
 
ಪೈಲಟ್ ಹಾಗೂ ಏರ್ ಕಂಟ್ರೋಲ್ ಲೈಸೆನ್ಸ್ ಸಹ ಹೊಂದಿದ್ದಾನೆ ಈತ. ಈ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಭಾರತೀಯ ಹಾಗೂ ಶ್ರೀನಿವಾಸ ಅವರ ಸಹೋದ್ಯೋಗಿ  ಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದಾರೆ.  ಪಶ್ಚಿಮ ಏಷ್ಯಾದವರೆಂದು ತಪ್ಪಾಗಿ ತಿಳಿದುಕೊಳ್ಳಲಾದ ಈ ಇಬ್ಬರು ಭಾರತೀಯರ ರಕ್ಷಣೆಗೆ ಧಾವಿಸಿದವರು   ಅಮೆರಿಕನ್ ಬಿಳಿಯ ಪ್ರಜೆ. ಅವರೂ ಸಹ  ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂಬುದು ವಿಪರ್ಯಾಸ ಹಾಗೂ ಹೃದಯವನ್ನು ತಟ್ಟುವ ಸಂಗತಿ. ಈ ಜನಾಂಗೀಯ ದಾಳಿಯಲ್ಲಿ ಜೀವ ತೆತ್ತ  ಶ್ರೀನಿವಾಸ್, ಎಚ್‌–1ಬಿ ವೀಸಾ ಹೊಂದಿದ್ದ ಭಾರತೀಯ ಎಂಜಿನಿಯರ್ ಎಂಬುದನ್ನು ಗಮನಿಸಬೇಕು.
 
ದ್ವೇಷ ತುಂಬಿದ ಹುಚ್ಚುತನದ ಇಂತಹ  ಅತಿರೇಕದ ಪ್ರಕರಣ, ನಾಗರಿಕ ಸಮಾಜವನ್ನು ವಿಘಟಿಸುವಂತಹದ್ದು. ಡೊನಾಲ್ಡ್ ಟ್ರಂಪ್‌ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಈ ಬಗೆಯ ಜನಾಂಗೀಯ ದ್ವೇಷದ ಘಟನೆಗಳು ಹೆಚ್ಚಾಗಿವೆಯೇ ಎಂಬುದು ಪ್ರಶ್ನೆ.  ‘ಅಮೆರಿಕ ಮೊದಲು’ ಎಂಬ ನೀತಿ ಹಾಗೂ ಮುಸ್ಲಿಂ ಬಹುಸಂಖ್ಯಾತರಿರುವ ಕೆಲವು ರಾಷ್ಟ್ರಗಳ ಜನರಿಗೆ ಅಮೆರಿಕ ಪ್ರವೇಶ ನಿರ್ಬಂಧ ಹೇರಿಕೆ, ಮೆಕ್ಸಿಕೊ–ಅಮೆರಿಕ ಗಡಿಯಲ್ಲಿ ಗೋಡೆ ಕಟ್ಟುವುದು ಇತ್ಯಾದಿ ಟ್ರಂಪ್ ನಿಲುವುಗಳೆಲ್ಲಾ ಸಮಾಜವನ್ನು ಧ್ರುವೀಕರಿಸುವಂತಹ ನೀತಿಗಳಾಗಿವೆ.
 
ಟ್ರಂಪ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ 10 ದಿನಗಳಲ್ಲಿ ಜನಾಂಗೀಯ ದ್ವೇಷದ 867 ಪ್ರಕರಣಗಳು ವರದಿಯಾಗಿರುವುದಾಗಿ ಅಧ್ಯಯನವೊಂದು ತಿಳಿಸಿದೆ. ಇಂತಹ ಪ್ರಕರಣಗಳಲ್ಲಿ ಆಕ್ರಮಣಕಾರರು ಟ್ರಂಪ್ ಹೆಸರು ಉದ್ಘೋಷಿಸಿದುದಾಗಿಯೂ ಹೇಳಲಾಗಿದೆ. ನ್ಯೂಯಾರ್ಕ್ ಪೊಲೀಸ್ ಇಲಾಖೆ ಸಹ ಇಂತಹ ಅಪರಾಧಗಳು ಹೆಚ್ಚಾಗಿರುವುದನ್ನು ದಾಖಲಿಸಿದೆ.
 
ಟ್ರಂಪ್‌  ಅವರು, ಇಂತಹ ದಾಳಿಗಳನ್ನು ಖಂಡಿಸಿದ್ದಾರೆ.  ಆದರೆ ಇದನ್ನು ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ ಎಂಬುದೇ  ಇಲ್ಲಿ ಮುಖ್ಯ. ಮುಸ್ಲಿಂ ವಲಸೆಯನ್ನು ಅಮೆರಿಕದಲ್ಲಿನ ಭಯೋತ್ಪಾದನಾ ದಾಳಿ ಜೊತೆ ಸಮೀಕರಿಸಿದವರು ಟ್ರಂಪ್. ಹೆಚ್ಚುತ್ತಿರುವ ಆದಾಯ  ಅಸಮಾನತೆಯೂ  ಜನಾಂಗೀಯ ದ್ವೇಷದ ಅಪರಾಧಗಳಿಗೆ ಕಾರಣವಾಗಿದ್ದಿರಬಹುದು. ಇಂತಹ ಸನ್ನಿವೇಶದಲ್ಲಿ ಹತ್ಯೆಯಾದ ಎಂಜಿನಿಯರ್ ಶ್ರೀನಿವಾಸ ಅವರ ಪತ್ನಿ ಸುನಯನಾ ಕೇಳಿರುವ ಪ್ರಶ್ನೆ  ‘ನಾವು ಈ ನಾಡಿಗೆ ಸೇರಿದವರಾ’ ಎಂಬುದು ಸರಿಯಾದುದು.
 
