ADVERTISEMENT

ವಿಭಜನೆಯ ಲಾಭ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST

ದೇಶದಲ್ಲೇ ಅತಿ ದೊಡ್ಡದಾದ ಬೆಂಗಳೂರು ವಿಶ್ವವಿದ್ಯಾಲಯವನ್ನು ಎರಡು ವಿಶ್ವವಿದ್ಯಾಲಯಗಳಾಗಿ ವಿಭಜಿಸುವ ಕಾರ್ಯಕ್ಕೆ ಈಗ ಚಾಲನೆ ದೊರೆತಿದೆ. ಹೊಸದಾಗಿ ಸ್ಥಾಪಿಸಲು ಉದ್ದೇಶಿಸಿರುವ ಬೆಂಗಳೂರು ಉತ್ತರ ವಿವಿಗೆ `ಡಿ.ವಿ.ಜಿ. ಜ್ಞಾನವಾಹಿನಿ ವಿಶ್ವವಿದ್ಯಾಲಯ' ಎಂಬ ಹೆಸರಿಡಲು ತೀರ್ಮಾನಿಸಲಾಗಿದೆ. ಈ ವಿವಿಯ ಪೂರ್ವಭಾವಿ ಕೆಲಸಗಳ ನಿರ್ವಹಣೆಗಾಗಿ ವಿಶೇಷಾಧಿಕಾರಿಯನ್ನೂ ನೇಮಿಸಲಾಗಿದೆ. ವಿಶ್ವವಿದ್ಯಾಲಯ ಆಡಳಿತದ ವಿಕೇಂದ್ರೀಕರಣ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ.1964ರಲ್ಲಿ ಆರಂಭವಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 665 ಕಾಲೇಜುಗಳಿವೆ. ಆದರೆ, ಯಾವುದೇ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರಬೇಕಾದ ಕಾಲೇಜುಗಳ ಆದರ್ಶ ಸಂಖ್ಯೆ ಎಂದರೆ 250ರಿಂದ 300. ಈ ಸಂಖ್ಯೆ ಹೆಚ್ಚಾದಲ್ಲಿ ಆಡಳಿತದಲ್ಲಿ ದಕ್ಷತೆ ಸಾಧ್ಯವಾಗುವುದಿಲ್ಲ ಎಂಬುದು ಸಾಬೀತಾದ ಸಂಗತಿ. ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತದ ವೈಖರಿ  ಈಗಾಗಲೇ ಸಾಕಷ್ಟು ಸಾರ್ವಜನಿಕ ಟೀಕೆಗಳಿಗೆ ಗುರಿಯಾಗಿದೆ. ಆಂತರಿಕ ಕಚ್ಚಾಟ, ಕುಲಪತಿ - ಕುಲ ಸಚಿವರ ನಡುವಿನ ಜಗಳ, ಪರೀಕ್ಷಾ ಅವ್ಯವಹಾರ, ನೇಮಕಾತಿಗಳಲ್ಲಿನ ಭ್ರಷ್ಟಾಚಾರ, ಜಾತಿ ರಾಜಕಾರಣ ಇತ್ಯಾದಿಗಳಿಂದಾಗಿ ಸದಾ ಸುದ್ದಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಘನತೆ, ಶೈಕ್ಷಣಿಕ ಗುಣಮಟ್ಟ ಪಾತಾಳಕ್ಕೆ ಕುಸಿದಿದೆ. ಎರಡು ಕ್ಯಾಂಪಸ್‌ಗಳನ್ನು (ಸೆಂಟ್ರಲ್ ಕಾಲೇಜು ಮತ್ತು ಜ್ಞಾನಭಾರತಿ) ಹೊಂದಿರುವ ವಿಶ್ವವಿದ್ಯಾಲಯ 50ಕ್ಕೂ ಅಧಿಕ ಸ್ನಾತಕೋತ್ತರ ಕೋರ್ಸ್‌ಗಳನ್ನು ಹೊಂದಿದೆ. ಭೌತಿಕವಾಗಿ ವಿಶ್ವವಿದ್ಯಾಲಯ ಸಾಕಷ್ಟು ಬೆಳೆದಿದೆ ನಿಜ. ಆದರೆ, ವಿ.ವಿ.ಯ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಬೋಧನಾ ಸಿಬ್ಬಂದಿಯ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಕೆಲವೊಂದು ವಿಭಾಗಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬನೆಯಾಗಿವೆ. ಇದು ಕೇವಲ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಬೋಧಕರ ಹುದ್ದೆಗಳು ದೊಡ್ಡ ಪ್ರಮಾಣದಲ್ಲಿ ಖಾಲಿ ಇವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರು ವಿ.ವಿ. 1995ರಲ್ಲೇ ಕೋಲಾರದಲ್ಲಿ ಸ್ನಾತಕೋತ್ತರ ಕೇಂದ್ರವನ್ನೂ ತೆರೆಯಿತು. ಆ ಕೇಂದ್ರ ಇಂದಿಗೂ ಅವ್ಯವಸ್ಥೆಯ ಆಗರವಾಗಿದೆ. ಪದವಿ ಕಾಲೇಜು ಆವರಣದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಲೂ ಸಾಧ್ಯವಾಗಿಲ್ಲ.

ಬೆಂಗಳೂರು ವಿಶ್ವವಿದ್ಯಾಲಯ 2004ರಲ್ಲೂ ವಿಭಜನೆಯಾಗಿತ್ತು. ಆಗ ತುಮಕೂರು ಜಿಲ್ಲೆಗೆ ಸೀಮಿತವಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಆರಂಭಿಸಲಾಯಿತು. ಆದರೆ, ಇದುವರೆಗೆ ವಿಶ್ವವಿದ್ಯಾಲಯಕ್ಕೆ ಬೇಕಾದ ಮೂಲಸೌಕರ್ಯಗಳನ್ನೇ ಕಲ್ಪಿಸಿಕೊಟ್ಟಿಲ್ಲ. ಸರಿಯಾದ ಕಟ್ಟಡಗಳು, ಕ್ಯಾಂಪಸ್ ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಕೃಷಿ ಮತ್ತು ಒಂದು ತೋಟಗಾರಿಕಾ ವಿಶ್ವವಿದ್ಯಾಲಯ ಸೇರಿದಂತೆ ಒಟ್ಟು 9 ವಿಶ್ವವಿದ್ಯಾಲಯಗಳು ಆರಂಭವಾಗಿವೆ. ಆದರೆ, ಯಾವ ವಿಶ್ವವಿದ್ಯಾಲಯದಲ್ಲೂ ಸಮಪರ್ಕವಾದ ಮೂಲಸೌಕರ್ಯಳಿಲ್ಲ. ವಿ.ವಿ.ಗಳಲ್ಲಿ ಬೋಧಕ, ಬೋಧಕೇತರ ಹುದ್ದೆಗಳೇ ಮಂಜೂರಾಗಿಲ್ಲ. ವಿಶ್ವವಿದ್ಯಾಲಯಗಳ ಸಂಖ್ಯೆ ಜಾಸ್ತಿ ಮಾಡುವುದರಿಂದ ಶಿಕ್ಷಣದ ನಿಜವಾದ ಉದ್ದೇಶ ಈಡೇರುವುದಿಲ್ಲ. ವಿ.ವಿ. ಗಳಿಗೆ ಅಗತ್ಯವಾದ ಮೂಲಸೌಕರ್ಯಗಳು, ಬೋಧಕ ವರ್ಗ, ಸುಸಜ್ಜಿತ ಕ್ಯಾಂಪಸ್ ನಿರ್ಮಾಣ ಇತ್ಯಾದಿಗಳನ್ನು ಕಲ್ಪಿಸಿಕೊಟ್ಟಾಗ ಮಾತ್ರ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.