ಅಮೆರಿಕ ವಲಸಿಗರ ನಾಡು. ವಲಸಿಗರ ಸುರಕ್ಷತೆ ಬಗ್ಗೆ ಎಂಜಿನಿಯರ್ ಶ್ರೀನಿವಾಸರ ಹತ್ಯೆಯಂತಹ ಪ್ರಕರಣಗಳು ಸೃಷ್ಟಿಸುವ ಅನಿಶ್ಚಯ ಕಳವಳಕಾರಿಯಾದುದು.  ವಲಸಿಗರ ವಿರುದ್ಧ ಟ್ರಂಪ್‌ ಅವರ  ನೀತಿ, ವಿದ್ವೇಷವನ್ನು ಹೆಚ್ಚು ಮಾಡಿದೆಯೇ ಎಂಬುದನ್ನು ಈಗಲೇ ಗಟ್ಟಿಯಾಗಿ ಹೇಳಲೂ ಆಗದು. ಏಕೆಂದರೆ, ಉದಾರ ಬಂದೂಕು ಕಾನೂನುಗಳಿರುವ ನಾಡಿನಲ್ಲಿ ಇಂತಹ ಪ್ರಕರಣಗಳ ಸಾಧ್ಯತೆ ಅಭದ್ರತೆ ಹುಟ್ಟುಹಾಕುತ್ತಲೇ ಇರುತ್ತದೆ.  
 
ಜನಾಂಗೀಯ ದ್ವೇಷ  ಎಂಬುದು ಈ ಹಿಂದೆ ಇದ್ದ ರೀತಿಯೇ ಬೇರೆ. ಗಡಿ  ಅತಿಕ್ರಮಣ ಅಥವಾ ಭೂ ಅತಿಕ್ರಮಣಗಳ ಸಂದರ್ಭದಲ್ಲಿ  ವಿಭಿನ್ನ ಸಮುದಾಯಗಳ  ಮಧ್ಯೆ ಘರ್ಷಣೆ ನಡೆಯುತ್ತಿತ್ತು. ಆದರೆ ಜಾಗತೀಕರಣದ ಯುಗದಲ್ಲಿ ಎಲ್ಲಾ  ಜನಾಂಗ, ವರ್ಣದ ಜನರೂ ಒಟ್ಟಾಗಿ ಕಲೆತು ಕೆಲಸ ಮಾಡುವುದು ಇಂದು ಅನಿವಾರ್ಯ. ಇಂತಹ ಸಂದರ್ಭಗಳಲ್ಲಿ, ಭಿನ್ನ ಸಮುದಾಯದವರ ಕುರಿತಂತೆ  ಪೂರ್ವಗ್ರಹಗಳು ಕೆಟ್ಟ ರೀತಿಯಲ್ಲಿ ಅಭಿವ್ಯಕ್ತಿಗೊಳ್ಳುವುದು ಮನುಕುಲದ ವಿಶ್ವಾಸವನ್ನು ಹಾಳುಗೆಡವುತ್ತದೆ.  
 
ಇಂತಹ ಪೂರ್ವಗ್ರಹಗಳನ್ನು ಉದ್ದೀಪನಗೊಳಿಸಿ ರಾಜಕೀಯವಾಗಿ ಒಟ್ಟುಗೂಡಿಸುವ ಸಾಧನವಾಗಿ ರಾಜಕೀಯ ಪಕ್ಷಗಳು ಜಗತ್ತಿನಾದ್ಯಂತ ಬಳಸಿಕೊಳ್ಳುವುದು ವಿನಾಶಕಾರಿ. ಜನಾಂಗೀಯ ದ್ವೇಷಕ್ಕೆ ನಾಗರಿಕ ಸಮಾಜದಲ್ಲಿ ಅವಕಾಶ ಇಲ್ಲ. ಇಂತಹ ಎಳೆ ಎಲ್ಲೇ ಕಂಡುಬಂದರೂ ಅದನ್ನು ಸ್ಪಷ್ಟವಾಗಿ ಗುರುತಿಸಿ ಮಟ್ಟ ಹಾಕಬೇಕು.  ಜನಾಂಗೀಯ ದ್ವೇಷದ ಅಪರಾಧಗಳು ಸಮಾಜದಲ್ಲಿ ಮತ್ತೊಂದು ಬಗೆಯಲ್ಲಿ ಜನರಲ್ಲಿ ಭೀತಿ, ಅಭದ್ರತೆ ಸೃಷ್ಟಿಸುವಂತಾಗಬಾರದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.